ಬೆಂಗಳೂರು: ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ ವಿಷಯ ಇಂದು ಅಧಿವೇಶನದ ಸಂದರ್ಭದಲ್ಲಿ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಯಿತು. ಈ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳ ತಲೆದಂಡಕ್ಕೆ ಆಗ್ರಹ ಕೇಳಿ ಬಂತು.
ವಿಧಾನ ಪರಿಷತ್ತಿನ ಪ್ರಶ್ನೋತ್ತರ ಸಮಯದ ಬಳಿಕ ಜೆಡಿಎಸ್ ಸದಸ್ಯ ಬೋಜೇಗೌಡ ಸಭಾಪತಿಯವರದು ಸಾಂವಿಧಾನಿಕ ಹುದ್ದೆ. ಅವರ ವಿರುದ್ಧ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಜಾತಿ ಪಂಗಡ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಇಲ್ಲಿ ನಿಯಮಾವಳಿಗಳ ಉಲ್ಲಂಘನೆಯಾಗಿದೆ. ಸಭಾಪತಿಯವರಿಗೆ ಅಗೌರವವಾಗಿದೆ ಎಂದರು.
ಸರ್ಕಾರ ಅಲ್ಲಿನ ಸಬ್ಇನ್ಸ್ಪೆಕ್ಟರ್ ಒಬ್ಬರನ್ನು ಅಮಾನತುಪಡಿಸಿ ಕೈ ತೊಳೆದುಕೊಳ್ಳುತ್ತಿದೆ. ಇದಕ್ಕೆ ಡಿವೈಎಸ್ಪಿ ಅವರೇ ಹೊಣೆಗಾರರಾಗಿದ್ದು, ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಪಾಲರ ಬಳಿಕ ಸಭಾಪತಿ ಹುದ್ದೆ ಹೆಚ್ಚು ಗೌರವಯುತ ಸ್ಥಾನ ಎಂಬುದು ಶಿಷ್ಟಾಚಾರದಲ್ಲಿ ದಾಖಲಾಗಿದೆ. ಸಾಂವಿಧಾನಿಕ ಹುದ್ದೆಯಲ್ಲಿರುವವರ ವಿರುದ್ಧ ಕ್ರಮಕೈಗೊಳ್ಳಬೇಕಾದರೆ ಶಿಷ್ಟಾಚಾರಗಳನ್ನು ಪಾಲಿಸಬೇಕು ಎಂಬ ನಿಯಮವಿದೆ. ಆದರೆ, ಅವು ಉಲ್ಲಂಘನೆಯಾಗಿವೆ. ವಿಷಯ ತಿಳಿದ ಬಳಿಕ ನಾನು ಸಭಾಪತಿಯವರೊಂದಿಗೆ ಮಾತನಾಡಿದ್ದೇನೆ. ಅವರು ಹೈಕೋರ್ಟ್ಗೆ ಹೋಗಿ ತಡೆಯಾಜ್ಞೆ ತಂದಿದ್ದಾರೆ. ಈಗಾಗಲೇ ಸಬ್ಇನ್ಸ್ಪೆಕ್ಟರ್ ವಿರುದ್ಧ ಕ್ರಮಕೈಗೊಂಡಿದ್ದೇವೆ. ವಿಚಾರಣಾಧಿಕಾರಿ ಡಿವೈಎಸ್ಪಿ ವಿರುದ್ಧ ಕ್ರಮಕ್ಕೆ ಪರಿಶೀಲನೆ ನಡೆಯುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯ ಸಲೀಂ ಅಹಮ್ಮದ್, ಯು.ಬಿ.ವೆಂಕಟೇಶ್ ಮತ್ತಿತರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕೆಳ ಹಂತದ ಅಧಿಕಾರಿಯನ್ನಷ್ಟೇ ಬಲಿಪಶು ಮಾಡಲಾಗಿದೆ. ಹಿರಿಯ ಅಧಿಕಾರಿಯನ್ನು ರಕ್ಷಿಸಲಾಗುತ್ತಿದೆ. ಸರ್ಕಾರ ಸಭಾಪತಿಯವರಿಗೆ ಅವಮಾನವಾದಾಗಲೂ ಈ ರೀತಿ ನಿರ್ಲಕ್ಷ್ಯ ತೋರುವುದು ಸರಿಯಲ್ಲ ಎಂದರು.
ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ದಲಿತ ಸಮುದಾಯದ ಪಿಎಸ್ಐಯನ್ನು ಹರಕೆಯ ಕುರಿಯನ್ನಾಗಿ ಮಾಡಲಾಗಿದೆ ಎಂದು ಆಕ್ಷೇಪಿಸಿದರು. ಮರಿತಿಬ್ಬೇಗೌಡ ಅವರು ಎಸ್ಪಿ ಅವರ ವಿರುದ್ಧವೇ ಕ್ರಮಜರುಗಿಸಬೇಕೆಂದು ಒತ್ತಾಯಿಸಿದರು.