ಇಂದೋರ್: ಮಧ್ಯಪ್ರದೇಶ ರಾಜ್ಯದ ರೇವಾ ಜಿಲ್ಲೆಯ ವಿಐಪಿ ಸರ್ಕ್ಯೂಟ್ ಹೌಸ್‌ನಲ್ಲಿ ಸ್ವಯಂಘೋಷಿತ ಬಾಬಾ ಹಾಗೂ ಆತನ ಸಂಗಡಿಗರು 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ವರ್ಮಾ ಹೇಳಿದ್ದಾರೆ.
ಪ್ರಮುಖ ಆರೋಪಿ ಬಾಬಾ ಮಹಂತ್ ಸೀತಾರಾಮ್ ದಾಸ್ ಅಲಿಯಾಸ್ ಸಮರ್ಥ ತ್ರಿಪಾಠಿ ತಲೆಮರೆಸಿಕೊಂಡಿದ್ದು, ಸರ್ಕ್ಯೂಟ್ ಹೌಸ್‌ನಲ್ಲಿ ಕೊಠಡಿ ಕಾಯ್ದಿರಿಸಿ ಬಾಲಕಿಯನ್ನು ಅಲ್ಲಿಗೆ ಕರೆತಂದಿದ್ದ ಆತನ ಸಹಚರ ಮತ್ತು ಕುಖ್ಯಾತ ಕ್ರಿಮಿನಲ್ ವಿನೋದ್ ಪಾಂಡೆಯನ್ನು ಸಧ್ಯ ಬಂಧಿಸಲಾಗಿದೆ ಎಂದು ಶಿವಕುಮಾರ್ ವರ್ಮಾ ತಿಳಿಸಿದ್ದಾರೆ.
ಪ್ರಮುಖ ಆರೋಪಿ ಮಹಂತ್ ಸೀತಾರಾಮ್ ದಾಸ್ ಧಾರ್ಮಿಕ ಗುರುವಾಗಿದ್ದು, ಶಾಸಕರು, ಹಿರಿಯ ಅಧಿಕಾರಿಗಳು ಸೇರಿದಂತೆ ಪ್ರಮುಖ ವ್ಯಕ್ತಿಗಳು ಅವರ ಶಿಷ್ಯಂದಿರಾಗಿದ್ದಾರೆ. ಎಪ್ರಿಲ್ 1ರಿಂದ ಸೀತರಾಮ್ ದಾಸ್ ನ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ನಡೆಯಬೇಕಿತ್ತು ಎಂದು ವರ್ಮಾ ಹೇಳಿದ್ದಾರೆ.
“ತನ್ನ ಬಳಿ ಸಹಾಯ ಕೇಳಿದ್ದ, ಕೆಲವು ವೈಯಕ್ತಿಕ ಸಮಸ್ಯೆಯಿಂದ ಮನನೊಂದಿದ್ದ ಹುಡುಗಿಯನ್ನು ಪಾಂಡೆ ವಿಐಪಿ ಸರ್ಕ್ಯೂಟ್ ಹೌಸ್ ಗೆ ಕರೆದುಕೊಂಡು ಬಂದಿದ್ದಾನೆ, ಅಲ್ಲಿ ಮಹಂತ್ ಸೀತಾರಾಮ್ ದಾಸ್ ಮತ್ತು ಇತರ ಇಬ್ಬರು ಮದ್ಯ ಸೇವಿಸುತ್ತಿದ್ದರು. ಅವರೊಂದಿಗೆ ಮದ್ಯ ಸೇವಿಸುವಂತೆ ಬಾಲಕಿಗೆ ದುಷ್ಕರ್ಮಿಗಳು ಒತ್ತಾಯಿಸಿದ್ದಾರೆ. ನಂತರ ಪಾಂಡೆ ಸೇರಿದಂತೆ ಎಲ್ಲರೂ ಕೊಠಡಿಯಿಂದ ಹೊರಗೆ ಬಂದು ಹೊರಗಿನಿಂದ ಬೀಗ ಹಾಕಿದ್ದಾರೆ. ಮಹಂತ್ ಸೀತಾರಾಮ್ ದಾಸ್ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಹಾಗೂ ಘಟನೆ ಬಗ್ಗೆ ಎಲ್ಲೂ ಹೊರಗೆ ಹೇಳದಂತೆ ಬಾಲಕಿಯ ಮನವೊಲಿಸಲು ಆರೋಪಿಗಳು ಪ್ರಯತ್ನಪಟ್ಟಿದ್ದಾರೆ ” ಎಂದು ವರ್ಮಾ ತಿಳಿಸಿದ್ದಾರೆ.
ಬಳಿಕ ಬಾಲಕಿಯ ಮನೆಯವರಿಗೆ ಮಾಹಿತಿ ತಿಳಿದು ದೂರು ನೀಡಿದ್ದಾರೆ. ಅದರಂತೆ, ಪೊಲೀಸರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 342, 504 , 323, 328, ಮತ್ತು 376 ಡಿ (ಸಾಮೂಹಿಕ ಅತ್ಯಾಚಾರ) ಮತ್ತು ಲೈಂಗಿಕತೆಯಿಂದ ಮಕ್ಕಳ ರಕ್ಷಣೆ ಅಪರಾಧಗಳ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.
ರೇವಾ ಜಿಲ್ಲೆಯ ಕಮಿಷನರ್ ಅನಿಲ್ ಸುಚಾರಿ, ಎಸ್‌ಪಿ ನವನೀತ್ ಭಾಸಿನ್ ಕೂಡ ಈ ಬಾಬಾನ ಭಕ್ತರು ಎಂದು ಹೇಳಲಾಗಿದೆ. ಕಮಿಷನರ್ ಹಾಗೂ ಎಸ್‌ಪಿ ಬಾಬಾನಿಂದ ಗೌರವ ಸ್ವೀಕರಿಸುತ್ತಿರುವ ಫೋಟೋಗಳೂ ಈಗ ವೈರಲ್ ಆಗಿವೆ. ವಿಂಧ್ಯ ಪ್ರದೇಶದ ಪ್ರತಿಷ್ಠಿತ ನಾಯಕ ಮತ್ತು ಮಧ್ಯಪ್ರದೇಶ ವಿಧಾನಸಭೆಯ ಸ್ಪೀಕರ್ ಗಿರೀಶ್ ಗೌತಮ್ ಕೂಡ ಮಹಂತ್ ಸೀತಾರಾಮ್ ದಾಸ್ ಅವರ ಭಕ್ತರಲ್ಲಿ ಸೇರಿದ್ದಾರೆ. ಮಾತ್ರವಲ್ಲದೆ, ಜಿಲ್ಲೆಯ ಪ್ರಮುಖ ಕೈಗಾರಿಕೋದ್ಯಮಿಗಳು ಮತ್ತು ಬಿಲ್ಡರ್‌ಗಳು ಸಹ ಬಾಬಾ ಅವರ ಆಪ್ತರಲ್ಲಿ ಸೇರಿದ್ದಾರೆ ಎಂದು ನವಭಾರತ್ ಟೈಮ್ಸ್ ವರದಿ ಮಾಡಿದೆ.