ಐದು ರಾಜ್ಯಗಳ ಚುನಾವಣೆ: ಕೆಲ ರಾಜಕೀಯ ಪಕ್ಷಗಳ ಮತಕ್ಕಿಂತ ನೋಟಾ ಮತವೇ ಅಧಿಕ

ನವದೆಹಲಿ: ಒಟ್ಟು ಏಳು ಹಂತದ ಮತದಾನ ಪ್ರಕ್ರಿಯೆಗಳು ಮುಗಿದು, ಮಾರ್ಚ್‌ 10ರಂದು ಅಷ್ಟೇ ಐದು ರಾಜ್ಯಗಳಾದ ಉತ್ತರಪ್ರದೇಶ, ಉತ್ತರಾಖಂಡ, ಪಂಜಾಬ್‌, ಮಣಿಪುರ ಮತ್ತು ಗೋವಾ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆ ಫಲಿತಾಂಶ ಮಾರ್ಚ್‌ 10ರಂದು ಪ್ರಕಟವಾಗಿದೆ.

ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಪಂಜಾಬ್‌ನಲ್ಲಿ ಈ ಬಾರಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್‌ ಆದ್ಮಿ ಪಕ್ಷ(ಎಎಪಿ) ಭಾರೀ ಬಹುಮತ ಪಡೆದುಕೊಂಡಿದೆ. ಉಳಿದ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ.

ಈ ಐದು ರಾಜ್ಯಗಳಲ್ಲಿ ನೋಟಾ ಒತ್ತಿದವರ ಸಂಖ್ಯೆ ಬರೋಬ್ಬರಿ 7,99,302.

‌403 ಸದಸ್ಯ ಬಲದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ವೇಳೆ ಹೆಚ್ಚು ಜನರು ನೋಟಾ ಪ್ರಯೋಗಿಸಿದ್ದಾರೆ. ಇಲ್ಲಿ 6,21,186 ಜನರು ಅಂದರೆ ಶೇ 0.69 ರಷ್ಟು ಮತದಾರರು ಮತಯಂತ್ರದಲ್ಲಿ ನೋಟಾ ಒತ್ತಿದ್ದಾರೆ.

ಉತ್ತರ ಪ್ರದೇಶದಲ್ಲಿ ಕೆಲವು ಪ್ರಮುಖ ರಾಜಕೀಯ ಪಕ್ಷಗಳ ಮತಗಳಿಗೆಗಿಂತ ʻನೋಟಾ’ ಆಯ್ಕೆ ಮಾಡಿಕೊಂಡಿರುವುದು ಕಂಡುಬಂದಿದೆ! ಈ ಬಾರಿ ಚುನಾವಣೆಯಲ್ಲಿ ನೋಟಾ  ಆಯ್ಕೆಯ ಮತ ಹಂಚಿಕೆಯು ಶೇಕಡ 0.69 ಎಂದು ಚುನಾವಣಾ ಆಯೋಗ ಹೇಳಿದೆ. ಆಮ್‌ ಆದ್ಮಿ ಪಕ್ಷ(ಶೇಕಡ 0.35) ಮತ್ತು ಜೆಡಿಯು(ಶೇಕಡ 0.11)ಗೆ ಹೋಲಿಸಿದರೆ ನೋಟಾದ ಮತ ಹಂಚಿಕೆ ಹೆಚ್ಚಾಗಿದೆ.

