ಹಾರೋಹಳ್ಳಿ ರವೀಂದ್ರ
ಶಾಲೆಯ ಸಂದರ್ಭದಲ್ಲಿ ಕೆಲವು ವಿದ್ಯಾರ್ಥಿಗಳು ಅಂದಿನ ದಿನ ಬಾಕ್ಸ್ ತಂದಿಲ್ಲವಾದರೆ, ಅವರದೆ ಬಾಕ್ಸ್ ಗಳಲ್ಲಿ ಎಲ್ಲರೂ ಶೇರ್ ಮಾಡಿಕೊಳ್ಳುತಿದ್ದರು. ಅಲ್ಲಿ ಒಬ್ಬ ಬ್ರಾಹ್ಮಣ ಮೇಡಂ ಇದ್ದರು. ಅವರು ಮೈಸೂರು ನಗರದ ಅಗ್ರಹಾರದಿಂದ ಬರುತ್ತಿದ್ದರು. ಅವರೆಂದಿಗೂ ಜಾತಿ ಧರ್ಮಗಳ ಬಗೆ ಮಾತನಾಡಿದವರಲ್ಲ. ಅವರಿಗೆ ಎಲ್ಲಾ ಮಕ್ಕಳು ಒಂದೆ. ಅವರು ಮಕ್ಕಳಲ್ಲಿರುವ ಸೃಜನಶೀಲತೆಯನ್ನು ಗುರುತಿಸಿ ಆತ ಯಾವುದೇ ಜಾತಿ ಧರ್ಮದವನಾಗಿರಲಿ ಪ್ರೋತ್ಸಾಹ ನೀಡುತ್ತಿದ್ದರು. ಏಕೆಂದರೆ ಆರ್ ಎಸ್ ಎಸ್ ಪ್ರಭಾವಿತ ಶಿಕ್ಷಕರು ಶಿಕ್ಷಣ ಕ್ಷೇತ್ರದ ಒಳಗೆ ನುಸಿಳಿರಲಿಲ್ಲ.
ನನ್ನ ಊರು ಹಾರೋಹಳ್ಳಿ, ನಾನು ಹುಟ್ಟಿದಾಗಲೇ ಊರಿನಲ್ಲಿ ೧೦ನೇ ತರಗತಿವರೆವಿಗೂ ಶಾಲೆಯಿತ್ತು. ಹಾಗಾಗಿ ನಮಗೆ ಶಾಲೆ ದುಬಾರಿ ಎಂದು ಅನಿಸಲೇ ಇಲ್ಲ. ಅಂದು ನನಗೆ ನಾಲ್ಕು ವರ್ಷ ಕಳೆದು ಹೋಗಿತ್ತು. ನನ್ನ ತಾಯಿ ಶಾಲೆಗೆ ಸೇರಿಸಲು ಕಿರಿಯ ಪ್ರಾಥಮಿಕ ಶಾಲೆಗೆ ಕರೆದುಕೊಂಡು ಹೋದಾಗ, ಆಗಿದ್ಧವರು ಲಕ್ಷ್ಮೀ ಎಂಬ ಮೇಡಂ. ಅಂದು ಪ್ರವೇಶಾತಿಗೆ ಬಲಗೈ ಯಿಂದ ಎಡ ಕಿವಿಯನ್ನು ಮುಟ್ಟ ಬೇಕಿತ್ತು. ನಾನು ಅದನ್ನು ಮುಟ್ಟಿದ್ದರಿಂದ ೧ನೇ ತರಗತಿಗೆ ಪ್ರವೇಶ ದೊರೆಯಿತು. ದಾಖಲಾತಿಗೆ ಹೆಸರು ಹಾಕಬೇಕಲ್ಲ? ನನ್ನ ತಾಯಿಗೆ ಮಗನ ಹೆಸರೇನು ಎಂದು ಕೇಳಿದರು? ಅದಕ್ಕವರು ಗವಿಸಿದ್ದ ಎಂದು ಹೇಳಿದರು. ನಾವು ಕಾಲಭೈರವನ ಒಕ್ಕಲಿನವರಾದ್ದರಿಂದ ಆ ಪರಂಪರೆಗೆ ಸಂಬಂಧಿಸಿದ ಹೆಸರುಗಳನ್ನೆ ಕರೆದುಕೊಳ್ಳುತಿದ್ದರು. ಹೆಸರನ್ನು ಕೇಳಿದ ಮೇಡಂ, ಅಯ್ಯೊ ಇದೇ ಹೆಸರಿನವರು ೪ ಜನರಿದ್ದಾರೆ ಈತನದು ಅದೇ ಹೆಸರಾದರೆ ನನಗೆ ಹಾಜರಾತಿ ಕರೆಯುವಾಗ ತೊಂದರೆಯಾಗುತ್ತದೆ ಹಾಗಾಗಿ ಇವನಿಗೆ ನಾನೆ ಒಂದು ಹೆಸರಿಡುತ್ತೇನೆಂದು ದಾಖಲಾತಿ ಪುಸ್ತಕದಲ್ಲಿ ರವೀಂದ್ರ ಎಂದು ಬರೆದುಕೊಂಡರು. ಅಲ್ಲಿಂದ ನಾನು ರವೀಂದ್ರನಾದೆ, ಈ ಹೆಸರು ನಮ್ಮ ಮೇಡಂ ಕೊಟ್ಟ ಬಳುವಳಿಯಾಗಿದೆ.
ನಾನೋಗುವ ಕಿರಿಯ ಪ್ರಾಥಮಿಕ ಶಾಲೆಯು ದಲಿತ ಕೇರಿಯೊಳಗಡೆಯೇ ಇತ್ತು. ಅಲ್ಲಿಗೆ ಹೋಗುತಿದ್ದ ಮಕ್ಕಳು ದಲಿತರ ಮತ್ತು ಮುಸಲ್ಮಾನ ಮಕ್ಕಳು ಬಿಟ್ಟರೆ ಉಳಿದ ಮಕ್ಕಳು ಅತಿ ವಿರಳ. ಅಂದು ನಮ್ಮ ಸ್ಥಿತಿಗಳು ಹೇಗಿರುತಿದ್ದವು ಎಂದರೆ. ಸರಿಯಾಗಿ ಕ್ರಾಪ್ ಮಾಡುತ್ತಿರಲಿಲ್ಲ, ಚಡ್ಡಿ ಒಂದುಕಡೆ ಹರಿದಿರುತಿತ್ತು, ಅಂಗಿಗೆ ಸರಿಯಾಗಿ ಗುಂಡಿಗಳೇ ಇರುತ್ತಿರಲಿಲ್ಲ, ಹೋಗುವಾಗಲೇ ಮೂಗಿನಿಂದ ಗೊಣ್ಣೆ ಸೋರಿಸಿಕೊಂಡು ಹೋಗಿತಿದ್ದೆವು. ನಮ್ಮ ಶಾಲೆಯ ಲಕ್ಷೀ ಮೇಡಂ ಮೂಲತಹ ಬ್ರಾಹ್ಮಣ ಜಾತಿಗೆ ಸೇರಿದವರು. ಅವರು ಬರುವಾಗಲೆ ಬ್ಯಾಗಿನಲ್ಲಿ ಒಂದು ಕೂಮು ಮತ್ತು ಖರ್ಚೀಫ್ ತರುತ್ತಿದ್ದರು. ಶಾಲೆಯಲ್ಲಿ ಕೂತಿರುವ ನಮ್ಮನ್ನೆಲ್ಲಾ ನೋಡಿ ಅವರೇ ತಂದ ಕೂಮಿನಿಂದ ತಲೆಬಾಚಿ, ಖರ್ಚೀಫಿನಿಂದ ಗೊಣ್ಣೆ ತೆಗೆದು ಕೂರಿಸುತಿದ್ದರು. ಮೊದಲೆ ಹೇಳಿದಂತೆ ನಾವು ಹಾಕಿ ಹೋಗುತಿದ್ದ ಬಟ್ಟೆಗಳು ಚಿತ್ರವಿಚಿತ್ರ. ಯಾರ ಬಟ್ಟೆಗಳು ಹರಿದು ಹೋಗಿವಿಯೊ ಅಂತವರನ್ನು ಗುರುತಿಸಿ ಬಟ್ಟೆ ತಂದು ಶಾಲೆಯಲ್ಲಿಯೇ ಆತನ ಬಟ್ಟೆ ಕಳಚಿ ಹೊಸ ಬಟ್ಟೆ ತೊಡಿಸಿ ಮನೆಗೆ ಕಳುಹಿಸುತ್ತಿದ್ದರು. ಕೆಲವು ಮಕ್ಕಳಿಗೆ ಮಧ್ಯಾಹ್ನದ ಊಟವಿರುತ್ತಿರಲಿಲ್ಲ. ಊಟಕ್ಕೆಂದು ಮನೆಗೆ ಹೋದಾಗ ಕೆಲವು ಮನೆಗಳಲ್ಲಿ ಪೋಷಕರು ಬೀಗ ಹಾಕಿಕೊಂಡು ಕೂಲಿಗೆ ಹೋಗಿರುತ್ತಿದ್ದರು. ಅಂತಹ ಮಕ್ಕಳು ಸಪ್ಪೆ ಮುಖ ಹೊತ್ತು ಹಸಿವಿನಿಂದಲೆ ಶಾಲೆಗೆ ವಾಪಸ್ಸಾಗುತಿದ್ದರು. ಮಕ್ಕಳ ಹಸಿವು ಮೇಡಂಗೆ ಬೇಗ ಅರ್ಥವಾಗುತಿತ್ತು. ಈ ಕಾರಣಕ್ಕಾಗಿಯೇ ಮೇಡಂ ಶಾಲೆಗೆ ಬರುವಾಗಲೆ ಅವರ ಊಟದ ಡಬ್ಬಿಯ ಜೊತೆಗೆ ಹೆಚ್ಚುವರಿಯಾಗಿ ಇನ್ನೆರಡು ಡಬ್ಬಿಯನ್ನು ತರುತ್ತಿದ್ದರು. ಯಾರಿಗೆ ಆ ದಿನ ಮನೆಯಲ್ಲಿ ಊಟ ಸಿಕ್ಕಿಲ್ಲ ಅಂತಹ ಮಕ್ಕಳಿಗೆ ಊಟ ಕೊಡುತ್ತಿದ್ದರು. ಅವರಲ್ಲಿ ಆತ ದಲಿತ, ಮುಸಲ್ಮಾನ ಎಂಬ ಭಿನ್ನಬೇಧವು ಇರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಶಿಕ್ಷಕರು ಹಾಗಿಲ್ಲ. ದಲಿತ ಮತ್ತು ಮುಸ್ಲಿಂ ಮಕ್ಕಳಿಗೆ ಶಿಕ್ಷಣ ಕಲಿಸುವುದಿರಲಿ, ಆ ಕೇರಿಯೊಳಗೆ ಶಿಕ್ಷಕರು ಬರುವಾಗಲೇ ಮೂಗಿಗೆ ಖರ್ಚೀಫನ್ನಿಡಿದು ಬರುತ್ತಾರೆ.
ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆ ಮುಗಿದ ನಂತರ ನಾನು ಹೋಗಿದ್ದು ಹೈಸ್ಕೂಲಿಗೆ. ಹೈಸ್ಕೂಲ್ ಕೂಡ ನಮ್ಮ ಊರಿನಲ್ಲಿಯೇ ಇತ್ತು. ಅಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳಿದ್ದವರು ದಲಿತರು, ಮುಸಲ್ಮಾನರು, ನಾಯಕರು ಮತ್ತು ಒಕ್ಕಲಿಗರು. ಶಿಕ್ಷಕರುಗಳಲ್ಲಿ ಒಬ್ಬರು ದಲಿತರು, ಇನ್ನೊಬ್ಬರು ಒಕ್ಕಲಿಗರು, ಉಳಿದವರೆಲ್ಲರೂ ಬ್ರಾಹ್ಮಣರೆ ಆಗಿದ್ದರು. ಅವರು ನಮಗೆಂದು ಜಾತಿಯಾಗಲಿ, ಧರ್ಮದ ಬಗೆಯಾಗಲಿ ಬೋಧಿಸಿದವರಲ್ಲ. ಅದೇ ಶಾಲೆಗೆ ಮುಸ್ಲಿಂ ಹೆಣ್ಣು ಮಕ್ಕಳು ಬರುತ್ತಿದ್ದರು. ಅವರೆಂದು ಹಿಜಾಬ್ ಧರಿಸುತ್ತಿರಲಿಲ್ಲ. ಎಲ್ಲರೂ ಹೇಗೆ ಬರುತ್ತಿದ್ದರೊ? ಹಾಗೆಯೆ ಅವರು ಬರುತ್ತಿದ್ದರು. ಎಲ್ಲಾ ಜಾತಿಯವರು ಧರ್ಮದವರು ಕಾರ್ಯಕ್ರಮಗಳಾಗಲಿ, ಕ್ರೀಡೆಗಳಾಗಲಿ ಒಟ್ಟಾಗಿ ಬೆರೆಯುತಿದ್ದೆವು.
