ಉಕ್ರೇನ್ ಯುದ್ಧದ ಕುರಿತ ಪ್ರಶ್ನೆ- 5. ನಾಟೋ ಕೂಟದ ಸದಸ್ಯತ್ವದ ಪ್ರಶ್ನೆ ಯಾಕೆ ಇಷ್ಟು ವಿವಾದಾಸ್ಪದವಾಗಿದೆ ?

– ವಸಂತರಾಜ ಎನ್.ಕೆ

ಉಕ್ರೇನಿನಲ್ಲಿ ರಷ್ಯಾದ  ಅನಿರೀಕ್ಷಿತ ಮಿಲಿಟರಿ ದಾಳಿಯ ನಂತರ ಹಲವು ಪ್ರಶ್ನೆಗಳು ಎದ್ದಿವೆ. ದಾಳಿಯ ನಂತರ ಉಕ್ರೇನಿನಲ್ಲಿ ಸ್ಥಿತಿ ಏನಿದೆ? ಉಕ್ರೇನ್ ಬಿಕ್ಕಟ್ಟಿನ ಚಾರಿತ್ರಿಕ, ರಾಜಕೀಯ ಹಿನ್ನೆಲೆ ಏನು? ಬಿಕ್ಕಟ್ಟು ಯುದ್ಧಕ್ಕೆ ಎಡೆ ಮಾಡಿಕೊಟ್ಟ ತಕ್ಷಣದ ಕಾರಣಗಳೇನು? ಬಿಕ್ಕಟ್ಟಿಗೆ ರಾಜತಾಂತ್ರಿಕ ಪರಿಹಾರಗಳು ಇರಲಿಲ್ಲವೇ? ನಾಟೋ ಕೂಟದ ಸದಸ್ಯತ್ವದ ಪ್ರಶ್ನೆ ಯಾಕೆ ಇಷ್ಟು ವಿವಾದಾಸ್ಪದವಾಗಿದೆ ? ಯುದ್ಧಕ್ಕೆ ಎಂತಹ ಅಂತರ್ರಾಷ್ಟ್ರೀಯ  ಪ್ರತಿಕ್ರಿಯೆ ಬಂದಿದೆ ? ಈ ಯುದ್ಧದ ಕುರಿತು ಭಾರತ ಸರಕಾರದ ನಿಲುವು ಸರಿಯೆ? ಯುದ್ಧದ ತಕ್ಷಣದ ಪರಿಣಾಮಗಳೇನು ? ಯುದ್ಧ ನಿಲ್ಲಿಸಲು ನಡೆದಿರುವ ಅಂತರ್ರಾಷ್ಟ್ರೀಯ ಪ್ರಯತ್ನಗಳೇನು ? ಯುದ್ಧ ಇನ್ನೂ ಮುಂದುವರೆದರೆ ಭಾರತದ ಮತ್ತು ಅಂತರ್ರಾಷ್ಟ್ರೀಯ ಪರಿಸ್ಥಿತಿ ಮೇಲೆ ಯಾವ ದೂರಗಾಮಿ ಪರಿಣಾಮ ಬೀರಬಹುದು ? ಈ  ಕೆಲವು ಪ್ರಶ್ನೆಗಳಿಗೆ ಉತ್ತರಗಳನ್ನು ಸರಣಿಯಲ್ಲಿ ಕೊಡಲಾಗುವುದು.

  1. ನಾಟೋ ಕೂಟದ ಸದಸ್ಯತ್ವದ ಪ್ರಶ್ನೆ ಯಾಕೆ ಇಷ್ಟು ವಿವಾದಾಸ್ಪದವಾಗಿದೆ ?

ನಾಟೋ (ನಾರ್ಥ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್ – ಉತ್ತರ ಅಟ್ಲಾಂಟಿಕ್ ಒಪ್ಪಂದದ ಸಂಘಟನೆ) ಮೂಲಭೂತವಾಗಿ ಶ್ರೀಮಂತ ದೇಶಗಳ ಒಂದು ಮಿಲಿಟರಿ ಕೂಟ.  ಎರಡನೆಯ ಮಹಾಯುದ್ಧದ ನಂತರ ಯು.ಎಸ್ ಮತ್ತು ಸೋವಿಯೆಟ್ ಒಕ್ಕೂಟಗಳು ಅತಿ ಪ್ರಬಲ ಮಿಲಿಟರಿ ಶಕ್ತಿಗಳಾಗಿ ಹೊಮ್ಮಿದ್ದವು. ಎರಡನೆಯ ಮಹಾಯುದ್ಧದ ಕೊನೆಯಲ್ಲಿ ಹಿರೋಷಿಮಾ, ನಾಗಾಸಾಕಿ ಗಳಲ್ಲಿ ಅಣ್ವಸ್ತ್ರ ಬಳಸಿದ್ದ ಯು.ಎಸ್  ಅಣ್ವಸ್ತ್ರಗಳಲ್ಲಿ ಹೊಂದಿದ್ದ ಏಕಸ್ವಾಮ್ಯವನ್ನು 1949ರಲ್ಲಿ ಸೋವಿಯೆಟ್ ಒಕ್ಕೂಟ ಮುರಿಯಿತು. ಇದರಿಂದ ಜಾಗತಿಕ ಭದ್ರತೆಯ ವ್ಯೂಹಾತ್ಮಕ  ಮತ್ತು ಮಿಲಿಟರಿ ಬಲಾಬಲಗಳ ಪರಿಸ್ಥಿತಿಯನ್ನು ಗಮನಾರ್ಹವಾಗಿ ಬದಲಾಯಿತು ಮತ್ತು ಅವುಗಳ ನಡುವೆ ಪೈಪೋಟಿಯ ಭಾಗವಾಗಿ ‘ಶೀತಸಮರ’ ಆರಂಭವಾಗಿತ್ತು.  

ಈ ಹಿನ್ನೆಲೆಯಲ್ಲಿ ಅಟ್ಲಾಂಟಿಕ್ ಸಾಗರದ ಎರಡೂ ತೀರಗಳಲ್ಲಿರುವ ಪಶ್ಚಿಮ ಯೂರೋಪಿನ ಮತ್ತು ಉತ್ತರ ಅಮೆರಿಕಾದ 12 ದೇಶಗಳು ತಮ್ಮ ಭದ್ರತೆಗೆ ಮಾಡಿಕೊಂಡ ಮಿಲಿಟರಿ ಕೂಟವೇ ನಾಟೋ. ಈ ಮಿಲಿಟರಿ ಕೂಟದ ಒಂದು ದೇಶದ ಮೇಲೆ ಆಕ್ರಮಣ ನಡೆದರೆ ಇಡೀ ಮಿಲಿಟರಿ ಕೂಟ ಅದರ ರಕ್ಷಣೆಗೆ ಹೋಗಬೇಕು ಮತ್ತು ಅದಕ್ಕಾಗಿ ಶಾಂತಿ ಸಮಯದಲ್ಲೂ ಈ ದೇಶಗಳ ನಡುವೆ ಮಿಲಿಟರಿ ಸಂಯೋಜನೆ ಇರಬೇಕು ಎಂಬುದು ಅದರ ಪ್ರಮುಖ ಉದ್ದೇಶ. ನಾಟೋ ಆರಂಭದ ಅವಧಿಯಲ್ಲಿ ಜರ್ಮನಿ ಮತ್ತು ಸೋವಿಯೆಟ್ ಒಕ್ಕೂಟ ಎರಡರ ವಿರುದ್ಧವೂ ಇತ್ತು. ಜರ್ಮನಿ, ಸ್ಪೈನ್ ಗಳನ್ನು ನಾಟೋದಲ್ಲಿ ಸೇರಿಸಿಕೊಂಡಿರಲಿಲ್ಲ.  ಐರ್ಲೆಂಡ್, ಸ್ವಿಟ್ಸರ್ ಲ್ಯಾಂಡ್, ಆಸ್ಟ್ರಿಯ,  ಸ್ವೀಡನ್, ಫಿನ್ ಲ್ಯಾಂಡ್, ಅಂದಿನಿಂದಲೂ ಇಂದಿನವರೆಗೂ ನಾಟೋ ಅಥವಾ ಯಾವುದೇ ಮಿಲಿಟರಿ ಕೂಟಕ್ಕೆ ಸೇರದೆ ತಟಸ್ಥವಾಗಿವೆ. ಯುಗೋಸ್ಲಾವಿಯ ಸಹ ಅದು ವಿಘಟನೆ ಹೊಂದುವರೆಗೂ ತಟಸ್ಥವಾಗಿತ್ತು.

