ಬೆಂಗಳೂರು: ತಹಸೀಲ್ದಾರ್ ಒಬ್ಬರ ವರ್ಗಾವಣೆ ಕುರಿತಂತೆ ಆಡಳಿತಾರೂಢ ಬಿಜೆಪಿ ಪಕ್ಷದ ಇಬ್ಬರು ಸಚಿವರಾದ ಆರ್. ಅಶೋಕ್ ಹಾಗೂ ಡಾ. ಅಶ್ವತ್ಥ್ ನಾರಾಯಣ ಮಧ್ಯೆ ಕಿತ್ತಾಟ ಏರ್ಪಟ್ಟಿದ್ದು, ತಹಶೀಲ್ದಾರ್ ವರ್ಗಾವಣೆ ವಿಚಾರವಾಗಿ ವಿಧಾನಸಭೆ ಲಾಂಜ್‌ನಲ್ಲಿ ನಿನ್ನೆ(ಮಾರ್ಚ್ 17) ಅಶೋಕ್‌ರನ್ನು ಡಾ.ಅಶ್ವತ್ಥ್ ನಾರಾಯಣ ಪ್ರಶ್ನಿಸಿದ್ದರು ಎಂದು ತಿಳಿದುಬಂದಿದೆ.
ಈ ಸಂದರ್ಭದಲ್ಲಿ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದ ಘಟನೆ ನಡೆದಿದೆ. ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ತಹಸೀಲ್ದಾರ್ ಶ್ರೀನಿವಾಸ್ ಅವರನ್ನು ವರ್ಗಾವಣೆಗೊಳಿಸಿ ಬೇರೊಬ್ಬರನ್ನು ನಿಯೋಜಿಸಬೇಕೆಂದು ರಾಮನಗರ ಜಿಲ್ಲಾ ಉಸ್ತುವಾರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಕಂದಾಯ ಸಚಿವ ಆರ್.ಅಶೋಕ್ ಅವರಲ್ಲಿ ಮನವಿ ಮಾಡಿದ್ದರು.
ತಹಶೀಲ್ದಾರ್‌ರನ್ನು ವರ್ಗಾವಣೆ ಮಾಡಲು ಸಾಧ್ಯವಿಲ್ಲ. ಅದರಲ್ಲಿ ಬೇರೆ ವಿಚಾರವಿದೆ, ಸ್ವಾಮೀಜಿ ವಿಚಾರ ಇದೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಯಾಕೆ ಮಾಡಲ್ಲ, ಯಾರನ್ನಾದರೂ ಹಾಕಿ, ಒಳ್ಳೆಯವರನ್ನು ಹಾಕಿ. ಭ್ರಷ್ಟಾಚಾರ ಮಾಡುವವರನ್ನು ಹಾಕಬೇಡಿ ಎಂದು ಡಾ.ಅಶ್ವತ್ಥ್ ನಾರಾಯಣ ಪ್ರತಿಕ್ರಿಯೆ ನೀಡಿದ್ದಾರೆ. ವರ್ಗಾವಣೆ ಮಾಡೋದು ಬೇಡ ಎಂದು ಹೇಳಿದವರು ಯಾರು? ಎಂದು ಏರುಧ್ವನಿಯಲ್ಲಿ ಆರ್. ಅಶೋಕ್‌ಗೆ ಅಶ್ವತ್ಥ್ ನಾರಾಯಣ ಪ್ರಶ್ನಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನು ಓದಿ: 100 ವರ್ಷಗಳ ಬಳಿಕ ರಾಜ್ಯದಲ್ಲಿ ಡ್ರೋಣ್ ಆಧಾರಿತ ಭೂ ಸರ್ವೇ: ಆರ್. ಅಶೋಕ
ಒಬ್ಬ ಜಿಲ್ಲಾ ಉಸ್ತುವಾರಿ ಸಚಿವನಾದ ನಾನು ಹೇಳಿದರೆ, ನೀವು ವರ್ಗಾವಣೆ ಮಾಡುವುದಿಲ್ಲ ಎಂದರೆ ಹೇಗೆ.? ನನಗೆ ಅಷ್ಟೂ ಬೆಲೆ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿದ ಅಶೋಕ್, ಇಲಾಖೆಯ ಸಚಿವನಾದ ನನಗೆ ಯಾರನ್ನು, ಎಲ್ಲಿಗೆ, ಯಾವಾಗ ವರ್ಗಾವಣೆ ಮಾಡಬೇಕೆಂಬುದು ಗೊತ್ತಿದೆ. ನಿಮ್ಮಿಂದ ನಾನು ಕಲಿಯಬೇಕಾದ ಅಗತ್ಯವಿಲ್ಲ. ಪಕ್ಷದಲ್ಲಿ ನಾನು ನಿಮಗಿಂತಲೂ ಹಿರಿಯ. ನನಗೆ ನಿಮ್ಮ ಉಪದೇಶ ಬೇಡ ಎಂದು ತಿರುಗೇಟು ನೀಡಿದ್ದಾರೆ.