ಶಾಲೆಯ ಸಂದರ್ಭದಲ್ಲಿ ಕೆಲವು ವಿದ್ಯಾರ್ಥಿಗಳು ಅಂದಿನ ದಿನ ಬಾಕ್ಸ್ ತಂದಿಲ್ಲವಾದರೆ, ಅವರದೆ ಬಾಕ್ಸ್ ಗಳಲ್ಲಿ ಎಲ್ಲರೂ ಶೇರ್ ಮಾಡಿಕೊಳ್ಳುತಿದ್ದರು. ಅಲ್ಲಿ ಒಬ್ಬ ಬ್ರಾಹ್ಮಣ ಮೇಡಂ ಇದ್ದರು. ಅವರು ಮೈಸೂರು ನಗರದ ಅಗ್ರಹಾರದಿಂದ ಬರುತ್ತಿದ್ದರು. ಅವರೆಂದಿಗೂ ಜಾತಿ ಧರ್ಮಗಳ ಬಗೆ ಮಾತನಾಡಿದವರಲ್ಲ. ಅವರಿಗೆ ಎಲ್ಲಾ ಮಕ್ಕಳು ಒಂದೆ. ಅವರು ಮಕ್ಕಳಲ್ಲಿರುವ ಸೃಜನಶೀಲತೆಯನ್ನು ಗುರುತಿಸಿ ಆತ ಯಾವುದೇ ಜಾತಿ ಧರ್ಮದವನಾಗಿರಲಿ ಪ್ರೋತ್ಸಾಹ ನೀಡುತ್ತಿದ್ದರು. ಏಕೆಂದರೆ ಆರ್ ಎಸ್ ಎಸ್ ಪ್ರಭಾವಿತ ಶಿಕ್ಷಕರು ಶಿಕ್ಷಣ ಕ್ಷೇತ್ರದ ಒಳಗೆ ನುಸಿಳಿರಲಿಲ್ಲ. ಅಂದಿನ ಶಿಕ್ಷಕರೆಲ್ಲರೂ ಬಹುತೇಕ ಗಾಂಧಿ ಮತ್ತು ನೆಹರೂ ಪ್ರಭಾವದಿಂದ ಬಂದವರಾಗಿದ್ದರು. ಈ ಕಾರಣದಿಂದಲೆ ಅವರಿಗೆ ದಲಿತರು, ಹಿಂದುಳಿದ ವರ್ಗ ಮತ್ತು ಮುಸಲ್ಮಾನ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಹೆಚ್ಚು ಕಾಳಜಿ ಇತ್ತು. ನನ್ನ ಕಾಲೇಜಿನ ಸಂದರ್ಭಗಳಲ್ಲಿಯೂ ಜಾತಿ, ಧರ್ಮಗಳು ನನಗೆ ಕಾಣಲೇ ಇಲ್ಲ. ಉಪನ್ಯಾಸಕರು ಮತ್ತು ಪ್ರಾಧ್ಯಾಪಕರುಗಳು ಗಾಂಧಿ, ನೆಹರೂ, ಕಮ್ಯುನಿಸ್ಟ್ ಹಾಗೂ ದಲಿತ ಚಳವಳಿಯ ಹಿನ್ನೆಲೆಯಿಂದ ಬಂದವರಾಗಿದ್ದರಿಂದ ನಾವೆಲ್ಲಾ ಸರಿಯಾದ ಮಾರ್ಗಕ್ಕೆ ಬರಲು ನೆರವಾಯಿತು. ಹಿಂದೂ ಧರ್ಮದ ಹುಡುಗರೊಡನೆ ಮುಸ್ಲಿಂ ಹೆಣ್ಣು ಮಕ್ಕಳು ಬೆರೆಯುತಿದ್ದರು. ಮುಸ್ಲಿಂ ಹುಡುಗರ ಜೊತೆ ಹಿಂದೂ ಹೆಣ್ಣು ಮಕ್ಕಳು ಬೆರೆಯುತಿದ್ದರು. ಇದಕ್ಕೆ ಯಾವುದೇ ಜಾತಿ ಧರ್ಮಗಳ ಗೋಡೆಗಳೆ ಇರಲಿಲ್ಲ. ಈ ರೀತಿಯ ಸಮಾನತೆ, ವೈಚಾರಿಕತೆ ಮತ್ತು ಮುಕ್ತ ಸ್ವಾತಂತ್ರ್ಯ ದ ಕಾರಣಕ್ಕಾಗಿಯೆ ನಾವು ಓದು ಕಟ್ಟಿಕೊಂಡೆವು. ಇಲ್ಲವಾದರೆ ಖಂಡಿತವಾಗಿಯೂ ಶಾಲೆಯ ಹಂತವನ್ನು ನಾವು ಮುಗಿಸಲಾಗುತ್ತಿರಲಿಲ್ಲ.
