ನಿಡಿತವಾದ ಕತೆಯ ಹಂದರವಿರುವ ಕೃತಿ ʻಪೂರ್ವದೆಡೆಗಿನ ಪಯಣʼ

ಡಾ. ರಾಜೆಂದ್ರ ಚೆನ್ನಿ

ಪ್ರಸಿದ್ಧ ಚಿಂತಕ ಎಡ್ವರ್ಡ್ ಸೈಯೀದ್ Orientalism (1978) ಎನ್ನುವ ಕೃತಿಯನ್ನು ಪ್ರಕಟಿಸಿದ ಮೇಲೆ ಪಶ್ಚಿಮ-ಪೂರ್ವ ಹಾಗೂ ವಸಾಹತುಶಾಹಿಯನ್ನು ಕುರಿತು ಹೊಸ ಬಗೆಯ ಚಿಂತನೆಯೇ ಆರಂಭವಾಯಿತು. ಇದು ಮುಂದೆ ಪೌರ್ವಾತ್ಯವಾದವೆಂದು ಹಾಗೂ ವಸಾಹತೋತ್ತರ ಚಿಂತನೆಯೆಂದು ಪ್ರಸಿದ್ಧವಾಯಿತು. ಈ ಸಿದ್ಧಾಂತವು ಪಶ್ಚಿಮವು ಪೂರ್ವದ ಬಗ್ಗೆ ಸೃಷ್ಟಿಸಿದ ಎಲ್ಲಾ ಬರಹವೂ, ಎಲ್ಲಾ ಸಂಕಥನಗಳು ಕೇವಲ ಜ್ಞಾನದ ಸೃಷ್ಟಿಯಾಗಿರಲಿಲ್ಲ; ಪೂರ್ವದ ಮೇಲೆ ಸಾಂಸ್ಕೃತಿಕ ಹಾಗೂ ರಾಜಕೀಯ ಹಿಡಿತ ಸಾಧಿಸುವುದರ ಸಾಧನವಾಗಿತ್ತು. ಮುಖ್ಯವಾಗಿ ಪೂರ್ವವನ್ನು ಪಶ್ಚಿಮದ ಅನ್ಯ ವೆಂದು ವ್ಯಾಖ್ಯಾನಿಸಲಾಯಿತು. ಪ್ರಗತಿ, ಅಭಿವೃದ್ಧಿ, rationality, ವಿಜ್ಞಾನ, ವಿವೇಕ ಇವೆಲ್ಲವು ಪಶ್ಚಿಮದ ಲಕ್ಷಣಗಳಾದರೆ ಅತಿಭಾವುಕತೆ, ಅತಾರ್ಕಿಕತೆ, ಅನುಭಾವ, ಅವೈಜ್ಞಾನಿಕ ಮನೋಭಾವ ಇವೆಲ್ಲ ಪೂರ್ವದ ಲಕ್ಷಣಗಳಾದವು.

ಪಶ್ಚಿಮವು ಪೂರ್ವದ ಬಗ್ಗೆ ನಾವು ಬಲ್ಲ ಚರಿತ್ರೆ ಹಾಗೂ ಬರಹಗಳ ಕಾಲದಿಂದ ವೈವಿಧ್ಯಪೂರ್ಣವಾದ ಕಲ್ಪನೆಗಳನ್ನು ಕಟ್ಟಿಕೊಂಡು ಬಂದಿದೆ. ಇದರ ಮುಂದುವರಿಕೆಯಾಗಿ ಬ್ರಿಟಿಷ್ ಮತ್ತು ಜರ್ಮನ್ ಓರಿಯಂಟಲಿಸ್ಟ್ ಚಿಂತಕರು, ಬರಹಗಾರರು ಭಾರತದ ಬಗ್ಗೆ/ ಪೂರ್ವದ ಬಗ್ಗೆ ಒಂದು ಪ್ರಭಾವಿ ಸಂಕಥನವನ್ನು ಕಟ್ಟಿದರು. ಭಾರತವು ಎಲ್ಲಾ ಧರ್ಮಗಳ ಉಗಮಸ್ಥಾನ, ಆಧ್ಯಾತ್ಮದ ತವರು, ಭೌತಿಕವಾದವನ್ನು ತಿರಸ್ಕರಿಸಿ ಆತ್ಮ-ಪರಮಾತ್ಮಗಳ ಅನುಸಂಧಾನ ಮಾಡಿದ ತತ್ವಪರಂಪರೆಗಳ ಮೂಲಸ್ಥಾನ- ಈ ವ್ಯಾಖ್ಯಾನವು ಅದೆಷ್ಟು ಪ್ರಭಾವಿಯಾಗಿತ್ತೆಂದರೆ ಭಾರತದ ಶಿಕ್ಷಿತ ವರ್ಗವು, ವಿವೇಕಾನಂದರು, ಕುವೆಂಪು- ಇವರೆಲ್ಲ ಸೇರಿದಂತೆ ಅದನ್ನು ಚಾರಿತ್ರಿಕ ಸತ್ಯವೆಂದು ಒಪ್ಪಿಕೊಂಡವು.

ಜರ್ಮನ್ ಬರಹಗಾರ ಹರ್ಮನ್ ಹೆಸ್ ಕೂಡ ಈ ಸಂಕಥನದ ಪ್ರಭಾವವನ್ನು ಗಾಢವಾಗಿ ಅನುಭವಿಸಿದ. ಪಶ್ಚಿಮದ ಸಾಮ್ರಾಜ್ಯಶಾಹಿ ಮತ್ತು ಬಂಡವಾಳಶಾಹಿಗಳ ದೊಡ್ಡ ಬಿಕ್ಕಟ್ಟುಗಳು 20ನೇ ಶತಮಾನದ ಆದಿಭಾಗದಲ್ಲಿ ಮುನ್ನೆಲೆಗೆ ಬಂದವು. ಮೊದಲನೇಯ ಮಹಾಯುದ್ಧವು ಪಶ್ಚಿಮದ ಸ್ವಕಲ್ಪಿತ ಪ್ರತಿಮೆಗೆ ತೀವ್ರ ಭಂಗವನ್ನು ತಂದಿತು. ಆತ್ಮವಿಶ್ವಾಸವನ್ನು ಇನ್ನಿಲ್ಲದಂತೆ ಅಲ್ಲಾಡಿಸಿತು. ಇದರ ಪರಿಣಾಮವಾಗಿ ಪಶ್ಚಿಮದ ಧೀಮಂತ ವರ್ಗವು ಪಶ್ಚಿಮದ ನಾಗರೀಕತೆಯ ಬಗ್ಗೆ ನಿರಸನ ಹೊಂದಿ ಪೂರ್ವದ ನಾಗರೀಕತೆಗಳ ಕಡೆಗೆ ತಿರುಗಿತು. ಇದು ವಸಾಹತುಶಾಹಿ ಓರಿಯಂಟಲಿಸಮ್‌ಗಿಂತ ಭಿನ್ನವಾದುದು. ಈ ಒಂದು ಕಾಲದಲ್ಲಿ ಪೂರ್ವದ ಹುಡುಕಾಟದ ಬಗ್ಗೆ ಬಂದ ಕೃತಿಗಳ ಸಂಖ್ಯೆ ಅಪಾರವಾಗಿದೆ. ವಿಶೇಷವೆಂದರೆ ಮತ್ತೆ 1960, 70ರ ದಶಕಗಳಲ್ಲಿ ಇಂಥದೇ ಹೊರಳುವಿಕೆ ಕಾಣುತ್ತದೆ.

ನೋಬೆಲ್ ಪ್ರಶಸ್ತಿ ಪಡೆದ ಹರ್ಮನ್ ಹೇಸ್‌ನ ಈ ಕಿರುಕಾದಂಬರಿ ಅಥವಾ ದೀರ್ಘ ಕಥೆಯು ವಿಭಿನ್ನವಾಗಿದೆ. ಜನಪ್ರಿಯವಾದ ‘ಸಿದ್ಧಾರ್ಥ’ ಕಾದಂಬರಿಯ ಲೇಖಕನಾದ ಹರ್ಮನ್ ಹೆಸ್ ಈ ಕೃತಿಯಲ್ಲಿ ಭಾರತದ ಬಗ್ಗೆ ಬರೆದಿಲ್ಲ. ಕೃತಿಯ ಹೆಸರು The Journey to the East ಎಂದಾಗಿದೆ. ಮತ್ತು ಕಥೆಯ ಹಂದರವು ಅಪೂರ್ಣವಾಗಿ ಹಾಗೂ ಅಯಶಸ್ವಿಯಾಗಿ ಉಳಿಯುವ ಪೂರ್ವದ ಕಡೆಗಿನ ಪಯಣದ ಬಗ್ಗೆ ಇದೆ. ಆದರೆ ಕೃತಿಯ ಪೂರ್ವವನ್ನು ಸಾಂಕೇತಿಕವಾಗಿ ಬಳಸಿಕೊಳ್ಳುತ್ತದೆ.

