ಐಎಎಸ್-ಐಪಿಎಸ್ ಅಧಿಕಾರಿಗಳ ವರ್ಗಾವಣೆಗೆ ಸಿಎಸ್‍ಬಿ ರಚಿಸದ ಸರಕಾರ: ರಾಜ್ಯ ಹೈಕೋರ್ಟ್ ನೋಟಿಸ್

ಬೆಂಗಳೂರು: ಐಎಎಸ್ ಮತ್ತು ಐಪಿಎಸ್ ಸೇರಿ ನಾಗರಿಕ ಸೇವೆಯಲ್ಲಿರುವ ಅಧಿಕಾರಿಗಳನ್ನು ವರ್ಗಾವಣೆಗೊಳಿಸುವುದಕ್ಕೆ ಕೇಂದ್ರ ನಾಗರಿಕ ಸೇವಾ ಮಂಡಳಿ(ಸಿಎಸ್‍ಬಿ) ರಚನೆ ಮಾಡದಿರುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಸಿಎಸ್‍ಬಿ ರಚಿಸಬೇಕೆಂದು ಕೋರಿ ವಕೀಲೆ ಸುಧಾ ಕಾಟ್ವಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ನೇತೃತ್ವದ ವಿಭಾಗೀಯ ಪೀಠವು ಪ್ರತಿವಾದಿಗಳಾದ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ನೋಟಿಸ್ ಜಾರಿಗೊಳಿಸಿತು.

ಅರ್ಜಿದಾರ ಪರ ವಾದ ಮಂಡಿಸಿದ ವಕೀಲ ಎಸ್.ಉಮಾಪತಿ, ಐಎಎಸ್, ಐಪಿಎಸ್ ಸೇರಿದಂತೆ ನಾಗರಿಕ ಸೇವೆಯಲ್ಲಿರುವ ಅಧಿಕಾರಿಗಳು ದಕ್ಷತೆ ಹಾಗೂ ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸಬೇಕು. ಆದರೆ, ವರ್ಗಾವಣೆಗೆ ಕನಿಷ್ಠ ಅವಧಿ ನಿಗದಿ ಮಾಡದ ಕಾರಣ ರಾಜಕಾರಣಿಗಳು ಇವರನ್ನು ಮನಬಂದಂತೆ ವರ್ಗಾವಣೆ ಮಾಡುತ್ತಿದ್ದಾರೆ. ಇದು ಭ್ರಷ್ಟಾಚಾರಕ್ಕೂ ದಾರಿಯಾಗಿದೆ ಎಂದು ವಾದಿಸಿದರು.

ನಾಗರಿಕ ಸೇವೆಯಲ್ಲಿರುವ ಅಧಿಕಾರಿಗಳ ವರ್ಗಾವಣೆಗೆ ಕನಿಷ್ಠ ಸೇವಾವಧಿ ನಿಯಮ ಜಾರಿಗೊಳಿಸುವಂತೆ ಹಾಗೂ ವರ್ಗಾವಣೆ ಪ್ರಕ್ರಿಯೆ ನಡೆಸಲು ಕೇಂದ್ರ ನಾಗರಿಕ ಸೇವಾ ಮಂಡಳಿ ರಚಿಸುವಂತೆ ಸುಪ್ರೀಂಕೋರ್ಟ್ 2013ರ ಅಕ್ಟೋಬರ್ 30ರಂದು ಎಲ್ಲ ರಾಜ್ಯ ಸರಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶಿಸಿದೆ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಆದೇಶ ನೀಡಿ ಹಲವು ವರ್ಷ ಕಳೆದರೂ ಈವರೆಗೂ ಏಕೆ ರಾಜ್ಯದಲ್ಲಿ ಮಂಡಳಿ ರಚನೆ ಮಾಡಿಲ್ಲ ಎಂಬುದರ ಬಗ್ಗೆ ವಿವರಣೆ ನೀಡಿ ವರದಿ ಸಲ್ಲಿಸಬೇಕು ಎಂದು ಇದೇ ವೇಳೆ ಸರ್ಕಾರಕ್ಕೆ ಸೂಚಿಸಿದ ನ್ಯಾಯಾಲಯವು ವಿಚಾರಣೆಯನ್ನು ಮೂರು ವಾರ ಕಾಲ ಮುಂದೂಡಿದೆ.

ಐಎಎಸ್ ಅಧಿಕಾರಿಗಳಾದ ರೋಹಿಣಿ ಸಿಂಧೂರಿ ಮತ್ತು ಶರತ್ ಅವರು ನಡುವಿನ ವರ್ಗಾವಣೆ ವ್ಯಾಜ್ಯ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್, ಎರಡು ತಿಂಗಳಲ್ಲಿ ಸಿಎಸ್‌ಬಿ ರಚನೆ ಮಾಡುವಂತೆ ಸರ್ಕಾರಕ್ಕೆ 2021ರ ಜುಲೈ 8ರಂದು ಆದೇಶಿಸಿತ್ತು. ಆದರೆ, ಈ ಆದೇಶಗಳನ್ನು ಸರ್ಕಾರ ಈವರೆಗೂ ಪಾಲನೆ ಮಾಡಿಲ್ಲ. ಆದ್ದರಿಂದ, ನಾಗರಿಕ ಸೇವೆಯಲ್ಲಿರುವ ಅಧಿಕಾರಿಗಳ ವರ್ಗಾವಣೆಗೆ ಕನಿಷ್ಠ ಅವಧಿ ನಿಗದಿಪಡಿಸಲು ನೀತಿ ರೂಪಿಸಲು ಹಾಗೂ ಸಿಎಸ್‌ಬಿ ರಚಿಸಲು ರಾಜ್ಯ ಸರ್ಕಾರಕ್ಕೆ ಅಗತ್ಯ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Donate Janashakthi Media

Leave a Reply

Your email address will not be published. Required fields are marked *