ಬಿಲ್ಲವರನ್ನು ಕೊಲೆಗಾರರನ್ನಾಗಿಯೂ, ಕೊಲ್ಲಲ್ಪಡುವವರನ್ನಾಗಿಯೂ ಸೃಷ್ಟಿಸುವದು ಹಿಂದುತ್ವ ರಾಜಕಾರಣದ ಹುನ್ನಾರ!

– ನವೀನ್ ಸೂರಿಂಜೆ

ಎಲ್ಲಾ ಕೋಮುಗಲಭೆ, ಆ ಬಳಿಕ ನಡೆಯುವ ಪ್ರತಿಕಾರಗಳಲ್ಲಿ ಬಿಲ್ಲವರು ಸೇರಿದಂತೆ ಹಿಂದುಳಿದ ವರ್ಗಗಳೇ ಕೊಲೆಗಾರರ ಪಟ್ಟಿಯಲ್ಲೂ, ಸಾವಿಗೀಡಾದವರ ಪಟ್ಟಿಯಲ್ಲೂ ಏಕಕಾಲದಲ್ಲಿ ಯಾಕಿರುತ್ತಾರೆ ? ಯಾಕೆ ಬಂಟ ನಾಯಕರು ಈ ಎರಡೂ ಪಟ್ಟಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಾಣಸಿಗುವುದಿಲ್ಲ? ಯಾಕೆ ಹಿಂದುತ್ವ ನಾಯಕತ್ವವನ್ನು ವಹಿಸಿಕೊಂಡ, ಹಿಂದುತ್ವದ ನೇರ ಲಾಭದಾರ ಸಮುದಾಯವಾಗಿರುವ ಬ್ರಾಹ್ಮಣರ ಹೆಸರುಗಳು ಈ ಪಟ್ಟಿಯಲ್ಲಿಲ್ಲ ಎಂಬುದನ್ನು ಯೋಚಿಸಿದರೆ ನಾರಾಯಣ ಗುರುಗಳ ಸ್ತಬ್ದ ಚಿತ್ರವನ್ನು ಯಾಕೆ ತಿರಸ್ಕರಿಸಲಾಯಿತು ಎಂಬುದಕ್ಕೆ ಉತ್ತರ ಸಿಗುತ್ತದೆ.

ನಾರಾಯಣ ಗುರುಗಳನ್ನು ಅವಮಾನಿಸಿದ್ದಲ್ಲದೇ ಈಗ ಅದೇ ನೆಪವನ್ನು ಹಿಡಿದುಕೊಂಡು ಬಿಲ್ಲವರ ಏಕೈಕ ಮುಖ್ಯಮಂತ್ರಿ, ನಾರಾಯಣ ಗುರುಗಳ ಪ್ರಖರ ಅನುಯಾಯಿ ಪಿಣರಾಯಿ ವಿಜಯನ್ ರವರನ್ನು ಗುರಿಯಾಗಿಸುವ ಪ್ರಯತ್ನವನ್ನು ಹಿಂದುತ್ವವಾದಿಗಳು ಮಾಡುತ್ತಿದ್ದಾರೆ. ನಾರಾಯಣ ಗುರುಗಳ ಪ್ರಖರ ಅನುಯಾಯಿ ಬಿಲ್ಲವ ರಾಜಕಾರಣಿಗಳನ್ನು ಮುಗಿಸುವ ಹಿಂದುತ್ವ ರಾಜಕಾರಣದ ಅಬಿಚುವಲ್ ಕೃತ್ಯವನ್ನು ಪಿಣರಾಯಿ ವಿಜಯನ್ ಮೇಲೆ ವಿಫಲ ಪ್ರಯೋಗ ಮಾಡಲಾಗುತ್ತಿದೆ ಎಂಬುದನ್ನು ಕರಾವಳಿಯ ಬಹುಸಂಖ್ಯಾತ ಬಿಲ್ಲವ ಸಮುದಾಯ ಅರ್ಥ ಮಾಡಿಕೊಳ್ಳಬೇಕು. ಇದು ಬಿಲ್ಲವರನ್ನು ಏಕಕಾಲದಲ್ಲಿ ಕೊಲೆಗಾರರನ್ನಾಗಿಯೂ, ಕೊಲ್ಲಲ್ಪಡುವವರನ್ನಾಗಿಯೂ ಮಾಡುವ ಹಿಂದುತ್ವದ ಹಳೇ ತಂತ್ರಗಾರಿಕೆಯ ಭಾಗವಷ್ಟೆ.

