ಬೆಂಗಳೂರು: ‘ದೇವದಾಸಿಯರು ಹಾಗೂ ಅವರ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಕಾನೂನಿನ ಅರಿವಿನ ಕೊರತೆಯಿಂದಾಗಿ ಈಗಲೂ ಈ ಅನಿಷ್ಟ ಪದ್ಧತಿ ನಡೆಯುತ್ತಲೇ ಇವೆ. ಅವರಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಒದಗಿಸುವ ಮೂಲಕ ಈ ಪಿಡುಗಿನಿಂದ ಅವರನ್ನು ವಿಮುಖರನ್ನಾಗಿ ಮಾಡಬೇಕಾದ ಅಗತ್ಯವಿದೆ. ಈ ದಿಸೆಯಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಒತ್ತಾಯಿಸಿದರು.
ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ರಾಜ್ಯ ಘಟಕ ಹಮ್ಮಿಕೊಂಡಿದ್ದ ‘ದೌರ್ಜನ್ಯದ ದೇವದಾಸಿ ಪದ್ಧತಿ ಮತ್ತು ಸರ್ಕಾರಗಳು’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
‘ದೇವದಾಸಿಯರ ಮಕ್ಕಳು ಶಾಲೆಗಳಿಂದ ಹೊರಗುಳಿಯದಂತೆ ಕ್ರಮಕೈಗೊಳ್ಳಬೇಕು. ವಸತಿ ಶಾಲೆಗಳಲ್ಲಿ ಉಚಿತ ಶಿಕ್ಷಣ ಒದಗಿಸಬೇಕು. ದೇವದಾಸಿಯರಲ್ಲಿ ಕಾನೂನಿನ ಅರಿವು ಮೂಡಿಸಬೇಕು. ಅವರಿಗೆ ಕೆಲಸ ನೀಡಿ ಅದಕ್ಕೆ ಅನುಗುಣವಾಗಿ ಕೂಲಿ ನಿಗದಿಪಡಿಸಬೇಕು. ಅವರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು. ಆ ಮೂಲಕ ಈ ಅನಿಷ್ಟ ಪದ್ಧತಿಯ ನಿರ್ಮೂಲನೆಗೆ ಸರ್ಕಾರ ಪ್ರಯತ್ನಿಸಬೇಕು’ ಎಂದು ಆಗ್ರಹಿಸಿದರು.
‘ದೇವದಾಸಿಯರು ಮೌಢ್ಯದಿಂದ ಹೊರಬರಬೇಕು. ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ವೈಜ್ಞಾನಿಕ ಚಿಂತನೆ ರೂಢಿಸಿಕೊಳ್ಳಬೇಕು. ಎಲ್ಲದಕ್ಕೂ ಸರ್ಕಾರದ ಮೇಲೆ ಅವಲಂಬನೆಯಾಗದೆ ಸ್ವವಿವೇಚನೆಯಿಂದ ನಿರ್ಧಾರಗಳನ್ನು ಕೈಗೊಳ್ಳಬೇಕು. ರಾಜ್ಯದಲ್ಲಿರುವ ದೇವದಾಸಿಯರು ಹಾಗೂ ಅವರ ಸ್ಥಿತಿಗತಿ ಬಗ್ಗೆ ಸರ್ಕಾರ ಕೂಡಲೇ ಅಧ್ಯಯನ ನಡೆಸಬೇಕು’ ಎಂದರು.
‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳದ ಕುರಿತು ನಾನು ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಅದರಲ್ಲಿ ದೇವದಾಸಿಯರ ಸಮಸ್ಯೆಗಳ ಕುರಿತು ಉಲ್ಲೇಖಿಸಿದ್ದೆ. ಅವರ ಶ್ರೇಯೋಭಿವೃದ್ಧಿಗೆ ಅಗತ್ಯವಿರುವ ಕಾರ್ಯಕ್ರಮಗಳನ್ನೂ ಸೂಚಿಸಿದ್ದೆ’ ಎಂದು ಹೇಳಿದರು.
ಮಾಸಿಕ ಪಿಂಚಣಿ ₹5 ಸಾವಿರಕ್ಕೆ ಹೆಚ್ಚಿಸಿ
‘ದೇವದಾಸಿಯರಿಗೆ ನೀಡಲಾಗುತ್ತಿರುವ ಸಹಾಯ ಧನ ಅಥವಾ ಮಾಸಿಕ ಪಿಂಚಣಿಯನ್ನು ₹5 ಸಾವಿರಕ್ಕೆ ಹೆಚ್ಚಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾರ್ಚ್ 3, 4 ಹಾಗೂ 5ರಂದು ರಾಜ್ಯದ 20 ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ’ ಎಂದು ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಗೌರವ ಅಧ್ಯಕ್ಷ ಯು.ಬಸವರಾಜ ತಿಳಿಸಿದರು.
‘ದೇವದಾಸಿಯರಿಗೆ 9 ತಿಂಗಳಿಂದ ಪಿಂಚಣಿ ನೀಡಿಲ್ಲ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೇವದಾಸಿಯರಿಗೆ ಕೊಟ್ಟಿರುವ ಹಲವು ಸೌಕರ್ಯಗಳನ್ನು ಹಿಂದಕ್ಕೆ ಪಡೆಯಲಾಗಿದೆ. ಮೊದಲು ₹1 ಲಕ್ಷ ಸಾಲ ನೀಡಲಾಗುತ್ತಿತ್ತು. ಅದನ್ನು ₹30 ಸಾವಿರಕ್ಕೆ ಇಳಿಸಲಾಗಿದೆ. ₹50 ಸಾವಿರ ಇದ್ದ ಸಬ್ಸಿಡಿ ಮೊತ್ತವನ್ನು ₹15 ಸಾವಿರಕ್ಕೆ ತಗ್ಗಿಸಲಾಗಿದೆ. ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ₹5 ಕೆ.ಜಿ. ಬದಲು ₹2 ಕೆ.ಜಿ.ಅಕ್ಕಿ ನೀಡಲಾಗುತ್ತಿದೆ’ ಎಂದು ದೂರಿದರು.