ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಜ್ಯದಲ್ಲಿ ವಾರಾಂತ್ಯ ಕರ್ಫ್ಯೂ ರದ್ದುಪಡಿಸಲಾಗಿದೆ. ಸಭೆಯಲ್ಲಿ ಭಾಗವಹಿಸಿದ ತಜ್ಞರ ಸಮಿತಿ ಸದಸ್ಯರು ಕೆಲ ಸಲಹೆಗಳನ್ನು ನೀಡಿದ್ದಾರೆ.
ಇಂದು ಮುಖ್ಯಮಂತ್ರಿ ಗೃಹ ಕಛೇರಿ ಕೃಷ್ಣದಲ್ಲಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ರಾಜ್ಯದ ಕೋವಿಡ್ ಸ್ಥಿತಿಗತಿ ಕುರಿತ ಪರಿಶೀಲನಾ ಸಭೆಯಲ್ಲಿ ಮುಖ್ಯಾಂಶಗಳ ಸಮಗ್ರವಾಗಿ ಚರ್ಚೆ ನಡೆದಿದೆ.
ರಾಜ್ಯದಲ್ಲಿ ಸರಾಸರಿ ಮೂರು ದಿನಕ್ಕೆ ಕೋವಿಡ್ ಸೋಂಕಿನ ಪ್ರಕರಣಗಳು ದ್ವಿಗುಣಗೊಳ್ಳುತ್ತಿವೆ. ಒಬ್ಬ ಸೋಂಕಿತನಿಂದ ಸರಾಸರಿ 26 ಜನರಿಗೆ ಸೋಂಕು ಹರಡುತ್ತಿದೆ. ವಾರಾಂತ್ಯ ಕರ್ಫ್ಯೂ ರದ್ದುಗೊಳಿಸಿದರೂ ಸರ್ಕಾರ ಸಾಕಷ್ಟು ಎಚ್ಚರಿಕೆ ವಹಿಸುವುದು ಅಗತ್ಯ ಎಂದು ತಜ್ಞರ ಸಮಿತಿ ಸದಸ್ಯರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಕೋವಿಡ್ 19 ನಿರ್ವಹಣೆಯ ಮುಂಚೂಣಿಯ ಕಾರ್ಯಕರ್ತರು ಹೆಚ್ಚಿನ ಪ್ರಮಾಣದಲ್ಲಿ ಸೋಂಕಿಗೆ ಒಳಗಾಗುತ್ತಿರುವುದನ್ನು ಸಭೆಯಲ್ಲಿ ಗಮನಿಸಲಾಯಿತು. ಜನರ ಜೀವ ಮತ್ತು ಜೀವನ ನಿರ್ವಹಣೆ ಎರಡೂ ಸರಿದೂಗಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಈ ಎಲ್ಲ ಅಂಶಗಳನ್ನು ಪರಿಶೀಲಿಸಿದ ನಂತರ ರಾತ್ರಿ ಕರ್ಫ್ಯೂ ಅವಧಿ ವಾರದ ಏಳೂ ದಿನಗಳಲ್ಲಿ ರಾತ್ರಿ 10 ರಿಂದ ಬೆಳಿಗ್ಗೆ 5ರವರೆಗೆ ಜಾರಿಯಲ್ಲಿಡಲು ನಿರ್ಧರಿಸಲಾಗಿದೆ.
ವಾರಾಂತ್ಯ ಮತ್ತು ರಾತ್ರಿ ಕರ್ಫ್ಯೂ ಕುರಿತು ತಜ್ಞರೊಂದಿಗೆ ಸವಿವರವಾಗಿ ಚರ್ಚಿಸಲಾಯಿತು. ಯಾವುದೇ ಸ್ಥಳದಲ್ಲಿ ಹೆಚ್ಚಿನ ಜನಸಂದಣಿಯಾಗದಂತೆ ನೋಡಿಕೊಳ್ಳುವುದು ಸೂಕ್ತ ಎಂದು ತಜ್ಞರು ಅಭಿಪ್ರಾಯಪಟ್ಟರು.
