ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸದ ಬಳಿಯೇ ಕರ್ತವ್ಯದಲ್ಲಿ ನಿಯೋಜನೆಗೊಂಡಿದ್ದ ಇಬ್ಬರು ಪೊಲೀಸರು ಗಾಂಜಾ ಮಾರಾಟದಲ್ಲಿ ಸಿಕ್ಕಿಬಿದ್ದ ಘಟನೆ ನಡೆದಿತ್ತು. ಈ ಬಗ್ಗೆ ಮಾತನಾಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಆ ಇಬ್ಬರು ಪೊಲೀಸರನ್ನು ಅಮಾನತು ಮಾಡಿದರೆ ಸಾಲದು. ಅವರಿಬ್ಬರನ್ನೂ ಕೆಲಸದಿಂದಲೇ ವಜಾ ಮಾಡಲು ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.
ಜನವರಿ 13ರಂದು ಮುಖ್ಯಮಂತ್ರಿ ಮನೆ ಮುಂದೆ ಭದ್ರತೆಗೆ ನಿಯೋಜನೆಯಾಗಿದ್ದ ಕೋರಮಂಗಲ ಪೊಲೀಸ್ ಠಾಣೆಯ ಪೇದೆಗಳಾದ ಸಂತೋಷ್ ಕುಮಾರ್ ಹಾಗೂ ಶಿವಕುಮಾರ್ ಎಂಬುವರನ್ನು ಗಾಂಜಾ ಮಾರಾಟ ದಂಧೆಯಲ್ಲಿ ಬಂಧಿಸಲಾಗಿತ್ತು.
ಚಾಮರಾಜಪೇಟೆ ವ್ಯಾಪ್ತಿಯಲ್ಲಿ ನಿರ್ಮಿಸಲಾಗುವ ಟ್ರಾಫಿಕ್ ಪೊಲೀಸ್ ಠಾಣೆಯ ಶಂಕುಸ್ಥಾಪನೆ ಕಾರ್ಯ ನೆರವೇರಿಸಿ, ಸುದ್ದಿಗಾರರೊಂದಿಗೆ ಸಚಿವರು ಪೊಲೀಸರಲ್ಲಿ ಕರ್ತವ್ಯಲೋಪ ಕಂಡುಬಂದರೆ ಬರೀ ಅಮಾನತ್ತಲ್ಲ, ವಜಾ ಮಾಡಲು ಸೂಚಿಸುತ್ತೇನೆ. ಅಪರಾಧ ಕೃತ್ಯ ತಡೆಯಬೇಕಾದ ಪೊಲೀಸರಿಂದಲೇ ಅಪರಾಧ ಸಲ್ಲದು. ಒಂದೇ ತಿಂಗಳಲ್ಲಿ ನಾಲ್ಕು ಪ್ರತ್ಯೇಕ ಪ್ರಕರಣಗಳಲ್ಲಿ ಪೊಲೀಸರು ಭಾಗಿಯಾದ ಬಗ್ಗೆ ತಿಳಿದುಬಂದಿದೆ. ಪೊಲೀಸರಿಂದ ಕರ್ತವ್ಯ ಲೋಪದ ಗಂಭೀರ ಆರೋಪ ಕೇಳಿ ಬಂದಿತ್ತು. ಭ್ರಷ್ಟಾಚಾರ, ಕಳವು, ಡ್ರಗ್ಸ್ ದಂಧೆ, ರೆಡ್ ಸ್ಮಗ್ಲಿಂಗ್ ಕೇಸಲ್ಲಿ ಐವರು ಸಿಬ್ಬಂದಿ ಭಾಗಿಯಾಗಿದ್ದರು. ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ತನಿಖೆಯ ಒಟ್ಟಾರೆ ಮಾಹಿತಿ ಪಡೆದಿದ್ದಾರೆ. ಇದೇ ವೇಳೆ ಪ್ರಕರಣದ ತನಿಖೆಯಲ್ಲಿ ಕಂಡುಬಂದ ಲೋಪದಿಂದಲೇ ಆರೋಪಿಗಳಿಗೆ ಜಾಮೀನು ಸಿಕ್ಕಿರುವುದೆಂದು ತಿಳಿದು ಬಂದಿದೆ. ಹೀಗಾಗಿ ಆರ್ ಟಿ ನಗರ ಇನ್ಸ್ಪೆಕ್ಟರ್ ಅಶ್ವತ್ ಗೌಡ ಹಾಗೂ ಸಬ್ ಇನ್ಸ್ಪೆಕ್ಟರ್ ವೀರಭದ್ರ ಇಬ್ಬರನ್ನು ಅಮಾನತ್ತು ಮಾಡಿ ಆದೇಶಿಸಿದ್ದಾರೆ.