ನಾಟೋ ಕೂಟ 1954ರಲ್ಲಿ ಪಶ್ಚಿಮ ಜರ್ಮನಿಯನ್ನು ಸೇರಿಸಿಕೊಂಡಿತು. ಇದಕ್ಕಿಂತಲೂ ಮೊದಲು ಸೋವಿಯೆಟ್ ಒಕ್ಕೂಟ ಮಿಲಿಟರಿಯಾಗಿ ತಟಸ್ಥವಾದ ಏಕೀಕೃತ ಜರ್ಮನಿಯ ಪ್ರಸ್ತಾವವನ್ನು ಮುಂದಿಟ್ಟಿತ್ತು. ನಾಟೋದಲ್ಲಿ ಪೂರ್ವ ಯುರೋಪಿಯನ್ ದೇಶಗಳು ಮತ್ತು ಸೋವಿಯೆಟ್ ಒಕ್ಕೂಟ ಸದಸ್ಯರಾಗುವ ಅಥವಾ  ಎಲ್ಲ ಯುರೋಪಿನ ದೇಶಗಳನ್ನು ಒಳಗೊಳ್ಳುವ ಸಾಮೂಹಿಕ ಭದ್ರತೆ ಒಪ್ಪಂದದ ಪ್ರಸ್ತಾವವನ್ನೂ ಸಹ ಸೋವಿಯೆಟ್ ಒಕ್ಕೂಟ ಮಾಡಿತ್ತು. ಇದಕ್ಕೆ ಫ್ರಾನ್ಸ್, ಜರ್ಮನಿ, ಯು.ಎಸ್, ಯು.ಕೆಗಳು ಬಲವಾದ ವಿರೋಧ ವ್ಯಕ್ತಪಡಿಸಿದವು. ಪಶ್ಚಿಮ ಜರ್ಮನಿ ನಾಟೋದ ಭಾಗವಾದ ಮೇಲೆ ಅದಕ್ಕೆ ಪ್ರತಿಯಾಗಿ, ಪೂರ್ವ ಯುರೋಪಿನ ಸಮಾಜವಾದಿ ದೇಶಗಳು ಮತ್ತು ಸೋವಿಯೆಟ್ ಒಕ್ಕೂಟ ವಾರ್ಸಾ ಒಪ್ಪಂದ ಎಂಬ ತಮ್ಮ ಸಾಮೂಹಿಕ ಭದ್ರತೆಯ ವ್ಯವಸ್ಥೆಯನ್ನು ಮಾಡಿಕೊಂಡವು. 1955-1991 ಅವಧಿಯಲ್ಲಿ ನಾಟೋ ಮತ್ತು ವಾರ್ಸಾ ಒಪ್ಪಂದಗಳು ಶಸ್ತ್ರಾಸ್ತ್ರ ಪೈಪೋಟಿಯಲ್ಲಿ ತೊಡಗಿದ್ದರೂ ಯುರೋಪಿನಲ್ಲಿ ಯಾವುದೇ ಮಿಲಿಟರಿ ಘರ್ಷಣೆ  ನಡೆಯಲಿಲ್ಲ. 1980ರ ದಶಕದ ಉತ್ತರಾರ್ಧದಲ್ಲಿ  ಆಗಿನ ಸೋವಿಯೆಟ್ ಅಧ‍್ಯಕ್ಷ ಗೋರ್ಬಚೆವ್ ಅವರ “ಶಾಂತಿ ಅಭಿಯಾನ”ದ ಭಾಗವಾಗಿ 1991 ರಲ್ಲಿ ವಾರ್ಸಾ ಒಪ್ಪಂದವನ್ನು ಬರ್ಖಾಸ್ತು ಮಾಡಲಾಯಿತು. ‘ನಾಟೋ ಒಂದಿಂಚು ಸಹ ಪೂರ್ವಕ್ಕೆ ವಿಸ್ತರಿಸುವುದಿಲ್ಲ’ ಎಂಬ ಭರವಸೆಯ ಆಧಾರದ ಮೇಲೆ ಇದನ್ನು ಮಾಡಲಾಗಿತ್ತು.

