ಶಿವಮೊಗ್ಗ: ಕೆಲ ವಿದ್ಯಾರ್ಥಿನಿಯರು ನಮಗೆ ಪರೀಕ್ಷೆ ಮುಖ್ಯವಲ್ಲ, ಧರ್ಮ ಮುಖ್ಯ ಇದರಿಂದಾಗಿ ನಾವು ಹಿಜಬ್ ತೆಗೆಯಲ್ಲ ಎಂದು ತರಗತಿಯಿಂದ ಹೊರನಡೆದ ಘಟನೆ ಇಲ್ಲಿನ ಬಿ.ಎಚ್.ರಸ್ತೆಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದಿದೆ.
ಹಿಜಾಬ್ ವಿವಾದ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಹಿಜಾಬ್ ಧರಿಸಲು ಅವಕಾಶವಿಲ್ಲದಿರುವುದರಿಂದ ವಿದ್ಯಾರ್ಥಿನಿಯರು ಪರೀಕ್ಷೆಯನ್ನೇ ತ್ಯಜಿಸಿದ್ದಾರೆ. ಕಾಲೇಜಿನ ಪ್ರೌಢಶಾಲೆ ವಿಭಾಗದ 13 ವಿದ್ಯಾರ್ಥಿನಿಯರು ಪರೀಕ್ಷೆ ಬರೆಯದೆ ಹೊರ ನಡೆದಿದ್ದಾರೆ. ಎಂದಿನಂತೆ ವಿದ್ಯಾರ್ಥಿನಿಯರು ಪರೀಕ್ಷಾ ಕೊಠಡಿಗೆ ತೆರಳಿದ್ದರು. ಆದರೆ ಹೈಕೋರ್ಟ್ ಆದೇಶದ ಹಿನ್ನೆಲೆ ಹಿಜಾಬ್ ಧರಿಸದಂತೆ ಶಿಕ್ಷಕರು ಸೂಚಿಸಿದರು.
ಹಿಜಬ್-ಕೇಸರಿ ಶಾಲು ವಿವಾದದ ಘರ್ಷಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಳೆದ ವಾರ ಮೂರು ದಿನಗಳ ಕಾಲ ಶಾಲಾ ಕಾಲೇಜಿಗೆ ರಜೆ ನೀಡಿತ್ತು. ಇಂದಿನಿಂದ ಸರ್ಕಾರ 9 ಹಾಗೂ 10ನೇ ತರಗತಿಗೆ ಶಾಲೆ ಆರಂಭ ಮಾಡಿತ್ತು. ಶಾಲೆ ಆರಂಭದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿತ್ತು.
ವಿದ್ಯಾರ್ಥಿನಿಯರು ಬೆಳಗ್ಗೆ ಪರೀಕ್ಷಾ ಕೊಠಡಿಯೊಳಗೆ ಆಗಮಿಸುತ್ತಿದ್ದಂತೆಯೇ, ಹಿಜಾಬ್, ಬುರ್ಕಾ ಧರಿಸುವಂತಿಲ್ಲ ಎಂದು ಶಿಕ್ಷಕರು ತಿಳಿಸಿದ್ದಾರೆ. ಆದರೆ ಹಿಜಾಬ್ ತೆಗೆಯಲು ಒಪ್ಪದ ಅವರು ಪರೀಕ್ಷಾ ಕೊಠಡಿಯಿಂದ ಹೊರ ನಡೆದಿದ್ದಾರೆ. ಈ ಪೈಕಿ ಇಬ್ಬರು ಎಂಟು ಮತ್ತು ಒಂಬತ್ತನೇ ತರಗತಿಯವರು. ಉಳಿದವರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯರಾಗಿದ್ದಾರೆ.
ಶಿಕ್ಷಕರು ಅವರ ಮನವೊಲಿಸಿ ಪರೀಕ್ಷೆ ಬರೆಯುವಂತೆ ಹೇಳಿದ್ದಾರೆ. ಇದಕ್ಕೆ ಒಪ್ಪದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಶಾಲೆಯಿಂದ ಹೊರ ನಡೆದಿದ್ದಾರೆ. ಈ ಕುರಿತು ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಮೇಶ್, “ಪರೀಕ್ಷೆ ಬರೆಯಲು ಅವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಎಲ್ಲರೂ ಸ್ಕಾರ್ಫ್ ತೆಗೆದು ಪರೀಕ್ಷೆ ಬರೆಯುವಂತೆ ತಿಳಿಸಲಾಗಿತ್ತು. ಮಕ್ಕಳಿಗೆ ತಿಳಿ ಹೇಳುವ ಪ್ರಯತ್ನ ಮಾಡಿದ್ದೇವೆ,” ಎಂದು ತಿಳಿಸಿದರು.
ಕೆಲ ವಿದ್ಯಾರ್ಥಿನಿಯರು ಬುರ್ಖಾ, ಹಿಜಬ್ ತೆಗೆದಿಟ್ಟು ಪರೀಕ್ಷೆಗೆ ಹಾಜರಾಗಿರುವ ಪ್ರಸಂಗವೂ ನಡೆದಿದೆ. ಆದರೆ ಪರೀಕ್ಷೆ ಆರಂಭಕ್ಕೂ ಮೊದಲು ಕೆಲವು ವಿದ್ಯಾರ್ಥಿನಿಯರು ನಾವು ಹಿಜಬ್ ಧರಿಸಿಯೇ ಪರೀಕ್ಷೆ ಬರೆಯುತ್ತೇವೆ. ಇಲ್ಲದಿದ್ದರೆ ಪರೀಕ್ಷೆ ಬರೆಯುವುದಿಲ್ಲ ಎಂದು ತಗಾದೆ ತೆಗೆದಿದ್ದಾರೆ.
ಬಿಗಿ ಭದ್ರೆತೆಯಲ್ಲಿ ಶಾಲೆಗಳು ಆರಂಭ
ಹಿಜಾಬ್, ಕೇಸರಿ ಶಾಲು ಸಂಘರ್ಷದ ಹಿನ್ನೆಲೆ ರಾಜ್ಯ ಸರ್ಕಾರ ಪ್ರೌಢಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಿತ್ತು. ಮೊದಲ ಹಂತದಲ್ಲಿ ಪ್ರೌಢಶಾಲೆಗಳ ತರಗತಿ ಇಂದಿನಿಂದ ಆರಂಭವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆಗಳ ಮುಂದೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಕಳೆದ ವಾರ ಶಿವಮೊಗ್ಗದ ಬಾಪೂಜಿನಗರ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಲ್ಲು ತೂರಟವಾಗಿತ್ತು. ಸಮೀಪದಲ್ಲೇ ಇರುವ ಬಿ.ಹೆಚ್. ರಸ್ತೆಯ ಸರ್ಕಾರಿ ಪ್ರೌಢಶಾಲೆ ಇದೆ. ಆದ್ದರಿಂದ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಅಹಿತಕರ ಘಟನೆ ಸಂಭವಿಸದಂತೆ ಮೀಸಲು ಪೊಲೀಸರನ್ನು ಕೂಡ ನಿಯೋಜಿಸಲಾಗಿದೆ.