ದೆಹಲಿ: ವರದಕ್ಷಿಣೆಯಿಂದಾಗಿ ಕುರೂಪಿ ಮಹಿಳೆಯರಿಗೂ ಮದುವೆಯಾಗುತ್ತದೆ’ ಎನ್ನುವ ವಾಕ್ಯ ವ್ಯಾಪಾಕ ಚರ್ಚೆಗೆ ಗ್ರಾಸವಾಗಿದ್ದು, ಸಂವೇದನಾ ರಹಿತ ಈ ಭಾಗವನ್ನು ಪಠ್ಯದಿಂದ ಕಿತ್ತು ಹಾಕಬೇಕು ಎನ್ನುವ ಕೂಗು ವ್ಯಾಪಕವಾಗಿದೆ. ಅಲ್ಲಿ ಪಟ್ಟಿ ಮಾಡಿರುವ ಸಂಗತಿಗಳನ್ನು ನೋಡಿ ಜನರು ಯುವಕರಿಗೆ ಮತ್ತು ಸಮಾಜಕ್ಕೆ ಇದು ಯಾವ ರೀತಿಯ ಸಂದೇಶವನ್ನು ಕಳುಹಿಸುತ್ತಿದೆ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂಡಿಯನ್ ನರ್ಸಿಂಗ್ ಸಿಲೆಬಸ್ನ, ಟಿ.ಕೆ ಇಂದ್ರಾಣಿ ಅವರು ಬರೆದಿದರುವ ಸಮಾಜಶಾಸ್ತ್ರ ಪಠ್ಯದಲ್ಲಿ ಇಂಥಹದ್ದೊಂದು ಉಲ್ಲೇಖ ಇದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಪಠ್ಯವೊಂದರಲ್ಲಿ ‘ವರದಕ್ಷಿಣೆಯ ಉಪಯೋಗಗಳು’ ಎನ್ನುವ ಭಾಗವೊಂದಿದ್ದು, ಇದರಲ್ಲಿ ಹೇಳಲಾಗಿರುವ ಹಲವು ಕಾರಣಗಳು ವಿವಾದಕ್ಕೆ ಎಡೆ ಮಾಡಿ ಕೊಟ್ಟಿದೆ.
ಪುಸ್ತಕದಲ್ಲಿ ಏನಿದೆ?: ವರದಕ್ಷಿಣೆಯು ಪೀಠೋಪಕರಣಗಳು, ರೆಫ್ರಿಜರೇಟರ್ಗಳು ಹಾಗೂ ವಾಹನಗಳಂತಹ ವಸ್ತುಗಳೊಂದಿಗೆ “ಹೊಸ ಮನೆಯನ್ನು ಸ್ಥಾಪಿಸಲು ಸಹಾಯಕವಾಗಿದೆ” ಎಂದು ಪುಸ್ತಕದಲ್ಲಿ ಹೇಳಲಾಗಿದೆ. ವರದಕ್ಷಿಣೆಯ ಮೂಲಕ ಹುಡುಗಿಯರು ಪೋಷಕರ ಆಸ್ತಿಯಲ್ಲಿ ಪಾಲನ್ನು ಪಡೆಯುವ ಅರ್ಹತೆ ಪಡೆಯುತ್ತಾರೆ ಎಂದು ಬರೆಯಲಾಗಿದೆ. ವರದಕ್ಷಿಣೆ ಎಂಬುದು ನಮ್ಮ
ಪಾರಂಪರಿಕ ಪದ್ದತಿಯಾಗಿದ್ದು ಒಮ್ಮೆಗೇ ಪದ್ಧತಿಗಳನ್ನು ನಿರ್ಮೂಲನೆ ಮಾಡುವುದು ಅಸಾಧ್ಯ ಎಂದು ಬರೆಯಲಾಗಿದೆ.
ವರದಕ್ಷಿಣೆ ವ್ಯವಸ್ಥೆಯ “ಪರೋಕ್ಷ ಪ್ರಯೋಜನ” ಎಂದರೆ ಪೋಷಕರು ಈಗ ತಮ್ಮ ಹೆಣ್ಣುಮಕ್ಕಳಿಗೆ ಕಡಿಮೆ ವರದಕ್ಷಿಣೆ ನೀಡಬೇಕೆಂದು ಶಿಕ್ಷಣವನ್ನು ನೀಡಲು ಆರಂಭಿಸಿದ್ದಾರೆ ಎಂದು ಪುಸ್ತಕದಲ್ಲಿ ಹೇಳಲಾಗಿದೆ. ವರದಕ್ಷಿಣೆ ವ್ಯವಸ್ಥೆಯು ʼಕೆಟ್ಟದ್ದಾಗಿ ಕಾಣುವ ಹುಡುಗಿಯರನ್ನುʼ ಮದುವೆಯಾಗಲು ಸಹಾಯ ಮಾಡುತ್ತದೆ ಎಂಬ ಅಂಶವನ್ನು ಪುಟದಲ್ಲಿ ಕೊನೆಯಲ್ಲಿ ಸೇರಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ : ಕಾನೂನಿನಲ್ಲಿ ವರದಕ್ಷಿಣೆಗೆ ಕಡಿವಾಣ ಹಾಕಿದ್ದರೂ, ಈಗಲೂ ದೇಶದ ಹಲವು ಕಡೆಗಳಲ್ಲಿ ಚಾಲ್ತಿಯಲ್ಲಿದೆ. ಇದರಿಂದ ಹೆಣ್ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದೆ. ದೇಶದ ಹಲವು ಭಾಗಗಳಲ್ಲಿ ಈ ತೆರೆನಾದ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಲೇ ಇದೆ. ಇದರ ಬಗ್ಗೆ ಶತಮಾನಗಳಿಂದ ನಡೆದು ಬರುತ್ತಿರುವ ಹೋರಾಟ 21 ನೇ ಶತಮಾನದಲ್ಲೂ ಕೂಡ ಮುಂದುವರಿದಿದೆ. ಇದಾದ್ಯೂ ಪಠ್ಯ ಪುಸ್ತಕದಲ್ಲಿ ಇಂಥ ಅಂಶವನ್ನು ಒಳಗೊಳ್ಳಿಸಿರುವುದು ನಿಜಕ್ಕೂ ನಾಚಿಗೇಡಿನ ಸಂಗತಿಯೇ ಸೈ ಎಂದು ಹಲವು ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಟ್ವಿಟ್ಟರ್ನಲ್ಲಿ ಇದರ ಬಗ್ಗೆ ಸುದೀರ್ಘವಾದ ಚರ್ಚೆಗಳು ನಡೆದಿದ್ದು, ಆ ಪಠ್ಯ ಭಾಗವನ್ನು ಕಿತ್ತು ಹಾಕಬೇಕು. ಸದ್ಯ ಚಾಲ್ತಿಯಲ್ಲಿರುವ ಪುಸ್ತಕವನ್ನು ಹಿಂಪಡೆಯಬೇಕು ಎನ್ನುವ ಆಗ್ರಹ ವ್ಯಕ್ತ ಪಡಿಸಿದ್ದಾರೆ.
Ok