ನಿಡಿತವಾದ ಕತೆಯ ಹಂದರವಿರುವ ಈ ಕೃತಿಯು ಒಂದು ತಾತ್ವಿಕ ಪ್ರಬಂಧದ ಹಾಗೆಯೆ ಇದೆ. ಅದು ಎತ್ತುವ ಬಹುಮುಖ್ಯ ಪ್ರಶ್ನೆಗಳು ಚರಿತ್ರೆ, ಬರಹ, ಆತ್ಮ ಜಿಜ್ಞಾಸೆ ಇವುಗಳಿಗೆ ಸಂಬಂಧಪಟ್ಟಿವೆ. ಸಂಘ, ಪಯಣ ಇವೆಲ್ಲವು ನಾವು ಕಟ್ಟಿಕೊಳ್ಳುವ ರಚನೆಗಳಲ್ಲವೆ? ಎಲ್ಲರಿಗೂ ಸ್ವಂತದ ಉದ್ದೇಶವಿರುವುದಾದರೆ ಪಯಣಕ್ಕೆ ಇರುವ ಉದ್ದೇಶವೇನು? ಸಂಘವೆಂದರೆ ಏನು? ಕಟ್ಟಳೆಗಳು ಹೇಗೆ ರಚನೆಯಾಗುತ್ತವೆ? ನಿರೂಪಕನು ಸಂಘದ ನಿಯಮಗಳನ್ನು ಮುರಿದರೂ ಅವನಿಗೆ ಶಿಕ್ಷೆ ಇಲ್ಲ. ಅವನು ಹೇಳಲು ಹೊರಟಿರುವ ಕತೆಗೆ ಎಷ್ಟೊಂದು ಎಳೆಗಳಿವೆಯಲ್ಲ? ಇವು ಹೇಗೆ ಸೇರಿ ಒಂದು ಕಥನವಾಗುತ್ತದೆ? ಹಾಗೆಯೆ ಚರಿತ್ರೆಯೂ ಅಲ್ಲವೆ? ಅದು ಕೂಡ ನಮ್ಮ ಕಲ್ಪಿತ ರಚನೆಯಲ್ಲವೆ? ಮನುಷ್ಯ ಚರಿತ್ರೆಗೆ ಉದ್ದೇಶವಿದೆಯೆ? ಅಂದರೆ ತಮ್ಮ ಕಲ್ಪಿತ ಉದ್ದೇಶದ ಆಚೆಗೆ ಅದರದ್ದೇ ಆದ ಉದ್ದೇಶವಿದೆಯೆ? ಅಷ್ಟಕ್ಕೂ ಬರಹದ ಮೇಲೆ ನಿರ್ಬಂಧವೇಕೆ?

ಈ ಕೃತಿಯನ್ನು ಘಟನೆಗಳ ಹಗುರವಾದ ಓದಿಗೆ ನಿರೂಪಣೆಯ ಸೊಗಸಿಗಾಗಿ ಓದಲಾಗದು. ಇದು ಗಂಭೀರವಾದವನ್ನು, ತಾತ್ವಿಕವಾದದ್ದನ್ನು ಪ್ರತಿಪಾದಿಸುವ ಕೃತಿ. ಒಂದು ಪಯಣದ ಕತೆಯಾಗಿದ್ದರಿಂದ ಕುತೂಹಲವನ್ನು ಕಾಪಾಡಿಕೊಂಡು ಹೋಗುತ್ತದೆ. ಆಧುನಿಕ ಓದುಗರಿಗೆ ತಟ್ಟುವಂಥ ದ್ವಂದ್ವಗಳು, ವಿರೋಧಗಳು ಇವೆಲ್ಲವು ಕೃತಿಯಲ್ಲಿವೆ. ಕೃತಿಯು ತಾತ್ವಿಕ ಚರ್ಚೆಗೆ ಒಂದು ವೇದಿಕೆಯೂ ಆಗಬಲ್ಲದು.

(ನೋಬೆಲ್ ಪ್ರಶಸ್ತಿ ಪಡೆದ ಹರ್ಮನ್ ಹೇಸ್‌ ಅವರ ಕೃತಿಯನ್ನು ಹಿಲ್ಡಾ ರೋಸ್ನರ್‌ ಇಂಗ್ಲೀಷಿಗೆ Journey to the East ಎಂದು ಅನುವಾದಿಸಿದ್ದಾರೆ. ಕೆ.ಪ್ರಭಾಕರನ್‌ ಅವರ ಇಂಗ್ಲೀಷ್‌ ನಿಂದ ಕನ್ನಡಕ್ಕೆ ಅನುವಾದಿತ ʻಪೂರ್ವದೆಡೆಗಿನ ಪಯಣʼ ಕೃತಿಗೆ ಡಾ. ರಾಜೇಂದ್ರ ಚೆನ್ನಿ ಬರೆದ ಮುನ್ನುಡಿಯ ಕೆಲವು ಭಾಗಗಳಿವು.)

ಅತೀಂದ್ರಿಯದೊಳಗೆ ಆಳವಾದ ಸಾಹಿತ್ಯ ಸಂವೇದನೆಯನ್ನು ಅನಾವರಣಗೊಳಿಸುವ ಒಂದು ಅಪೂರ್ವವಾದ ಅನುಭವ ನೀಡುವ ಈ ಕೃತಿಯನ್ನು ವಂಶಿ ಪಬ್ಲಿಕೇಷನ್ಸ್, ಬೆಂಗಳೂರು, ಇವರ ಮೂಲಕ ಪ್ರಕಾಶನಗೊಂಡಿದೆ.

ಪ್ರತಿಗಳಿಗಾಗಿ ಸಂಪರ್ಕಿಸಿ: ವಂಶಿ ಪಬ್ಲಿಕೇಷನ್ಸ್, ನೆಲಮಂಗಲ, ಬೆಂಗಳೂರು-562123,

ಮೊಬೈಲ್: 9916595916, 9743055511.

Donate Janashakthi Media

Leave a Reply

Your email address will not be published. Required fields are marked *