ಸಿಬ್ಬಂದಿಗಳ ಪೂರ್ವಪರ ಪರಿಶೀಲನೆ ನಡೆಸದೆ, ಮುಖ್ಯಮಂತ್ರಿ ನಿವಾಸಕ್ಕೆ ಕಾವಲು ಇರಿಸಿದ್ದಕ್ಕೆ ಇಬ್ಬರು ಡಿಸಿಪಿಗಳಗೆ ನಗರ ಪೊಲೀಸ್ ಆಯುಕ್ತರು ಮೊಮೋ ನೀಡಿದ್ದಾರೆ. ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಶಿ ಹಾಗೂ ಡಿಸಿಪಿ ಮಂಜುನಾಥ್ ಬಾಬುಗೆ ಮೆಮೋ ನೀಡಿ ಉತ್ತರ ಕೇಳಿದ್ದಾರೆ.
ಪ್ರಕರಣ ಸಿಸಿಬಿಗೆ ವರ್ಗಾವಣೆ
ಇಬ್ಬರು ಪೇದೆಗಳು ಗಾಂಜಾ ಮಾರಾಟ ಪ್ರಕರಣ ಸಂಬಂಧ ತನಿಖೆ ಪಾರದರ್ಶಕವಾಗಿ ನಡೆಸಿಲ್ಲ ಎಂದು ಆರ್.ಟಿ.ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಹಾಗೂ ಸಬ್ ಇನ್ಸ್ಪೆಕ್ಟರ್ ಅಮಾನತುಗೊಂಡ ಬೆನ್ನಲೇ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆಗೊಂಡಿದೆ. ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶಿಸಿದ್ದಾರೆ.
ಇನ್ಸ್ಪೆಕ್ಟರ್ ಯಿಂದ ಮಹಿಳೆ ಜೊತೆ ಅಸಭ್ಯ ವರ್ತನೆ
ಹೆಣ್ಣೂರು ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ವಸಂತ್ ಕುಮಾರ್ ವಿರುದ್ಧ ಗೃಹಿಣಿಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ನ್ಯಾಯ ಕೇಳೋಕೆ ಹೋದ್ರೆ ನನ್ನ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಠಾಣೆಯಲ್ಲೇ ನನ್ನ ಮೈ ಕೈ ಮುಟ್ಟಿದ್ದಾರೆ. ಸಾಲದಕ್ಕೆ 5 ಲಕ್ಷ ಲಂಚ ಕೊಡುವಂತೆ ಕೇಳಿದ್ದಾರೆ ಅಂತಾ ಸಂತ್ರಸ್ತೆ ಮಹಿಳೆ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ಭೋಗ್ಯಕ್ಕೆ ಪಡೆದವರಿದ್ಲೇ ಸುಳ್ಳು ಅಟ್ರಾಸಿಟಿ ಕೇಸ್ ದಾಖಲಿಸಲು ಕುಮ್ಮಕ್ಕು ನೀಡಿದ್ದಾರೆಂದು ಆರೋಪಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ಪಂತ್ ಕಚೇರಿಗೆ ದೂರು ನೀಡಿದ್ದಾರೆ.
ಹೆಣ್ಣೂರು ಇನ್ಸ್ಪೆಕ್ಟರ್ ವಸಂತ್ ಕುಮಾರ್ ಮೇಲಿನ ಆರೋಪದ ಸತ್ಯಾಸತ್ಯತೆ ಹೊರಬೀಳಬೇಕಿದೆ. ತನಿಖೆಯನ್ನು ಕೈಗೊಳ್ಳಲು ಪೂರ್ವ ವಿಭಾಗದ ಡಿಸಿಪಿ ನೇತೃತ್ವದಲ್ಲಿ ವಿಚಾರಣೆಗೆ ಆದೇಶ ಹೊರಡಿಸಲಾಗಿದೆ. ಡಿಸಿಪಿ ಡಾ.ಎಸ್.ಡಿ.ಶರಣಪ್ಪಗೆ ಪ್ರಕರಣದ ತನಿಖೆಯ ಹೊಣೆ ನೀಡಲಾಗಿದೆ.