ಹಿಂದುತ್ವ ರಾಜಕಾರಣದ ಮೊದಲ ಗುರಿ ಮುಸ್ಲೀಮರು ಎಂದು ಮೇಲ್ನೋಟಕ್ಕೆ ಭಾಸವಾಗುವಂತಿದ್ದರೂ ನಿಜವಾಗಿ ಹಿಂದುತ್ವದ ಮೊದಲ ಗುರಿ ಬಿಲ್ಲವ ಸೇರಿದಂತೆ ಹಿಂದೂ ಸಮುದಾಯದ ಹಿಂದುಳಿದ ವರ್ಗಗಳು. ಬಿಲ್ಲವ ಸೇರಿದಂತೆ ಹಿಂದುಳಿದ ವರ್ಗಗಳನ್ನು ಕಾಲಾಳುಗಳನ್ನಾಗಿ ಬಳಸಿಕೊಂಡು ಮುಸ್ಲಿಂ, ಕ್ರಿಶ್ಚಿಯನ್ನರ ವಿರುದ್ದ ಕೊಲ್ಲು ಮತ್ತು ಕೊಲ್ಲಲ್ಪಡು ಎಂಬ ಸೂತ್ರದಂತೆ ಬಳಕೆ ಮಾಡಿಕೊಳ್ಳಲಾಗುತ್ತದೆ. ಹಿಂದುತ್ವ ಶಕ್ತಿಗಳು ನಡೆಸುವ ಕೋಮುಗಲಭೆಗಳಲ್ಲಿ ಕೊಲ್ಲುವವರು ಮತ್ತು ಕೊಲ್ಲಲ್ಪಡುವವರು ಬಿಲ್ಲವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಿಂದುತ್ವ ನಾಯಕರಿಗೆ ಹಿಂದುಳಿದ ವರ್ಗಗಳೆಂದರೆ ಒಂದು ರೀತಿಯಲ್ಲಿ ಮೇಲ್ವರ್ಗದ ಕೈಯ್ಯಲ್ಲಿರುವ ಅಂಕದ ಕೋಳಿಯಂತೆ.

ಕರಾವಳಿಯ ಕೋಮುಗಲಭೆಯಲ್ಲಿ ಸತ್ತವರ ಪಟ್ಟಿ ನೋಡಿ. ಉದಯ ಪೂಜಾರಿ, ಜಗದೀಶ್ ಪೂಜಾರಿ, ಕ್ಯಾಂಡಲ್ ಸಂತು, ಪೊಳಲಿ ಅನಂತು, ಪ್ರಶಾಂತ್ ಪೂಜಾರಿ, ಹರೀಶ್ ಪೂಜಾರಿ, ಪ್ರೇಮ್ ಕೋಟ್ಯಾನ್, ಸುನೀಲ್ ಪೂಜಾರಿ, ಹೇಮಂತ್, ಪ್ರವೀಣ್ ಪೂಜಾರಿ… ಹೀಗೆ ಬಿಲ್ಲವ ಹೆಸರುಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇದಲ್ಲದೆ ಹರೀಶ್ ಭಂಡಾರಿ, ಸುಖಾನಂದ ಶೆಟ್ಟಿ, ಕೋಡಿಕೆರೆ ಶಿವರಾಜ್, ಪ್ರಕಾಶ್ ಕುಳಾಯಿ, ಮಣಿಕಂಠ ಸುರತ್ಕಲ್, ಹೇಮಂತ್ ಸುರತ್ಕಲ್ ಹೀಗೆ ಸಾವಿಗೀಡಾದ ಬ್ರಾಹ್ಮಣೇತರ ವರ್ಗಗಳ ಯುವಕರ ಪಟ್ಟಿ ಸಿಗುತ್ತದೆ. ಸುಖಾನಂದ ಶೆಟ್ಟಿಯ ಶವಯಾತ್ರೆಯಲ್ಲಿ ಮತ್ತೆ ಪೊಲೀಸ್ ಶೂಟೌಟ್ ಆಗಿ ಇಬ್ಬರು ಬಿಲ್ಲವ ಯುವಕರು ನನ್ನೆದುರೇ ಪ್ರಾಣ ಕಳೆದುಕೊಂಡಿದ್ದರು. ಬಂಟ್ವಾಳದಲ್ಲಿ ಸಾವಿಗೀಡಾದ ಶರತ್ ಮಡಿವಾಳ ಕೂಡಾ ಅತ್ಯಂತ ಹಿಂದುಳಿದ ಅಗಸ ಸಮುದಾಯಕ್ಕೆ ಸೇರಿದವರು. ಶರತ್ ಮಡಿವಾಳ ಶವಯಾತ್ರೆಯ ಸಂದರ್ಭ ಮುಸ್ಲಿಂ ಯುವಕನಿಗೆ ಇರಿದ ಪ್ರಕರಣಗಳಲ್ಲಿ ಪೊಲೀಸರು ನಿತಿನ್ ಪೂಜಾರಿ (21 ವರ್ಷ), ಪ್ರಾಣೇಶ್ ಪೂಜಾರಿ (20 ವರ್ಷ) ಹಾಗೂ ಕಿಶನ್ ಪೂಜಾರಿ (21 ವರ್ಷ) ಮೊದಲಾದವರನ್ನು ಬಂಧಿಸಿದ್ದಾರೆ. ಈ ಮೂವರು ಯುವಕರೂ ಕೂಡಾ ಹಿಂದುಳಿದ ಬಿಲ್ಲವ ಸಮುದಾಯಕ್ಕೆ ಸೇರಿದ್ದಾರೆ.

