ಹಾಸನ: ರಾಯಚೂರು ಜಿಲ್ಲೆಯ ಜಿಲ್ಲಾ ನ್ಯಾಯಾಲಯದಲ್ಲಿ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದ ಸಂದರ್ಭದಲ್ಲಿ ಅಲ್ಲಿನ ಮಹಾತ್ಮ ಗಾಂಧೀಜಿ ಚಿತ್ರಪಟದೊಂದಿಗೆ ಇಡಲಾಗಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಚಿತ್ರಪಟವನ್ನು ತೆಗೆದು ಹಾಕಿಸಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬರಿಗೆ ಮತ್ತು ಆ ಮೂಲಕ ಭಾರತದ ಸಂವಿಧಾನಕ್ಕೆ ಅಪಮಾನ ಎಸಗಿದ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡರ ಕ್ರಮ ಖಂಡಿಸಿ ದಲಿತ ಮತ್ತು ಜನಪರ ಸಂಘಟನೆಗಳುಪ್ರತಿಭಟನೆ ನಡೆಸಿದರು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ಡಾ.ಬಿ.ಆರ್ ಅಂಬೇಡ್ಕರ್ ರವರಿಗೆ ಅಪಮಾನ ಮಾಡಿದ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡರ ಮೇಲೆ ಅಗತ್ಯ ಶಿಸ್ತು ಕ್ರಮವಹಿಸುವಂತೆ ಜಿಲ್ಲಾಧಿಕಾರಿಗಳ ಮೂಲಕ ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ದಲಿತ ಮುಖಂಡ ಕೃಷ್ಣದಾಸ್, ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಧರ್ಮೇಶ್, ಹೆತ್ತೂರು ನಾಗರಾಜ್ , ದಲಿತ ಹಕ್ಕುಗಳ ಸಮಿತಿ-ಕರ್ನಾಟಕ(ಡಿಎಚ್ಎಸ್) ಜಿಲ್ಲಾ ಸಂಚಾಲಕ ಪೃಥ್ವಿ ಎಂ.ಜಿ, ದಸಂಸ(ಅಂಬೇಡ್ಕರ್ ವಾದ) ಮುಖಂಡರಾದ ಅಂಬುಗ ಮಲ್ಲೇಶ್, ಲಕ್ಷ್ಮಣ್, ಕರ್ನಾಟಕ ಪ್ರಾಂತ ರೈತ ಸಂಘದ ನವೀನ್ ಕುಮಾರ್ , ರಾಜ್ಯ ರೈತ ಸಂಘದ ಬಾಬು, ಆರ್.ಪಿ.ಐ. ಸತೀಶ್, ರಾಜು ಗೊರೂರು, ಮರಿಜೋಸೆಫ್, ಡಿಎಚ್ಎಸ್ ಮೀನಾಕ್ಷಿ, ಮುಬಷಿರ್ ಅಹಮದ್, ಸಿಐಟಿಯು ಅರವಿಂದ್, ಕುಮಾರಸ್ವಾಮಿ, ಜಗದೀಶ್ ಚೌಡಳ್ಳಿ ಮತ್ತಿತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.