ಭಾರತಿ ದೇವಿ
ಹಲವಾರು ದಿನಗಳಿಂದ ಫೇಸ್ ಬುಕ್ ಅನ್ನು ಆಗೊಮ್ಮೆ ಈಗೊಮ್ಮೆ ನೋಡುವುದು ಬಿಟ್ಟರೆ, ನಾನು ಬಹುತೇಕ ನಿಷ್ಕ್ರಿಯವಾಗಿದ್ದೆ. ಆದರೆ ತಡೆಯಲಾಗುತ್ತಿಲ್ಲ. ನಮ್ಮ ಮಕ್ಕಳು ಹೀಗೆ ನಡೆದುಕೊಳ್ಳುತ್ತಿರುವುದನ್ನು ಕಂಡಾಗ ವಿಚಿತ್ರ ಸಂಕಟವಾಗುತ್ತಿದೆ. ನಾವು ಶಿಕ್ಷಕರಾಗಿ ಇದುವರೆಗೆ ಏನು ಮಾಡಿದೆವು? ಎಂದು ಪ್ರಶ್ನಿಸಿಕೊಳ್ಳುವಂತಾಗಿದೆ; ಅಸಹಾಯಕತೆ ಕಾಡುತ್ತಿದೆ. ಒಬ್ಬೊಬ್ಬ ವಿದ್ಯಾರ್ಥಿಯ ಫೇಸ್ ಬುಕ್ ಪೇಜ್, ಡಿ.ಪಿ, ಸ್ಟೇಟಸ್ ನೋಡುವಾಗ, ಅವರೊಳಗಿನ ಆಕ್ರೋಶ ನೋಡುವಾಗ ನೋವಾಗುತ್ತದೆ. ಜೊತೆಗಿರುವ ಜೀವಿಯ ನಂಬಿಕೆ, ವಿಶಿಷ್ಟತೆ, ಆಚರಣೆಗಳ ಬಗ್ಗೆ ತೋರುತ್ತಿರುವ ಅಸಹನೆ, ಅದು ದ್ವೇಷವಾಗಿ ಮಾರ್ಪಡುತ್ತಿರುವ ಬಗೆ ಗಾಬರಿ ಹುಟ್ಟಿಸುತ್ತಿದೆ.
ಪದವಿ ತರಗತಿಗಳಿಗೆ ಅತಿಥಿ ಉಪನ್ಯಾಸಕರ ಒಂದು ತಿಂಗಳಿಗೂ ದೀರ್ಘಾವಧಿಯ ಮುಷ್ಕರದಿಂದಾಗಿ ಪಾಠಗಳು ಮುಗಿದಿಲ್ಲ. ಪದವಿಪೂರ್ವ ವಿದ್ಯಾರ್ಥಿಗಳ ಪರೀಕ್ಷೆ ಸಮೀಪಿಸುತ್ತಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಆದ ಮಾರ್ಪಾಡುಗಳಿಗೆ ಇನ್ನೂ ಅವರು ಒಗ್ಗಿಕೊಳ್ಳಲಾಗುತ್ತಿಲ್ಲ. ಕೋವಿಡ್ ಕಾರಣದಿಂದ ಮಧ್ಯದಲ್ಲೇ ಓದು ನಿಲ್ಲಿಸಿದ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗಿದೆ. ಓದಿದ ಬಳಿಕವೂ ಉದ್ಯೋಗಕ್ಕಾಗಿ ಪರದಾಟ ಮುಂದುವರೆದಿದೆ. ಈ ಸಂದರ್ಭದಲ್ಲಿ ಅವರ ಬದುಕು ರೂಪಿಸುವ ಸಂಗತಿಯಿಂದ ವಿಮುಖರಾಗಿ, ಯಾರದೋ ಕೈ ದಾಳಗಳಾಗಿ ಬೀದಿಯಲ್ಲಿ ನಿಂತಿದ್ದಾರೆ.
ಶಿಕ್ಷಕರು ತೊಡುವ, ವಿದ್ಯಾರ್ಥಿಗಳು ತೊಡುವ ಬಟ್ಟೆಗೆ ಸಂಬಂಧಿಸಿ, ಹೇರಿಕೆ ನಡೆದಾಗ ನಾವೆಲ್ಲರೂ ದನಿಯೆತ್ತಿದ್ದೆವು. ಭಾರತದಂತಹ ಪ್ರಜಾಸತ್ತಾತ್ಮಕ ದೇಶದಲ್ಲಿ ಖಾಸಗಿತನ, ವೈಯಕ್ತಿಕ ನಂಬಿಕೆ, ಅಭಿವ್ಯಕ್ತಿ ಸ್ವಾತಂತ್ರ್ಯ, ಸಾಂಸ್ಕೃತಿಕ ವೈಶಿಷ್ಟ್ಯ ಎಲ್ಲವನ್ನೂ ಗಮನದಲ್ಲಿ ಇರಿಸಿಕೊಂಡು ವ್ಯಕ್ತಿ ಸ್ವಾತಂತ್ರ್ಯವನ್ನು ಖಾತರಿಗೊಳಿಸಬೇಕಾಗುತ್ತದೆ ಎಂಬುದನ್ನು ಪುನರುಚ್ಚರಿಸುತ್ತಾ ಬಂದಿದ್ದೆವು. ಈ ಸಂದರ್ಭದಲ್ಲಿ ಇದನ್ನು ಮತ್ತೆ ಅದನ್ನು ದನಿಯೆತ್ತಿ ಹೇಳಬೇಕಾಗಿದೆ. ಇಲ್ಲಿ ಕಾಣುತ್ತಿರುವುದು ಸಮಾನತೆಯ ಬಗ್ಗೆ ನಿಜವಾದ ಕಾಳಜಿಯಲ್ಲ. ಬದಲಾಗಿ, ಇನ್ನೊಂದು ಸಮುದಾಯವನ್ನು ಕಟಕಟೆಯಲ್ಲಿ ನಿಲ್ಲಿಸುವ, ಅವರನ್ನು ದೂರೀಕರಿಸುವ, ಅವಕಾಶ ವಂಚಿತರನ್ನಾಗಿ ಮಾಡುವ ಪ್ರವೃತ್ತಿ. ಸಮಾನತೆಯ ಹೆಸರಿನಲ್ಲಿ ವಸ್ತ್ರಸಂಹಿತೆಯ ಹೇರಿಕೆ.
