ಈ ವ್ಯಾಲೆಂಟೈನ್ ಯಾರು? ಪ್ರೇಮಿಗಳ ದಿನಾಚರಣೆ ಯಾಕೆ ಆಚರಿಸಲಾಗುತ್ತಿದೆ?!

ಫೆ 14 ವಿಶ್ವದಾದ್ಯಂತ ಪ್ರೇಮದ ಪಲ್ಲವಿ ಕೋಟ್ಯಾಂತರ ಹೃದಯಗಳಿಂದ ಕೋಟ್ಯಾಂತರ ಹೃದಯಗಳಿಗೆ ಪ್ರತಿ ವರ್ಷ ಹರಿದಾಡುವ ದಿನ. ಈ ದಿನದಂದು ತಮ್ಮ ಪ್ರೇಮವನ್ನು ನಿವೇದಿಸಿಕೊಳ್ಳಲು, ಆಗಲೇ ಪ್ರೇಮಿಗಳಾದವರು ತಮ್ಮ ಪ್ರೇಮವನ್ನು ಮತ್ತಷ್ಟು ಗಾಢವಾಗಿಸಿಕೊಳ್ಳಲು ಕಾಯುವ ದಿನ. ವ್ಯಾಲೈಂಟೆನ್ಸ್ ಡೇ ಅಥವಾ ಪ್ರೇಮಿಗಳ ದಿನಾಚರಣೆ ಎಂದು ವಿಶ್ವದಾದ್ಯಂತ ಆಚರಿಸುವ ಈ ದಿನವನ್ನು ಭಾರತದಲ್ಲೂ ವರ್ಷದಿಂದ ವರ್ಷಕ್ಕೆ ವ್ಯಾಪಕವಾಗಿ ಆಚರಿಸಲಾಗುತ್ತಿದೆ.

ಪ್ರಜಾಪ್ರಭುತ್ವವನ್ನು ಒಪ್ಪಿರುವ ನಮ್ಮ ದೇಶಕ್ಕೆ ಈ ಆಚರಣೆ ಸಹಜವಾಗಿ ಅರ್ಥಪೂರ್ಣವನ್ನು ಪಡೆದುಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಈ ವ್ಯಾಲೆಂಟೈನ್ ಯಾರು? ಇತನ ಹೆಸರಿನಲ್ಲಿ ಇಷ್ಟೊಂದು ವ್ಯಾಪಕವಾಗಿ ಪ್ರೇಮಿಗಳ ದಿನಾಚರಣೆಯನ್ನು ಯಾಕೆ ಆಚರಿಸಲಾಗುತ್ತಿದೆ? ತಿಳಿಯೋಣ ಬನ್ನಿ.

