ಬೆಂಗಳೂರು: ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಪ್ರಶ್ನೆಗೆ ಉತ್ತರ ನೀಡಿದ ಸಾರಿಗೆ ಸಚಿವ ಶ್ರೀರಾಮುಲು ʻʻಈ ಹಿಂದೆ 7-8ಗಳವರೆಗೂ ಸಾರಿಗೆ ನೌಕರರಿಗೆ ವೇತನ ಪಾವತಿಯಾಗುತ್ತಿರಲಿಲ್ಲ. ಈಗ ನಮ್ಮ ಸರ್ಕಾರ ಕೋವಿಡ್ ಸಂಕಷ್ಟದ ನಡುವೆಯೂ 3 ಸಾವಿರ ಕೋಟಿ ರೂಪಾಯಿ ಆರ್ಥಿಕ ನೆರವಿನೊಂದಿಗೆ ವೇತನ ಪಾವತಿಸಿದೆ. ಎರಡು ತಿಂಗಳ ವೇತನ ಪಾವತಿ ಬಾಕಿ ಉಳಿದಿದೆ. ಅದನ್ನು ಕೂಡ ಪಾವತಿಸಲು ಹಣಕಾಸು ಇಲಾಖೆಯೊಂದಿಗೆ ಚರ್ಚಿಸಿ ಬಾಕಿ ಮೊತ್ತವನ್ನು ಪಾವತಿಸಲಾಗುವುದು ಎಂದು ಹೇಳಿದರು.
ವಿಧಾನಮಂಡಲದ ಅಧಿವೇಶನದಲ್ಲಿ ಪರಿಷತ್ತಿನಲ್ಲಿ ಗುತ್ತಿಗೆ ಆಧಾರದಲ್ಲಿ ಎಲೆಕ್ಟ್ರಿಕ್ ಬಸ್ಸುಗಳ ಖರೀದಿ ವಿಚಾರವಾಗಿ ಚರ್ಚೆಯ ವೇಳೆ, ಸಾರಿಗೆ ನೌಕರರ ವೇತನ ಬಾಕಿ ಪಾವತಿಗೆ ಸಂಬಂಧಿಸಿದಂತೆ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಮಧ್ಯ ಪ್ರವೇಶಿಸಿ ಸಾರಿಗೆ ನೌಕರರಿಗೆ ವೇತನ ಪಾವತಿಯಾಗುತ್ತಿಲ್ಲ. ಆದರೆ ಸರ್ಕಾರ ಅನಗತ್ಯ ಹಣ ವೆಚ್ಚ ಮಾಡುತ್ತಿದೆ. ಹೆಚ್ಚುವರಿಯಾಗಿ 300 ಬಸ್‍ಗಳ ಖರೀದಿಗೂ ಮುಂದಾಗಿದೆ. ಇದು ಸರಿಯಲ್ಲ ಎಂದು ಕೇಳಿದ್ದರು.
ಶಾಸಕ ಪ್ರಕಾಶ್ ರಾಥೋಡ್ ಪ್ರಶ್ನೆಗೆ ಉತ್ತರಿಸಿದ ಸಚಿವ ಶ್ರೀರಾಮುಲು, 6ನೇ ವೇತನ ಆಯೋಗ ಜಾರಿ ಹಾಗೂ ಇತರೆ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸಿದ ಸಾರಿಗೆ ನಿಗಮಗಳ ನೌಕರರ ಪೈಕಿ 2,846 ಮಂದಿಯನ್ನು ಅಮಾನತುಗೊಳಿಸಲಾಗಿದೆ, 1500 ಮಂದಿಯನ್ನು ವಜಾಗೊಳಿಸಲಾಗಿದೆ. ಅದರಲ್ಲಿ ಕೆಎಸ್‍ಆರ್‌ಟಿಸಿ 281 ಮಂದಿಯ ಅಮಾನತನ್ನು ಹಿಂಪಡೆಯಲಾಗಿದೆ. ವಜಾಗೊಂಡ 74 ಮಂದಿ ಪೈಕಿ 5 ಮಂದಿಯನ್ನು ಪುನರ್ ನೇಮಕ ಮಾಡಲಾಗಿದೆ ಎಂದರು.