ಇನ್ನು, ಅಸಾದುದ್ದೀನ್‌ ಒವೈಸಿ ಅವರ ಎಐಎಂಐಎಂ ಪಕ್ಷವು ಶೇಕಡ 0.47ರಷ್ಟು ಮತಗಳನ್ನಷ್ಟೇ ಪಡೆದಿದೆ. ಸಿಪಿಐ ಶೇಕಡ 0.07, ಎನ್‌ಸಿಪಿ ಶೇಕಡ 0.05, ಶಿವಸೇನೆ ಶೇಕಡ 0.03 ಮತಗಳನ್ನು ಗಳಿಸಿದರೆ, ಸಿಪಿಐ(ಎಂ), ಸಿಪಿಐ-ಎಂಎಲ್‌ ಮತ್ತು ಎಲ್‌ಜೆಪಿ(ಆರ್‌ವಿ) ಪಕ್ಷಗಳ ಮತ ಹಂಚಿಕೆ ತಲಾ ಶೇಕಡ 0.01ರಷ್ಟಿವೆ ಎಂದೂ ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.

ಅದೇರೀತಿಯಲ್ಲಿ, ಎಐಎಫ್‌ಬಿ, ಐಯುಎಂಎಲ್‌ ಮತ್ತು ಎಲ್‌ಜೆಪಿ ಪಕ್ಷಗಳು ಒಂದೇ ಒಂದು ಮತ ಗಳಿಸುವಲ್ಲೂ ಸೋತಿದ್ದು, ಮತ ಹಂಚಿಕೆಯಲ್ಲಿ ಶೂನ್ಯ ಸಾಧನೆ ಮಾಡಿವೆ.

ಉತ್ತರಾಖಂಡ (46,830) ಹಾಗೂ ಪಂಜಾಬ್‌ ರಾಜ್ಯದಲ್ಲಿ (1,10,308) ಮತ ಚಲಾಯಿಸಿದವರ ಪೈಕಿ ಶೇ 0.9 ರಷ್ಟು ಜನರು ನೋಟಾ ಆಯ್ಕೆ ಮಾಡಿಕೊಂಡಿದ್ದಾರೆ.

ಉಳಿದಂತೆ, ಮಣಿಪುರದಲ್ಲಿ ಶೇಕಡ 0.6 ರಷ್ಟು ಅಂದರೆ, 10,349 ಮತದಾರರು ನೋಟಾಗೆ ಮತ ಹಾಕಿದ್ದಾರೆ. ಗೋವಾದಲ್ಲಿ ಈ ಪ್ರಮಾಣ ಸ್ವಲ್ಪ ಜಾಸ್ತಿಯೇ ಇದೆ. ಇಲ್ಲಿನ ಶೇಕಡ 1.1 ರಷ್ಟು ಜನರು (10,629) ನೋಟಾ ಆಯ್ಕೆ ಬಳಸಿಕೊಂಡಿದ್ದಾರೆ.

ಯಾವುದೇ ಅಭ್ಯರ್ಥಿಗೆ ಮತಹಾಕಲು ಇಚ್ಚಿಸದ ಮತದಾರರಿಗಾಗಿ 2013ರಲ್ಲಿ ಮೊದಲ ಬಾರಿಗೆ ನೋಟಾ ಆಯ್ಕೆ ಪರಿಚಯಿಸಲಾಗಿತ್ತು. ಸುಪ್ರೀಂ ಕೋರ್ಟ್ ಅದೇಶದ ಬಳಿಕ ವಿದ್ಯುನ್ಮಾನ ಮತಯಂತ್ರದಲ್ಲಿ ಕೊನೆಯ ಆಯ್ಕೆಯಾಗಿ ನೋಟಾ ಚಿಹ್ನೆ ಸೇರಿಸಲಾಗಿತ್ತು.

ಆದಾಗ್ಯೂ, ಅಭ್ಯರ್ಥಿಗಳು ಪಡೆಯುವ ಮತಕ್ಕಿಂತ ನೋಟಾ ಮತಗಳ ಸಂಖ್ಯೆ ಹೆಚ್ಚಾದರೆ, ಮತ್ತೊಮ್ಮೆ ಚುನಾವಣೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶಿಸಲು ಸುಪ್ರೀಂ ನಿರಾಕರಿಸಿತ್ತು.

Donate Janashakthi Media

Leave a Reply

Your email address will not be published. Required fields are marked *