ಕಳೆದ ಹತ್ತು ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಆದ ಬದಲಾವಣೆಗಳು ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮಗಳನ್ನುಂಟು ಮಾಡಿವೆ. ಶಾಲೆಯ ವಿದ್ಯಾರ್ಥಿಗಳಿಗೆ ಜಾತಿ, ಧರ್ಮಗಳ ಬಗೆ ಬೋಧಿಸಲಾಗುತ್ತಿದೆ. ಎಸ್,ಸಿ ಗಳಿಗೆ ಮಾತ್ರ ಮೀಸಲಾತಿ ಎಂದು ಹೇಳುವ ಮೂಲಕ ಜಾತಿ ಜಾತಿಗಳ ನಡುವೆ ಎತ್ತಿ ಕಟ್ಟುವುದು. ಮುಸ್ಲಿಂ ಮಕ್ಕಳಾದರೆ ಅವರು ದೇಶದ್ರೋಹಿಗಳೆಂದು ಬಿಂಬಿಸುವುದು ಇಂದಿನ ಶಾಲಾ/ಕಾಲೇಜು ದಿನಗಳಲ್ಲಿ ಗುಟ್ಟಾಗಿ ಶಿಕ್ಷಕರಿಂದಲೆ ಆಚರಿಸಲ್ಪಡುತ್ತಿದೆ.
ನಮ್ಮ ಸಂದರ್ಭದಲ್ಲಿ ಟಿಪ್ಪು ಸುಲ್ತಾನ್ ಬಗ್ಗೆ ಪಾಠ ಮಾಡುವಾಗ ಮೈಸೂರಿನ ಹುಲಿ, ವೀರ, ಬ್ರಿಟೀಷರ ವಿರುದ್ಧ ಹೋರಾಡಿದ ಅಪ್ಪಟ ದೇಶಪ್ರೇಮಿ ಎಂದು ಕರೆಯುತ್ತಿದ್ದರು. ಆದರೆ ಇಂದು ಟಿಪ್ಪು ಬಗ್ಗೆ ಪಾಠ ಮಾಡುವಾಗ ಧರ್ಮಾಂಧ, ಕಾಮಾಂಧ, ಹಿಂದೂ ದ್ರೋಹಿ ಎಂದೆ ಪಾಠ ಪ್ರಾರಂಭಿಸುತ್ತಾರೆ. ಯಾವುದೇ ಜಾತಿ, ಧರ್ಮಗಳ ಗೋಜಿಲ್ಲದೆ ತಿನ್ನುತ್ತಿದ್ದ ನಮ್ಮ ಸಂದರ್ಭದಂತಹ ವ್ಯವಸ್ಥೆಯು ಇಂದು ಉಳಿದುಕೊಂಡಿಲ್ಲ. ಪ್ರತಿಯೊಂದು ಜಾತಿಯ ಮಕ್ಕಳು ಗುಂಪು ಮಾಡಿಕೊಂಡು ಊಟ ಮಾಡುತ್ತಾರೆ. ದಲಿತ ಮಕ್ಕಳನ್ನು ಪ್ರತ್ಯೇಕವಾಗಿ ಕೂರಿಸಲಾಗುತ್ತದೆ. ಎಷ್ಟೋ ಶಾಲೆಗಳಲ್ಲಿ ದಲಿತ ಮಕ್ಕಳಿಗೆಂದೆ ಪ್ರತ್ಯೇಕ ಕೊಠಡಿಗಳನ್ನು ಮಾಡಲಾಗಿದೆ. ದಲಿತ ಹೆಣ್ಣು ಮಗಳು ಅಡುಗೆ ಮಾಡಿದಳು ಎಂಬ ಕಾರಣಕ್ಕೆ ಇತರೆ ಜಾತಿಯ ಮಕ್ಕಳು ಊಟವನ್ನೆ ಬಹಿಷ್ಕರಿಸಿದ ಉದಾಹರಣೆಗಳು