ಮುಂಬೈ : ಗಾನಕೋಗಿಲೆ ಲತಾ ಮಂಗೇಶ್ಕರ್ ಭಾನುವಾರ ಬೆಳಗ್ಗೆ ನಿಧನರಾಗಿದ್ದಾರೆ. ಕೋವಿಡ್ ಪಾಸಿಟಿವ್ ಬಂದು ಮುಂಬೈಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದ ಲತಾ ಮಂಗೇಶ್ಕರ್ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ನಿಧನ ಹೊಂದಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಅವರ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಕೋವಿಡ್ ಸೋಂಕಿನ ಸೌಮ್ಯ ಲಕ್ಷಣ ಕಂಡುಬಂದು ಕಳೆದ ಜನವರಿ 8ರಂದು ಮುಂಬೈಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿ ತೀವ್ರ ನಿಗಾ ಘಟಕದಲ್ಲಿದ್ದರು. ಕೆಲ ದಿನಗಳ ನಂತರ ಲತಾ ಮಂಗೇಶ್ಕರ್ ಅವರ ಆರೋಗ್ಯ ಸ್ಥಿತಿ ಸುಧಾರಣೆಯಾಗಿದ್ದರಿಂದ ವೆಂಟಿಲೇಟರ್ ನೆರವನ್ನು ತೆಗೆಯಲಾಗಿತ್ತು. ಆದರೆ ಇಂದು ಮತ್ತೆ ಹದಗೆಟ್ಟು ವೆಂಟಿಲೇಟರ್ ನೆರವು ಒದಗಿಸಲಾಗಿತ್ತು.
1929ರ ಸೆಪ್ಟೆಂಬರ್ 28ರಂದು ಜನಿಸಿ ಲತಾ ಅವರ ಮೊದಲ ಹೆಸರು ಹೇಮಾ ಮಂಗೇಷ್ಕರ್, 1942ರಲ್ಲಿ 13 ನೇ ವಯಸ್ಸಿನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಭಾರತೀಯ ಚಿತ್ರರಂಗದ ಶ್ರೇಷ್ಠ ಗಾಯಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಮಂಗೇಶ್ಕರ್ ಅವರು ಹಲವಾರು ಭಾರತೀಯ ಭಾಷೆಗಳಲ್ಲಿ 30,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಭಾರತದ ನೈಟಿಂಗೇಲ್(ಗಾನ ಕೋಗಿಲೆ) ಎಂದು ಕರೆಯಲ್ಪಡುವ ಲತಾ ಮಂಗೇಶ್ಕರ್ ಅವರ ಸಾಧನೆಗೆ ಮನ್ನಣೆ ನೀಡಿ ಭಾರತ ಸರ್ಕಾರವು 2001ರಲ್ಲಿ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ವನ್ನು ಪ್ರದಾನ ಮಾಡಿ ಗೌರವಿಸಿತ್ತು. ಚಿತ್ರರಂಗದಲ್ಲಿನ ಸೇವೆಗೆ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿಯನ್ನು 1989ರಲ್ಲಿ ಲತಾ ಅವರು ಪಡೆದಿದ್ದರು. ಇದಲ್ಲದೆ, ಪದ್ಮಭೂಷಣ, ಪದ್ಮವಿಭೂಷಣ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಮೂರು ರಾಷ್ಟ್ರ ಪ್ರಶಸ್ತಿ, ದಾದಾ ಸಾಹೇಬ್ ಪ್ರಶಸ್ತಿ, ಪದ್ಮ ಭೂಷಣ, ಪದ್ಮ ವಿಭೂಷಣ, ಭಾರತ ರತ್ನ ಪ್ರಶಸ್ತಿಗಳು ಲತಾ ಮಂಗೇಶ್ಕರ್ ಮುಡಿಗೇರಿದೆ.
ಅವರು ಹಾಡಿದ ‘ಲಗ್ ಜಾ ಗಲೇ’, ‘ಯೇ ಗಲಿಯಾನ್ ಯೇ ಚೌಬಾರಾ’, ‘ಪ್ಯಾರ್ ಕಿಯಾ ತೊ ಡರ್ನಾ ಕ್ಯಾ’, ‘ಬಹೋನ್ ಮೇ ಚಲೇ ಆವೋ’, ‘ವೀರ್ ಜರಾ’ದ ‘ತೇರೆ ಲಿಯೇ’ ಮತ್ತು ಇನ್ನೂ ಅನೇಕ ಹಾಡುಗಳು ಜನಪ್ರಿಯವಾಗಿವೆ.