ಕೊಲಂಬೊ: ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾದಲ್ಲಿ ಭಾನುವಾರ ತಡರಾತ್ರಿ ಪ್ರಮುಖ ಬೆಳವಣಿಗೆಯೊಂದು ಸಂಭವಿಸಿದೆ. ಸಂಸತ್ತಿನ ಎಲ್ಲಾ ಸಚಿವರುಗಳು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಎಲ್ಲಾ 26 ಸಂಪುಟ ಸಚಿವರು ರಾಜೀನಾಮೆ ನೀಡಿದ್ದರು.
ಮಹಿಂದ ರಾಜಪಕ್ಸೆ ಅವರ ರಾಜೀನಾಮೆಯ ವರದಿಗಳನ್ನು ಪ್ರಧಾನಿ ಕಚೇರಿ ನಿರಾಕರಿಸಿದ ಕೆಲವೇ ಗಂಟೆಗಳ ನಂತರ ಸಚಿವರುಗಳು ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಆದರೆ, ಮಹಿಂದಾ ರಾಜಪಕ್ಸೆ ಪ್ರಧಾನಿಯಾಗಿ ಮುಂದುವರೆದಿದ್ದಾರೆ.
ಇದನ್ನು ಓದಿ: ಶ್ರೀಲಂಕಾದ ಇವತ್ತಿನ ಆರ್ಥಿಕ ಬಿಕ್ಕಟ್ಟನ್ನು ಅರ್ಥ ಮಾಡಿಕೊಳ್ಳುವುದು ಹೇಗೆ?
ದ್ವೀಪ ರಾಷ್ಟ್ರದಲ್ಲಿ ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಇಂಧನ, ಅಡುಗೆ ಅನಿಲ, ಅಗತ್ಯ ವಸ್ತುಗಳ ಕೊರತೆ ತೀವ್ರವಾಗಿದ್ದು ಜೀವನಾವಶ್ಯಕ ವಸ್ತುಗಳಿಗೆ ಸಾರ್ವಜನಿಕರು ವಾರಗಟ್ಟಲೆ ಕಾಯಬೇಕಾಗಿದೆ. ಕರ್ಫ್ಯೂವನ್ನು ಲೆಕ್ಕಿಸದ ಜನರು ಇಂಧನ ಮತ್ತು ಅನಿಲಕ್ಕಾಗಿ ಉದ್ದನೆಯ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿ ಬಂದಿತು. ವಿದ್ಯುತ್ ಇಲ್ಲದೆ ದೀರ್ಘ ಗಂಟೆಗಳ ಕಾಲ ಜನ ಸಂಕಷ್ಟಕ್ಕೆ ಈಡಾಗಿದ್ದರು.
ಸಾರ್ವಜನಿಕರ ಆಕ್ರೋಶಕ್ಕೆ ಕಂಗಾಲಾದ ಸರ್ಕಾರವು ಎಲ್ಲೆಡೆ ನಡೆಯುತ್ತಿರುವ ಪ್ರತಿಭಟನೆ ಹಾಗೂ ಪರಿಸ್ಥಿತಿಯನ್ನು ನಿಯಂತ್ರಿಸಲು ತುರ್ತು ಪರಿಸ್ಥಿತಿ ಘೋಷಣೆ ಮಾಡಿ, ಕರ್ಫ್ಯೂ ಜಾರಿಗೊಳಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶಿಕ್ಷಣ ಸಚಿವ ಮತ್ತು ಸಭಾನಾಯಕ ದಿನೇಶ್ ಗುಣವರ್ಧನ, ಸಚಿವರು ತಮ್ಮ ರಾಜೀನಾಮೆಯನ್ನು ಪ್ರಧಾನಿ ಮಹಿಂದಾ ರಾಜಪಕ್ಸೆ ಅವರಿಗೆ ನೀಡಿದ್ದಾರೆ ಎಂದಿದ್ದಾರೆ.
ಇದನ್ನು ಓದಿ: ಶ್ರೀಲಂಕಾದಲ್ಲಿ ಹೆಚ್ಚಿದ ಆರ್ಥಿಕ ಬಿಕ್ಕಟ್ಟು : ಪೆಟ್ರೋಲ್ ದರ 254 ರೂ, 1 ಪೌಂಡ್ ಬ್ರೆಡ್ ಬೆಲೆ 130 ರೂ
ಸೆಂಟ್ರಲ್ ಬ್ಯಾಂಕ್ ಗವರ್ನರ್ ಅಜಿತ್ ನಿವಾರ್ಡ್ ಕಬ್ರಾಲ್ ಸಹ ರಾಜೀನಾಮೆ ನೀಡಿದ್ದಾರೆ. ಸಂಸತ್ತಿನ ಎಲ್ಲಾ ಸಚಿವರು ರಾಜೀನಾಮೆ ನೀಡಿರು ಹಿನ್ನೆಲೆಯಲ್ಲಿ, ನಾನು ಇಂದು ರಾಜ್ಯಪಾಲ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಕಬ್ರಾಲ್ ಹೇಳಿದರು.
ಪ್ರತಿಭಟನೆಗಳನ್ನು ಹತ್ತಿಕ್ಕಲು ಅಧ್ಯಕ್ಷ ಗೋಟಬಯ ರಾಜಪಕ್ಸೆ ಸರ್ಕಾರ ಶನಿವಾರ ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್, ವಾಟ್ಸಾಪ್ ಮತ್ತು ಯೂಟ್ಯೂಬ್ ಸೇರಿದಂತೆ ಎಲ್ಲಾ ಸಾಮಾಜಿಕ ಮಾಧ್ಯಮ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿದೆ.
ಶನಿವಾರ ಸಂಜೆ 6 ಗಂಟೆಯಿಂದ ಸೋಮವಾರ ಬೆಳಿಗ್ಗೆ 6 ರವರೆಗೆ ಕರ್ಫ್ಯೂ ಅನ್ನು ವಿಧಿಸಲಾಗಿದೆ. ಕರ್ಫ್ಯೂ ಉಲ್ಲಂಘಿಸಿದ್ದಕ್ಕಾಗಿ ಕನಿಷ್ಠ 664 ಜನರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀಲಂಕಾದ ಅಧ್ಯಕ್ಷ ಗೋತಬಯ ರಾಜಪಕ್ಸೆ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಏಕತೆ ಮೂಡಿಸಲು ಸರ್ವ ಪಕ್ಷ ಸಭೆ ನಡೆಸಿದ್ದಾರೆ. ಅಧಿಕೃತ ಹೇಳಿಕೆಯ ಪ್ರಕಾರ, ಉದ್ಭವಗೊಂಡ ರಾಷ್ಟ್ರೀಯ ಬಿಕ್ಕಟ್ಟಿಗೆ ಪರಿಹಾರಗಳನ್ನು ಹುಡುಕಲು ಅಧ್ಯಕ್ಷ ಗೋತಬಯ ರಾಜಪಕ್ಸೆ ಎಲ್ಲಾ ರಾಜಕೀಯ ಪಕ್ಷಗಳನ್ನು ಆಹ್ವಾನಿಸಿದ್ದಾರೆ.