ಖಮ್ಮಂ: ಉದ್ಯೋಗ ಸಿಗದೆ ಖಿನ್ನತೆಗೆ ಒಳಗಾಗಿ ನಿರುದ್ಯೋಗಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ಖಮ್ಮಂನಲ್ಲಿ ನಡೆದಿದೆ.
ಮೂಲಗಳ ಪ್ರಕಾರ, ಯುವಕನನ್ನು ಮಹಬೂಬಾಬಾದ್ ಜಿಲ್ಲೆಯ ಬಯ್ಯಾರಂ ಗ್ರಾಮದ ಮುತ್ಯಾಲ ಸಾಗರ್ (25) ಎಂದು ಗುರುತಿಸಲಾಗಿದೆ. ಪದವಿ ಮುಗಿಸಿ ಹಲವು ವರ್ಷಗಳಿಂದ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದರು ಕೆಲಸ ಸಿಗದೆ ತುಂಬಾ ಖಿನ್ನತೆಗೆ ಒಳಗಾಗಿದ್ದರು ಮತ್ತು ಸರ್ಕಾರವು ನೇಮಕಾತಿಗಾಗಿ ಅಧಿಸೂಚನೆಗಳನ್ನು ಬಿಡುಗಡೆ ಮಾಡುತ್ತಿಲ್ಲ ಎಂದು ನೊಂದಿದ್ದರು ಎನ್ನಲಾಗಿದೆ.
ಮೃತದೇಹ ಖಮ್ಮಂನ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ. ಆತ್ಮಹತ್ಯೆಗೂ ಮುನ್ನ ಮೃತರು ತಮ್ಮ ಫೋನ್‌ನಲ್ಲಿ ಸಂದೇಶ ಕಳಿಸಿದ್ದು, “ಸರ್ಕಾರದಿಂದ ಯಾವುದೇ ಅಧಿಸೂಚನೆಗಳನ್ನು ಹೊರಡಿಸಲಾಗಿಲ್ಲ, ಕಳೆದ ಕೆಲವು ವರ್ಷಗಳಿಂದ ಉದ್ಯೋಗ ಅಧಿಸೂಚನೆಗಾಗಿ ಕಾದು ಕುಳಿತಿದ್ದೆ ಇದಕ್ಕೆ ಮುಖ್ಯಮಂತ್ರಿ ಕೆಸಿಆರ್ ಕಾರಣ’’ ಎಂದು ಹೇಳಿದ್ದಾರೆ.
ಗ್ರಾಮಸ್ಥರ ಪ್ರಕಾರ ಸಾಗರ್ ಕಾಕತೀಯ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮುಗಿಸಿದ್ದ. ಅವರು ಅಧ್ಯಯನದಲ್ಲಿ ತುಂಬಾ ಸಕ್ರಿಯರಾಗಿದ್ದರು, ಕಳೆದ ಕೆಲ ತಿಂಗಳುಗಳಿಂದ ಕೆಲಸ ಸಿಗದೇ ತೀವ್ರ ಖಿನ್ನತೆಗೆ ಒಳಗಾಗಿದ್ದರು. ಸ್ಥಳಕ್ಕೆ ಧಾವಿಸಿದ ರೈಲ್ವೆ ಪೊಲೀಸರು ಮೃತದೇಹವನ್ನು ಮೇಲಕ್ಕೆತ್ತಿ ಪ್ರಕರಣ ದಾಖಲಿಸಿಕೊಂಡು ಮೃತನ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಯಿತು.