ತುಮಕೂರು: ತುಮಕೂರಿನಲ್ಲಿಂದು ಡಾ ಶಿವಕುಮಾರ ಸ್ವಾಮೀಜಿಗಳ 115ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಹತ್ವದ ಘೋಷಣೆಯೊಂದನ್ನು ಪ್ರಕಟಿಸಿದ್ದು, ರಾಜ್ಯ ಸರ್ಕಾರ ಶಾಲಾ ಮಕ್ಕಳಿಗೆ ವಿತರಿಸುವ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ನಡೆದಾಡುವ ದೇವರೆಂದೇ ಹೆಸರು ಪಡೆದ ತ್ರಿವಿಧ ದಾಸೋಹಿ ತುಮಕೂರಿನ ಸಿದ್ದಗಂಗಾ ಮಠದ ಡಾ ಶಿವಕುಮಾರ ಸ್ವಾಮೀಜಿಗಳ ಹೆಸರನ್ನಿಡಲು ನಿರ್ಧರಿಸಿದ್ದೇವೆ ಎಂದು ಹೇಳಿದರು.
ಶಿವಕುಮಾರ ಸ್ವಾಮೀಜಿಗಳು ಕಷ್ಟದಲ್ಲಿರುವವರಿಗೆ ಬದುಕು ಕಟ್ಟಿಕೊಡುತ್ತಿದ್ದರು. ಲಕ್ಷಾಂತರ ಮಕ್ಕಳಿಗೆ ತ್ರಿವಿಧ ದಾಸೋಹಗಳಲ್ಲಿ ಒಂದಾಗಿರುವ ಅನ್ನ ದಾಸೋಹವನ್ನು ಕೂಡ ಮಾಡಿದವರು. ಮಧ್ಯಾಹ್ಯದ ಬಿಸಿ ಊಟದ ಯೋಜನೆಗೆ ಶಿವಕುಮಾರ ಸ್ವಾಮೀಜಿ ಹೆಸರು ಇಡಲು ಸರ್ಕಾರ ಮುಂದಾಗುತ್ತದೆ. ಈ ಬಗ್ಗೆ ಈಗಾಗಲೇ ನಿರ್ಧಾರ ಕೈಗೊಳ್ಳಲಾಗಿದೆ. ಶೀಘ್ರದಲ್ಲಿಯೇ ಆದೇಶ ಹೊರಡಿಸುತ್ತೇನೆ ಎಂದರು.
ಶಿವಕುಮಾರ ಸ್ವಾಮಿಜೀಗಳ ಪರಂಪರೆಯನ್ನು ಕಿರಿಯ ಶ್ರೀಗಳು ಮುಂದುವರಿಸುತ್ತಿದ್ದಾರೆ. 88 ವರ್ಷ ಈ ನಾಡಿಗೆ ಸಿದ್ದಗಂಗಾ ಶ್ರೀಗಳು ಸೇವೆ ಸಲ್ಲಿಸಿದ್ದಾರೆ. ಇಡೀ ದೇಶದಲ್ಲಿ ಯಾರೂ ಈ ಸೇವೆ ಮಾಡಿರಲಿಲ್ಲ. ಅದಕ್ಕಾಗಿಯೇ ಅವರನ್ನು ನಡೆದಾಡುವ ದೇವರು ಎನ್ನುತ್ತೇವೆ. ಅವರು ಹಚ್ಚಿದ ಹೊಲೆಯ ಕಿಚ್ಚು ಬಡವರ ಹಸಿವಿನ ಕಿಚ್ಚು ನಿಗಿಸುತ್ತಿದೆ. ಅನ್ನ, ಅಕ್ಷರ, ಆಶ್ರಯ ಎಂಬುದನ್ನು ಪಾಲಿಸಿದವರು ಸಿದ್ದಗಂಗಾ ಶ್ರೀಗಳು ಎಂದು ಸ್ಮರಿಸಿದರು.
ಅವರು ನಮ್ಮ ನಡುವೆ ಜೀವಂತವಾಗಿದ್ದಾರೆ. ಅವರು ದೈಹಿಕವಾಗಿ ಇಲ್ಲದಿದ್ದರೂ ಅವರ ನಡೆ ಗೌರವ ನಮ್ಮ ಜೊತೆ ಸದಾ ಇರುತ್ತದೆ. ಇಂದು ಅವರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯಾಗಿ ಅಲ್ಲ, ಭಕ್ತನಾಗಿ ಭಾಗಿಯಾಗುತ್ತಿರುವುದು ನನ್ನ ಪಾಲಿನ ಪುಣ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಏಪ್ರಿಲ್ 1 ದಾಸೋಹ ದಿನ
ಇನ್ನು ಮುಂದೆ ಶಿವಕುಮಾರ ಸ್ವಾಮಿಗಳ ಜನ್ಮದಿನವನ್ನು ರಾಜ್ಯದಲ್ಲಿ ದಾಸೋಹ ದಿನವನ್ನಾಗಿ ಆಚರಿಸಲಾಗುವುದು ಎಂದು ಸಹ ಮುಖ್ಯಮಂತ್ರಿಗಳು ಘೋಷಿಸಿದರು. ಇದಕ್ಕೂ ಮುನ್ನ ಮಧ್ಯಾಹ್ನ ಬಿಸಿಯೂಟ ಯೋಜನೆಗೆ ಸಿದ್ದಗಂಗಾ ಶ್ರೀಗಳ ಹೆಸರನ್ನಿಡಬೇಕೆಂದು ಬಿಜೆಪಿ ನಾಯಕ ಬಿ ವೈ ವಿಜಯೇಂದ್ರ ಬೇಡಿಕೆ ಮುಂದಿಟ್ಟರು.