ವ್ಯಾಲೆಂಟೈನ್ ಎಂಬುವರು ಒಬ್ಬ ಕ್ರಿಶ್ಚಿಯನ್ ಪಾದ್ರಿ, ಸುಮಾರು ಕ್ರಿ.ಶ.260ರ ಸಮಯದಲ್ಲಿ ರೋಮಿನಲ್ಲಿದ್ದವರು. ಆಗ ರೋಮ್ ಛಕ್ರಾಧಿಪತ್ಯದಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರ ಮೇಲೆ ಹಲವಾರು ನಿರ್ಬಂಧಗಳನ್ನು ಹೇರಲಾಗಿದ್ದ, ಅನೇಕ ದಮನಕಾರೀ ಕ್ರಮಗಳನ್ನು ಕೈಗೊಳ್ಳುತ್ತಿದ್ದ ಸಮಯ. ಸೈನಿಕರು ಮದುವೆಯಾಗಬಾರದೆಂಬ ನಿಯಮವೂ ಇತ್ತು. ಆಗ ಸೈನಿಕರಿಗೆ ಗುಟ್ಟಾಗಿ ಮದುವೆ ಮಾಡಿಸುವುದು, ಹಿಂಸೆಗೆ ತುತ್ತಾಗಿದ್ದ ಕ್ರಿಶ್ಚಿಯನ್ನರು ಪಾರಾಗಲು ಸಹಾಯ ಮಾಡುವುದು ಮುಂತಾದ ಕೃತ್ಯಗಳಿಂದ ಅಂದಿನ ರೋಮ್ ಚಕ್ರಾಧಿಪತಿಗಳ ಕೆಂಗಣ್ಣಿಗೆ ವ್ಯಾಲೈಂಟೈನ್ ಪಾದ್ರಿ ಗುರಿಯಾಗಿದ್ದ. ಅವನನ್ನು ಬಂಧಿಸಿ ಕಾರಾಗೃಹಕ್ಕೆ ಅಟ್ಟಲಾಯಿತು. ಅಲ್ಲಿ ಈ ಪಾದ್ರಿ ಸೆರೆಮನೆಯ ಅಧಿಕಾರಿಯ ಮಗಳು ಜೂಲಿಯಾಳ ಅಂಧತ್ವವನ್ನು ಗುಣಪಡಿಸಿದ, ಅವನನ್ನು ಮರಣದಂಡನೆಗೆ ಗುರಿಪಡಿಸುವ ಮುನ್ನಾ ದಿನ ಜೂಲಿಯಾಳಿಗೆ ಪತ್ರವೊಂದನ್ನು ಬರೆದು ಅದಕ್ಕೆ “ಇತಿ ನಿನ್ನ ವ್ಯಾಲೆಂಟೈನ್ ಎಂದು ಸಹಿ ಮಾಡಿದ್ದ ಎಂಬ ಪ್ರತೀತಿ ಇದೆ. ಇದೇ ಮುಂದೆ ಪ್ರೇಮಿಗಳು ‘ ನಿನ್ನ ವ್ಯಾಲೈಂಟೈನ್ ” ಎಂದು ಸಹಿ ಮಾಡಲು ಕಾರಣವಾಯಿತು. ಅವನ ದೇಹವನ್ನು ಸಮಾಧಿ ಮಾಡಿದ ದಿನವಾದ ಫೆಬ್ರುವರಿ 14 ಅನ್ನು ವ್ಯಾಲೈಂಟೈನ್ ದಿನವಾಗಿ ಆಚರಿಸಲ್ಪಡುತ್ತಿದೆ. ಅವನ ಸಮಾಧಿಯ ಮೇಲೆ ಜೂಲಿಯಾ ಪಿಂಕ್ ಬಣ್ಣದ ಹೂಗಳ ಬಾದಾಮಿಯ ಮರವೊಂದನ್ನು ನೆಟ್ಟಳು ಎಂಬ ದಂತ ಕಥೆ ಇದೆ. ಈ ಕಾರಣಕ್ಕಾಗಿ ಪಿಂಕ್ ಬಣ್ಣ ಪ್ರೇಮದ ಸಂಕೇತವಾಯಿತು.

ಪ್ರೇಮ ಕೇವಲ ಯುವಕ ಯುವತಿಯರಿಗೆ ಸಂಬಂಧಿಸಿದ ವಿಷಯವಲ್ಲ. ಅದು ಸಮಾಜದ ಮೌಲ್ಯಗಳ ಪ್ರಶ್ನೆ, ಪ್ರಜಾಪ್ರಭುತ್ವದ ಪ್ರಶ್ನೆ, ಮಹಿಳಾ ಸಮಾನತೆಯ ಪ್ರಶ್ನೆ, ಜಾತಿಭೇದ, ಧರ್ಮ ಬೇಧಗಳ ಪ್ರಶ್ನೆ ಮಾನವ ಕುಲಂ ತಾನೊಂದೆ ವಲಂ ಎಂಬ ಕನ್ನಡದ ಆದಿಕವಿ ಪಂಪನ ಆಶಯವನ್ನು ವಾಸ್ತವಗೊಳಿಸುವ ಪ್ರಶ್ನೆ. ನಮ್ಮ ಸಂವಿಧಾನ ದತ್ತ ಹಕ್ಕುಗಳನ್ನು ರಕ್ಷಿಸಿಕೊಳ್ಳುವ ಪ್ರಶ್ನೆಯು ಇದರಲ್ಲಿ ಅಡಗಿದೆ. ಆ ನಿಟ್ಟಿನಲ್ಲಿ ಪ್ರೀತಿ ಗೆಲ್ಲಲಿ.