ಕೋವಿಡ್ ಪರಸ್ಥಿತಿ ಬಗ್ಗೆ ಸಭೆಗೆ ಮಾಹಿತಿ
ಸಭೆಯ ಆರಂಭದಲ್ಲಿ ಜನವರಿ 20ರ ಮಾಹಿತಿಯಂತೆ ರಾಜ್ಯದಲ್ಲಿ ಒಟ್ಟು 2,93,231 ಸಕ್ರಿಯ ಪ್ರಕರಣಗಳಿವೆ. ಇದಲ್ಲಿ 2.86 ಲಕ್ಷ ಮಂದಿ ಮನೆ ಆರೈಕೆಯಲ್ಲಿದ್ದು, ಒಟ್ಟು 5344 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅದರಲ್ಲಿ 340 ಜನ ಐಸಿಯುನಲ್ಲಿದ್ದರೆ, 127 ಮಂದಿ ವೆಂಟಿಲೇಟರ್ನಲ್ಲಿದ್ದಾರೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗೆ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಸೋಂಕು ತಗಲುತ್ತಿದೆ. ಬೆಂಗಳೂರಿನ ಜೊತೆಗೆ ಇತರ ಜಿಲ್ಲೆಗಳಲ್ಲಿಯೂ ಕೊರೊನಾ ಪ್ರಕರಣಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಬೆಂಗಳೂರನ್ನು ಹೊರತು ಪಡಿಸಿ ಮೈಸೂರು, ತುಮಕೂರು, ಹಾಸನ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹೆಚ್ಚಿನ ಕೋವಿಡ್ ಪ್ರಕರಣ ವರದಿಯಾಗಿವೆ. ಅಲ್ಲಿ ಪ್ರಕರಣ ಸರಾಸರಿ ದರ ಶೇ. 19.94 ರಲ್ಲಿದೆ. ಮಕ್ಕಳು ಶೇ.8ರಷ್ಟಿದ್ದು, ವಯಸ್ಕರ ಪ್ರಮಾಣದ ದರ ಶೇ. 16.57 ರಷ್ಟಿದೆ.
ಆಸ್ಪತ್ರೆಗೆ ದಾಖಲಾಗಿರುವ ಮಕ್ಕಳ ಪ್ರಮಾಣದ ಮೇಲೆ ನಿಗಾವಹಿಸಲಾಗುತ್ತಿದೆ. ಕಳೆದ ಎರಡು ಮೂರು ದಿನಗಳಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿದೆ. ಇದರಲ್ಲಿ 60 ವರ್ಷ ಮೇಲ್ಪಟ್ಟವರು ಹಾಗೂ ಕೊ-ಮಾರ್ಬಿಡಿಟಿ ಇದ್ದವರ ಸಂಖ್ಯೆ ಹೆಚ್ಚಿದೆ.
ರಾಜ್ಯದಲ್ಲಿ ಮಂಜೂರಾಗಿರುವ 243 ಪಿಎಸ್ಎ ಪ್ಲಾಂಟ್ಗಳ ಪೈಕಿ 225 ಕಾರ್ಯಾರಂಭ ಮಾಡಿವೆ. ಎಲ್ಲಾ ಜಿಲ್ಲಾಸ್ಪತ್ರೆಗಳು, 13 ತಾಲೂಕು ಆಸ್ಪತ್ರೆಗಳಲ್ಲಿ ಪಿಎಸ್ಎ ಪ್ಲಾಂಟ್ಗಳು ಕಾರ್ಯಾರಂಭ ಮಾಡಿವೆ ಎಂದು ವಿವರ ನೀಡಿದರು.
