ಬೆಂಗಳೂರು: ಜನತೆಯ ಜೀವನಾವಶ್ಯಕ ವಸ್ತುಗಳ ಬೆಲೆಗಳು ತೀವ್ರವಾಗಿ ಏರುತ್ತಿದ್ದು, ಇದರಿಂದಾಗಿ ಜೀವನ ನಿರ್ವಹಣೆ ದುಸ್ತರವಾಗಿದೆ. ಸಬ್ ಕಾ ವಿಕಾಸ್ ಎಂಬ ಘೋಷಣೆ ಕೊಟ್ಟು ಜನರ ಜೀವನಾಗತ್ಯ ವಸ್ತುಗಳ ಬೆಲೆಯನ್ನು ಗಗನಕ್ಕೆ ಏರಿಸಲಾಗುತ್ತಿದೆ. ಸರ್ಕಾರದ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಜಯನಗರ ವಲಯ ಸಮಿತಿಯು ಪ್ರತಿಭಟನೆ ನಡೆಸಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಸಿಪಿಐ(ಎಂ) ಬೆಂಗಳೂರು ದಕ್ಷಿಣ ಜಿಲ್ಲಾ ಕಾರ್ಯದರ್ಶಿ ಬಿ.ಎನ್. ಮಂಜುನಾಥ್ ಮಾತನಾಡಿ, ದಿನಂಪ್ರತಿ ಏರುತ್ತಿರುವ ಬೆಲೆಗಳಿಂದ ದುಡಿಯುವ ಜನ ತತ್ತರಿಸಿದ್ದಾರೆ. ಕಳೆದ ಒಂದು ವರ್ಷದಲ್ಲಿ ಅಡುಗೆ ಅನಿಲದ ಬೆಲೆ 350 ರೂಪಾಯಿಗಳಿಗಿಂತ ಹೆಚ್ಚು ಏರಿಸಲಾಗಿದೆ. ವಾಣಿಜ್ಯ ಉಪಯೋಗ ಸಿಲಿಂಡರ್ ದರ ರೂ.2,300/- ರಷ್ಟಾಗಿದೆ. ಸರಕಾರದ ಎಲ್ಲ ನೀತಿಗಳೂ ಉಳ್ಳವರ ಪರವಾಗಿದ್ದು ದುಡಿದು ತಿನ್ನುವ ಜನರ ಕಷ್ಟಕ್ಕೆ ಸರಕಾರ ಕಿವುಡಾಗಿದೆ ಎಂದು ಹೇಳಿದರು.
ಕೋವಿಡ್ ಕಾಲದ ಸಂಕಷ್ಟಗಳಿಂದ ಇನ್ನೂ ಹೊರಬಾರದೆ ಪರದಾಡುತ್ತಿರುವ ಜನರ ಕಷ್ಟಕ್ಕೆ ಸ್ಪಂದಿಸುವ ಬದಲು, ಪಂಚರಾಜ್ಯಗಳ ಚುನಾವಣೆ ಮುಗಿದ ತಕ್ಷಣವೇ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬೆಲೆಗಳನ್ನು ಏರಿಸಿದೆ. ಇದು ಜನವಿರೋಧಿ ಕೃತ್ಯವಾಗಿದ್ದು, ಸಿಪಿಐ(ಎಂ) ಪಕ್ಷ ವಿರೋಧಿಸುತ್ತದೆ ಎಂದು ಅವರು ಹೇಳಿದರು.
ಜನರ ಜೀವನ ಮತ್ತು ಜೀವನೋಪಾಯಗಳನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿ. ಅದನ್ನು ಮಾಡದ ನರೇಂದ್ರ ಮೋದಿ ಸರಕಾರದ ಧೋರಣೆಗಳ ವಿರುದ್ಧ ಪ್ರತಿಭಟನಾಕಾರರು ಖಂಡಿಸಿದರು.