ಯಾದಗಿರಿ: ಕೋವಿಡ್ ಸೋಂಕಿನಿಂದ ಅಕಾಲಿಕವಾಗಿ ಮರಣ ಹೊಂದಿದ ವ್ಯಕ್ತಿಯ ಕುಟುಂಬಸ್ಥರಿಗೆ ರಾಜ್ಯ ಸರ್ಕಾರ ನೀಡಿರುವ ಪರಿಹಾರ ಮೊತ್ತದ ಚೆಕ್ ಈಗ ಬೌನ್ಸ್ ಆಗಿರುವ ಪ್ರಕರಣ ನಡೆದಿದೆ. ಕೈಯಲ್ಲಿ ಚೆಕ್ ಇದ್ದರೂ ಹಣ ಮಾತ್ರ ಸಿಗುತ್ತಿಲ್ಲ. ಪರಿಹಾರ ಹಣ ಸಿಗದೆ ಫಲಾನುಭವಿಗಳು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಕೊರೊನಾದಿಂದ ಮೃತಪಟ್ಟ ಬಿಪಿಎಲ್ ಕಾರ್ಡು ಹೊಂದಿರುವ ಕುಟುಂಬಗಳಿಗೆ ರಾಜ್ಯ ಸರ್ಕಾರ 1 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿತ್ತು. ಅದರಂತೆಯೇ ಶಾಸಕರ ಸಮ್ಮುಖದಲ್ಲಿ ಫಲಾನುಭವಿಗಳಿಗೆ ಚೆಕ್ ವಿತರಿಸಲಾಗಿತ್ತು. ಆದರೆ, ಈಗ ಇತರೆ ಕಾರಣ ಎಂದು ಬರೆದು ಚೆಕ್ ವಾಪಸ್ಸು ಬ್ಯಾಂಕ್ ಸಿಬ್ಬಂದಿ ವಾಪಸ್ಸು ಮಾಡಿದ್ದಾರೆ. ಚೆಕ್ ನಗದೀಕರಣಕ್ಕಾಗಿ ಹತ್ತಾರು ಬಾರಿ ಬ್ಯಾಂಕುಗಳಿಗೆ ಅಲೆದಾಡಿದರೂ ಪ್ರಯೋಜನವಾಗದೆ ಅವರು ಗೊಂದಲಕ್ಕೆ ಒಳಗಾಗಿದ್ದಾರೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಜಾಲಿಬೆಂಚಿಯ ಬಸಣ್ಣಗೌಡ ಎಂಬುವವರು ಕೊರೊನಾದಿಂದ ಮೃತಪಟ್ಟ ವ್ಯಕ್ತಿ. ಪರಿಹಾರಕ್ಕಾಗಿ ಅವರ ಮಗಳು ಅನಿತಾ ಎಲ್ಲಾ ದಾಖಲೆಗಳ ಅರ್ಜಿ ಸಲ್ಲಿಸಿದ್ದರು. ಅದರಂತೆ ಅನಿತಾ ಸೇರಿದಂತೆ ಉಳಿದ ಅರ್ಹ ಅರ್ಜಿದಾರರಿಗೆ ಡಿಸೆಂಬರ್ 17ರಂದು ಸುರಪುರ ಶಾಸಕ ರಾಜುಗೌಡ ಸಮ್ಮುಖದಲ್ಲಿ ಚೆಕ್ ನೀಡಲಾಗಿತ್ತು.
ಸದ್ಯ ಅನಿತಾ ಚೆಕ್ ಹಿಡಿದು ಹಲವು ಬ್ಯಾಂಕುಗಳನ್ನು ಸುತ್ತುತಿದ್ದಾರೆ. ಬ್ಯಾಂಕ್ ಸಿಬ್ಬಂದಿ ವಿವಿಧ ಕಾರಣಗಳನ್ನು ನೀಡುತ್ತಿದ್ದಾರೆ. ಮತ್ತೆ ಕೆಲವು ಕಡೆ ಸರಿಯಾದ ಸ್ಪಂದನೆಯೇ ಸಿಗದೆ ಕುಟುಂಬ ನೊಂದಿದೆ.
