ಬೆಂಗಳೂರು: ಹಿಜಾಬ್, ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ, ಹಲಾಲ್ ಕಟ್, ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆ. ಹೀಗೆ ಒಂದಾದರ ಮೇಲೊಂದರಂತೆ ವಿವಾದಾತ್ಮಕ ಘಟನಾವಳಿಗಳು ಹೆಚ್ಚುತ್ತಲೇ ಇವೆ. ಇವುಗಳನ್ನು ಸಮರ್ಥವಾಗಿ ನಿರ್ವಹಣೆ ಮಾಡಿ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಬೇಕಿದ್ದ ಸರ್ಕಾರ ಮತ್ತು ಅದರ ಪ್ರತಿನಿಧಿಗಳು ವಿವಾದಕ್ಕೆ ತುಪ್ಪ ಸುರಿಯುತ್ತಿದ್ದಾರೆ ಎನ್ನುವ ಆರೋಪಗಳೂ ಕೇಳಿ ಬರುತ್ತಿವೆ.
ಜೆಪಿ ವಿಚಾರ ವೇದಿಕೆಯು ಬೆಂಗಳೂರಿನ ಗಾಂಧಿ ಭವನದಲ್ಲಿ ಸಾಮರಸ್ಯ, ಸೌಹಾರ್ದ ಮತ್ತು ಸಮೃದ್ಧ ಕರ್ನಾಟಕಕ್ಕಾಗಿ ನಾವು-ನೀವು ಎನ್ನುವ ಆಶಯದೊಂದಿಗೆ ನಡೆದ ವಿಚಾರ ಸಂಕೀರ್ಣದಲ್ಲಿ ಭಾಗವಹಿಸಿದ ಎಲ್ಲಾ ಗಣ್ಯರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಸಮಾಜ ಎತ್ತ ಸಾಗುತ್ತಿದೆ? ನಾವೇನು ಮಾಡಬೇಕು? ಎನ್ನುವ ಪ್ರಮುಖ ಅಂಶಗಳನ್ನು ಚರ್ಚೆ ಮಾಡಲಾಯಿತು. ಪ್ರಮುಖವಾಗಿ ತಿನ್ನುವ ಅನ್ನಕ್ಕೂ, ಉಡುವ ತೊಡುಗೆಗೂ ನಿರ್ಬಂಧ ಹಾಕಲಾಗುತ್ತಿದೆ. ನೈತಿಕ ಪೊಲೀಸ್ ಗಿರಿ ನಮ್ಮ ಖಾಸಗೀತನಕ್ಕೆ ಧಕ್ಕೆ ತರುತ್ತಿದೆ. ಕೊಡು ಕೊಳ್ಳುವ ವ್ಯಾಪಾರಕ್ಕೂ ಧರ್ಮ ಅಡ್ಡ ತರಲಾಗುತ್ತಿದೆ. ಧರ್ಮ ಧರ್ಮಗಳ ನಡುವೆ ವಿಷಬೀಜ ಬಿತ್ತಿ, ವಂಚಿತ ವರ್ಗಗಳ ಯುವಕರನ್ನು ಎತ್ತಿಕಟ್ಟಿ ಬಲಿ ಕೊಡಲಾಗುತ್ತಿದೆ. ಎನ್ನುವ ಪ್ರಮುಖ ಆರೋಪಗಳು ವಿಚಾರ ಸಂಕೀರ್ಣದಲ್ಲಿ ಚರ್ಚೆಯ ವಿಷಯವಾಗಿದ್ದವು.
ಸಮಾಜಕ್ಕೆ ಒಳಿತನ್ನ ಮಾಡುವ ಆಲೋಚನೆ ಇರಬೇಕೆ ಹೊರತು ಸಮಾಜದಲ್ಲಿ ಧರ್ಮ ಮತ್ತು ಜಾತಿಗಳ ಹೆಸರಲ್ಲಿ ರಾಜಕಾರಣ ಮಾಡಿಕೊಂಡು ಒಡಕು ತರುವ ಕೆಲಸ ಮಾಡಬಾರದು. ಸಮಾಜದಲ್ಲಿ ಎಲ್ಲರನ್ನೂ ಸಮನಾಗಿ ಕಾಣಬೇಕೆನ್ನುವ ಆಲೋಚನೆಗಳು ಹೀಗೆ ಮುಂದುವರೆಯಲಿ. ಎಂದು ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಮಾಜಿ ಮುಖ್ಯಮಂತ್ರಿ, ಜೆಡಿ(ಎಸ್) ನಾಯಕ ಎಚ್.ಡಿ. ಕುಮಾರಸ್ವಾಮಿ ವಹಿಸಿದ್ದರು. ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ ವಿಚಾರ ಸಂಕಿರಣ ಉದ್ಘಾಟನೆ ಮಾಡಿದರು.
ಮುಖ್ಯ ಅತಿಥಿಗಳಾಗಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್, ಹಿರಿಯ ಪತ್ರಕರ್ತ ಬಿ.ಎಂ. ಹನೀಫ್ ಭಾಗಿಯಾಗಿದ್ದರು. ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ, ಮುಫ್ತಿ ಮಹಮ್ಮದ್ ಆಲಿ ಮಿಸ್ಬಾಹಿ ಜಮಾಲಿ ನೂರಿ, ಶ್ರೀ ಸೌಮ್ಯಾನಂದನಾಥ ಸ್ವಾಮೀಜಿ, ಫಾ. ಸಿರಿಲ್ ವಿಕ್ಟರ್ ಮತ್ತಿತರರು ಮಾತನಾಡಿದರು.