ಪಾರಂಪರಿಕ ಮಾದರಿಯ ವಿಶ್ವ ಪ್ರಸಿದ್ಧ ಬೆಂಗಳೂರು ಕರಗೋತ್ಸವದಲ್ಲಿ ಯಾವ ಬದಲಾವಣೆಗಳಿಲ್ಲ

ಬೆಂಗಳೂರು: ಏಪ್ರಿಲ್ 8ರಿಂದ ಶುರುವಾಗಿ ಏಪ್ರಿಲ್ 18ಕ್ಕೆ ಕರಗ ಸಮಾರೋಪಗೊಳ್ಳಲಿದೆ. ಇದರ ಕೊನೆಯ ದಿನದಂದು ಕರಗ ಬೆಂಗಳೂರು ದರ್ಶನವಿರಲಿದೆ. 300ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಹಿಂದೂ ಮುಸ್ಲಿಂ ಸಾಮರಸ್ಯಕ್ಕೆ ಸಾಕ್ಷಿಯಾಗಿರುವ ಕರಗ ಉತ್ಸವದ ಪದ್ಧತಿ ನಿರಂತರವಾಗ ನಡೆಯುತ್ತಿದೆ.

ಪ್ರತಿ ವರ್ಷದಂತೆ ಪಾರಂಪರಿಕ ಉತ್ಸವವಾಗಿರುವ ಬೆಂಗಳೂರು ಕರಗ ಮಹೋತ್ಸವ ಸೌಹಾರ್ದತೆಯಿಂದ ಆಚರಣೆ ಮಾಡಲು ಬಿಬಿಎಂಪಿ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಯಾರಾದರೂ ಅಡ್ಡಿಪಡಿಸಿದರೆ, ನಿರ್ದಾಕ್ಷಿಣ್ಯ ಕ್ರಮಕ್ಕೆ ಸೂಚಿಸಲಾಗಿದೆ. ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಬೆಂಗಳೂರು ಕರಗ ಸಮಿತಿ, ಸುಲ್ತಾನ್ ಪೇಟೆಯ ಹಜ್ರತ್ ತವಕ್ಕಲ್ ಮಸ್ತಾನ್ ದರ್ಗಾ ಸಮಿತಿ ಹಾಗೂ ಜನಪ್ರತಿನಿಗಳು, ಬೆಂಗಳೂರು ನಗರ ಜಿಲ್ಲಾಡಳಿತ, ಬಿಬಿಎಂಪಿ ಅಧಿಕಾರಿಗಳು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಉತ್ಸವದ ಪೂರ್ವ ಸಿದ್ಧತೆಗಳ ಬಗೆಗಿನ ವಿವರಗಳನ್ನು ತಿಳಿಸಿದರು.

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಮಾತನಾಡಿ, ಬೆಂಗಳೂರು ಕರಗ ಎನ್ನುವುದು ಹಬ್ಬದಂತೆ. ಇದರಲ್ಲಿ ಎಲ್ಲಾ ಧರ್ಮ, ಜಾತಿ ಜನಾಂಗದವರು ಭಾಗಿಯಾಗುತ್ತಾರೆ. ಆದರೆ, ಈ ಬಾರಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಪ್ರಯತ್ನ ನಡೆಯುತ್ತಿದ್ದು, ಇದನ್ನು ಯಾರು ಗಂಭೀರವಾಗಿ ಪರಿಗಣಿಸಬಾರದು ಎಂದರು.

ಮಸ್ತಾನ್ ಸಾಬ್ ದರ್ಗಾ ಮಂಡಳಿ ಕೂಡ ಕರಗಮ್ಮನ ಪೂಜೆ ಸಿದ್ಧವಾಗಿದೆ. ಭಾರತವೊಂದು ಜ್ಯಾತ್ಯಾತೀತ ರಾಷ್ಟ್ರ, ಶಾಂತಿ ಸೌಹಾರ್ದತೆಯಿಂದ ಇರಬೇಕು. ಅದಕ್ಕೆ ಧಕ್ಕೆ ತರುವ ಯಾವ ಕೆಲಸವೂ ಆಗಬಾರದು. ಈಗಾಗಲೇ ಕೆಲವೊಂದಿಗೆ ಮಾತನಾಡಿದ್ದು, ಕೋಮು ಸೌಹಾರ್ದತೆಗೆ ಧಕ್ಕೆ ತರುವ ಕೆಲಸ ನಿಲ್ಲಿಸಿ ಎಂದು ಎಚ್ಚರಿಕೆ ನೀಡಿದ್ದೇನೆ. ಅಲ್ಲದೆ, ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದ ಆದ್ಧೂರಿ ಉತ್ಸವ ನಡೆದಿರಲಿಲ್ಲ. ಈ ಬಾರಿ ಎಲ್ಲರೂ ಜೊತೆಗೂಡಿ ಅದ್ಧೂರಿಯಾಗಿ ಆಚರಣೆ ಮಾಡಲಿದ್ದೇವೆ ಎಂದು ಹೇಳಿದರು.

ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್.ಅನುಚೇತ್ ಮಾತನಾಡಿ, ಧರ್ಮರಾಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನೀಡಿರುವ ಮಾರ್ಗಸೂಚಿ ಎಲ್ಲರೂ ಪಾಲನೆ ಮಾಡಬೇಕು. ಒಂದು ವೇಳೆ ಯಾರಾದರೂ ಶುಭ ಕಾರ್ಯಕ್ಕೆ ಅಡ್ಡಿಪಡಿಸಿದರೆ, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದರೆ, ನಿರ್ದಾಕ್ಷಿಣ್ಯ ಕ್ರಮವಹಿಸುತ್ತೇವೆ ಎಂದು ತಿಳಿಸಿದರು.

ಕಳೆದೆರಡು ವರ್ಷ ಸಾರ್ವಜನಿಕವಾಗಿ ಕರಗ ಮಹೋತ್ಸವ ನಡೆಯದ ಹಿನ್ನೆಲೆಯಲ್ಲಿ ಈ ಬಾರಿ ಅಪಾರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಅದರಂತೆ ಪೊಲೀಸ್ ಭದ್ರತೆಯೂ ಹೆಚ್ಚಳ ಮಾಡಲಾಗಿದೆ.  ಭದ್ರತೆಗಾಗಿ 450 ಪೊಲೀಸರು, ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಜೊತೆಗೆ ಹಿರಿಯ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಅವರು ವಿವರಿಸಿದರು.

ವಿಧಾನ ಪರಿಷತ್ತಿನ ಸದಸ್ಯ ಪಿ.ಆರ್.ರಮೇಶ್ ಮಾತನಾಡಿ, ಈ ಶಕ್ತಿ ದೇವತೆ ಬೆಂಗಳೂರಿಗೆ ಕಳಶ ಇದ್ದಂತೆ. ಇದನ್ನು ನಾವು ಅದ್ಧೂರಿ ಆಚರಣೆಯಾಗಿ ಮಾಡಬೇಕು. ಇವತ್ತು ರಾತ್ರಿ ರಥೋತ್ಸವ ಕಾರ್ಯಕ್ರಮ ಇರುತ್ತೆ. ಪ್ರತಿ ದಿನ ಕರಗ, ಆರತಿ ದೀಪಗಳು ಇರುತ್ತೆ ಎಂದರು.

ಸೌಹಾರ್ದತೆಯಿಂದ ನಾವು ಕರಗ ಆಚರಣೆ ಮಾಡಲು ಉದ್ದೇಶ ಹೊಂದಿದ್ದೇವೆ. ಆದರೆ, ಕೆಲ ಸಂಘಟನೆಗಳು ಇದರಲ್ಲಿ ತಪ್ಪು ಹುಡುಕುವುದು ಸರಿಯಲ್ಲ. ಅಲ್ಲದೆ, ಹೈದರಾಲಿ, ಟಿಪ್ಪು ಸುಲ್ತಾನ್ ಕಾಲದಲ್ಲಿಯೇ ತಿಗಳ ಸಮಾಜಕ್ಕೆ ಭೂಮಿ ನೀಡಲಾಗಿದೆ. ದರ್ಗಾಗೆ ಹೋಗುವುದು ಒಂದು ಸಂಪ್ರದಾಯ. ಮೊಹರಾಂ ಸಂದರ್ಭದಲ್ಲಿ ಮುಸ್ಲಿಮರು ದೇವಾಲಯಕ್ಕೆ ಬರುವುದು ಸಂಪ್ರದಾಯ ಎಂದು ಹೇಳಿದರು.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಮಾತನಾಡಿ, ಧರ್ಮರಾಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಬಿಬಿಎಂಪಿ ವತಿಯಿಂದ 50 ಲಕ್ಷ ರೂ. ಅನುದಾನವನ್ನು ಕರಗ ಉತ್ಸವಕ್ಕಾಗಿ ಬಿಡುಗಡೆ ಮಾಡಲಾಗಿದೆ. ಕರಗ ಹೊರಡುವ ಮಾರ್ಗದ ರಸ್ತೆಗಳು ಹಾಗೂ ಪಾದಚಾರಿ ಮಾರ್ಗಗಳ ದುರಸ್ತಿ ಕಾರ್ಯ, ಕರಗ ಉತ್ಸವ ನಡೆಯುವ ಬೀದಿಗಳಲ್ಲಿ ದೀಪಗಳ ಅಳವಡಿಕೆ ವ್ಯವಸ್ಥೆ, ಪಾಲಿಕೆಯ ಆರೋಗ್ಯ ಇಲಾಖೆ ವತಿಯಿಂದ ವೈದ್ಯಾಕಾರಿಗಳು ಹಾಗೂ ಸಿಬ್ಬಂದಿಯ ನಿಯೋಜನೆ ಮಾಡಲಾಗಿದೆ ಎಂದರು.

ಭಕ್ತಾದಿಗಳು ಹಾಗೂ ಸಾರ್ವಜನಿಕರ ಉಪಯೋಗಕ್ಕಾಗಿ ಇ-ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದ್ದು, ಜಲಮಂಡಳಿ ವತಿಯಿಂದ ಒಳಚರಂಡಿಗಳನ್ನು ಸ್ವಚ್ಛಗೊಳಿಸಿ, ಎಲ್ಲೂ ಕೊಳಚೆ ನೀರು ಹೊರಬಾರದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

ಸಂಚಾರ ದಟ್ಟಣೆಯಾಗದಂತೆ ಮಾರ್ಗ ಬದಲಾವಣೆ ಹಾಗೂ ವಾಹನಗಳ ನಿಲುಗಡೆಗೆ ಸ್ಥಳ ನಿಗದಿ ಮಾಡಲಾಗಿದ್ದು, ಕರಗ ಮಹೋತ್ಸವ ನಡೆಯುವ ವೇಳೆ ಯಾವುದೇ ಅಹಿತಕರ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸಿಸಿ ಕ್ಯಾಮೆರಾಗಳ ಅಳವಡಿಸಲಾಗಿದೆ ಎಂದು ಗುಪ್ತ ಮಾಹಿತಿ ನೀಡಿದರು.

ಮಸ್ತಾನ್ ಸಾಬ್ ದರ್ಗಾ ಪೂಜಾರಿ ತಬ್ರೀಜ್ ಆಹಮದ್ ಮಾತನಾಡಿ, ಮಸ್ತಾನ್ ಸಾಬ್ ಧರ್ಮರಾಯಸ್ವಾಮಿಯ ನಂಟು 300 ವರ್ಷದ್ದು ಎಷ್ಟೇ ವಿವಾದವಿದ್ರು ಪ್ರತಿಬಾರಿಯಂತೆ ಈ ಬಾರಿಯು ಕರಗ ದರ್ಗಾಕ್ಕೆ ಭೇಟಿ ನೀಡುತ್ತೆ. ದರ್ಗಾಗೆ ಭೇಟಿ ಕೊಡಲು ಈಗಾಗಲೇ ನಾವೇ ದೇವಾಲಯಕ್ಕೆ ಹೋಗಿ ಆಹ್ವಾನ ನೀಡಿದ್ದೆವೆ. ಹಿಂದೂ ಮುಸ್ಲಿಂ ಸಂಬಂಧ ಒಡೆಯುವ ಕೆಲಸ ಇಲ್ಲಿ ನಡೆಯಲ್ಲ. ದರ್ಗಾಕ್ಕೆ ಭೇಟಿ ನೀಡುವಾಗ ನಾವು ಭಕ್ತಿಯಿಂದ ಪೂಜೆ ಮಾಡ್ತಿವಿ. ನಮಗೆ ಆ ತಾಯಿ ಆರ್ಶಿವಾದ ಮಾಡ್ತಾಳೆ. ಈ ಬಾರಿಯು ಬಹಳ ವಿಜೃಂಭಣೆಯಿಂದ ಆ ತಾಯಿಗರ ಪೂಜೆ ಮಾಡ್ತಿವಿ ಎಂದಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್, ಧರ್ಮರಾಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಾಗೂ ಹಜ್ರತ್ ತವಕ್ಕಲ್ ಮಸ್ತಾನ್ ದರ್ಗಾ ಸಮಿತಿ ಪ್ರಮುಖರು ಉಪಸ್ಥಿತರಿದ್ದರು.

ಕರಗದ ಮಾರ್ಗ..!

ಧರ್ಮರಾಯ ಸ್ವಾಮಿ ದೇವಸ್ಥಾನದಿಂದ ಹೊರಡುವ ಕರಗ ಸಿಲಿಕಾನ್ ಸಿಟಿಯ ಕಬ್ಬನ್ ಪೇಟೆ, ಅವಿನ್ಯೂ ರಸ್ತೆ ಮಾರ್ಗವಾಗಿ ರಾಜಾಮಾರ್ಕೆಟ್ ಮೂಲಕ ಸಾಗಿ ಸಿಟಿ ಮಾರ್ಕೆಟ್ ನಲ್ಲಿ ಪೂಜೆ ಮುಗಿಸಿ, ಪೋಲಿಸ್ ರಸ್ತೆಯಿಂದ ಅರಳೆ ಪೇಟೆ ಸುತ್ತುಹಾಕಿ ನಂತರ ಮುಸ್ತಾನ್ ಸಾಹೇಬ್ ಮಸೀದಿ ಮೂಲಕ ಬಂದು ಅಣ್ಣಮ್ಮ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಬೆಳಿಗ್ಗೆ ಸೂರ್ಯೋದಯದ ಹೊತ್ತಿಗೆ ತಿಗಳರ ಪೇಟೆಗೆ ಆಗಮಿಸಲಿದೆ.

ಭಾವೈಕ್ಯದ ಸಂಕೇತವೆಂಬಂತೆ ಕರಗದ ದಾರಿಯಲ್ಲಿ ಮಸ್ತಾನ್ ಸಾಬ್ ದರ್ಗಾಕ್ಕೆ ತೆರಳಿ, ಅಲ್ಲಿ ಧೂಪಾರತಿ ಸ್ವೀಕರಿಸುತ್ತಾರೆ. ಕರಗಧಾರಿಗಳ ಸ್ವಾಗತಕ್ಕೆ ಮನೆಗಳ ಮುಂದೆ ರಂಗೋಲಿ, ತಳಿರುತೋರಣಗಳಿಂದ ಅಲಂಕೃತಗೊಂಡಿರುತ್ತದೆ. ಕರಗವನ್ನು ಸಾವಿರಾರು ಜನ ರಾತ್ರಿಇಡೀ ರಸ್ತೆಯ ಇಕ್ಕೆಲಗಳಲ್ಲಿ ನಿಂತು ನೋಡುತ್ತಾರೆ.

Donate Janashakthi Media

Leave a Reply

Your email address will not be published. Required fields are marked *