ಗೋದಾಮಿನಲ್ಲಿ ಅಗ್ನಿ ಅವಘಡ: ಸುಟ್ಟು ಕರಕಲಾದ 11 ಮಂದಿ ಕಾರ್ಮಿಕರು

ಹೈದರಾಬಾದ್‌: ತೆಲಂಗಾಣ ರಾಜ್ಯದ ಸಿಕಂದರಾಬಾದ್‌ನ ಭೋಯಿಗುಡಾ ಪ್ರದೇಶದ ಕಬ್ಬಿಣ ಮತ್ತು ಪ್ಲಾಸ್ಟಿಕ್ ಗೋದಾಮಿನಲ್ಲಿ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ 11 ಮಂದಿ ವಲಸೆ ಕಾರ್ಮಿಕರು ಸಜೀವ ದಹನಗೊಂಡಿದ್ದಾರೆ.

ಗೋದಾಮು ಸಿಕಂದರಾಬಾದ್‌ ರೈಲ್ವೆ ನಿಲ್ದಾಣಕ್ಕೆ ಸಮೀಪದ ವಸತಿ ಪ್ರದೇಶದಲ್ಲಿದೆ. ವರದಿಯ ಪ್ರಕಾರ, ಪತ್ತೆಯಾದ ಶವಗಳು ಬಿಹಾರದಿಂದ ವಲಸೆ ಬಂದ ಕಾರ್ಮಿಕರಾಗಿರಬಹುದು ಎನ್ನಲಾಗಿದೆ. ಗೋದಾಮಿನ ಮೇಲಿನ ಮಹಡಿಯಲ್ಲಿ 13 ಕಾರ್ಮಿಕರು ಮಲಗಿದ್ದಾಗ ಇಂದು(ಮಾರ್ಚ್‌ 23) ಬೆಳಗಿನ ಜಾವ 3.30 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಘಟನೆಗೆ ಕಾರಣ ಏನೆಂಬುದರ ಬಗ್ಗೆ ತನಿಖೆ ಮುಂದುವರೆದಿದೆ.

ಇದನ್ನು ಓದಿ: ಎನ್‌ಎಲ್‌ಎಂಸಿ-ರಾಷ್ಟ್ರೀಯ ಸೊತ್ತುಗಳ ಲೂಟಿಗೆ ಸರಕಾರೀ ರಿಯಲ್ ಎಸ್ಟೇಟ್ ಕಂಪನಿ?

ಬೆಂಕಿ ಅವಘಡ ಸಂಭವಿಸಿದಾಗ 13ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಇದ್ದರು. ಇದರಲ್ಲಿ 11 ಮಂದಿ ಸಂಪೂರ್ಣ ಸುಟ್ಟು ಕರಕಲಾಗಿದ್ದಾರೆ. ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಗೋದಾಮಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಧಗಧಗನೆ ಒತ್ತು ಉರಿದಿದೆ. ಭಾರೀ ಪ್ರಮಾಣದಲ್ಲಿ ಬೆಂಕಿ ಹೊಗೆ ಬರುತ್ತಿದ್ದನ್ನು ಕಂಡ ಸ್ಥಳೀಯರು ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿದರು. ಬೆಳಗ್ಗೆ 7 ಗಂಟೆಗೆ ಬೆಂಕಿಯನ್ನು ಹತೋಟಿಗೆ ತರಲಾಯಿತು. ಆದರೆ ಅಷ್ಟರಲ್ಲಾಗಲೇ 11 ಮಂದಿ ಬೆಂಕಿಯಲ್ಲಿ ಸಜೀವವಾಗಿ ದಹನಗೊಂಡಿದ್ದರು.

ಎಲ್ಲ ಮೃತ ದೇಹಗಳು ಗುರುತು ಸಿಗದಷ್ಟು ಸುಟ್ಟು ಕರಕಲಾಗಿವೆ. ಶವಗಳನ್ನು ಗಾಂಧಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಒಬ್ಬ ಕಾರ್ಮಿಕ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಸಹ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜ್ಯ ಸಚಿವ ತಲಸಾನಿ ಶ್ರೀನಿವಾಸ್ ಯಾದವ್ ಸ್ಥಳಕ್ಕೆ ಆಗಮಿಸಿ ಸಂತ್ರಸ್ತರ ಕುಟುಂಬಗಳಿಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದರು.

ಬೆಂಕಿಯನ್ನು ಹತೋಟಿಗೆ ತರಲು ಎಂಟು ಅಗ್ನಿಶಾಮಕ ವಾಹನಗಳ ಕಾರ್ಯನಿರ್ವಹಿಸಿದವು. ಘಟನೆಯ ಬಗ್ಗೆ ಮುಖ್ಯಮಂತ್ರಿ ಕೆ.  ಚಂದ್ರಶೇಖರ ರಾವ್ ಆಘಾತ ವ್ಯಕ್ತಪಡಿಸಿದ್ದಾರೆ. ಮೃತ ಕಾರ್ಮಿಕರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *