ಹಾಸನ: ನಗರದ ಐತಿಹಾಸಿಕ ಹಿನ್ನೆಲೆಯ ‘ಮಹಾರಾಜ ಪಾರ್ಕ್’ ಅನ್ನು ಪಾರ್ಕ್ ಆಗಿಯೇ ಉಳಿಯಬೇಕು ಎಂದು ‘ಮಹಾರಾಜ ಪಾರ್ಕ್ ಉಳಿಸಿ ಹೋರಾಟ ಸಮಿತಿ’ ಕರೆ ನೀಡಿದ್ದು, ಪಾರ್ಕ್ನಲ್ಲಿ ಯಾವುದೇ ರೀತಿಯ ಕಟ್ಟಡದ ಕಾಮಗಾರಿಗಳನ್ನು ನಡೆಸಕೂಡದು ಎಂದು ತಿಳಿಸಿದೆ. ಅಲ್ಲದೆ, ಅದನ್ನು ಕಾನೂನಾತ್ಮವಾಗಿ ಮತ್ತು ಪ್ರಜಾಸತ್ತಾತ್ಮಕವಾದ ಹೋರಾಟಗಳ ಮುಖಾಂತರ ತಡೆಯಲು ಸಮಿತಿಯು ಮುಂದಾಗಿದೆ.
ನಗರದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಸಮಿತಿಯ ಗೌರವಾಧ್ಯಕ್ಷ ಕೆ.ಟಿ. ಶಿವಪ್ರಸಾದ್ ಮಾತನಾಡಿ, ಹಾಸನದ ಮಹಾರಾಜ ಪಾರ್ಕ್ ಮೈಸೂರು ಮಹಾರಾಜರ ಕಾಲದಿಂದ ಇರುವ ಏಕೈಕ ದೊಡ್ಡ ಉದ್ಯಾನವನವಾಗಿದೆ. ನಗರದ ಮಧ್ಯಭಾಗದಲ್ಲಿ ಇರುವ ಇದು ನಿತ್ಯ ಹಸುರಿನ ಸಸ್ಯ ವೈವಿಧ್ಯತೆ ಹೊಂದಿರುವ ಅತ್ಯಂತ ಹಳೆಯ ಉದ್ಯಾನವನ. ಜನರು ದಣಿವಾರಿಸಿಕೊಳ್ಳುವ, ವಿಶ್ರಾಂತಿ ಪಡೆಯುವ, ಮಕ್ಕಳ ಆಟಗಳಿಗೆ ಮತ್ತು ದೊಡ್ಡವರ ವಾಯು ವಿಹಾರ, ನಡಿಗೆ ವ್ಯಾಯಾಮಗಳಿಗೆ ನೆಚ್ಚಿನ ಅತ್ಯಂತ ಸ್ಥಳವಾಗಿದೆ. ಮಹಾರಾಜ ಉದ್ಯಾನವನ ಜಿಲ್ಲೆಯಲ್ಲಿ ಐತಿಹಾಸಿಕ ಮಹತ್ವ ಪಡೆದಿದೆ. ಇಂತಹ ಹಲವು ಮಹತ್ವಗಳನ್ನು ಹೊಂದಿರುವ ಉದ್ಯಾನವನವನ್ನು ಹಸಿರೀಕಣ ಮಾಡಿ ಹಾಸನ ನಗರಸಭೆಯು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ಎಂದರು.