ಮುಂದಿನ ವಾರ ಕೋವಿಡ್ ಪ್ರಕರಣಗಳು ಹೆಚ್ಚಳ
ಕೋವಿಡ್ ಪ್ರಕರಣಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿದ್ದರೂ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ ಏರಿಕೆ ಇಲ್ಲವೆಂಬ ಅಂಶವನ್ನು ಗಮನಿಸಲಾಯಿತು. ಸೋಂಕಿನ ಪ್ರಮಾಣವೂ ಹೆಚ್ಚಾಗಿದೆ. ಆದರೆ, ಮುಂದಿನ ವಾರದಲ್ಲಿ ಪ್ರಕರಣಗಳ ಸಂಖ್ಯೆ ಉತ್ತುಂಗಕ್ಕೆ ತಲುಪುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟರು.
ಮುಂದಿನವಾರ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣವನ್ನು ನೋಡಿಕೊಂಡು ಮತ್ತಷ್ಟು ಕಠಿಣ ನಿರ್ಬಂಧಗಳನ್ನು ವಿಧಿಸುವ ಬಗ್ಗೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲು ತೀರ್ಮಾನ ಮಾಡಲಾಗಿದೆ.
ಶಾಲೆಗಳು ಆರಂಭ
ಬೆಂಗಳೂರು ಹೊರತುಪಡಿಸಿ ಉಳಿದೆಡೆಗಳಲ್ಲಿ ಶಾಲೆ ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಬೆಂಗಳೂರಿನಲ್ಲಿ ಸದ್ಯಕ್ಕೆ ಜನವರಿ 29ರವರೆಗೆ ಶಾಲೆಗಳು ಮುಚ್ಚಿರುತ್ತವೆ. ನಗರದಲ್ಲಿ ಶಾಲೆಗಳ ಆರಂಭದ ಬಗ್ಗೆ ಮುಂದಿನ ವಾರ ನಡೆಸಲಾಗುವ ಸಭೆಯಲ್ಲಿ ನಿರ್ಧಾರವಾಗಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ಬೆಂಗಳೂರು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಶಾಲೆಗಳು ಆರಂಬವಾಗಲಿದೆ. ಮಕ್ಕಳಿಗೆ ಸೋಂಕು ಹೆಚ್ಚಾದರೆ ಮಾತ್ರ ಶಾಲೆಯನ್ನು ಬಂದ್ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಸೋಂಕು ಹೆಚ್ಚಳವಾದರೆ ಮೂರು ದಿನ ಅಥವಾ 7 ದಿನ ಮಾತ್ರ ಶಾಲೆ ಬಂದ್ ಆಗಲಿದೆ. ಕಡಿಮೆ ಮಕ್ಕಳಿಗೆ ಸೋಂಕು ಬಂದರೆ 3 ದಿನ ಶಾಲೆ ಬಂದ್ ಮಾಡಲಾಗುವುದು, ಹೆಚ್ಚು ಮಕ್ಕಳಿಗೆ ಸೋಂಕು ಬಂದರೆ, ಅಂದರೆ 25-30 ಮಕ್ಕಳಿಗೆ ಸೋಂಕು ಬಂದರೆ 7 ದಿನ ಶಾಲೆ ಬಂದ್ ಮಾಡಲಾಗುವುದು. ಶಾಲೆ ಬಂದ್ ಬಗ್ಗೆ ಸ್ಥಳೀಯ ಅಧಿಕಾರಿಗಳು ನಿರ್ಧರಿಸುತ್ತಾರೆ ಎಂದು ಸಚಿವರು ತಿಳಿಸಿದ್ದಾರೆ.
ಈವರೆಗೆ ರಾಜ್ಯದಲ್ಲಿ 5 ಲಕ್ಷಕ್ಕಿಂತ ಹೆಚ್ಚು ಮಕ್ಕಳಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ. ಈ ಪೈಕಿ ಶೇ.5ರಷ್ಟು ಮಕ್ಕಳಿಗೆ ಮಾತ್ರ ಸೋಂಕು ಪತ್ತೆ ಆಗಿದೆ. ತುಮಕೂರು, ಮೈಸೂರು ಜಿಲ್ಲೆಯಲ್ಲಿ ಹೆಚ್ಚಿನ ಮಕ್ಕಳಿಗೆ ಸೋಂಕು ಕಾಣಿಸಿಕೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.