ಎಲ್ಲಾ ಕೋಮುಗಲಭೆ, ಆ ಬಳಿಕ ನಡೆಯುವ ಪ್ರತಿಕಾರಗಳಲ್ಲಿ ಬಿಲ್ಲವರು ಸೇರಿದಂತೆ ಹಿಂದುಳಿದ ವರ್ಗಗಳೇ ಕೊಲೆಗಾರರ ಪಟ್ಟಿಯಲ್ಲೂ, ಸಾವಿಗೀಡಾದವರ ಪಟ್ಟಿಯಲ್ಲೂ ಏಕಕಾಲದಲ್ಲಿ ಯಾಕಿರುತ್ತಾರೆ ? ಯಾಕೆ ಬಂಟ ನಾಯಕರು ಈ ಎರಡೂ ಪಟ್ಟಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಾಣಸಿಗುವುದಿಲ್ಲ? ಯಾಕೆ ಹಿಂದುತ್ವ ನಾಯಕತ್ವವನ್ನು ವಹಿಸಿಕೊಂಡ, ಹಿಂದುತ್ವದ ನೇರ ಲಾಭದಾರ ಸಮುದಾಯವಾಗಿರುವ ಬ್ರಾಹ್ಮಣರ ಹೆಸರುಗಳು ಈ ಪಟ್ಟಿಯಲ್ಲಿಲ್ಲ ಎಂಬುದನ್ನು ಯೋಚಿಸಿದರೆ ನಾರಾಯಣ ಗುರುಗಳ ಸ್ತಬ್ದ ಚಿತ್ರವನ್ನು ಯಾಕೆ ತಿರಸ್ಕರಿಸಲಾಯಿತು ಎಂಬುದಕ್ಕೆ ಉತ್ತರ ಸಿಗುತ್ತದೆ.

ಹೋಂ ಸ್ಟೇ ಅಟ್ಯಾಕ್ ನಲ್ಲಿ ಹಿಂದೂ ಜಾಗರಣಾ ವೇದಿಕೆಯ 43 ಯುವಕರನ್ನು ಬಂಧಿಸಲಾಯ್ತು. ಅದರಲ್ಲಿ ಎಷ್ಟು ಬಂಟರು ? ಎಷ್ಟು ಬ್ರಾಹ್ಮಣರಿದ್ದರು ಎಂಬುದನ್ನು ಲೆಕ್ಕ ಹಾಕಿಕೊಳ್ಳಿ. ಕೇವಲ ಇಬ್ಬರು ಬಂಟರು ಮತ್ತು ದೊಡ್ಡ ೦ ಸಂಖ್ಯೆಯ ಬ್ರಾಹ್ಮಣರು. 43 ಆರೋಪಿಗಳ ಪೈಕಿ 39 ಯುವಕರು ಬಿಲ್ಲವರಾಗಿದ್ದರು. ಅದಕ್ಕೂ ಮೊದಲು ಅಮ್ನೇಶಿಯಾ ಪಬ್ ದಾಳಿ ಪ್ರಕರಣ ನಡೆಯಿತು. ಅಮ್ನೇಶಿಯಾ ಪಬ್ ಅಟ್ಯಾಕ್ ಪ್ರಕರಣದಲ್ಲಿ 30 ಶ್ರೀರಾಮ ಸೇನೆಯ ಯುವಕರನ್ನು ಬಂಧಿಸಲಾಗುತ್ತದೆ. ಆ ಪಟ್ಟಿಯಲ್ಲೂ ಮೂವರು ಬಂಟರು ಮತ್ತು 28 ಜನ ಬಿಲ್ಲವರು. ಸಂಪತ್ ಪೂಜಾರಿ, ಸುರೇಶ್ ಪೂಜಾರಿ, ಮಿಥುನ್ ಪೂಜಾರಿ, ರಮೇಶ್ ಕೋಟ್ಯಾನ್ ಎಂದು ಆರೋಪಿಗಳ ಪಟ್ಟಿಯಲ್ಲಿ ಹೆಸರು ಕಣ್ಣಿಗೆ ರಾಚುತ್ತದೆ.

