ಬೆಂಗಳೂರು: ಕೇಂದ್ರ ಸರಕಾರ ಮಂಡಿಸಿರುವ 2022-23ನೇ ಸಾಲಿನ ಬಜೆಟ್ ಜನವಿರೋಧಿ ಮತ್ತು ಕಾರ್ಪೊರೇಟ್ ಸಂಸ್ಥೆಗಳ ಪರವಾದ ಬಜೆಟ್ ಆಗಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ ಸಿಪಿಐಎಂ ವತಿಯಿಂದ ರಾಜ್ಯವ್ಯಾಪಿ ಪ್ರತಿಭಟನೆ ನಡೆದಿದೆ.
ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ಜನವಿರೋಧಿ ಮತ್ತು ಕಾರ್ಪೊರೇಟ್ ಪರವಾದ ಬಜೆಟ್ ಆಗಿದ್ದು, ಕೋವಿಡ್ ಸೇರಿದಂತೆ ಮತ್ತಿತರ ಸಂಕಟಗಳಿಂದ ನಲಗುತ್ತಿರುವ ಭಾರತದ ಸಾಮಾನ್ಯ ಜನರ ಹೊಟ್ಟೆಯ ಮೇಲೆ ಹೊಡೆಯುವ ಬಜೆಟ್ ಇದಾಗಿದೆ ಎಂದು ಪ್ರತಿಭಟನೆಕಾರರು ಆರೋಪಿಸಿದರು.
ರೈತರ ಮೇಲೆ ಸೇಡು ತೀರಿಸಿಕೊಳ್ಳುವಂತಹ, ಮಹಿಳೆಯರ ಬಗ್ಗೆ ಕಠೋರವಾಗಿ ನಡದುಕೊಳ್ಳುವಂತ ಬಜೆಟ್ ಇದಾಗಿದೆ. ಉದ್ಯೋಗ, ಶಿಕ್ಷಣ, ಆರೋಗ್ಯ ಹೀಗೆ ಸಾಮಾನ್ಯ ಜನತೆಯನ್ನು ಎಲ್ಲಾ ಮೂಲಭೂತ ಅಗತ್ಯಗಳಿಂದ ವಂಚಿತರನ್ನಾಗಿಸುವ ಬಜೆಟ್ ಇದಾಗಿದೆ ಬೆಳೆ ವಿಮೆಯ ಅನುದಾನವನ್ನು ರೂ.15,989 ಕೋಟಿಯಿಂದ 15,500 ಕೋಟಿಗೆ ಯೂರಿಯಾ ಸಬ್ಸಿಡಿಯನ್ನು 75,930 ಕೋಟಿಯಿಂದ 63,222 ಕೋಟಿಗೆ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಎಫ್.ಸಿ.ಐ.ಗೆ ನೀಡುವ ಸಬ್ಸಿಡಿಯನ್ನು 2,10,929 ಕೋಟಿಯಿಂದ 1,45,920 ಕೋಟಿಗೆ ಮತ್ತುಅನ್ಯಾಯ ಯೋಜನೆಯ ಅನುದಾನವನ್ನು 98,000 ಕೋಟಿಯಿಂದ 73,000 ಕೋಟಿಗೆ ಇಳಿಸುವುದರ ಮೂಲಕ ರೈತ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಕ್ಷೇತ್ರಕ್ಕೆ ಕೇವಲ ರೂ.982 ಕೋಟಿಯನ್ನಷ್ಟೇ ಹೆಚ್ಚುವರಿ ಅನುದಾನ ನೀಡಿ ರೂ.1,31,531 ಕೋಟಿಯಿಂದ ರೂ.1,32,513 ಕೋಟಿಗೆ ಹೆಚ್ಚಿಸಿದೆ. ಇಡೀ ಬಜೆಟ್ ಉದ್ದಕ್ಕೂ ಹೀಗೆ ಭಾರತವನ್ನು ಬರ್ಬಾದು ಮಾಡಿ ಕಾರ್ಪೊರೇಟ್ ಗಳ ಖಜಾನೆ ತುಂಬುವ ಕ್ರಮವಿದೆ ಎಂದು ಆರೋಪಿಸಿದರು.
ಕೋಲಾರ, ತುಮಕೂರು, ಕಲಬುರ್ಗಿ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಸಿಪಿಐಎಂ ಕಾರ್ಯಕರ್ತರು ಕೇಂದ್ರ ಬಜೆಟ್ ವಿರೋಧಿಸಿ ಪ್ರತಿಭಟನೆ ನಡೆಸಿದರು.