ಹುಬ್ಬಳ್ಳಿ: ಕೇಂದ್ರ ಸರಕಾರ ಜಾರಿ ಮಾಡಲು ಹೊರಟಿರುವ ಕಾರ್ಮಿಕ ಸಂಹಿತೆಗಳು ಕಾರ್ಮಿಕರನ್ನು ನವ ಗುಲಾಮಗಿರಿಗೆ ತಳ್ಳಲಿವೆ. ದೇಶದ ಸಂಪತ್ತು ಸೃಷ್ಟಿಸುವ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಲು ಸರಕಾರಗಳು ಮುಂದಾಗಬೇಕು ಜೆಸಿಟಿಯು ಸಂಚಾಲಕ ಮಹೇಶ ಪತ್ತಾರ ಆಗ್ರಹಿಸಿದರು.
ಕಾರ್ಮಿಕರ ಹಕ್ಕೊತ್ತಾಯಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಸಂಯುಕ್ತ ಕಾರ್ಮಿಕ ಸಂಘಟನೆಗಳ ಒಕ್ಕೂಟ(ಜೆಸಿಟಿಯು) ವತಿಯಿಂದ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿ ನಗರದಲ್ಲಿ ಇಂದು ಬೃಹತ್ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಮಿರನ್ನು ಉದ್ದೇಶಿಸಿ ಮಾತನಾಡಿದ ಮಹೇಶ ಪತ್ತಾರ ಅವರು, ರೈತರ ಐತಿಹಾಸಿಕ ಹೋರಾಟಕ್ಕೆ ಮಣಿದ ಮೋದಿ ಸರಕಾರ ಕೃಷಿ ಕಾನೂನುಗಳನ್ನು ವಾಪಸ್ಸು ಪಡೆದಿದೆ. ಆದರೆ ಅವರದ್ದೇ ಸರಕಾರ ರಾಜ್ಯದಲ್ಲಿ ರೈತ ವಿರೋಧಿ ಎಪಿಎಂಸಿ, ಭೂ ಸುಧಾರಣಾ, ಜಾನುವಾರು ಹತ್ಯೆ ತಿದ್ದುಪಡಿ ಕಾಯ್ದೆಗಳನ್ನು ಜಾರಿ ಮಾಡುತ್ತಿದೆ. ರೈತರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಕೂಡಲೇ ಈ ಕಾನೂನುಗಳನ್ನು ವಾಪಸ್ಸು ಪಡೆಯಲಿ. ರಾಜ್ಯ ಸರಕಾರ ಕಾರ್ಮಿಕ ಸಂಹಿತೆಗಳನ್ನು ರಾಜ್ಯದಲ್ಲಿ ಜಾರಿ ಮಾಡಬಾರದೆಂದು ಒತ್ತಾಯಿಸಿದರು.
ಇದನ್ನು ಓದಿ: ಮಾರ್ಚ್ 28ರಂದು ದೇಶವ್ಯಾಪಿ ಮೊದಲ ದಿನದ ಮುಷ್ಕರಕ್ಕೆ ಕಾರ್ಮಿಕ ವರ್ಗದ ಅದ್ಭುತ ಸ್ಪಂದನೆ
ಬೆಲೆ ಏರಿಕೆ ನಿಯಂತ್ರಣ, ರೂ. 26 ಸಾವಿರ ಕನಿಷ್ಟ ವೇತನ ಜಾರಿ, ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆ, ಸಾರ್ವಜನಿಕ ವಲಯದ ಖಾಸಗೀಕರಣ ತಡೆಯುವುದು ಸೇರಿದಂತೆ 12 ಪ್ರಮುಖ ಬೇಡಿಕೆಗಳಿಗೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಿದೆ.
ಸರಕಾರ ನಮ್ಮ ಬೇಡಿಕೆಗಳಿಗೆ ಕೂಡಲೇ ಸ್ಪಂದಿಸದಿದ್ದರೆ ರೈತ ಕಾರ್ಮಿಕರ ಐಕ್ಯತೆಯ ಬೃಹತ್ ಹೋರಾಟಗಳು ದೇಶದಲ್ಲಿ ರೂಪಗೊಳ್ಳಲಿವೆ ಎಂದು ಎಚ್ಚರಿಸಿದರು.
ಕಾರ್ಮಿಕ ಮುಖಂಡರಾದ ಸ್ಟಿಫನ್ ಜಯಚಂದ್ರ, ದೇವಾನಂದ ಜಗಾಪುರ, ಅಶೋಕ ಬಾರ್ಕಿ, ವಿ.ಕೆ. ಬನ್ನಿಗೋಳ, ಗುರುಸಿದ್ದಪ್ಪ ಅಂಬಿಗೇರ, ಎ.ಎಸ್.ಪೀರಜಾದೆ, ರೈತ ಮುಖಂಡ ಬಿ.ಎಸ್.ಸೊಪ್ಪಿನ ಮಾತನಾಡಿದರು.
ಇಲ್ಲಿನ ಬಸವವನದಿಂದ ಮೆರವಣಿಗೆ ಆರಂಭವಾಯಿತು. ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕೆಲ ಕಾಲ ಪ್ರತಿಭಟನೆ ನಡೆಸಲಾಯಿತು. ನಂತರ ತಹಶೀಲ್ದಾರ್ ಮೂಲಕ ಪ್ರಧಾನಮಂತ್ರಿ, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಅಮೃತ ಇಜಾರಿ, ಬಾಬಾಜಾನ ಮುಧೋಳ, ಶಿವಗಂಗಾ ಹೆಬ್ಬಳ್ಳಿ, ರವೀಂದ್ರ ಪತ್ತಾರ, ಆನಂದ ಬಡಿಗೇರ, ಎಂ.ಎಚ್. ಮುಲ್ಲಾ, ಬಸೀರ ಮುಧೋಳ, ಹುಲಿಗೆಮ್ಮ ಚಲವಾದಿ, ಅನ್ನಪೂರ್ಣ ಕುಂಕುರಮಠ, ಬಸಣ್ಣ ನೀರಲಗಿ, ಚಿದಾನಂದ ಸವದತ್ತಿ, ದುರ್ಗಪ್ಪ ಪೂಜಾರಿ, ರಮೇಶ ಭೂಸ್ಲೆ, ಪುಂಡಲೀಕ ಬಡಿಗೇರ, ಪ್ರವೀಣ ಶಿಂಪೇರ, ದಾನಮ್ಮ ಕುಸ್ತಿ ಸೇರಿದಂತೆ ಹಮಾಲಿ, ಕಟ್ಟಡ, ಸ್ಕೀಂ ನೌಕರರು, ಬೀದಿಬದಿ ವ್ಯಾಪಾರಸ್ಥರು, ಅಟೋರಿಕ್ಷಾ ಚಾಲಕರು, ವಿವಿಧ ಕಾರ್ಖಾನೆಗಳ ಕಾರ್ಮಿಕರು, ಬ್ಯಾಂಕ್, ವಿಮಾ ನೌಕರರು ಭಾಗವಹಿಸಿದ್ದರು.