- ಎವರೆಸ್ಟ್ ಸೀ ಫುಡ್ಸ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯಲ್ಲಿ ಅಮೋನಿಯಂ ಸೋರಿಕೆ
- ಘಟನೆಯಲ್ಲಿ 26 ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು
- ತನಿಖೆ ಬಳಿಕ ಕ್ರಮ ಎಂದ ಎನ್ ಶಶಿಕುಮಾರ
ಮಂಗಳೂರು : ಬೈಕಂಪಾಡಿ ಕೈಗಾರಿಕಾ ಪ್ರಾಂಗಣದಲ್ಲಿರುವ ಸೀಫುಡ್ ತಯಾರಿಕಾ ಘಟಕದಲ್ಲಿ ಅಮೋನಿಯಂ ಸೋರಿಕೆಯಾಗಿದ್ದು ಘಟನೆಯಲ್ಲಿ ಇಪ್ಪತ್ತು ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ.
ಎವರೆಸ್ಟ್ ಸೀ ಫುಡ್ಸ್ ಪ್ರೈ.ಲಿ ಎಂಬ ಫ್ಯಾಕ್ಟರಿಯಲ್ಲಿ ಈ ಘಟನೆ ನಡೆದಿದ್ದು, ಈ ಕಾರ್ಖಾನೆಯಲ್ಲಿ ಒಟ್ಟು 80 ಜನ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು, ಅಲ್ಪ ಪ್ರಮಾಣದಲ್ಲಿ ಅಮೋನಿಯ ಕೆಮಿಕಲ್ ಸೋರಿಕೆಯಾದ ಹಿನ್ನಲೆ 26 ಮಂದಿ ಕಾರ್ಮಿಕರು ನೋಡನೋಡುತ್ತಿದ್ದಂತೆ ಕುಸಿದು ಬಿದ್ದಿದ್ದಾರೆ. ಮಂಗಳವಾರ ಸಂಜೆ ವೇಳೆ ಈ ಘಟನೆ ನಡೆದಿದೆ.
ಘಟನೆ ನಡೆದ ತಕ್ಷಣ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. 10 ಜನ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ. 16 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಪಾಯದಿಂದ ಪಾರಾಗಿದ್ದಾರೆ
ಘಟನೆ ಬಗ್ಗೆ ಮಾಹಿತಿ ಸಿಗುತ್ತಲೇ ಸ್ಥಳಕ್ಕೆ ಅಗ್ನಿಶಾಮಕ, ಪಣಂಬೂರು ಪೊಲೀಸರು ದೌಡಾಯಿಸಿದ್ದಾರೆ. ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೂಕ್ತ ತನಿಖೆ ನಡೆಸಿದ ಬಳಿಕ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.