ಬೆಂಗಳೂರು: ಇದೇ ಮೊದಲ ಬಾರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಾತ್ರೋರಾತ್ರಿ ಬಜೆಟ್ ಮಂಡನೆ ಮಾಡಿದೆ. ಯಾರಿಗೂ ಮಾಹಿತಿ ನೀಡದೆ ಕದ್ದುಮುಚ್ಚಿ 2022-23ನೇ ಸಾಲಿನ ಬಜೆಟ್ ಮಂಡಿಸಿರುವುದು ಭಾರಿ ಚರ್ಚೆ ಹುಟ್ಟುಹಾಕಿದೆ.
10,480 ಕೋಟಿ ಮೊತ್ತದ ಬಜೆಟ್ ಇದಾಗಿದ್ದು, ಪಾಲಿಕೆ ಆಡಳಿತಾಧಿಕಾರಿ ರಾಕೇಶ್ ಸಿಂಗ್ ನೇತೃತ್ವದಲ್ಲಿ ಕೌನ್ಸಿಲ್ ಶಿಷ್ಟಾಚಾರ ಮೀರಿ ಈ ಬಾರಿ ಬಜೆಟ್ ಮಂಡಿಸಲಾಗಿದೆ. ರಾತ್ರೋರಾತ್ರಿ ಬಿಬಿಎಂಪಿ ಗುಪ್ತ್-ಗುಪ್ತ್ ಬಜೆಟ್ ನಡೆಸಿದ್ದು, ರಾತ್ರಿ 11.30ಕ್ಕೆ ಬಜೆಟ್ ಪ್ರತಿ ವೆಬ್ಸೈಟ್ನಲ್ಲಿ ಅನೌನ್ಸ್ ಮಾಡಲಾಗಿದೆ. ಬಜೆಟ್ ಮಂಡಿಸುವ ಪರಿಪಾಟಕ್ಕೆ ಪಾಲಿಕೆ ಇತಿಶ್ರೀ ಹಾಡಲಾಗಿದೆ.
ಬಜೆಟ್ ಗಾತ್ರ ಈ ವರ್ಷವೂ ₹10 ಸಾವಿರ ಕೋಟಿಯ ಗಡಿ ದಾಟಿದೆ. ₹10,484.28 ಕೋಟಿ ಗಾತ್ರದ ಬಜೆಟ್ ಸಿದ್ಧಪಡಿಸಲಾಗಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ಒಟ್ಟು ₹10,480.93 ಕೋಟಿ ವೆಚ್ಚ ಮಾಡಲಾಗುತ್ತಿದೆ. ಬಜೆಟ್ ಪ್ರತಿಯಲ್ಲೂ ಎಲ್ಲೂ ಕಾರ್ಯಕ್ರಮಗಳ ವಿವರಗಳಿಲ್ಲ. ಕೇವಲ ಪಾವತಿಯ ವಿಭಾಗವಾರು ವಿವರಗಳನ್ನಷ್ಟೇ ಒದಗಿಸ ಲಾಗಿದೆ. ಯಾವುದೇ ಹೊಸ ಕಾರ್ಯಕ್ರಮಗಳನ್ನೂ ಪ್ರಕಟಿಸಿಲ್ಲ.
ಬಿಬಿಎಂಪಿ ಬಜೆಟ್ ಪ್ರಮುಖ ಅಂಶಗಳು
ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಲು 61.36 ಲಕ್ಷ ರೂ.
ವಲಯ ಕಾಮಗಾರಿಗಳು-ಕ್ರಿಯಾ ಯೋಜನೆ ಕಾಮಗಾರಿಗಳು ಶೇ. 60 ರಷ್ಟು ವಾರ್ಷಿಕ ನಿರ್ವಹಣೆ ಮತ್ತು ವಾರ್ಡ್ ವ್ಯಾಪ್ತಿಯಲ್ಲಿ ರಸ್ತೆಗಳ ದುರಸ್ತಿಗೆ 967.47 ಕೋಟಿ ರೂ.
ಪಾಲಿಕೆಯಲ್ಲಿ ಎಲ್ಲಾ ವಲಯಗಳಲ್ಲಿ ಮೂಲಭೂತ ಸೌಕರ್ಯ ವಿಭಾಗದಿಂದ ಅರ್ಟೀರಿಯಲ್ ಮತ್ತು ಸಬ್ ಆರ್ಟೀರಿಯಲ್ ರಸ್ತೆಗಳ ನಿರ್ವಹಣೆಗೆ 86.83 ಕೋಟಿ ರೂ.
ಪಾಲಿಕೆ ಶಾಲಾ, ಕಾಲೇಜುಗಳ ಕಟ್ಟಡಗಳ ನಿರ್ವಹಣೆಗೆ ಮತ್ತು ದುರಸ್ತಿಗೆ 10.59 ಕೋಟಿ ರೂ.
ಪಾಲಿಕೆ ಮಾರುಕಟ್ಟೆಗಳ ನಿರ್ವಹಣೆ ಮತ್ತು ದುರಸ್ಥಿಗೆ 8.93 ಕೋಟಿ ರೂ.
ಸುಟ್ಟುಉಹೋದ ಬೀದಿ ದೀಪಗಳನ್ನು ಬದಲಾಯಿಸುವುದು ಹಾಗೂ ಇತರೆ ವೆಚ್ಚ 82.11 ಕೋಟಿ ರೂ.
ಪಾಲಿಕೆಯ ಶಾಲೆ, ಹೆರಿಗೆ ಆಸ್ಪತ್ರೆ, ಕಟ್ಟಡ ಸಮುದಾಯ ಭವನ ಮತ್ತು ಮಾರುಕಟ್ಟೆಗಳಲ್ಲಿ ವಿದ್ಯುತ್ ಸ್ಥಾಪನೆಗೆ 6.74 ಕೋಟಿ ರೂ.
ಬೃಹತ್ ಮಳೆ ನೀರು ಕಾಲುವೆಗಳ ವಾರ್ಷಿಕ ನಿರ್ವಹಣಾ ವೆಚ್ಚ 40 ಕೋಟಿ
ಬೃಹತ್ ಮಳೆ ನೀರು ಕಾಳುವೆಗಳ ತುರ್ತು ಮೀಸಲು ಕಾಮಗಾರಿ 10.86 ಕೋಟಿ ರೂ.
ನೀರು ಸರಬರಾಜು ವಾರ್ಷಿಕ ನಿರ್ವಹಣೆ ಮತ್ತು ದುರಸ್ಥಿಗೆ 57.04 ಕೋಟಿ ರೂ.