ಈ ಹಂತದಲ್ಲಿ ಇಬ್ಬರು ಸಚಿವರ ನಡುವೆ ಏಕವಚನದಲ್ಲೇ ಪದ ಪ್ರಯೋಗವಾಗಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ತಕ್ಷಣವೇ ಸ್ಥಳದಲ್ಲಿದ್ದ ಕೆಲವು ಸಚಿವರು ಮತ್ತು ಶಾಸಕರು ಇಬ್ಬರನ್ನು ಸಮಾಧಾನಪಡಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಿದರು ಎನ್ನಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣ ಅವರು, ಸಚಿವ ಅಶೋಕ್ ಅವರಿಗೆ ಪತ್ರವನ್ನೂ ನೀಡಿ, ಕೆಲವು ಆರೋಪಗಳು ಇರುವ ಹಿನ್ನೆಲೆಯಲ್ಲಿ ಶ್ರೀನಿವಾಸ್ ಅವರನ್ನು ತಕ್ಷಣವೇ ವರ್ಗಾವಣೆಗೊಳಿಸಬೇಕೆಂದು ಕೋರಿದ್ದರು. ಆದರೆ ಸಚಿವರ ಈ ಮನವಿಗೆ ಅಶೋಕ್ ಸ್ಪಂದಿಸಿರಲಿಲ್ಲ ಎನ್ನಲಾಗಿದೆ.
ಆದರೆ ಪಟ್ಟು ಬಿಡದ ಅಶ್ವಥ್ ನಾರಾಯಣ, ತಹಸೀಲ್ದಾರ್ ಶ್ರೀನಿವಾಸ್ ಅವರನ್ನು ವರ್ಗಾವಣೆ ಮಾಡಬೇಕೆಂದು ಪದೇ ಪದೇ ಒತ್ತಡ ಹಾಕಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದರಿಂದ ಕೆರಳಿದ ಅಶ್ವಥ್ ನಾರಾಯಣ ವಿಧಾನಸಭೆ ಕಲಾಪ ನಡೆಯುತ್ತಿದ್ದ ವೇಳೆ ಲಾಂಜ್‍ನಲ್ಲಿದ್ದ ಅಶೋಕ್ ವಿರುದ್ಧ ಏರಿದ ಧ್ವನಿಯಲ್ಲೇ ಮುಗಿಬಿದ್ದರು.
ಮಾತಿನ ಜಟಾಪಟಿ ಬಗ್ಗೆ ಸಚಿವ ಅಶ್ವತ್ಥ್ ನಾರಾಯಣ ಪ್ರತಿಕ್ರಿಯೆ ನೀಡಿದ್ದು, ಸಚಿವ ಆರ್.ಅಶೋಕ್ ಜೊತೆ ಬರೀ ಮಾತುಕತೆ ನಡೆದಿದೆ. ರಾಮನಗರ, ಮಾಗಡಿಯಲ್ಲಿ ಅಧಿಕಾರಿಗಳನ್ನು ನಿಯೋಜಿಸುವ ಬಗ್ಗೆ ಕೋರಿಕೆ ಇದೆ. ಸಚಿವ ಆರ್. ಅಶೋಕ್ ಕೋರಿಕೆಯನ್ನ ಪರಿಗಣಿಸುತ್ತೇನೆ ಅಂದರು. ನನ್ನ, ಸಚಿವ ಆರ್.ಅಶೋಕ್ ನಡುವೆ ಗೊಂದಲ ಇಲ್ಲ. ನಮಗೆ ಕೆಲ ಬದಲಾವಣೆಗಳು ಆಗಬೇಕೆಂಬ ಆಸೆ ಇರುತ್ತೆ. ಆಸೆ, ಒತ್ತಾಯವನ್ನು ಸಂಬಂಧಪಟ್ಟ ಸಚಿವರಿಗೆ ತಿಳಿಸುತ್ತೇವೆ . ಅವರು ಪರಿಸ್ಥಿತಿಗೆ ಅನುಗುಣವಾಗಿ ಪ್ರತಿಕ್ರಿಯೆ ನೀಡುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ.