ಮಾರ್ಚ್‌ 8: ಸಂಘರ್ಷದ ಯಶಸ್ಸಿನ ದಿನದ ಸಂಭ್ರಮಾಚರಣೆ

ಬೆಂಗಳೂರು: ಮಹಿಳೆಯರ ಘನತೆಯ ಬದುಕಿಗಾಗಿ ನಡೆಸಿದ ಹೋರಾಟದ ಸ್ಪೂರ್ತಿಯನ್ನು ನೀಡುವ ಅಂತರ ರಾಷ್ಟ್ರೀಯ ಮಹಿಳಾ ದಿನವಾದ ಮಾರ್ಚ್ 8 ವಿಶೇಷ ದಿನವಾಗಿದೆ. ಶತಮಾನಗಳ ಇತಿಹಾಸವಿರುವ ಈ ದಿನವನ್ನು ಸಂಘರ್ಷದ ಯಶಸ್ಸಿನ ದಿನವಾಗಿ ಸಂಭ್ರಮಿಸುತ್ತೇವೆ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯ ಮುಖಂಡರಾದ ಕೆ.ಎಸ್.‌ ವಿಮಲಾ ತಿಳಿಸಿದರು.

ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಸಂಘರ್ಷ ಪಿತೃಪೃಧಾನ ವ್ಯವಸ್ಥೆ ಹಾಗೂ ಅನ್ಯಾಯದ ವಿರುದ್ಧ ನಾವು ಮಾಡುವ ಹೋರಾಟ, ಅದರಲ್ಲೂ ಅಂಚಿಗೆ ತಳ್ಳಲ್ಪಟ್ಟವರಾದ ಮಹಿಳೆಯರ ಮತ್ತು ದುಡಿಯುವ ಮಹಿಳೆಯರ ಕೆಲಸವನ್ನು- ಮನೆಯ ಒಳಗೂ ಹೊರಗೂ ಅಪಮೌಲ್ಯಗೊಳಿಸಲಾಗಿದೆ. ಅದಕ್ಕಾಗಿ ನಮ್ಮ ಹೋರಾಟ, ಹಾಗೆಯೇ ನಮ್ಮ ಮುಂದೆ ಈಗಲೂ ಇರುವ ಸವಾಲುಗಳನ್ನು ಎದುರಿಸಲು ಹೊಸ ಹುಮ್ಮಸ್ಸಿನಿಂದ ಸಜ್ಜುಗೊಳ್ಳುತ್ತೇವೆ ಎಂದು ತಿಳಿಸಿದರು.

ಪ್ರಸಕ್ತ ವಿದ್ಯಮಾನಗಳು ಆತಂಕಕಾರಿಯಾಗಿವೆ. ಪ್ರಗತಿಯತ್ತ ಚಲಿಸುವ ಬದಲು, ಹಿಮ್ಮುಕ ಚಲನೆಯಂತೆ ಭಾಸವಾಗುತ್ತಿದೆ. ಸ್ವಾತಂತ್ರದ ಅಮೃತವರ್ಷವಿದು. ಅಮೃತ ಕಾಲದಲ್ಲಿ ಮಹಿಳೆಯರ ಶಿಕ್ಷಣದ ಅವಕಾಶವನ್ನು ಕಸಿದು, ಅವರ ಉಡುಪು, ಘನತೆಯ ಬದುಕಿನ ಆಯ್ಕೆಯ ಹಕ್ಕುಗಳ ಮೇಲೆ ನೇರ ಧಾಳಿಗಳು ನಡೆಯುತ್ತಿವೆ. ಸಂವಿಧಾನ ವಿರೋಧಿಯಾದ ಈ ಕೃತ್ಯಗಳನ್ನು ಸಮರ್ಥಿಸಿ ಅಧಿಕೃತಗೊಳಿಸುವ ಪ್ರಯತ್ನ ಅತ್ಯಂತ ಕಳವಳಕಾರಿ ಸನ್ನಿವೇಶವನ್ನು ನಿರ್ಮಿಸಿದೆ.

ಎಲ್ಲರಿಗೂ ಸಿಗಬೇಕಾದ ಗುಣಮಟ್ಟದ ಖಾತ್ರಿ ಶಿಕ್ಷಣ ಇನ್ನೂ ಮರೀಚಿಕೆಯೇ ಆಗಿದೆ. ಇರುವ ಅಲ್ಪಸ್ವಲ್ಪ ಅವಕಾಶದಿಂದಲೂ ಬಾಲಕಿಯರನ್ನು ಹೊರತಳ್ಳುವ ಮತ್ತು ಹೆಣ್ಣುಮಕ್ಕಳ ಆಯ್ಕೆ ಸ್ವಾತಂತ್ರ್ಯವನ್ನು ಧರ್ಮ, ಮತಾಂಧತೆಗಳ ಹಿಡಿತಕ್ಕೆ ತಳ್ಳುವ ಖಂಡನಾರ್ಹ ಪ್ರಯತ್ನ ರಾಜಾರೋಷವಾಗಿ ನಡೆದಿದೆ. ಕರ್ನಾಟಕದಲ್ಲಿ ಸ್ಥಳೀಯವಾಗಿ ಶಿಕ್ಷಣ ಸಂಸ್ಥೆಗಳ ಮಟ್ಟದಲ್ಲಿಯೇ ಬಗೆಹರಿಸಬಹುದಾಗಿದ್ದ ಪ್ರಕರಣಗಳು ರಾಜ್ಯವ್ಯಾಪಿ ಹಬ್ಬಿತು. ಅನ್ಯಾಯವಾಗಿ ಜೀವ ಬಲಿ ಪಡೆಯಿತು. ಮಾಧ್ಯಮಗಳು ಕನಿಷ್ಟ ಸಂವೇದನೆಗಳನ್ನು ಮರೆತು ಅಮಾನವೀಯವಾಗಿ ವರ್ತಿಸಿದವು.

ಸಂವಿಧಾನವು ಸಮಾನ ಅವಕಾಶವನ್ನು ನೀಡಿದೆ. ಅದಕ್ಕೆ ವ್ಯತಿರಿಕ್ತವಾಗಿ ಧರ್ಮದ ಹೆಸರಿನಲ್ಲಿ ದ್ವೇಷ, ಹಿಂಸೆಯನ್ನು ಪ್ರಚೋದಿಸುವ ಕೆಲಸಕ್ಕೆ ಪ್ರೋತ್ಸಾಹ ದೊರೆಯುತ್ತಿದೆ. ಪರಸ್ಪರ ಗೌರವಿಸುವ, ಸಹಬಾಳ್ವೆಯ ಪಾಠ ಕಲಿಯಬೇಕಾದ ಶೈಕ್ಷಣಿಕ ಸಂಸ್ಥೆಗಳಲ್ಲಿ ಮತಾಂದತೆಯ ವಿಷಬೀಜ ಬಿತ್ತಿ ಒಡಕುಂಟು ಮಾಡಲಾಗುತ್ತಿದೆ. ದ್ವೇಷ ಪ್ರಚಾರಗಳ ದುಷ್ಟತನಕ್ಕೆ ಯುವ ತಲೆಮಾರನ್ನು ಬಲಿಕೊಡಲಾಗುತ್ತಿದೆ. ಇದಕ್ಕೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಈಗ ನಡೆಯುತ್ತಿರುವ ವಿದ್ಯಮಾನಗಳೇ ಸಾಕ್ಷಿ. ಕ್ರಿಯೆ ಮತ್ತು ಪ್ರತಿಕ್ರಿಯೆಗಳು ಯಾರಿಂದಲೇ ಬರಲಿ, ಬಲಿಯಾಗುತ್ತಿರುವುದು ವಿದ್ಯಾರ್ಥಿನಿಯರ ಶಿಕ್ಷಣ. ಕೋವಿಡ್ ಕಾರಣದಿಂದ ಕಳೆದ ವರ್ಷವಿಡೀ ಸರಿಯಾದ ತರಗತಿಗಳು ನಡೆಯದ ಸಂಗತಿ ಒಂದೆಡೆಯಾದರೆ ಇನ್ನೊಂದೆಡೆ ಶೈಕ್ಷಣಿಕ ವರ್ಷಾಂತ್ಯದಲ್ಲಿ ಎದ್ದ ವಿವಾದ, ಮುಸ್ಲಿಂ ಬಾಲಕಿಯರ ಪರೀಕ್ಷೆ ಬರೆಯುವ ಹಕ್ಕನ್ನೂ ಕಿತ್ತುಕೊಂಡಿದೆ.

ಮಹಿಳಾ ಶಿಕ್ಷಣಕ್ಕಾಗಿ ಹೋರಾಟವನ್ನೇ ಮಾಡಿದ ಸಾವಿತ್ರಿ ಬಾಯಿ ಫುಲೆ ಮತ್ತು ಫಾತಿಮಾ ಶೇಖ್ ರಂತಹ ಮಾದರಿಗಳನ್ನು ಹೊಂದಿರುವ ದೇಶದಲ್ಲಿ ನಿಧಾನವಾಗಿ ಶಿಕ್ಷಣದ ಕ್ಷೇತ್ರಕ್ಕೆ ತೆರೆದುಕೊಳ್ಳುತ್ತಿರುವ ಮುಸ್ಲಿಂ ಮಹಿಳೆಯರನ್ನು ಮೂಲೆಗೆ ತಳ್ಳುವ ಪ್ರಯತ್ನ ಒಂದುಕಡೆ. ಇನ್ನೊಂದು ಕಡೆ ಆದುನಿಕ ತಂತ್ರಜ್ಞಾನದ ದುರುಪಯೋಗ ಮಾಡಿ ಆನ್ ಲೈನ್ ನಲ್ಲಿ ‘ಸುಲ್ಲೀ ಡೀಲ್, ಬುಲ್ಲೀ ಬಾಯ್’ ಹೆಸರಿನಲ್ಲಿ ಮುಸ್ಲಿಂ ಮಹಿಳೆಯರನ್ನು ಹರಾಜಿಗಿಟ್ಟ ಘಟನೆಗಳು ಭಯಾನಕವಾಗಿವೆ. ಅತ್ಯಾಧುನಿಕ ಮತ್ತು ಅಸಹ್ಯಕರ ತಂತ್ರಜ್ಞಾನವನ್ನು ಬಳಸಿಕೊಂಡು ಮಹಿಳಾ ಪತ್ರಕರ್ತರ ಅಭಿವ್ಯಕ್ತಿಯನ್ನು ಹತ್ತಿಕ್ಕುವ ಪ್ರಯತ್ನವು ನಡೆದಿದೆ. ಈ ಊಳಿಗಮಾನ್ಯ ಪಿತೃಪ್ರಧಾನ ವ್ಯವಸ್ಥೆಯ ಸ್ತ್ರೀ ದ್ವೇಷ ವಾದಗಳನ್ನು ಎತ್ತಿ ಹಿಡಿಯುವುದಲ್ಲದೇ, ಗುಪ್ತ ಉದ್ದೇಶಗಳನ್ನು ಸಾಧಿಸಿಕೊಳ್ಳಲು ಹೆಂಗಸರ ದೇಹವನ್ನು ಯುದ್ಧಭೂಮಿಯಂತೆ ಉಪಯೋಗಿಸಿಕೊಳ್ಳುತ್ತದೆ. ಮಹಿಳಾ ವಿರೋಧೀ, ಪಾಳೆಯಗಾರೀ ಪಿತೃಪ್ರಧಾನ ವ್ಯವಸ್ಥೆಯ ಕೊಳಕು ಇಲ್ಲಿ ಕಣ್ಣಿಗೆ ರಾಚುತ್ತದೆ. ಬಹುಸಂಸ್ಕೃತಿಯ ಸಮಾಜವೊಂದನ್ನು, ಹಿಂದೂತ್ವ ವಾದದ ನೆಲೆಯಲ್ಲಿ ಏಕ ಸಂಸ್ಕೃತಿಯತ್ತ ತಳ್ಳಲು ಪ್ರಯತ್ನ ನಡೆಯುತ್ತಿದೆ.  ಇದರ ಭಾಗವಾಗಿಯೇ ಅಲ್ಪ ಸಂಖ್ಯಾತರ, ದಲಿತ ದಮನಿತರ, ದುಡಿದು ತಿನ್ನುವವರ ಮೇಲೆ ನಿರಂತರ ದಬ್ಬಾಳಿಕೆಗಳು ನಡೆಯುತ್ತಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದೇಶದ ಸಂವಿಧಾನ ಎಲ್ಲರನ್ನೂ ಸಮಾನವಾಗಿ ನೋಡುವ ಕರ್ತವ್ಯವನ್ನು ಮತ್ತು ಎಲ್ಲರಿಗೂ ಸಮಾನ ಆವಕಾಶದ ಹಕ್ಕನ್ನು ಕೊಟ್ಟಿದೆ. ಇದನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡುವುದೆಂದರೆ ಅದೊಂದು ಸಂವಿಧಾನ ಬಾಹಿರ ಕೃತ್ಯ. ಈ ವರ್ಷದ ಅಂತರ ರಾಷ್ಟ್ರೀಯ ಮಹಿಳಾ ದಿನದ ಭಾಗವಾಗಿ ಘನತೆಯ ಬದುಕಿಗಾಗಿ ಕೆಲವು ಘೋಷಣೆ ಕೇಳ ಬಯಸುತ್ತೇವೆ ಎಂದರು.