ವಾರ್ಸಾ ಒಪ್ಪಂದ ಬರ್ಖಾಸ್ತು ಆದ ಮೇಲೆ ನಾಟೋ ಕೂಟವನ್ನೂ ಬರ್ಖಾಸ್ತು ಮಾಡಬೇಕು ಎಂದು ಜಾಗತಿಕ ಮತ್ತು ಯುರೋಪಿನ ಶಾಂತಿ ಒಪ್ಪಂದ ಒತ್ತಾಯಿಸಿತು. ಆದರೆ ಅದರ ಬದಲು 1991ರ ನಂತರ ‘ಮಾನವೀಯ ಹಕ್ಕುಗಳ ಉಲ್ಲಘನೆ’ ತಡೆಯಲು ಮತ್ತು ‘ಪ್ರಾದೇಶಿಕ ಆಂತರಿಕ ಕಲಹಗಳಲ್ಲಿ ಶಾಂತಿ ಪಾಲನೆ’ಯ ಹೆಸರಲ್ಲಿ ಕೆಲವೊಮ್ಮೆ ವಿಶ್ವಸಂಸ್ಥೆಯ ಶಾಮೀಲಿನ ಜತೆ ಕೆಲವೊಮ್ಮೆ ಯಾವುದೇ ಆಧಾರವಿಲ್ಲದೆ ಇಲ್ಲದೆ ಜಗತ್ತಿನ ಎಲ್ಲೆಡೆ ನಾಟೋ ಕೂಟ ಮಿಲಿಟರಿ ಮಧ್ಯಪ್ರವೇಶ ಮಾಡಲಾರಂಭಿಸಿತು. ಯುಗೊಸ್ಲಾವಿಯ ದ ಆಂತರಿಕ ಕಲಹಗಳನ್ನು ಪರಿಹರಿಸುವ ಶಾಂತಿ ಕಾಪಾಡುವ ಹೆಸರಿನಲ್ಲಿ, 1990 ರ ದಶಕದ ಉದ್ದಕ್ಕೂ ಯುಗೋಸ್ಲಾವಿಯದ ವಿವಿಧ ಪ್ರದೇಶಗಳ ಮೇಲೆ ‘ವಿಮಾನ ಹಾರಾಟ ನಿಷೇಧ’, ‘ತೀಕ್ಷ್ಣ ಬಾಂಬ್ ದಾಳಿ’ಗಳನ್ನು ಮಾಡಲಾಯಿತು. 2001ರಲ್ಲಿ ವಿಶ್ವ ವಾಣಿಜ್ಯ ಕೇಂದ್ರದ ಅವಳಿ ಟವರ್ ಗಳನ್ನು ನಾಶ ಭಯೋತ್ಪಾದನೆಯಲ್ಲಿ ದಾಳಿ ಮಾಡಿದ ಹಿನ್ನೆಲೆಯಲ್ಲಿ, ಅದನ್ನು ಮಾಡಿದ್ದು ಅಫ‍್ಗಾನಿಸ್ತಾನದ ಸರಕಾರ ಎಂದು ಆಪಾದಿಸಿ  ಆ ದೇಶದ ಮೇಲೆ ಭೀಕರ ದಾಳಿ ಮಾಡಿತು. ಸರಕಾರವನ್ನು ಉರುಳಿಸಿ ಕೈಗೊಂಬೆ ಸರಕಾರ ರಚಿಸಿ, ಎರಡು ದಶಕಗಳ ಕಾಲ ಅಲ್ ಖೈದಾ ಮತ್ತು ತಾಲಿಬಾನ್ ಭಯೋತ್ಪಾದಕರನ್ನು ನಿಗ್ರಹಿಸುವ ನೆಪದಲ್ಲಿ ಅಫ‍್ಗಾನಿಸ್ತಾನದಲ್ಲಿ ದಮನಕಾರಿ ಆಳ್ವಿಕೆ ನಡೆಸಿತು. 2003ರಲ್ಲಿ ಇರಾಕ್ ಅಧ್ಯಕ್ಷ ಸದ್ದಾಂ ಹುಸೇನ್ ಸಾಮೂಹಿಕ ನಾಶದ ಶಸ್ತ್ರಾಸ್ತ್ರಗಳನ್ನು ಸಜ್ಜುಗೊಳಿಸಿದ್ದಾರೆ ಎಂದು ಆಪಾದಿಸಿ ಮತ್ತೆ ಭೀಕರ ದಾಳಿ ಮಾಡಿ ಸರಕಾರವನ್ನು ಉರುಳಿಸಿ ಕೈಗೊಂಬೆ ಸರಕಾರ ರಚಿಸಿತು. ಇಂತಹ ಭೀಕರ ಮಿಲಿಟರಿ ಮಧ್ಯಪ್ರವೇಶವನ್ನು  ಲಿಬ್ಯಾ, ಸಿರಿಯಾ ಗಳಲ್ಲೂ ನಡೆಸಲಾಯಿತು. ಈ ದಾಳಿಗಳನ್ನು ನಾಟೋ ‘ಮಾನವೀಯ ಕಾರಣ’ಗಳಿಗಾಗಿ ಮಿಲಿಟರಿ ಮಧ್ಯಪ್ರವೇಶವೆಂದು ಕರೆದರೂ, ಈ ಎಲ್ಲ ಪ್ರಕರಣಗಳಲ್ಲೂ ವ್ಯಾಪಕವಾದ ಭೀಕರ ಪ್ರಮಾಣದ ನಾಗರಿಕ  ಸಾವು-ನೋವುಗಳು, ಆಸ್ತಿ ಪಾಸ್ತಿ ನಷ್ಟಗಳಾದವು. ಉದಾಹರಣೆಗೆ ನಾಟೋ ದಾಳಿಗಳಲ್ಲಿ ಅಫ್ಘಾನಿಸ್ತಾನ, ಪಾಕಿಸ್ತಾನಗಳಲ್ಲಿ 2 ಲಕಷ್ಕ್ಕೂ ಹೆಚ್ಚು, ಇರಾಕ್ ನಲ್ಲಿ 3 ಲಕ್ಷಕ್ಕೂ ಹೆಚ್ಚು ನಾಗರಿಕರು ಸತ್ತಿದ್ದಾರೆ. ಶ್ರೀಮಂತ ದೇಶಗಳಿಗೆ ಬೇಡವಾದ ಸರಕಾರಗಳನ್ನು ಉರುಳಿಸುವ ಉದ್ದೇಶ ಹೊಂದಿದ್ದ ಈ ಯುದ್ಧಗಳು, ಆ ದೇಶಗಳ ಯಾವುದೇ ಸಮಸ್ಯೆಯನ್ನು ಬಗೆಹರಿಸಿಲ್ಲ ಮಾತ್ರವಲ್ಲ ಸಮಸ್ಯೆಗಳನ್ನು ಉಲ್ಬಣಿಸಿವೆ.

ನಾಟೋ ಪ್ರಮುಖವಾಗಿ ವಸಾಹತುಶಾಹಿಯ ಅಂತ್ಯದ ನಂತರದ ವ್ಯವಸ್ಥೆಯಲ್ಲಿಯೂ ಮಾಜಿ ವಸಾಹತು ದೇಶ ಗಳು (ಫ್ರಾನ್ಸ್, ಯು.ಕೆ, ಇಟಲಿ, ಸ್ಪೈನ್, ಪೋರ್ಚುಗಲ್ ಇತ್ಯಾದಿ) ಮತ್ತು ವಲಸೆಗಾರ-ವಸಾಹತುಶಾಹಿ (ಕೆನಡಾ, ಯು.ಎಸ್ ಗಳಲ್ಲಿ ಯುರೋಪಿಯನ್ ವಲಸೆಗಾರರು ಸ್ಥಳೀಯ ಜನರ ಪೂರ್ಣ ವಿನಾಶ ಮಾಡಿ ವಸಾಹತು ಸ್ಥಾಪಿಸಿದ) ದೇಶಗಳ ದಮನ-ಶೋಷಕ ಶಕ್ತಿಯನ್ನು ಕಾಪಾಡಿಕೊಳ್ಳಲು ಹುಟ್ಟಿಕೊಂಡ ಮಿಲಿಟರಿ ಕೂಟ. ಇದು ಇಂದಿನ ಸಾಮ್ರಾಜ್ಯಶಾಹಿಗಳ ಮಿಲಿಟರಿ ಕೂಟ. ಕೂಟದಲ್ಲಿರುವ ಇತರ ಸಣ್ಣ ಸದಸ್ಯ ದೇಶಗಳು ಯಾವುದೇ ಪಾತ್ರವಿಲ್ಲದೆ ಅವುಗಳ ಅಡಿಯಾಳಾಗಿವೆ. ಶೋಷಣೆಗಳ ವಿರುದ್ಧ ಪ್ರತಿರೋಧ ಒಡ್ಡುವ ಸದಸ್ಯ ದೇಶಗಳನ್ನು ಸೇರಿದಂತೆ ಎಲ್ಲ ದೇಶಗಳ ಸರಕಾರಗಳು, ಶಕ್ತಿಗಳನ್ನು ಬೆದರಿಸುವುದು, ಸಾಧ್ಯವಾದರೆ ಅವುಗಳನ್ನು ನಾಶ ಮಾಡುವುದು ಅದರ  ಉದ್ದೇಶ. ಸೋವಿಯೆಟ್ ಒಕ್ಕೂಟ ಮತ್ತು ಪೂರ್ವ ಯುರೋಪಿನ ಸಮಾಜವಾದಿ ಪ್ರಭುತ್ವಗಳು ಅದಕ್ಕೆ ಪ್ರತಿಯಾದ ಮಿಲಿಟರಿ ಶಕ್ತಿಗಳಾಗಿರುವ ವರೆಗೆ ಇದಕ್ಕೆ ಕಡಿವಾಣವಿತ್ತು. ಅವುಗಳ ಪತನದ ನಂತರ ಈಗ ಅವುಗಳಿಗೆ ಯಾವುದೇ ಕಡಿವಾಣವಿಲ್ಲ.

