ಚುನಾವಣೆಯಲ್ಲಿ ಇವಿಎಂ ಬದಲು ಮತಪತ್ರ ಬಳಕೆ: ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ

ನವದೆಹಲಿ: ಚುನಾವಣೆಗಳಲ್ಲಿ ಮತಪತ್ರಗಳ ಬದಲಾಗಿ ವಿದ್ಯುನ್ಮಾನ ಮತ ಯಂತ್ರಗಳ(ಇವಿಎಂ) ಬಳಕೆ ಮಾಡಲಾಗುತ್ತಿದೆ. ಪ್ರಜಾ ಪ್ರಾತಿನಿಧ್ಯ ಕಾಯ್ದೆಯ ನಿಯಮದ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್‌ ಒಪ್ಪಿಗೆ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ನೇತೃತ್ವದ ನ್ಯಾಯಪೀಠಕ್ಕೆ ವಕೀಲ ಎಂ.ಎಲ್‌.ಶರ್ಮಾ ಎಂಬುವವರು ಈ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

‘ಇವಿಎಂಗಳ ಬಳಕೆಗೆ ಪ್ರಜಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 61ಎ ಅವಕಾಶ ಕಲ್ಪಿಸುತ್ತದೆ. ಆದರೆ, ಕಾಯ್ದೆಯ ಈ ನಿಯಮವನ್ನು ಸಂಸತ್‌ನಲ್ಲಿ ಅಂಗೀಕರಿಸಿಲ್ಲ. ಹೀಗಾಗಿ ಈ ನಿಯಮವನ್ನು ಜಾರಿಗೊಳಿಸಬಾರದು’ ಎಂದು ಶರ್ಮಾ ಅವರು ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ.

ದೇಶದಲ್ಲಿ ನಡೆಯುವ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳ ಬದಲಾಗಿ ಮತಪತ್ರಗಳನ್ನು ಬಳಸಿದರೆ ಉತ್ತಮ ಎಂದು ಹಿರಿಯ ವಕೀಲ ಎಂ.ಎಲ್.ಶರ್ಮಾ ವಾದಿಸಿದರು.

ಭಾರತೀಯ ಚುನಾವಣಾ ಆಯೋಗವು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಮತಪತ್ರಗಳ ಬದಲಾಗಿ ವಿದ್ಯುನ್ಮಾನ ಮತಯಂತ್ರಗಳ ಬಳಕೆಯನ್ನು ಅನುಷ್ಠಾನಕ್ಕೆ ತಂದಿದೆ. ಈಗಾಗಲೇ ಹಲವು ಚುನಾವಣೆಗಳು ಈ ವಿದ್ಯುನ್ಮಾನ ಮತಯಂತ್ರಗಳ ಮೂಲಕವೇ ನಡೆದಿವೆ. ಹಲವು ರಾಜಕೀಯ ನಾಯಕರು ಮತ್ತು ಪಕ್ಷಗಳು ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಹಿಂದಿನಂತೆ ಮತಪತ್ರ ಬಳಕೆಯನ್ನೇ ಜಾರಿಗೆ ತರಬೇಕೆಂದು ಒತ್ತಾಯ ಕೂಡ ಮಾಡಿದ್ದವು.

ಪಂಚರಾಜ್ಯ ಚುನಾವಣೆ ನಡೆಯುವ ಸಂದರ್ಭದಲ್ಲೇ ಈ ಮತಪತ್ರದ ವಿಚಾರದ ಚರ್ಚೆ ಮುನ್ನೆಲೆಗೆ ಬಂದಿದೆ. ಚುನಾವಣೆಯಲ್ಲಿ ಮತಪತ್ರ ಬಳಕೆ ಮಾಡುತ್ತಿದ್ದಾಗ ಮತ ಎಣಿಕೆ ಮತ್ತು ಫಲಿತಾಂಶ ನೀಡಿಕೆ ವಿಳಂಬವಾಗುತ್ತಿತ್ತು. ಅಸಿಂಧು ಮತಗಳ ಪ್ರಮಾಣವೂ ಕಂಡುಬರುತ್ತಿತ್ತು.

ಆದರೆ, ವಿದ್ಯುನ್ಮಾನ ಮತಯಂತ್ರ ಬಳಕೆಯಾದ ಮೇಲೆ ಅಸಿಂಧು ಮತಗಳಿಗೆ ಅವಕಾಶವಿಲ್ಲ. ಶೀಘ್ರವೇ ಮತ ಎಣಿಕೆ ಮತ್ತು ಫಲಿತಾಂಶ ನೀಡಬಹುದಾಗಿದೆ. ಅಲ್ಲದೆ, ಕಣದಲ್ಲಿರುವ ಅಭ್ಯರ್ಥಿಗಳು ಇಷ್ಟವಿಲ್ಲದಿದ್ದರೆ ಮತದಾರರು ನೋಟಾ ಚಲಾಯಿಸುವ ಅವಕಾಶ ಕೂಡ ಮತಯಂತ್ರದಲ್ಲಿ ಮಾಡಿಕೊಡಲಾಗಿದೆ.

Donate Janashakthi Media

Leave a Reply

Your email address will not be published. Required fields are marked *