ಜಿಯೋ ಅಗ್ರಾರ್
ನಾನೂ ಅಂದು ಕಾಲೇಜಿಗೆ ಹೊರಟ್ಟಿದ್ದೆ
ಗೇಟಲ್ಲೇ ಯಾರೋ ನೀಡಿದ
ಅಂದೊಂದು ಬಣ್ಣದ ಹೊದಿಕೆ
ನೂರಾರು ವಿದ್ಯಾರ್ಥಿಗಳ ಕೊರಳಲ್ಲೂ
ಮುಗ್ದ ಮನಗಳ ಕೊರಳಿಗೆ ಸುತ್ತಲ್ಪಟ್ಟ
ಅರ್ಥವಾಗದ ಆ ಶಾಲು
ನಾವೆಲ್ಲಾ ಗುಂಪಿನಲ್ಲಿ ಗೋವಿಂದ
ಗುರು ಇಲ್ಲ ಗುರಿ ಇಲ್ಲ
ಕೈಗಳಲ್ಲಿ ಕಲ್ಲು
ತಲೆಯಲ್ಲಿ ಕತ್ತಲು
ಯಾರೊ ಉಗುಳಿದ ಘೋಷಣೆ
ನಾವೆಲ್ಲಾ ಬೊಗಳಿದ ಜೈಕಾರ
ಪೊಲೀಸರ ಆಗಮನ
ನಾವು ಯಾಕೆ ಅಲ್ಲಿದ್ದೇವೆ
ಅದೂ ತಿಳಿಯದೇ
ಅತ್ತ ಇತ್ತ ಓಡಲೂ ಆಗದೇ
ಪೊಲೀಸ್ ವ್ಯಾನಲ್ಲೆ ನಮಗೆ ಆಸರೆ
ಮೈ ತುಂಬಾ ಬಾಸುಂಡೆ
ಅಪ್ಪ ಅಮ್ಮನ ನೆನಪು ಬರಲೇ ಇಲ್ಲ
ಅವರ ಬೆವರ ಮಳೆ.. ಹರಿದ ಪಂಚೆ
ಸವೆದ ಚಪ್ಪಲಿ.. ಆಮ್ಮನ ಉಬ್ಬಸದ ಪುಪ್ಪಸ
ನನ್ನ ಓದಿಗಾಗಿ ರಾಶಿ ರಾಶಿ ಸಾಲ
ಮುರುಕಲು ಮನೆ ನಾಳೆಯ ಕನಸುಗಳು
ಇಲ್ಲ ಯಾವುದೂ ನೆನಪು ಬಂದೇ ಇಲ್ಲ
ವರುಷಗಳೆ ಉರುಳಿದುವು.
ಕೇಸ್ ಕೋರ್ಟು ಅಲೆದಾಟ ಮುಗಿದಿಲ್ಲ
ಅಂದು ಕರೆ ಕೊಟ್ಟ ಖದೀಮಾರಾರು ಜೊತೆಗಿಲ್ಲ
ಇತ್ತ ಡಿಗ್ರಿ ಇಲ್ಲ ಅತ್ತ ಕೈಗೆ ಒಂದೂ ನೌಕರಿ ಇಲ್ಲ
ಕುಟುಂಬ ಸಮಾಜ ಯಾರೂ ಇಲ್ಲ
ಬುದ್ದಿ ಎಸೆದು ಲದ್ದಿ ಹೆಕ್ಕಿದವನ ಒಂಟಿ ಪಯಣ
ಅದೇ ಕಾಲೇಜು ಅದೇ ಊರು
ನನಂತೂ ನನ್ನೂರಲ್ಲೇ
ತೆಗಳಿ ಉಗುಳಿದ ತಿರುಕ
ಅದೇ ಶಾಲು ಅದೇ ಕಹಿ
ಮಗದೊಮ್ಮೆ ಸುಡುವ ಬೆಂಕಿ ಹೊಸ ಬಲಿ
ಬೂದಿಯಾದ ಮರುಕ.