ಆದರೆ, ‘ಅಭಿವೃಧ್ದಿ’ ಮಾಡುವ ಹೆಸರಿನಲ್ಲಿ ಮಹಾರಾಜ ಪಾರ್ಕ್ನಲ್ಲಿ ಹಲವು ಕಟ್ಟಡಗಳ ಕಾಮಗಾರಿಗಳು ನಡೆಯುತ್ತಿವೆ. ಆಳವಾದ ಗುಂಡಿಗಳನ್ನು ತೆಗೆದು ದೊಡ್ಡ ದೊಡ್ಡ ತಳಪಾಯಗಳನ್ನು ಹಾಕಿ ಕಾಂಕ್ರೀಟ್ ಪಿಲ್ಲರ್ಗಳನ್ನು ನಿಲ್ಲಿಸಲಾಗಿದೆ. ಸಾರ್ವಜನಿಕ ಉದ್ಯಾನವನಗಳಲ್ಲಿ ಈ ರೀತಿಯ ಯಾವುದೇ ಕಾಮಗಾರಿಗಳನ್ನು ಮಾಡುವುದು ‘1975ರ ಕರ್ನಾಟಕ ಸರ್ಕಾರಿ ಉದ್ಯಾನವನಗಳ (ಸಂರಕ್ಷಣೆ) ಕಾಯ್ದೆ’ಯ ಸ್ಪಷ್ಟ ಉಲ್ಲಂಘನೆಯಾಗಿದೆ. ಮಹಾರಾಜ ಪಾರ್ಕ್ನಲ್ಲಿ ಈಗ ನಡೆಸುತ್ತಿರುವ ‘ಅಭಿವೃದ್ಧಿ’ ಹೆಸರಿನ ಕಾಮಗಾರಿಗಳಿಗೆ ಸರ್ಕಾರದ ಮತ್ತು ಇಲಾಖೆಗಳ ಯಾವುದೇ ರೀತಿಯ ಸ್ಪಷ್ಟವಾದ ಆದೇಶ, ಕ್ರಿಯಾ ಯೋಜನೆ ಮತ್ತು ಕಾರ್ಯಾದೇಶಗಳನ್ನು ಇದುವರೆಗೂ ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ. ಈ ಕಾಮಗಾರಿಗಳ ಸಂಬಂಧ ಸರ್ಕಾರದ ಯಾವುದೇ ಅಧಿಕಾರಿಗಳು ಸರಿಯಾದ ಸ್ಪಷ್ಟನೆ ನೀಡುತ್ತಿಲ್ಲ. ಈ ಕಾಮಗಾರಿಗಳು ಸಂಪೂರ್ಣವಾಗಿ ಹಾಸನದ ವಿಧಾನಸಭಾ ಕ್ಷೇತ್ರದ ಶಾಸಕರ ಆದೇಶದಂತೆ ನಡೆಯುತ್ತದೆ ಎಂದು ಆರೋಪಿಸಿದರು.
ಸಮಿತಿಯ ಕಾರ್ಯಾಧ್ಯಕ್ಷ ಧರ್ಮೇಶ್ ಮಾತನಾಡಿ, ‘ಅಭಿವೃದ್ಧಿ’ ಎಂಬ ಕಟ್ಟುಕತೆಗಳಿಗೆ ಮರುಳಾಗಿ ಹಾಸನದ ನಾಗರಿಕರು ಈಗಾಗಲೇ ಚನ್ನಪಟ್ಟಣ ಕೆರೆ, ಹೈಸ್ಕೂಲ್ ದೊಡ್ಡ ಮೈದಾನ ಮತ್ತು ಐತಿಹಾಸಿಕ ಗಂಧದಕೋಠಿಯನ್ನು ಕಳೆದುಕೊಂಡಾಗಿದೆ. ಆ ಸಂದರ್ಭದಲ್ಲಿ ಉಂಟಾದ ಸಾರ್ವಜನಿಕ ಪ್ರತಿರೋಧ ಮತ್ತು ಸಂಘಟನೆಗಳ ಹೋರಾಟಗಳನ್ನೂ ಲೆಕ್ಕಿಸದೆ ಅಂದಿನ ಸರ್ಕಾರ ಮತ್ತು ಜನ ಪ್ರತಿನಿಧಿಗಳು ‘ಅಭಿವೃದ್ಧಿ’ಯ ಹೆಸರಿನಲ್ಲಿ ನಗರದಲ್ಲಿನ ಕೆರೆ, ಮೈದಾನ ಮತ್ತು ಉದ್ಯಾನವನಗಳಲ್ಲಿ ನಡೆಸಿದ ಕಾಮಗಾರಿಗಳ ಪರಿಣಾಮ ನಗರದ ಜನರು ಈಗಲೂ ಅನುಭವಿಸುತ್ತಿದ್ದಾರೆ. ಈಗ ನಗರದ ದೊಡ್ಡ ಉದ್ಯಾನವನವನ್ನೇ ಈಗಿನ ಶಾಸಕರು ನಾಶಪಡಿಸಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಜಾಗತಿಕ ತಾಪಮಾನದ ಏರಿಕೆಯಿಂದಾಗಿ ಹವಾಮಾನ ವೈಪರೀತ್ಯಗಳ ಹಿನ್ನೆಲೆಯಲ್ಲಿ ಜೀವ ಮತ್ತು ಸಸ್ಯ ವೈವಿಧ್ಯತೆ ಮತ್ತು ಹಸಿರೀಕರಣ ಎಷ್ಟು ಪ್ರಮುಖವಾದುದು ಎನ್ನುವ ಸಂದರ್ಭದಲ್ಲಿ ಇರುವ ಉದ್ಯಾನವನದಲ್ಲಿ ಕಟ್ಟಡ ಕಾಮಗಾರಿಗಳನ್ನು ನಡೆಸುವುದು ನಗರದ ಶ್ವಾಶಕೋಶವನ್ನೇ ನಾಶಪಡಿಸಿದಂತಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಸಮಿತಿ ಅಧ್ಯಕ್ಷ ಬಿ.ಕೆ.ಮಂಜುನಾಥ್ ಮಾತನಾಡಿ, ಸಾರ್ವಜನಿಕ ಅಭಿಪ್ರಾಯದ ಮೇರೆಗೆ ಹಾಸನದ ವಿವಿಧ ಜನಪರ ಸಂಘಟನೆಗಳು ಮತ್ತು ಪರಿಸರ ಪ್ರಿಯರನ್ನು ಒಳಗೊಂಡಿರುವ ‘ಮಹಾರಾಜ ಪಾರ್ಕ್ ಉಳಿಸಿ ಹೋರಾಟ ಸಮಿತಿ’ ಅಸ್ತಿತ್ವಕ್ಕೆ ಬಂದಿದೆ.
ಸಮಿತಿಯು ಈ ಸಂಬಂಧ ಈಗಾಗಲೇ ಹಾಸನ ಕ್ಷೇತ್ರದ ಶಾಸಕರನ್ನು ಬೇಟಿಯಾಗಿ ಮಹಾರಾಜ ಪಾರ್ಕ್ನಲ್ಲಿ ನಡೆಸುತ್ತಿರುವ ಕಾಮಗಾರಿಗಳನ್ನು ತಕ್ಷಣವೇ ನಿಲ್ಲಿಸುವಂತೆ ಮನವಿ ಮಾಡಿಕೊಂಡಿದೆ. ಉದ್ದೇಶಿತ ಕಾಮಗಾರಿಗಳಿಂದಾಗುವ ಅನಾಹುತಗಳನ್ನು ಮತ್ತು ಈಗಾಗಲೇ ಆಗಿರುವ ಕಾನೂನಿನ ಉಲ್ಲಂಘನೆಯನ್ನು ಶಾಸಕರಿಗೆ ತಿಳಿಸಲಾಗಿದೆ. ಹಾಸನ ಜಿಲ್ಲಾಧಿಕಾರಿಯವರಿಗೂ ಮನವಿ ಸಲ್ಲಿಸಿದ್ದೇವೆ. ಹಾಗಾಗಿ ಕೂಡಲೇ ಮಧ್ಯಪ್ರವೇಶಿಸಿ ಕಾಮಗಾರಿ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಶಾಸಕರು ಸಮಿತಿಯ ಅಭಿಪ್ರಾಯಗಳನ್ನು ಪರಿಗಣಿಸುತ್ತಿಲ್ಲ. ಹಾಸನ ನಗರದ ‘ಅಭಿವೃದ್ಧಿ’ಯ ಹೆಸರಿನಲ್ಲಿ ಹಿಂದಿನವರು ನಡೆದುಕೊಂಡದ್ದಕ್ಕಿಂತಲೂ ತೀವ್ರವಾಗಿ ನಡೆದುಕೊಳ್ಳುತ್ತಿದ್ದಾರೆ. ಮಹಾರಾಜ ಪಾರ್ಕ್ನಲ್ಲಿ ಯಾವುದೇ ಕಟ್ಟಡ ಕಾಮಗಾರಿಗಳನ್ನು ನಡೆಸುತ್ತಿಲ್ಲ. ಅಲ್ಲಿ ಜನರು ಕೂರಲು ‘ಗಜೀಬೊ’ (ಮೊಗಸಾಲೆ) ಮತ್ತು ಆಟದ ಅಂಕಣಗಳನ್ನು ಮಾತ್ರ ಮಾಡಲಾಗುತ್ತಿದೆ ಎಂದು ಸಾರ್ವಜನಿಕರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ‘ಮಹಾರಾಜ ಪಾರ್ಕ್ ಉಳಿಸಿ’ ಎನ್ನುತ್ತಿರುವವರನ್ನು ಅಭಿವೃದ್ಧಿ ವಿರೋಧಿಗಳು ಎಂದು ಹಣೆಪಟ್ಟಿ ಕಟ್ಟುತ್ತಿದ್ದಾರೆ. ಹೋರಾಟದ ವಿರುದ್ಧವಾಗಿ ಪ್ರತಿ ಹೋರಾಟ ನಡೆಸುವಂತೆ ನೋಡಿಕೊಳ್ಳುತ್ತಿದ್ದಾರೆ.
ಆದರೆ ಸಮಿತಿಯು ಈಗ ಮಾಡುತ್ತಿರುವ ‘ಅಭಿವೃದ್ಧಿ’ ಹೆಸರಿನ ಕಾಂಕ್ರೀಟೀಕರಣಕ್ಕೆ ಖಂಡಿತವಾಗಿಯೂ ನಮ್ಮ ವಿರೋಧವಿದೆ. ಸಾರ್ವಜನಿಕ ಉದ್ಯಾನವನಗಳಲ್ಲಿ ಹಸಿರೀಕರಣ ಹೆಚ್ಚಿಸಿ ಸಸ್ಯ ವೈವಿಧ್ಯತೆಗೆ ಹೆಚ್ಚಿನ ಅವಕಾಶ ನೀಡಿ ಉದ್ಯಾನವನಗಳ ಸೌಂದರ್ಯವನ್ನು ಹೆಚ್ಚಿಸಿ ಜನರು ವಿರಮಿಸಲು ಮತ್ತು ವಿಹಾರ ನಡೆಸಲು ಬೇಕಾದ ಅನುಕೂಲಗಳನ್ನು ಒದಗಿಸುವುದನ್ನು ಮಾತ್ರ ಅಭಿವೃದ್ಧಿ ಎನ್ನಲಾಗುತ್ತದೆ.
ಮಹಾರಾಜ ಪಾರ್ಕ್ನಲ್ಲಿ ಇರುವ ಮರಗಳನ್ನು ಕಡಿದು ಮಾಡುತ್ತಿರುವ ಹತ್ತಾರು ‘ಗಜೀಬೊ’ಗಳು ವಾಲಿಬಾಲ್, ಶೆಟಲ್, ಟೆನಿಸ್ ಕೋರ್ಟ್ಗಳು ಮತ್ತು ಜಿಮ್ಗಳ ಹೆಸರಿನಲ್ಲಿ ನಡೆಸುತ್ತಿರುವ ಕಟ್ಟಡ ಕಾಮಗಾರಿಗಳನ್ನು ಅಭಿವೃದ್ಧಿ ಎನ್ನಲಾಗುವುದಿಲ್ಲ ಮತ್ತು ಖಂಡಿತವಾಗಿಯೂ ಈ ಮಾದರಿಯ ‘ಅಭಿವೃದ್ಧಿ’ಗೆ ನಮ್ಮ ವಿರೋಧವಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಮುಖಂಡರಾದ ಸಿ.ಸುವರ್ಣ ಶಿವಪ್ರಸಾದ್, ವೆಂಕಟೇಶ, ಎಂ.ಜಿ ಪೃಥ್ವಿ