ಉತ್ತರಾಖಂಡ: ಬಿಜೆಪಿಗೆ ಬಹುಮತ-ಮುಖ್ಯಮಂತ್ರಿ ಪುಷ್ಕರ್ ಸೋಲು

ನವದೆಹಲಿ: 70 ಸದಸ್ಯ ಬಲದ ಉತ್ತರಾಖಂಡ ವಿಧಾನಸಭೆಯ ಚುನಾವಣೆಯ ಮತಎಣಿಕೆಯಲ್ಲಿ ಭಾರತೀಯ ಜನತಾ ಪಕ್ಷ 21 ಕ್ಷೇತ್ರಗಳಲ್ಲಿ ಈಗಾಗಲೇ ಗೆಲುವು ಸಾಧಿಸಿದ್ದು, ಉಳಿದ 26 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇದರೊಂದಿಗೆ, ಸ್ಪಷ್ಟ ಬಹುಮತ ಪಡೆದು ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಲು ಸಿದ್ದವಾಗಿದೆ.

ಆದರೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ್ದಾರೆ. ಖತಿಮಾ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಅವರು, ಕಾಂಗ್ರೆಸ್‌ ಅಭ್ಯರ್ಥಿ ಭುವನ್‌ ಕಫ್ರಿ ವಿರುದ್ಧ 6932 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದಾರೆ.

2021ರಲ್ಲಿ ಉತ್ತರಾಖಂಡ್​ನ 10ನೇ ಮುಖ್ಯಮಂತ್ರಿಯಾಗಿ ಗದ್ದುಗೆಗೆ ಏರಿದ ಪುಷ್ಕರ್ ಸಿಂಗ್ ಧಾಮಿ ಈ ಬಾರಿ ಮತ್ತೆ ಮುಖ್ಯಮಂತ್ರಿ ಸ್ಥಾನ ಅಲಂಕರಿಸುತ್ತಾರೆ ಎಂದೇ ಹೇಳಲಾಗಿತ್ತು. ತೀರಥ್ ಸಿಂಗ್ ರಾವತ್ ಬಳಿಕ ತಮ್ಮ 45ನೇ ವರ್ಷ ವಯಸ್ಸಿನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಏರುವ ಮೂಲಕ ಪುಷ್ಕರ್ ಸಿಂಗ್ ಧಾಮಿ ಉತ್ತರಾಖಂಡ್​ನ ಅತಿ ಕಿರಿಯ ಮುಖ್ಯಮಂತ್ರಿ ಎಂಬ ಕೀರ್ತಿಗೂ ಭಾಜನರಾಗಿದ್ದರು. ಆದರೆ, ಸ್ವತಃ ಮುಖ್ಯಮಂತ್ರಿ ಅಭ್ಯರ್ಥಿ ಪುಷ್ಕರ್ ಸಿಂಗ್ ಧಾಮಿ ಚುನಾವಣೆಯಲ್ಲಿ ಸೋಲುಂಡಿದ್ದಾರೆ.

ಚುನಾವಣೋತ್ತರ ಸಮೀಕ್ಷೆ ಪ್ರಕಾರ ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಎನ್ನಲಾಗಿತ್ತು. ಅದರಂತೆ, ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ 35ರಿಂದ 40 ಸ್ಥಾನ ಗಳಿಸುವರು ಎನ್ನಲಾಗಿತ್ತು. ಆಡಳಿತಾರೂಢ ಬಿಜೆಪಿ 25ಕ್ಕಿಂತ ಅಧಿಕ ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ಅಂದಾಜಿಸಲಾಗಿತ್ತು.

2017ರಲ್ಲಿ ಉತ್ತರಾಖಂಡ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 56 ಸ್ಥಾನಗಳಲ್ಲಿ, ಕಾಂಗ್ರೆಸ್ 11 ಹಾಗೂ ಇತರರು ಎರಡು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರು. 2022ರ ವಿಧಾನಸಭಾ ಚುನಾವಣೆಯಲ್ಲಿ ಸಮಯ ಸಂಜೆ 5.50ರಂತೆ ಈಗಾಗಲೇ, 30 ಕ್ಷೇತ್ರಗಳ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ 47 ಕ್ಷೇತ್ರಗಳಲ್ಲಿ, ಕಾಂಗ್ರೆಸ್ 19 , ಇತರರು 04 ಸ್ಥಾನಗಳಲ್ಲಿ ತಮ್ಮದಾಗಿಸಿಕೊಂಡಿವೆ.

ರಾಜ್ಯದಲ್ಲಿ ಫೆಬ್ರವರಿ 14ರಂದು ಮತದಾನ ನಡೆದಿದ್ದು, ಶೇಕಡ 65ಕ್ಕೂ ಹೆಚ್ಚು ಮತದಾರರು ಮತ ಚಲಾಯಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *