ಹುಬ್ಬಳ್ಳಿ: ನಗರದ ಹಳೇ ಹುಬ್ಬಳ್ಳಿಯ ಇಂಡಿ ಪಂಪ್ ವೃತ್ತದಲ್ಲಿ ಶನಿವಾರ ನಡೆದ ಕಲ್ಲು ತೂರಾಟ ಹಾಗೂ ದಾಂದಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ಇದುವರೆಗೆ ಆರು ಪ್ರಕರಣಗಳನ್ನು ದಾಖಲಿಸಿ 40 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಪ್ರಚೋದನಕಾರಿ ವಾಟ್ಸ್ಯಾಪ್ ಸ್ಟೇಟಸ್ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಕಲ್ಲುತೂರಾಟ ನಡೆದಿತ್ತು. ಮುಂಜಾಗ್ರತಾ ಕ್ರಮವಾಗಿ ಏಪ್ರಿಲ್ 20ರವರೆಗೆ ನಿಷೇಧಾಜ್ಞೆ ವಿಸ್ತರಿಸಲಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಲಾಭೂರಾಮ್ ಹೇಳಿದರು.
ಘಟನೆ ಹಿನ್ನೆಲೆಯಲ್ಲಿ ನಗರದಲ್ಲಿ ಶನಿವಾರ ರಾತ್ರಿ 11 ಗಂಟೆಯಿಂದ ಏಪ್ರಿಲ್ 20 ರವರೆಗೆ ನಿಷೇದಾಜ್ಞೆ ವಿಧಿಸಲಾಗಿದೆ. ಚನ್ನಮ್ಮ ವೃತ್ತ, ಘಟನೆ ನಡೆದ ಹಳೇ ಹುಬ್ಬಳ್ಳಿಯ ಇಂಡಿ ಪಂಪ್ ವೃತ್ತ ಸೇರಿದಂತೆ ನಗರದ ಪ್ರಮುಖ ರಸ್ತೆಗಳು ವಿವಿಧೆಡೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಇದನ್ನು ಓದಿ: ‘ಮಸೀದಿಯ ಮೇಲೆ ಕೇಸರಿ ಧ್ವಜ ಹಾರಿಸುವೆ’ ವಿವಾದಾತ್ಮಕ ಪೋಸ್ಟ್ : ಹುಬ್ಬಳ್ಳಿ ಉದ್ವಿಗ್ನ
ಯುವಕನೊಬ್ಬ ಮಸೀದಿ ಮೇಲೆ ಭಗವಾಧ್ವಜ ಹಾರಿಸುವ ಚಿತ್ರವನ್ನು ವಾಟ್ಸ್ ಆ್ಯಪ್ ಸ್ಟೇಟಸ್ ಆಗಿ ಹಾಕಿಕೊಂಡಿದ್ದ ಹಿನ್ನೆಲೆಯಲ್ಲಿ, ಇಂಡಿ ಪಂಪ್ ವೃತ್ತದಲ್ಲಿ ಮುಸ್ಲಿಂ ಸಮುದಾಯದವರು ಜಮಾಯಿಸಿದ್ದರು. ಕೆಲವರು ಕಲ್ಲು ತೂರಾಟ ನಡೆಸಿ, ವಾಹನಗಳನ್ನು ಜಖಂಗೊಳಿಸಿದ್ದರು. ಘಟನೆ ಕಾರಣನಾದ ಯುವಕ ಅಭಿಷೇಕ ಹಿರೇಮಠನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಅಘೋಷಿತ ಬಂದ್ನಂಥ ವಾತಾವರಣ ನಿರ್ಮಾಣವಾಗಿದ್ದು, ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ. ಹಳೇ ಹುಬ್ಬಳ್ಳಿ ಪ್ರದೇಶದಲ್ಲಿ ರಾತ್ರಿ ಗಲಭೆ ಕಂಡು ಹೆದರಿರುವ ಜನರು ಅಂಗಡಿ ಮುಂಗಟ್ಟು ತೆಗೆಯುತ್ತಿಲ್ಲ. ಈ ನಡುವೆ ಇಡೀ ಘಟನೆ ಪೂರ್ವನಿಯೋಜಿತ ಎನ್ನುವ ಅಭಿಪ್ರಾಯವನ್ನೂ ಕೆಲವರು ವ್ಯಕ್ತಪಡಿಸುತ್ತಿದ್ದಾರೆ.