ನಾಟೋ ಕೂಟದ ಮುಖ್ಯಸ್ಥನಾದ ಯು.ಎಸ್ ಸಾಮ್ರಾಜ್ಯಶಾಹಿ ಎರಡನೆಯ ಮಹಾಯುದ್ಧದ ನಂತರದ ಹೆಚ್ಚಿನ ಯುದ್ಧಗಳಿಗೆ ಮೂಲಕಾರಣ. 1990ರ ನಂತರದ ಹೆಚ್ಚಿನ ಪ್ರಮುಖ ಯುದ್ಧಗಳಲ್ಲಿ ನಾಟೋದ ಪಾತ್ರವೂ ಇದೆ. ಆದ್ದರಿಂದಲೇ ನಾಟೋ ಸದಸ್ಯತ್ವವನ್ನು ಪಡೆಯಲು ಪ್ರಯತ್ನಿಸುವುದು ಅಂದರೆ ಆಕ್ರಾಮಕ ಸಾಮ್ರಾಜ್ಯಶಾಹಿಗೆ ಬೆಂಬಲ ಕೊಡುವುದು, ಅದಕ್ಕೆ ಅಡಿಯಾಳಾಗಿರುವುದು, ಅದನ್ನು ಸಂಪ್ರೀತಗೊಳಿಸುವುದು ಅಥವಾ ಇತರ ದೇಶಗಳಿಗೆ ಬೆದರಿಕೆ ಒಡ್ಡುವುದು,. ಹಾಗಾಗಿ ಉಕ್ರೇನ್ ಸೇರಿದಂತೆ ಹಲವು ದೇಶಗಳಲ್ಲಿ ನಾಟೋ ಸದಸ್ಯತ್ವ ಅಷ್ಟು ವಿವಾದಸ್ಪದವಾಗಿರುವುದು.  ಎಲ್ಲ ನಿಜವಾದ ಯುದ್ಧ-ವಿರೋಧಿ ಶಾಂತಿಪರ ಚಳುವಳಿಗಳು, ಯುದ್ಧಗಳು ನಿಲ್ಲಿಸಬೇಕಾದರೆ, ಯು.ಎಸ್ ಸಾಮ್ರಾಜ್ಯಶಾಹಿ ಮತ್ತು ನಾಟೋ ಕೂಟಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸುತ್ತವೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಆರ್ಥಿಕ ಮತ್ತು ರಾಜಕೀಯ ಸಾರ್ವಭೌಮತೆಗೆ ಇವು ಮಾರಕವಾದವುಗಳು ಎಂದು ತಿಳಿದಿವೆ.

 

 

 

 

 

Donate Janashakthi Media

Leave a Reply

Your email address will not be published. Required fields are marked *