ಶಿಕ್ಷಣ ನಮ್ಮ ಹಕ್ಕು*ಉಡುಪು ನಮ್ಮ ಆಯ್ಕೆ, ಸಂವಿಧಾನ ದತ್ತ ಹಕ್ಕುಗಳು ಲಿಂಗ, ಧರ್ಮ ಜಾತಿಯ ಬೇಧಗಳಿಲ್ಲದೆಯೇ ಎಲ್ಲರಿಗೂ ಸಮನಾಗಿ ದೊರಕಬೇಕು. ಕರ್ನಾಟಕದಲ್ಲಿ ಶೈಕ್ಷಣಿಕ ವರ್ಷದ ಅಂತಿಮ ಘಟ್ಟದಲ್ಲಿ ವಿವಾದ ಎಬ್ಬಿಸಿದ ಕೃತ್ಯಗಳಿಗೆ ಖಂಡನೆ. ವಸ್ತ್ರ ವಿವಾದದ ಕಾರಣದಿಂದ ಪರೀಕ್ಷೆಯಿಂದ ಒಬ್ಬಳೇ ವಿದ್ಯಾರ್ಥಿನಿಯೂ ಹಿಂದೆ ಉಳಿಯಲಾರದಂತೆ ಕ್ರಮ ಕೈಗೊಳ್ಳಬೇಕು. ಉಚ್ಚನ್ಯಾಯಾಲಯದ ತೀರ್ಪನ್ನು ಗೌರವಿಸುತ್ತಲೇ ತೊಂದರೆಗೊಳಗಾದ ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು.  ಧರ್ಮ ಜಾತಿ ಲಿಂಗಾಧಾರಿತ ತಾರತಮ್ಯಗಳನ್ನು ಕೊನೆಗೊಳಿಸಿ ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು. ಕಲಿಕೆಗೆ ಪೂರಕವಾದ ವಾತಾವರಣವನ್ನು ಮರು ಸ್ಥಾಪಿಸುವುದು ಸರಕಾರದ ಜವಾಬ್ದಾರಿಯಾಗಿದೆ. ಕಾಲೇಜುಗಳು ದ್ವೇಷ ಮತ್ತು ವಿಭಜಕ ಮನಃಸ್ಥಿತಿಯನ್ನು ತೊರೆದು- ವೈವಿದ್ಯತೆ, ಸಾಮರಸ್ಯ, ಲಿಂಗ ಹಕ್ಕುಗಳು ಮತ್ತು ಶಿಕ್ಷಣದಲ್ಲಿ ಎಲ್ಲರಿಗೂ ಆದ್ಯತೆ ನೀಡುವ ಸ್ಥಳಗಳಾಗುವಂತೆ ಸರ್ಕಾರ ಗಮನ ವಹಿಸಬೇಕು ಕರೆ ನೀಡಲಾಗಿದೆ.

ಪತ್ರಿಕಾಗೋಷ್ಟಿಯಲ್ಲಿ ಎಐಡಿಡಬ್ಲ್ಯೂಎ, ಎಐಪಿಡಬ್ಲ್ಯೂಎ, ಸ್ತ್ರೀ ಜಾಗೃತಿ ಸಮಿತಿ, ವುಮೆನ್ಸ್‌ ವಾಯ್ಸ್‌, ಗಮನ ಮತ್ತಿತರರ ಸಂಘಟನೆಯ ನಾಯಕರು ಭಾಗವಿಸಿದರು.

Donate Janashakthi Media

Leave a Reply

Your email address will not be published. Required fields are marked *