ಬೆಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದ ನಟ, ಹೋರಾಟಗಾರ ಚೇತನ್ ರನ್ನು ಪೊಲೀಸರು ಬಂಧಿಸಿದ್ದಾರೆ.
ಆಕ್ಷೇಪಾರ್ಹ ಪೋಸ್ಟ್ ಸಂಬಂಧ ಚೇತನ್ ವಿರುದ್ಧ ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದು, ಐಪಿಸಿ ಸೆಕ್ಷನ್ 505(2) ಮತ್ತು 504 ಅಡಿ ಕೇಸ್ ದಾಖಲು ಮಾಡಲಾಗಿದೆ. ತಡರಾತ್ರಿ
ಪೊಲೀಸರು ಚೇತನ್ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ.
ಚೇತನ್ ರನ್ನು ಪೊಲೀಸರು ಅಕ್ರಮವಾಗಿ ಬಂಧಿಸಿದ್ದಾರೆ ಎಂದು ಚೇತನ್ ಪತ್ನಿ ಮೇಘಾ ಬೆಂಬಲಿಗರೊಂದಿಗೆ ಶೇಷಾದ್ರಿಪುರಂ ಠಾಣೆಗೆ ಭೇಟಿ ನೀಡಿದ್ದರು. ಆದರೆ ಪೊಲೀಸ್ ಠಾಣೆಯಲ್ಲಿ ಸರಿಯಾದ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಹಲವಾರು ಪ್ರಗತಿಪರ ಸಂಘಟನೆಗಳ ಮುಖಂಡರ ಜೊತೆಯಲ್ಲಿ ಪೊಲೀಸ್ ಕಮೀಷನರ್ ಅವರನ್ನು ಭೇಟಿ ಮಾಡಲು ತೆರಳಿದ್ದು, ಸದ್ಯ ಚೇತನ್ ಪತ್ನಿ ಮೇಘ, ದಲಿತ ಮುಖಂಡರು ಹಾಗೂ ಹಿರಿಯ ವಕೀಲ ಬಾಲನ್ ಪೊಲೀಸ್ ಕಮೀಷನರ್ ರವರೊಂದಿಗೆ ಮಾತನಾಡಿದ್ದಾರೆ ಎಂಬ ಮಾಹಿತಿಯಿದೆ.
ಎರಡು ವರ್ಷಗಳ ಹಿಂದೆ ನಟ ಚೇತನ್ ಅತ್ಯಾಚಾರ ಪ್ರಕರಣವೊಂದರ ಬಗ್ಗೆ ನ್ಯಾಯಮೂರ್ತಿಗಳನ್ನು ಪ್ರಶ್ನಿಸಿ ಟ್ವೀಟ್ ಮಾಡಿದ್ದರು. ಅದನ್ನು ಉಲ್ಲೇಖ ಮಾಡಿ ಫೆಬ್ರವರಿ 16 ರಂದು ನ್ಯಾಯಮೂರ್ತಿಗಳ ಹಿಜಾಬ್ ವಿಚಾರಣೆ ಪೀಠದಲ್ಲಿ ಇದ್ದಾಗ ಟೀಕೆ ಮಾಡಿದ್ದರು. ಹಿಜಾಬ್ ವಿಚಾರಣೆ ವೇಳೆ ಪ್ರಚೋದನಕಾರಿ ಹೇಳಿಕೆ ನೀಡಬಾರದು, ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಪೋಸ್ಟ್ ಮಾಡಬಾರದು ಎಂದು ನಗರ ಪೊಲೀಸ್ ಆಯುಕ್ತರು ಸೂಚಿಸಿದ್ದರು. ಫೆಬ್ರವರಿ 12 ರಂದು ಕಮಲ್ ಪಂತ್ ಮೌಖಿಕ ಸೂಚನೆ ನೀಡಿದ್ರು ಆದರೆ 16 ನೇ ತಾರೀಖು ಚೇತನ್ ಟ್ವೀಟ್ ಮಾಡಿದ್ರು ಈ ಹಿನ್ನೆಲೆ ಚೇತನ್ ಅವರನ್ನು ಬಂಧಿಸಲಾಗಿದೆ ಎಂಬುದು ಸಧ್ಯದ ಮಾಹಿತಿಯಾಗಿದೆ.
ಇನ್ನು ವಕೀಲ ಎಸ್ ಬಾಲನ್, ಮಾಧ್ಯಮಗಳ ಜೊತೆ ಮಾತನಾಡಿ, “ಒಂದು ಟ್ವೀಟ್ ಆಧಾರದಲ್ಲಿ ಬಂಧನ ಮಾಡಿರುವುದು ಎಷ್ಟು ಸರಿ? ಯಾರ ದೂರಿನ ಆಧಾರದಲ್ಲಿ ಬಂಧನ ಮಾಡಲಾಗಿದೆ,” ಎಂಬ ಬಗ್ಗೆಯೂ ಹೇಳಿಲ್ಲ ಎಂದು ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ನಟ ಚೇತನ್ ಬಂಧನದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಈ ಬಂಧನದ ವಿರುದ್ಧವಾಗಿ ಹಾಗೂ ಪರವಾಗಿ ಚರ್ಚೆಗಳು ನಡೆಯುತ್ತಿದೆ. ಚೇತನ್ ಬಂಧನದ ರೀತಿ ಬಗ್ಗೆ ಹಲವಾರು ದಲಿತ ಮುಖಂಡರು, ಪ್ರಗತಿಪರರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದು, ಉತ್ತರದ ರಾಜ್ಯಗಳಲ್ಲಿನ ಪರಿಸ್ಥಿತಿ ನಮ್ಮ ರಾಜ್ಯಕ್ಕೂ ಕಾಲಿಟ್ಟಿದೆ ಎಂದರೆ, ಕೆಲವರು ತುರ್ತು ಪರಿಸ್ಥಿತಿಯ ಸಮಯದಲ್ಲಿ ಇದ್ದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ವ್ಯವಸ್ಥೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
14 ದಿನ ನ್ಯಾಯಂಗ ಬಂಧನ : ಈಗ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಚೇತನ್ ರವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನಗರದ 8ನೇ ಎಸಿಎಂಎಂ ನ್ಯಾಯಲಯದ ನ್ಯಾಯಾಧೀಶರು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶ ಹೊರಡಿಸಿದ್ದಾರೆ. ಇನ್ನೊಂದೆಡೆ ವಕೀಲ ಕೆ.ಬಾಲನ್ ಮೂಲಕ ಚೇತನ್ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಇಂದು (ಬುಧವಾರ) ಆಕ್ಷೇಪಣೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.