ಬೆಂಗಳೂರು: ನ್ಯಾಯಾಲಯದ ಆದೇಶ ಪಾಲಿಸಲು ವಿಫಲವಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪ್ರಧಾನ ಎಂಜಿನಿಯರ್ ವಿರುದ್ಧ ಜಾಮೀನು ಸಹಿತ ವಾರೆಂಟ್ ಜಾರಿಗೊಳಿಸಿರುವ ಕರ್ನಾಟಕ ಹೈಕೋರ್ಟ್, ಅಧಿಕಾರಿಯನ್ನು ವಶಕ್ಕೆ ಪಡೆದು ಗುರುವಾರ(ಫೆ. 17) ನ್ಯಾಯಾಲಯಕ್ಕೆ ಹಾಜರುಪಡಿಸಬೇಕೆಂದು ಹೈಕೋರ್ಟ್ ನ್ಯಾಯಪೀಠ ತಿಳಿಸಿದೆ.
ಬೆಂಗಳೂರಿನವರಾದ ವಿಜಯನ್ ಮೆನನ್ ಮತ್ತಿತರರು ‘ನಗರದ ರಸ್ತೆಗಳ ಗುಂಡಿಗಳನ್ನು ಮುಚ್ಚಲು ಸರ್ಕಾರ ಹಾಗೂ ಬಿಬಿಎಂಪಿಗೆ ನಿರ್ದೇಶಿಸಬೇಕು‘ ಎಂದು ಕೋರಿ 2015ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ʻಕೋರ್ಟ್ ನಿರ್ದೇಶನದ ಹೊರತಾಗಿಯೂ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಂಡ ಕಾರಣಕ್ಕೆ ಮುಖ್ಯ ಎಂಜಿನಿಯರ್ ಅನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕೆಂದು ನಗರ ಪೊಲೀಸ್ ಆಯುಕ್ತರಿಗೆ ನಿರ್ದೇಶಿಸಲಾಗಿದೆ.
ಈಗ ಜಾಮೀನು ಸಹಿತ ವಾರಂಟ್ ಜಾರಿಗೊಳಿಸಲಾಗಿದೆ. ಇದಕ್ಕಿಂತ ಕಠಿಣ ಆದೇಶ ಹೊರಡಿಸಲು ನ್ಯಾಯಾಲಯವು ಹಿಂದೇಟು ಹಾಕುವುದಿಲ್ಲ. ಜಾಮೀನು ರಹಿತ ವಾರಂಟ್ ಹೊರಡಿಸುವುದು ನಮಗೆ ಕಷ್ಟವಲ್ಲ ಎಂದೂ ಪೀಠವು ಮೌಖಿಕವಾಗಿ ಸ್ಪಷ್ಟಪಡಿಸಿದೆ.
ಫೆಬ್ರವರಿ 07ರಂದು ವಿಚಾರಣೆ ನಡೆಸಿದ ನ್ಯಾಯಪೀಠವು ಬೆಂಗಳೂರಿನಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚುವ ವಿಚಾರದಲ್ಲಿ ನ್ಯಾಯಾಲಯದ ಆದೇಶಗಳನ್ನು ಪಾಲಿಸಲು ವಿಫಲವಾಗಿದ್ದ ಹಿನ್ನೆಲೆಯಲ್ಲಿ ಖುದ್ದು ಹಾಜರಾಗುವಂತೆ ಬಿಬಿಎಂಪಿ ಪ್ರಧಾನ ಎಂಜಿನಿಯರ್ ಅವರಿಗೆ ನ್ಯಾಐಪೀಠವು ನಿರ್ದೇಶಿಸಿತ್ತು. ಆದರೆ ಇಂದು ಅನಾರೋಗ್ಯದ ನೆಪವೊಡ್ಡಿ ಪ್ರಧಾನ ಎಂಜಿನಿಯರ್ ವಿಚಾರಣೆಗೆ ಹಾಜರಾಗಿರಲಿಲ್ಲ. ಪ್ರಕರಣದ ವಿಚಾರಣೆ ಆರಂಭವಾದಾಗ ಬಿಬಿಎಂಪಿ ಪರ ವಕೀಲ ವಿ ಶ್ರೀನಿಧಿ ಅವರು ಪ್ರಧಾನ ಎಂಜಿನಿಯರ್ ಹಾಜರಾತಿಗೆ ವಿನಾಯಿತಿ ಕೋರಿದರು.
ಇದಕ್ಕೆ ಗರಂ ಆದ ಮುಖ್ಯ ನ್ಯಾಯಮೂರ್ತಿಗಳು, ‘ಈ ಕುರಿತು ಕೋರ್ಟ್ ಕಲಾಪ ಆರಂಭವಾಗುವ ಮುನ್ನವೇ ನೀವು ಮೆಮೊ (ಜ್ಞಾಪನಾ ಪತ್ರ) ಸಲ್ಲಿಸಿ ಮನವಿ ಮಾಡಬೇಕಿತ್ತು. ಈಗ ಮನವಿ ಮಾಡಿದರೆ ಅದನ್ನು ಒಪ್ಪಲಾಗದು‘ ಎಂದು ಹೇಳಿ, ಮುಖ್ಯ ಎಂಜಿನಿಯರ್ ವಿರುದ್ಧ ಜಾಮೀನು ಸಹಿತ ವಾರೆಂಟ್ ಜಾರಿಗೆ ಆದೇಶಿಸಿದೆ.
ಈ ಹಿಂದಿನ ವಿಚಾರಣೆ ಸಂದರ್ಭದಲ್ಲಿ ಹವಾನಿಯಂತ್ರಿತ ಕಚೇರಿಯಲ್ಲಿ ಕುಳಿತಿರುವ ನಿಮಗೆ (ಅಧಿಕಾರಿಗಳು) ಜನರ ಸಮಸ್ಯೆ ಅರ್ಥವಾಗುವುದಿಲ್ಲ ಎಂದು ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚುವ ವಿಚಾರದಲ್ಲಿ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಎಂಜಿನಿಯರ್‌ಗಳನ್ನು ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಈ ಕ್ಷಣದಿಂದಲೇ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ, ಜೈಲಿಗೆ ಕಳುಹಿಸಬೇಕಾಗುವುದು ಎಂದು ತಿಳಿಸಿತ್ತು.