 

ಪ್ರೀತಿಯ ಗಾಳಿ ಬೀಸುತಿದೆ..

– ಜನಾರ್ಧನ ಕೆಸರುಗದ್ದೆ

ಪ್ರೀತಿಯ ಗಾಳಿ ಬೀಸುತಿದೆ
ಹಟ್ಟಿ ಮೊಹಲ್ಲಗಳ ನಡುವೆ
ಗಡಿಗಳ ಮೀರಿ ಗೆಳೆತನವ ಮಾಡೋಣವಾ
ನನ್ನ ಸಂಗಾತಿಯೇ ಓ ನನ್ನ ಸಂಗಾತಿಯೇ

ಸ್ಪೃಶ್ಯ ಅಸ್ಪೃಶ್ಯತೆ ಬೇಲಿಗಳು
ಜಾತಿ ಧರ್ಮದ ಗೋಡೆಗಳು
ಎಲ್ಲವ ದಾಟಿ ಎತ್ತರಕೆ ಹಾರೋಣ ಬಾ
ನನ್ನ ಸಂಗಾತಿಯೇ ಓ ನನ್ನ ಸಂಗಾತಿಯೇ

ಅವ್ವನ ಪ್ರೀತಿಗೆ ಕೈಮುಗಿದು
ಅಪ್ಪನ ಮಮತೆಗೆ ಶರಣೆಂದು
ಹೊಸಿಲ ದಾಟಿ ಬಾ ಹೊಸ ಸಂಬಂಧ ಕಟ್ಟೋಣ ಬಾ
ನನ್ನ ಸಂಗಾತಿಯೇ ಓ ನನ್ನ ಸಂಗಾತಿಯೇ

ನನ್ನ ನಿನ್ನ ಈ ಸ್ನೇಹ
ಒಪ್ಪದಿರಬಹುದು ಸಮಾಜ
ತಪ್ಪೆಂದಾದರೆ ಆಗಲಿ ತಪ್ಪ ಮಾಡೋಣ ಬಾ,

ನನ್ನ ಸಂಗಾತಿಯೇ ಓ ನನ್ನ ಸಂಗಾತಿಯೇ

ನೆನ್ನೆಯ ತಪ್ಪು ಇಂದು ಸರಿ
ಇಂದಿನ ತಪ್ಪು ನಾಳೆ ಸರಿ
ಕಾಲದೇಶಕೆ ಬದಲಾಗುವುದು ತಪ್ಪು ಸರಿ
ನನ್ನ ಸಂಗಾತಿಯೇ ಓ ನನ್ನ ಸಂಗಾತಿಯೇ

ಬದಲಾವಣೆಯಲಿ ನೋವು ಇದೆ
ಮೌಲ್ಯಗಳ ಸಂಘರ್ಷವಿದೆ
ಇಂದಲ್ಲ ನಾಳೆ ಬದಲಾಗುವುದು ಜನ ಮನ,

ನನ್ನ ಸಂಗಾತಿಯೇ ಓ ನನ್ನ ಸಂಗಾತಿಯೇ

ಬದಲಾಗದಿದ್ದರೆ ನಾವಿಂದು
ಜಗವ ಬದಲಾಯಿಸುವೆವು ಎಂದು
ಬದಲಾವಣೆಯು ಶುರುವಾಗುವುದು ನಮ್ಮಿಂದಲೇ..,

ನನ್ನ ಸಂಗಾತಿಯೇ ಓ ನನ್ನ ಸಂಗಾತಿಯೇ

ಮಾಹಿತಿ : ಪ್ರೇಮ ಉಕ್ಕಿತೋ ಸಾಗರದಾಂಗ ಪುಸ್ತಕದಿಂದ.

Donate Janashakthi Media

Leave a Reply

Your email address will not be published. Required fields are marked *