ನಮ್ಮ ಕಣ್ಣ ಮುಂದೆಯೆ ಸಾಕಷ್ಟು ನಡೆದವು. ಪೂರ್ಣ ಚಂದ್ರ ತೇಜಸ್ವಿಯವರು ಹೇಳುತ್ತಾರಲ್ಲ, ಇಷ್ಟೆಲ್ಲಾ ಓದಿದರು ಇನ್ನೂ ಕೂಡ ತಮ್ಮ ಮಕ್ಕಳಿಗೆ ಗೌಡ, ಶೆಟ್ಟಿ ಎಂದು ಹೆಸರಿಡಿಡುತ್ತಾರೆಂದರೆ ಅವರಿಗೆ ಒಂದೊಳ್ಳೆ ಪುಸ್ತಕ ಸಿಕ್ಕಿಲ್ಲ ಅಥವಾ ಒಬ್ಬ ಒಳ್ಳೆ ಮಾರ್ಗದರ್ಶಕ ಸಿಕ್ಕಿಲ್ಲ ಅಂತ ಅದು ನಿಜಕ್ಕೂ ದಿಟವೇ ಆಗುತ್ತಿದೆ. ಇದಕ್ಕೆ ಕಾರಣ ಇಂದಿನ ಶಿಕ್ಷಕರು, ಅವರು ಜಾತಿ ವಿನಾಶ, ಧರ್ಮ ನಿರಪೇಕ್ಷ ಮತ್ತು ಸಮಾಜವಾದದ ನೆಲೆಗಟ್ಟಿನಲ್ಲಿ ಮಾರ್ಗದರ್ಶನ ಮಾಡದೆ, ಧಾರ್ಮಿಕ ಕೇಂದ್ರದ ನೆಲೆಗಟ್ಟಿನಲ್ಲಿ ಬೋಧಿಸುತ್ತಿರುವಿದೆ ಕಾರಣವಾಗಿದೆ.
ನಾವು ಶಾಲೆಗೆ ಹೋಗುವಾಗ ಟೀಚರ್ಸ್ ಬಂದರೆ ಗುಡ್ ಮಾರ್ನಿಂಗ್ ಟೀಚರ್ಸ್ ಎಂದು ಕರೆಯುತಿದ್ದೆವು. ಆದರೆ ಇಂದು ಎಷ್ಟೊ ಶಾಲೆಗಳಲ್ಲಿ ಟೀಚರ್ಸ್ ಬಂದರೆ ಹರಿ ಓಂ ಸರ್ ಎಂದು ಕರೆಯುತ್ತಾರೆ. ರಾಮಕೃಷ್ಣ ಆಶ್ರಮದ ಶಾಲೆಯಲ್ಲಿ ನನ್ನ ಸ್ನೇಹಿತನೊಬ್ಬ ಶಿಕ್ಷಕನಾಗಿದ್ದ ಅವನು ಮತ್ತು ನಾನು ಒಬ್ಬರು ದಾರಿಯಲ್ಲಿ ನಡೆದು ಹೋಗುತಿದ್ದೆವು. ಅದೇ ಸಂದರ್ಭದಲ್ಲಿ ಆತನ ವಿದ್ಯಾರ್ಥಯೊಬ್ಬ ಎದುರಾಗಿ ಹರಿ ಓಂ ಸರ್ ಎಂದ. ಅದಕ್ಕೆ ನಾನು ಕೇಳಿದೆ, ಲೋ ಏನೊ ಇದು ಅವಸ್ಥೆ ಅಂತ. ಏನ್ ಮಾಡೊದು ಗುರು ಹೊಟ್ಟೆ ಪಾಡು ಸಂಸ್ಥೆ ಹೇಳಿದಂಗೆ ಕೇಳಬೇಕು ಅಲ್ವ ಅಂದ. ನಾವು ಓದುವ ಸಂದರ್ಭದಲ್ಲಿ ನಮಗೆ ಬಹುತೇಕ ಕುವೆಂಪು, ಬೇಂದ್ರೆಯವರ ಪದ್ಯಗಳು ಮತ್ತು ವೈಚಾರಿಕತೆಯನ್ನು ಹೇಳೊರು, ಆದರೆ ಇಂದು ಶಾಖೆಗಳ ಭಜನಾ ಕೇಂದ್ರಗಳಾಗಿವೆ.
ಹಿಜಾಬ್ ಗೆ ಬರುವುದಾದರೆ ಅಂದು ಹಿಜಾಬ್ ವಿಷಯ ಇರಲೇ ಇಲ್ಲ. ಶಾಲೆಯಲ್ಲಾಗಲಿ, ಕಾಲೇಜಿನಲ್ಲಾಗಲಿ ಇರಲಿಲ್ಲ. ಒಂದು ವೇಳೆ ಹಿಜಾಬ್ ಧರಿಸಿ ಬಂದರೂ ಅದಕ್ಕೆ ಯಾವುದೇ ಅಡ್ಡಿಯೂ ಇರಲಿಲ್ಲ. ಹಾಗೆಯೆ ರಾಕಿ ಕಟ್ಟುವುದು, ಹೋಳಿ ಆಚರಿಸುವುದು, ಬಳೆ, ಕುಂಕುಮ ಹಾಕುವುದು ಯಾವುದು ಇರಲಿಲ್ಲ. ಆದರೆ ಇಂದು ಹಿಂದೂ ಸಾಂಪ್ರದಾಯಿಕ ನೆಲೆಗಳಾದ ರಾಕಿ ಕಟ್ಟುವುದು, ಹೋಳಿ ಆಚರಿಸುವುದು, ಕುಂಕುಮ, ಬಳೆ ಎಲ್ಲಾ ರೀತಿಯ ಸಾಂಪ್ರಾದಾಯಿಕ ಆಚರಣೆಗಳು ಶಾಲೆಗಳಲ್ಲಿ ಕಡ್ಡಾಯವಾಗಿವೆ. ಹಿಂದೂ ಧಾರ್ಮಿಕ ಆಚರಣೆಗಳಿಗೆ ಶಾಲಾ/ಕಾಲೇಜುಗಳಲ್ಲಿ ಅವಕಾಶವಿದೆ ಎನ್ನುವುದಾದರೆ ಮುಸಲ್ಮಾನರಿಗೇಕಿಲ್ಲ? ಸರಸ್ವತಿ, ಗಣಪತಿ ಪೂಜೆಗೆ ಅವಕಾಶವಿದೆ ಎನ್ನುವುದಾದರೆ ದಲಿತರು ಮತ್ತು ಹಿಂದುಳಿದವರ ಪರಂಪರೆಯವರಾದ ಶಿವ, ಮಂಟೇಸ್ವಾಮಿ, ಮಹದೇಶ್ವರ ಪೂಜೆಗೆ ಏಕೆ ಅವಕಾಶವಿಲ್ಲ? ಇವೆಲ್ಲವೂ ಇತ್ತೀಚಿನ ದಿನಗಳಲ್ಲಿ ಶಾಲಾ/ಕಾಲೇಜು ಮಟ್ಟದಲ್ಲಿ ನಡೆಯುತ್ತಿರುವ ಬಿಜೆಪಿ ಅಜೆಂಡಾದ ರಾಜಕಾರಣ. ದಲಿತರು ಮತ್ತು ಮುಸಲ್ಮಾನರನ್ನು ಶಿಕ್ಷಣದಿಂದ ಹೊರಗಿಡುವ ಬಹುದೊಡ್ಡ ಹುನ್ನಾರವೆ ಜಾತಿ ಮತ್ತು ಧರ್ಮ ರಾಜಕಾರಣದ ಒಳಸುಳಿಯಾಗಿದೆ ಎಂಬುದನ್ನು ನಾವು ಎಚ್ಚರದಿಂದಲೇ ನಿಗಾ ವಹಿಸಬೇಕು.