ಇದೆಲ್ಲವನ್ನು ಈಗ ಯಾಕೆ ನೆನಪಿಸಿಕೊಳ್ಳಬೇಕು ಎಂದರೆ ಈಗ ಬಿಲ್ಲವರನ್ನು ತುಳಿಯುವ ರಾಜಕಾರಣ ಶುರುವಾಗಿದೆ. ನಾರಾಯಣ ಗುರುಗಳ ಸ್ಥಬ್ದಚಿತ್ರವನ್ನು ಗಣರಾಜ್ಯೋತ್ಸವ ಪೆರೇಡ್ ನಲ್ಲಿ ತಿರಸ್ಕರಿಸಿರುವುದು ಬಿಲ್ಲವರು ರಾಜಕೀಯವಾಗಿ ಚಿಂತಿಸುವಂತೆ ಮಾಡಿದೆ. ಎಲ್ಲಾ ಪಕ್ಷ, ಸಿದ್ದಾಂತ ಬೇದವನ್ನು ಮರೆತು ಬಿಲ್ಲವ ಸಮುದಾಯದೊಳಗೆ ಖಂಡನೆ ವ್ಯಕ್ತವಾಗುತ್ತಿದೆ. ಇದು ಹಿಂದುತ್ವ ರಾಜಕಾರಣಕ್ಕೆ ಭಯ ಮೂಡಿಸಿದ್ದರಿಂದಲೇ ಸ್ತಬ್ಧಚಿತ್ರ ತಿರಸ್ಕಾರದ ತಪ್ಪನ್ನು ಬಿಲ್ಲವ ಸಮುದಾಯದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಲೆಗೆ ಕಟ್ಟುವ ಪ್ರಯತ್ನ ನಡೆಯುತ್ತಿದೆ. “ಜನಾರ್ಧನ ಪೂಜಾರಿಯವರು ಕೇಂದ್ರ ಸಚಿವರಾಗಿದ್ದರು, ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದರು, ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಆಗಲೇ ಯಾಕೆ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ನಾರಾಯಣ ಗುರುಗಳ ಸ್ಥಬ್ದ ಚಿತ್ರವನ್ನು ಮಾಡಿಸಿರಲಿಲ್ಲ? ” ಎಂದು ಜನಾರ್ಧನ ಪೂಜಾರಿಯವರನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸುವಂತೆಯೇ ಕೇರಳ ಸಿಎಂ ಪಿಣರಾಯಿ ವಿಜಯನ್ ರನ್ನು ಆರೋಪಿಯನ್ನಾಗಿಸುವ ಯತ್ನ ನಡೆಸುತ್ತಿದ್ದಾರೆ. ಇದು ಬಿಲ್ಲವರನ್ನು ಕೊಲೆಗಾರರನ್ನಾಗಿಯೂ, ಕೊಲ್ಲಲ್ಪಡುವವರನ್ನಾಗಿಯೂ ಏಕಕಾಲದಲ್ಲಿ ಸೃಷ್ಟಿಸುವ ಹಿಂದುತ್ವ ರಾಜಕಾರಣದ ಹುನ್ನಾರ ಎಂಬುದನ್ನು ಕರಾವಳಿಯ ಬಿಲ್ಲವ ಸೇರಿದಂತೆ ಹಿಂದುಳಿದ ವರ್ಗಗಳು ಅರ್ಥ ಮಾಡಿಕೊಳ್ಳಬೇಕಷ್ಟೆ.

Donate Janashakthi Media

Leave a Reply

Your email address will not be published. Required fields are marked *