ದಾಂದಲೆಯಲ್ಲಿ ಪೊಲೀಸ್ ವಾಹನಗಳು ಸೇರಿದಂತೆ ಒಟ್ಟು 12 ವಾಹನಗಳು ಜಖಂಗೊಂಡಿವೆ. ಘಟನೆಯಲ್ಲಿ ಸಂಚಾರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಕಾಡದೇವರ ಮಠ, ಹೆಡ್ ಕಾನ್ಸ್‌ಟೇಬಲ್ ಸೇರಿದಂತೆ, ಒಟ್ಟು 12 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಕೆಲವರು ಆಸ್ಪತ್ರೆಗೆ ದಾಖಲಾಗಿದ್ದರೆ, ಉಳಿದವರು ಪ್ರಾಥಮಿಕ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ ಎಂದು ಪೊಲೀಸ್ ಕಮಿಷನರ್ ಲಾಭೂ ರಾಮ್ ಸುದ್ದಿಗಾರರಿಗೆ ತಿಳಿಸಿದರು.
ಇದನ್ನು ಓದಿ: ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಲು 13 ಪಕ್ಷಗಳ ಮುಖಂಡರ ಜಂಟಿ ಮನವಿ
ಕಲ್ಲುತೂರಾಟದಲ್ಲಿ ತೊಡಗಿದ್ದ ಪುಂಡರಿಗೆ ಕಲ್ಲು ಸಿಕ್ಕಿದ್ದಾದರೂ ಎಲ್ಲಿಂದ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಏಕಾಏಕಿ ಈ ಪ್ರಮಾಣದ ಕಲ್ಲು ಸಿಗಲು ಸಾಧ್ಯವಿಲ್ಲ, ಗಲಭೆ ಪೂರ್ವ ನಿಯೋಜಿತ ಇರಬಹುದು ಎಂದು ಪೊಲೀಸರು ಅನುಮಾನಿಡಿದ್ದಾರೆ. ಮೂರು ದಶಕಗಳ ಬಳಿಕ ಹುಬ್ಬಳ್ಳಿಯಲ್ಲಿ ಕೋಮುದ್ವೇಷಕ್ಕೆ ಇಂಬುಕೊಡುವ ಘಟನೆ ನಡೆದಿದ್ದು, ಭಾವೈಕ್ಯತೆಗೆ ಬೆಂಕಿ ಹಚ್ಚಲು ಹೊರಟಿರುವವರ ಬಂಧನಕ್ಕೆ ಒತ್ತಡ ಹೆಚ್ಚಾಗಿದೆ.
ಅಭಿಷೇಕ ಹಿರೇಮಠ ಎಂಬ ಯುವಕನೊಬ್ಬ ಹಂಚಿಕೊಂಡಿದ್ದ ಆಕ್ಷೇಪಾರ್ಹ ಪೋಸ್ಟ್ ನೋಡಿದ ಕೆಲವರು ತಮ್ಮ ಸಮುದಾಯದ ಗ್ರೂಪ್ಗಳಿಗೆ ಹಂಚಿಕೊಂಡಿದ್ದರು. ಪೋಸ್ಟ್ ಕೆಲವೇ ಕ್ಷಣಗಳಲ್ಲಿ ವೈರಲ್ ಆಯಿತು. ಕೆರಳಿದ ಜನರು ಠಾಣೆಯೆದುರು ಜಮಾಯಿಸಿ, ಆಕ್ಷೇಪಾರ್ಹ ಪೋಸ್ಟ್ ಹಂಚಿಕೊಂಡ ಯುವಕನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರು. ಯುವಕರ ಆಕ್ರೋಶ ಮಾತ್ರ ತಣ್ಣಗಾಗಿರಲಿಲ್ಲ. ಏಕಾಏಕಿ ಗಲಾಟೆ ಆರಂಭವಾದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಬೀಸಿದರು.