ಚಿಕ್ಕಬಳ್ಳಾಪುರ: ಬಾಗೇಪಲ್ಲಿ ಕ್ಷೇತ್ರದ ಮಾಜಿ ಶಾಸಕ, ಜನಪರ ಹೋರಾಟಗಾರ ಜಿ ವಿ ಶ್ರೀರಾಮರೆಡ್ಡಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಬೆಳಗ್ಗೆ 4 ಗಂಟೆಗೆ ಶ್ರೀರಾಮರೆಡ್ಡಿ ಅವರಿಗೆ ತೀವ್ರ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಅವರನ್ನು ದಾಖಲಿಸಿ, ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೇ ಬೆಳಗ್ಗೆ 7.28ಕ್ಕೆ ಮೃತಪಟ್ಟಿರುವುದಾಗಿ ತಾಲೂಕು ವೈದ್ಯಾಧಿಕಾರಿಗಳು ಘೋಷಿಸಿದರು.
ಎರಡು ಬಾರಿ ಶಾಸಕ : ಜಿ ವಿ ಶ್ರೀರಾಮರೆಡ್ಡಿ ಸಿಪಿಐಎಂ ಪಕ್ಷದಿಂದ 1994, 2004ರಲ್ಲಿ ಬಾಗೇಪಲ್ಲಿಯಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎರಡು ಬಾರಿ ಶಾಸಕರಾಗಿದ್ದರು.
ಶಾಸಕರಾಗಿದ್ದ ಅವಧಿಯಲ್ಲಿ ಉತ್ತಮ ಸಂಸದೀಯ ಪಟು ಎನ್ನಿಸಿಕೊಂಡಿದ್ದರು. ಅಧಿವೇಶನದಲ್ಲಿ ಕೇವಲ ತನ್ನ ಕ್ಷೇತ್ರವಲ್ಲದೆ ಇಡೀ ರಾಜ್ಯವನ್ನು ಪ್ರತಿನಿಧಿಸಿ ಮಾತನಾಡುತ್ತಿದ್ದ ಶ್ರೀರಾಮರೆಡ್ಡಿಯವರ ವಿದ್ವತ್ತು, ಜನಪರ ಕಾಳಜಿ, ರಾಜ್ಯದ ಬಗೆಗಿನ ಮಾಹಿತಿಗೆ ಇಡೀ ಸದನ ತಲೆದೂಗುತ್ತಿತ್ತು.
ಉಡುಪಿಯಲ್ಲಿ ಹಾಜಬ್ಬ, ಹಸನಬ್ಬ ಎಂಬ ದನದ ವ್ಯಾಪಾರಿಗಳನ್ನು ಹಿಂದೂ ಸಂಘಟನೆಗಳು ಬೆತ್ತಲೆ ಮಾಡಿ ರಸ್ತೆಯಲ್ಲಿ ಕೂರಿಸಿದಾಗ ಅದನ್ನು ಸದನದಲ್ಲಿ ಪ್ರಸ್ತಾಪಿಸಿ ತನಿಖೆಗೆ ಆಗ್ರಹಿಸಿದವರು ಜಿ ವಿ ಶ್ರೀರಾಮ ರೆಡ್ಡಿಯವರು. ಆ ಬಳಿಕ ಆ ಪ್ರಕರಣ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದು ಆರೋಪಿಗಳ ಬಂಧನವಾಯ್ತು. ಆ ಬಳಿಕ ಉಡುಪಿ ಮಠದ ಮಫಕ್ತಿಬೇದ, ಕುಕ್ಕೆ ಸುಬ್ರಹ್ಮಣ್ಯದ ಮಡೆಮಡೆಸ್ನಾನದ ವಿರುದ್ಧ ಚಳುವಳಿ ಹಮ್ಮಿಕೊಂಡು ಲಾಟಿಚಾರ್ಜ್ಗೆ ಒಳಗಾದರು.
ಶಾಶ್ವತ ನೀರಾವರಿಗಾಗಿ ಹೋರಾಟ : ಕೋಲಾರ-ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಜಾರಿ ಮಾಡಬೇಕು ಎಂದು ಚಿಕ್ಕಬಳ್ಳಾಪುರ ದಿಂದ ವಿಧಾನಸೌಧದ ವರೆಗೆ ಕಾಲ್ನೆಡಿಗೆ ಜಾತಾ ಹಮ್ಮಿ ಕೊಂಡಿದ್ದರು.
ಡಾ. ಪರಮಶಿವಯ್ಯ ನೀಡಿರುವ ವರದಿಯ ಸಮಗ್ರ ಜಾರಿಗಾಗಿ ಆಗ್ರಹಿಸಿ ಹತ್ತಾರು ಬಾರಿ ಬೃಹತ್ ಪ್ರತಿಭಟನೆ ಧರಣಿಗಳನ್ನು ನಡೆಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಜನಪರ ನಾಯಕ : ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಸಂಸ್ಥಾಪಕ ಮುಖಂಡರಲ್ಲಿ ಒಬ್ಬರಾದ ಶ್ರೀರಾಮರೆಡ್ಡಿಯವರು ಸಾರ್ವಜನಿಕ ಬದುಕನ್ನು ಆರಂಭಿಸಿದರು. ಯುವಜನ, ಮಹಿಳೆ, ರೈತ, ಕಾರ್ಮಿಕ ಸಂಘಟನೆಗಳ ಬೆಳವಣಿಗೆಗೆ ಕ್ರೀಯಾಶೀಲವಾಗಿ ಕಾರ್ಯನಿರ್ವಹಿಸಿದ್ದರು.
ಐದು ದಶಕಕ್ಕೂ ಹೆಚ್ಚುಕಾಲ ಸಿಪಿಐಎಂ ಪೂರ್ಣಾವಧಿ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸಿದ್ದ ಶ್ರೀರಾಮರೆಡ್ಡಿ ಪಕ್ಷದಳೊಗಡೆ ಜಿವಿಎಸ್ ಎಂದೇ ಖ್ಯಾತರಾಗಿದ್ದರು. 2013 ರಿಂದ 2018 ರ ವರೆಗೆ ಸಿಪಿಐಎಂ ರಾಜ್ಯ ಕಾರ್ಯದರ್ಶಿಯಾಗಿ ಹಾಗೂ ಕೇಂದ್ರ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಈ ವೇಳೆ ರಾಜ್ಯದಲ್ಲಿ ಸಾಕಷ್ಟು ಹೋರಾಟ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ರಾಜಕಾರಣದ ಜೊತೆ ಜೊತೆಗೆ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳನ್ನು ಉತ್ತೇಜಿಸುತ್ತಿದ್ದ ಜಿ ವಿಶ್ರೀರಾಮ ರೆಡ್ಡಿಯವರು ಲೇಖಕರಾಗಿಯೂ ಈ ನಾಡಿಗೆ ಕೊಡುಗೆ ನೀಡಿದ್ದಾರೆ.