ಬಿಎಂಟಿಸಿಯಲ್ಲಿ ಎಲ್ಲರ ಅಮಾನತು ಆದೇಶವನ್ನು ಹಿಂಪಡೆಯಲಾಗಿದೆ. ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ 61 ಮಂದಿಯ ಅಮಾನತು ಹಿಂಪಡೆಯಲಾಗಿದೆ. ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ 63 ಮಂದಿಯನ್ನು ಅಮಾನತನ್ನು ಹಿಂಪಡೆಯಲಾಗಿದೆ.
ವಜಾಗೊಂಡ 60 ಮಂದಿ ಪೈಕಿ 7 ಮಂದಿಯನ್ನು ಮರು ನೇಮಕ ಮಾಡಿಕೊಳ್ಳಲಾಗಿದೆ. ವಜಾಗೊಂಡ ಎಲ್ಲ ನಿಗಮಗಳ ನೌಕರರು ಲೋಕ ಅದಾಲತ್ ಮೂಲಕವೇ ಮರು ನೇಮಕಗೊಳ್ಳಬೇಕೆಂದು ಸೂಚಿಸಲಾಗಿದೆ. ಆದರೆ, ಸರ್ಕಾರ ಎಲ್ಲರನ್ನೂ ಮರು ನೇಮಕ ಮಾಡಿಕೊಳ್ಳುವ ಬದ್ದತೆ ಹೊಂದಿದೆ ಎಂದರು.
ಎಲೆಕ್ಟ್ರಿಕ್ ಬಸ್ಸುಗಳ ಗುತ್ತಿಗೆಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ
ಗುತ್ತಿಗೆ ಆಧಾರದ ಮೇಲೆ ನಿಯೋಜಿಸಲಾಗಿರುವ ಎಲೆಕ್ಟ್ರಿಕ್ ಬಸ್‍ಗಳು 90 ಕಿಲೋ ಮೀಟರ್ ನಷ್ಟು ಸಂಚರಿಸುತ್ತಿವೆ. 24 ಬಸ್‍ಗಳು ಸದ್ಯಕ್ಕೆ ಕಾರ್ಯಾಚರಣೆ ನಡೆಸುತ್ತಿದ್ದು, ಅವುಗಳಲ್ಲಿ ಕೆಲವು 190 ಕಿಲೋ ಮೀಟರ್ ವರೆಗೂ ಸಂಚಾರ ಮಾಡಿವೆ. ನಗರದಲ್ಲಿ ಸಂಚರಿಸುತ್ತಿರುವ ಎಲೆಕ್ಟ್ರಿಕ್ ಬಸ್‍ಗಳ ಗುತ್ತಿಗೆಯಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆದಿಲ್ಲ ಎಂದು ಸಾರಿಗೆ ಸಚಿವ ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಚರ್ಚೆಯ ವೇಳೆ ಕಾಂಗ್ರೆಸ್ ಸದಸ್ಯರಾದ ಕೆ.ಗೋವಿಂದರಾಜು ಕೇಳಿದ ಪ್ರಶ್ನೆಗೆ ಸಚಿವ ಶ್ರೀರಾಮುಲು ಉತ್ತರಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪರಿಷತ್ತಿನ ಸದಸ್ಯರು, 300 ಬಸ್‍ಗಳ ಕಾರ್ಯಾಚರಣೆಗೆ ಒಪ್ಪಂದ ಮಾಡಿಕೊಂಡು ಬಿಲ್ ಪಾವತಿಸಲಾಗುತ್ತಿದೆ. ಆದರೆ 24 ಬಸ್‍ಗಳು ಮಾತ್ರ ಸಂಚರಿಸುತ್ತಿವೆ. 190 ಕಿಲೋ ಮೀಟರ್ ಸಂಚರಿಸಬೇಕು ಎಂಬ ಕರಾರು ಇದೆ. ಕೇವಲ 90 ಕಿಲೋ ಮೀಟರ್ ನಷ್ಟು ಸಂಚರಿಸುತ್ತಿವೆ. ಇದರಲ್ಲಿ ಸಾಕಷ್ಟು ಅವ್ಯವಹಾರವಾಗಿದೆ ಎಂದು ಆರೋಪಿಸಿದರು.