ಅನಿತಾ ಅವರಿಗೆ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಯ 1 ಲಕ್ಷ ರೂ. ಮೊತ್ತದ ಚೆಕ್ (ಸಂಖ್ಯೆ: 406164, ದಿನಾಂಕ 08-12-2021) ನೀಡಲಾಗಿತ್ತು. ಸರ್ಕಾರದ ಈ ಚೆಕ್ಕನ್ನು ಸುರಪುರದ ಕರ್ನಾಟಕ ಗ್ರಾಮೀಣ ಬ್ಯಾಂಕಿನ(ಪಿಕೆಜಿಬಿ) ತಮ್ಮ ಖಾತೆಗೆ (11051100026688) ಜಮೆ ಮಾಡಿದ್ದ ಅನಿತಾ ನಗದೀಕರಣಕ್ಕೆ ಕಾಯುತ್ತಿದ್ದರು. ಆದರೆ, ಇದು ನಗದೀಕರಣವಾಗುತ್ತಿಲ್ಲ ಎಂದು ಬ್ಯಾಂಕಿನ ಅಧಿಕಾರಿಗಳು ತಿಳಿಸಿದ್ದಾರೆ.
ನಂತರ ಬ್ಯಾಂಕ್ ಅಧಿಕಾರಿಗಳ ಸೂಚನೆಯಂತೆ ಯಾದಗಿರಿಯ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಗೆ ಸಂಬಂಧಿಯೊಬ್ಬರು ತೆರಳಿ ವಿಚಾರಿಸಿದರೂ ಬ್ಯಾಂಕ್ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ತಿಂಗಳ ಹಿಂದೆಯೇ ನೀಡಿದ್ದ ಚೆಕ್ ಹಣಕ್ಕಾಗಿ ಹತ್ತಾರು ಬಾರಿ ಬ್ಯಾಂಕುಗಳಿಗೆ ತಿರುಗಾಡಿದರೂ ಸ್ಪಂದನೆ ಸಿಕ್ಕಿಲ್ಲ. ಕೊನೆಗೆ, ಕರ್ನಾಟಕ ಗ್ರಾಮೀಣ ಬ್ಯಾಂಕಿನಿಂದ ಚೆಕ್ ಸಮೇತ ಕಾರಣದ ಮಾಹಿತಿಯುಳ್ಳ ಚೀಟಿ ಬಂದಿದೆ. ‘ಅದರ್ ರೀಜನ್ಸ್’(ಇತರೆ ಕಾರಣಗಳು) ಎಂದು ನಮೂದಿಸಲ್ಪಟ್ಟ ಪತ್ರದ ಜೊತೆ ಚೆಕ್ ವಾಪಸ್ ಕಳುಹಿಸಲಾಗಿದೆ.
ಕೋವಿಡ್ ಪರಿಹಾರ ಹಣ ಪಡೆಯಲು ಇದೇ ರೀತಿ ಮತ್ತೊಂದು ಕುಟುಂಬವು ಅಲೆದಾಡಿ ಹೈರಾಣಾಗಿದೆ. ಚೆಕ್ ಪಡೆದ ದೇವಿಕೇರ ಗ್ರಾಮದ ಕುಟುಂಬ ಬ್ಯಾಂಕ್ಗೆ ಅಲೆದು ಅಲೆದು ಬೇಸತ್ತಿದೆ. ಸುರಪುರ ತಾಲೂಕಿನ ದೇವಿಕೇರ ಗ್ರಾಮದ ನಾಗಪ್ಪ ಕೋವಿಡ್ನಿಂದ ಮೃತಪಟ್ಟಿದ್ದರು. ಇವರ ಕುಟುಂಬಸ್ಥರಿಗೆ ಪರಿಹಾರದ ಚೆಕ್ ನೀಡಲಾಗಿತು. ಆದರೆ, ಎಷ್ಟೋ ಬ್ಯಾಂಕ್ಗಳಿಗೆ ಅಲೆಯುತ್ತಿದ್ದರೂ, ಹಣ ಮಾತ್ರ ಜಮೆ ಆಗುತ್ತಿಲ್ಲ ಎಂದು ಕುಟುಂಬ ಅಳಲು ತೋಡಿಕೊಂಡಿದೆ.
ಇದೇ ರೀತಿ, ಮಹಾದೇವಿ ಎನ್ನುವ ಫಲಾನುಭವಿ ಅರ್ಜಿದಾರರಿಗೆ ವಿತರಿಸಲಾದ ಚೆಕ್ ಸಹ ‘ಇತರೆ ಕಾರಣ’ಗಳಿಂದಾಗಿ ವಾಪಸ್ ಮನೆ ಸೇರಿದೆ. ಬ್ಯಾಂಕಿಗೆ ಹೋಗಿ ಕೇಳಿದರೆ ನೀವು ಯಾದಗಿರಿಗೆ ಹೋಗಿ ಕೇಳಿ ಎಂದು ಹೇಳುತ್ತಿದ್ದಾರೆಂದು ಮಹಾದೇವಿ ಅವರ ಸಂಬಂಧಿ ಹನುಮಂತ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದು ಕೇವಲ ಸುರಪುರ ಅಷ್ಟೇ ಅಲ್ಲ, ಜಿಲ್ಲೆಯ ವಿವಿಧೆಡೆ ನೀಡಿದ್ದ ಪರಿಹಾರದ ಚೆಕ್ಗಳಿಗೂ ಇಂಥದ್ದೇ ಪರಿಸ್ಥಿತಿ ಎದುರಾಗಿದೆ. ಫಲಾನುಭವಿಯೊಬ್ಬರು, ಹಣವಿಲ್ಲದಿದ್ದರೆ ನಾವು ಹೇಗೆ ಕೊಡೋದು ಅಂತ ಬ್ಯಾಂಕಿನವರು ದಬಾಯಿಸುತ್ತಾರೆ ಎಂದಿದ್ದಾರೆ.
ನಾನೇ ಕೆಲ ಫಲನಾಭವಿಗಳಿಗೆ ಕಳೆದ ತಿಂಗಳು ಪರಿಹಾರದ ಚೆಕ್ ವಿತರಣೆ ಮಾಡಿದ್ದೇನೆ. ಆದರೆ, ಜಾಲಿಬೆಂಚಿ ಹಾಗೂ ದೇವಿಕೇರದ ಕುಟುಂಬಗಳಿಗೆ ಚೆಕ್ ನೀಡಿದರೂ ಹಣ ಖಾತೆಗೆ ಜಮಾ ಆಗಿಲ್ಲ ಎನ್ನುವ ವಿಚಾರ ಗೊತ್ತಾಗುತ್ತಿದಂತೆ ಬ್ಯಾಂಕ್ ಮ್ಯಾನೇಜರ್ ಗೆ ಮಾತಾಡಿದ್ದೇನೆ ಇದು ಬ್ಯಾಂಕ್ ನವರ ತಪ್ಪಿನಿಂದ ಆಗಿದ್ದು ಸರಿಪಡಿಸಲು ಹೇಳಿದ್ದೇನೆ. ಪರಿಹಾರದ ಚೆಕ್ ವಾಪಸ್ ಆದರೆ ಸರ್ಕಾರಕ್ಕೆ ಅವಮಾನವಾದಂತೆ. ಹೀಗಾಗಿ, ಶುಕ್ರವಾರವೇ ಎಲ್ಲ ಮಾಹಿತಿ ಪಡೆದು ಪರಿಹಾರ ಹಾಕಿಸುತ್ತೇನೆ ಎಂದು ಸುರಪುರದ ಬಿಜೆಪಿ ಶಾಸಕ ನರಸಿಂಹ ನಾಯಕ್(ರಾಜೂಗೌಡ) ಹೇಳಿದ್ದಾರೆ.
ಚೆಕ್ ಬೌನ್ಸ್ ಆಗಿರುವ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೂ ಬಂದಿದೆ. ಯಾದಗಿರಿಯಲ್ಲಿ ಆಗಿರುವ ಘಟನೆಯ ಬಗ್ಗೆ ಪರಿಶೀಲನೆ ಮಾಡಿ ಕ್ರಮತೆಗೆದುಕೊಳ್ಳಲು ಹೇಳಿದ್ದೇನೆ ಎಂದು ತಿಳಿಸಿದ್ದಾರೆ.