ಬೆಂಗಳೂರು: ರಾಜ್ಯದಲ್ಲಿ ಹಿಜಾಬ್- ಕೇಸರಿ ಶಾಲು ವಿವಾದ ತಾರಕ್ಕೇರಿದೆ. ಈ ಹಿನ್ನೆಲೆ ಕರ್ನಾಟಕ ಸರ್ಕಾರ ಮೂರು ದಿನಗಳ ಕಾಲ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಿದೆ. ರಾಜ್ಯದ ಪ್ರೌಢ ಶಾಲೆ, ಕಾಲೇಜುಗಳಿಗೆ ಮೂರು ದಿನ ರಜೆ ಘೋಷಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಂತಿ–ಸೌಹಾರ್ದತೆ ಕಾಪಾಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.
ಬುಧವಾರದಿಂದ ಮೂರು ದಿನ ರಜೆ
ಟ್ವಿಟರ್ನಲ್ಲಿ ಈ ಬಗ್ಗೆ ಪೋಸ್ಟ್ ಪ್ರಕಟಿಸಿರುವ ಅವರು, ‘ಶಾಂತಿ ಮತ್ತು ಸೌಹಾರ್ದತೆ ಕಾಪಾಡುವಂತೆ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಾಲಾ-ಕಾಲೇಜುಗಳ ಆಡಳಿತ ಮಂಡಳಿ ಹಾಗೂ ಕರ್ನಾಟಕದ ಜನತೆಗೆ ಮನವಿ ಮಾಡುತ್ತೇನೆ. ಮುಂದಿನ ಮೂರು ದಿನಗಳ ಕಾಲ ಎಲ್ಲಾ ಪ್ರೌಢಶಾಲೆಗಳು ಮತ್ತು ಕಾಲೇಜುಗಳನ್ನು ಮುಚ್ಚಲು ನಾನು ಆದೇಶಿಸಿದ್ದೇನೆ. ಎಲ್ಲರೂ ಸಹಕರಿಸಬೇಕಾಗಿ ವಿನಂತಿ,’ ಎಂದು ಅವರು ಬರೆದುಕೊಂಡಿದ್ದಾರೆ.
ಇದಕ್ಕೂ ಮೊದಲು ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ‘ನಾವು ಕರ್ನಾಟಕ ಹೈಕೋರ್ಟ್ನ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವಂತೆ ವಿದ್ಯಾರ್ಥಿಗಳಲ್ಲಿ ಮನವಿ ಮಾಡುತ್ತೇನೆ. ವಿದ್ಯಾರ್ಥಿಗಳಲ್ಲಿ ಯಾವುದೇ ಘರ್ಷಣೆಗಳು ನಡೆಯದಂತೆ ನೋಡಿಕೊಳ್ಳಲು ಶಾಲಾ ಆಡಳಿತಕ್ಕೆ ನಿರ್ದೇಶನ ನೀಡಿದ್ದೇನೆ. ಪ್ರಚೋದನಕಾರಿ ಹೇಳಿಕೆಗಳನ್ನು ನೀಡದಂತೆ ಎಲ್ಲ ವ್ಯಕ್ತಿಗಳಿಗೆ ಮನವಿ ಮಾಡುತ್ತೇನೆ’ ಎಂದಿದ್ದರು.
ಸಚಿವ ಅಶ್ವತ್ಥ್ ನಾರಾಯಣ ಮಾತನಾಡಿ, ಹಿಜಾಬ್ ವಿಚಾರದಲ್ಲಿ ಸರ್ಕಾರ ಈಗಾಗಲೇ ತನ್ನ ನಿರ್ಧಾರ ಹೇಳಿದೆ. ಆದರೂ ಕೆಲ ಕಡೆ ಸ್ಥಿತಿ ಗಂಭೀರವಾಗಿದೆ. ಇದರ ಬಗ್ಗೆ ಹೈಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ಮುಂದಿನ ಮೂರು ದಿನಗಳ ಕಾಲ ರಾಜ್ಯಾದ್ಯಂತ ಎಲ್ಲಾ ಹೈಸ್ಕೂಲ್, ಪಿಯು ಕಾಲೇಜು, ಪದವಿ ಕಾಲೇಜು ಮತ್ತು ಇಂಜಿನಿಯರಿಂಗ್ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು.
1 ರಿಂದ 7ನೇ ತರಗತಿವರೆಗೆ ಶಾಲೆ ಇರಲಿದೆ
ನಾಳೆಯಿಂದ 3 ದಿನ ಪ್ರೌಢಶಾಲೆ-ಕಾಲೇಜುಗಳಿಗೆ ಮಾತ್ರ ರಜೆ ಘೋಷಣೆ ಮಾಡಲಾಗಿದೆ. ಆದರೆ 1 ರಿಂದ 7ನೇ ತರಗತಿವರೆಗೆ ಶಾಲೆ ಎಂದಿನಂತೆ ತರಗತಿ ನಡೆಯಲಿವೆ.
ನಾಳೆ ಸಚಿವ ಸಂಪುಟ ಸಭೆ
ನಾಳೆ ಬೆಳಿಗ್ಗೆ ಸಚಿವ ಸಂಪುಟ ಸಭೆ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ವಿವಿಧ ಜಿಲ್ಲೆಗಳ ಪರಿಸ್ಥಿತಿ ಕುರಿತು ಸಚಿವರೊಂದಿಗೆ ಚರ್ಚೆ ನಡೆಸುವ ಸಾಧ್ಯತೆಯಿದೆ. ಈಗಾಗಲೇ ಜಿಲ್ಲೆಗಳ ಪರಿಸ್ಥಿತಿ ಬಗ್ಗೆ ಉಸ್ತುವಾರಿ ಸಚಿವರಿಂದ ಮುಖ್ಯಮಂತ್ರಿ ಮಾಹಿತಿ ಸಂಗ್ರಹಿಸಿದ್ದಾರೆ.