ಬೆಂಗಳೂರು : ಅಂಗನವಾಡಿ ಕಾರ್ಯಕರ್ತೆಯರಿಂದ ಮೇಲ್ವಿಚಾರಕರ ಹುದ್ದೆಗಳಿಗೆ ಬಡ್ತಿ ಹೊಂದಲು ಸರ್ಕಾರ ನಿಗದಿಪಡಿಸಿರುವ ನಿಯಮಗಳನ್ನು ಸರಳೀಕರಣ ಮಾಡಬೇಕೆಂದು ಶಾಸಕರು ವಿಧಾನಸಭೆಯಲ್ಲಿ ಒತ್ತಾಯಿಸಿದರು.
ಶಾಸಕ ಭೀಮಾನಾಯಕ್.ಎಸ್ ಅವರ ಪ್ರಶ್ನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್ ಉತ್ತರಿಸಿ, ಮೇಲ್ವಿಚಾರಕರ ಹುದ್ದೆಗೆ ಪಿಯುಸಿ ಮತ್ತು ಪದವಿ ಪಡೆದವರಿಗೆ ಬಡ್ತಿ ನೀಡಲಾಗುತ್ತದೆ ಎಂದು ಹೇಳಿದರು.
ಇದಕ್ಕೆ ಆಕ್ಷೇಪಿಸಿದ ಶಾಸಕ ಭೀಮಾನಾಯಕ್ ಮತ್ತು ನಾರಾಯಣಸ್ವಾಮಿ ಅವರು, ಎಸ್ಸೆಸ್ಸೆಲ್ಸಿ ಮುಗಿಸಿದವರು ಸಾಕಷ್ಟಿದ್ದಾರೆ. ಈ ಮೊದಲು ಇವರಿಗೆ ಮುಂಬಡ್ತಿ ನೀಡಲಾಗುತ್ತಿತ್ತು. ಇದನ್ನು ನಂಬಿ ಅನೇಕರು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಹೀಗಾಗಿ ಹಳೆಯ ನಿಯಮವನ್ನೇ ಮುಂದುವರೆಸಬೇಕೆಂದು ಮನವಿ ಮಾಡಿದರು.
ಇದಕ್ಕೆ ದನಿಗೂಡಿಸಿದ ಶಾಸಕ ನಾರಾಯಣಸ್ವಾಮಿ, ನನ್ನ ಕ್ಷೇತ್ರದಲ್ಲಿ ಎಸ್ಸೆಸ್ಸೆಲ್ಸಿ, ಬಿಎ, ಬಿಎಸ್ಸಿ ಮಾಡಿದವರು ಕೂಡ ಅಂಗನವಾಡಿ ಕಾರ್ಯಕರ್ತೆಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎಸ್ಸೆಸ್ಸೆಲ್ಸಿ ಮುಗಿಸಿಕೊಂಡು 10-15 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವವರು ಇದ್ದಾರೆ.
ಪಿಯುಸಿ ಮತ್ತು ಪದವಿ ಹೊಂದಿದವರನ್ನು ಬಡ್ತಿಗೆ ಪರಿಗಣಿಸಿದರೆ ಬೇರೆಯವರಿಗೆ ಅನ್ಯಾಯವಾಗುತ್ತದೆ. ಸರ್ಕಾರ ಈ ತಾರತಮ್ಯವನ್ನು ಸರಿಪಡಿಸಬೇಕೆಂದು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಸಚಿವ ಹಾಲಪ್ಪ, ಶೇಕಡ ನೂರರಷ್ಟು ಅನುಪಾತದ ಪ್ರಕಾರ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಇದರಲ್ಲಿ ಶೇ.5ರಷ್ಟು ಮಹಿಳಾ ಮತ್ತು ಮಕ್ಕಳ ಇಲಾಖೆಯಲ್ಲಿ ಮಹಿಳಾ ಮೇಲ್ವಿಚಾರಕಿ ಹುದ್ದೆ, ಶೇ.50ರಷ್ಟು ಹುದ್ದೆಗಳನ್ನು ಯಾವುದೇ ವಿಷಯದಲ್ಲಿ ಪದವಿ ಹೊಂದಿದವರನ್ನು 5 ವರ್ಷ ಸೇವೆ ಸಲ್ಲಿಸಿದ, ಶೇ.25ರಷ್ಟು ಪಿಯುಸಿ ಆಗಿರುವವರು ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಪರಿಗಣಿಸುತ್ತೇವೆ ಎಂದರು.