ಪಿತೃಪ್ರಾಧಾನ್ಯ ವ್ಯವಸ್ಥೆಯ ಕಬಂಧ ಬಾಹು ಯಾವ ಧರ್ಮ, ಸಮುದಾಯ, ದೇಶವನ್ನೂ ಬಿಟ್ಟಿಲ್ಲ. ತಾಳಿ, ಕಾಲುಂಗುರ, ಅರಶಿನ-ಕುಂಕುಮ, ಹಿಜಾಬ್, ಬುರ್ಖಾ ಹೀಗೆ ವಿವಿಧ ಸಂಕೇತಗಳು ನಮ್ಮ ನಡುವೆ ಇವೆ. ನಮ್ಮ ನಡುವೆ ಇರುವ ಎಷ್ಟೋ ಆಚರಣೆಗಳಲ್ಲಿ, ಸಂಕೇತಗಳಲ್ಲಿ ಪಿತೃಪ್ರಾಧಾನ್ಯ ಸೂಕ್ಷ್ಮವಾಗಿ ಹೆಣೆದುಕೊಂಡಿದೆ. ಇದು ನಿರಂತರ ಎಚ್ಚರದಿಂದ ನೀಗಿಕೊಳ್ಳಬೇಕಾದ ಸಂಗತಿ. ಇವುಗಳಲ್ಲಿ ಕೆಲವು ಸ್ವ ಇಚ್ಛೆಯಿಂದ ಧರಿಸಿದರೆ ಅಲಂಕಾರದ ಸಾಧನಗಳೂ ಹೌದು, ಹೇರಿಕೆಯಾದರೆ ಶೋಷಣೆಯೂ ಹೌದು. ಇವೆರಡರ ನಡುವಣ ಗೆರೆ ತುಂಬಾ ತೆಳು.
ಇಂದು ಎಲ್ಲರ ಮನೆಯಲ್ಲೂ ಬೇಕಷ್ಟು ಪಿತೃಪ್ರಾಧಾನ್ಯದ ಸೋಂಕು ಇದೆ. ಕುಡಿದು ಬಂದು ಥಳಿಸುವ ತಂದೆಯಿರಬಹುದು, ಓದು ಮಧ್ಯಕ್ಕೇ ಮೊಟಕುಗೊಂಡ ಅಕ್ಕ ಇರಬಹುದು, ವಿದ್ಯಾವಂತಳಾಗಿದ್ದೂ ಕೆಲಸಕ್ಕೆ ಹೋಗಲು ಅವಕಾಶ ದೊರೆಯದ ಅತ್ತಿಗೆ ಇರಬಹುದು. ವಿಧವೆಯಾಗಿ ಅವಮಾನ, ನೋವು ಅನುಭವಿಸುತ್ತಿರುವ ಸಂಬಂಧಿಗಳಿರಬಹುದು. ಬಹುತೇಕ ಕುಟುಂಬ, ಸಮುದಾಯಗಳಲ್ಲಿರುವ ಈ ಸಮಸ್ಯೆಗಳನ್ನು ಒಟ್ಟಾಗಿ ಸಾವಧಾನವಾಗಿ ನಿವಾರಿಸಿಕೊಳ್ಳಬೇಕು.
ಇದರಿಂದ ಹೊರಬರಲು ವಿದ್ಯೆಯೇ ದಾರಿ. ವಿದ್ಯಾವಂತರಾಗಿ, ಸ್ವಾವಲಂಬಿಗಳಾದ ಹೆಣ್ಣುಮಕ್ಕಳು ಖಂಡಿತಾ ಇದರಿಂದ ಹೊರಬರುತ್ತಾರೆ. ಅವರಿಗೆ ಈಗ ಬೇಕಾಗಿರುವುದು ಅವರದೇ ಆದ ಸ್ಪೇಸ್. ಅವರು ದಿಟ್ಟವಾಗಿ ನಿಂತಾಗ ಜೊತೆಗಿರುವವರ ಬೆಂಬಲ ಅಷ್ಟೆ. ಅದಕ್ಕೆ ಬದಲಾಗಿ ಯಾವುದೇ ಘೋಷಣೆ, ಪೊಳ್ಳು ಮಾತು ಈಗ ಅವರು ಈ ದಿಸೆಯಲ್ಲಿ ಇಟ್ಟ ಒಂದು ಹೆಜ್ಜೆಯನ್ನೂ ಹಿಂದೆಗೆದು ಹತ್ತು ಹೆಜ್ಜೆ ಹಿಂದಕ್ಕೆ ಹೋಗುವಂತೆ ಮಾಡುತ್ತದೆ.
ಇದು ಬಹುತ್ವ ವಿರೋಧಿ, ಬಹುಸಂಖ್ಯಾತವಾದದ ವಿಜೃಂಭಣೆಯಲ್ಲದೆ ಬೇರೇನೂ ಅಲ್ಲ.