ಕೋವಿಡ್ ಮೂರನೇ ಅಲೆ ನಿಯಂತ್ರಣಕ್ಕೆ ಅಗತ್ಯ ಕ್ರಮವಹಿಸಲು ಸಿಪಿಐ(ಎಂ) ಒತ್ತಾಯ

ಬೆಂಗಳೂರು: ಕರ್ನಾಟಕ  ಸರಕಾರವು ಕೋವಿಡ್ -19 ಮೂರನೇ ಅಲೆಯ ನಿಯಂತ್ರಣಕ್ಕೆ ಲಸಿಕೆ ನೀಡುವ ಕಾರ್ಯಕ್ರಮ ಮತ್ತು ರಾತ್ರಿ ಹಾಗೂ ವಾರದ ಕೊನೆಯಲ್ಲಿ ಕರ್ಫ್ಯೂ ವಿಧಿಸಿದೆ. ಅಗತ್ಯವಿರುವ ಜನ ಸಮುದಾಯಗಳಿಗೆ ಲಸಿಕೆ ನೀಡುವ ಕ್ರಮವನ್ನು ನಾವು ಸ್ವಾಗತಿಸುತ್ತೇವೆ ಮತ್ತು ಅದನ್ನು ವೇಗವಾಗಿ ವಿಸ್ತರಿಸಲು ಒತ್ತಾಯಿಸುತ್ತೇವೆ. ಆದರೆ, ಇದು ಮತ್ತು ಕೇವಲ ಕರ್ಫ್ಯೂ ವಿಧಿಸುವ ಕ್ರಮಗಳು ಮಾತ್ರವೇ ಕೋವಿಡ್‌ ಸಾಂಕ್ರಾಮಿಕ ಹರಡದಂತೆ ತಡೆಯುತ್ತದೆಂಬ ಸರಕಾರದ ನಿರ್ಣಯವನ್ನು ಒಪ್ಪಲಾಗದು ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಕರ್ನಾಟಕ ರಾಜ್ಯ ಸಮಿತಿಯು ತಿಳಿಸಿದೆ.

ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿರುವ ಸಿಪಿಐ(ಎಂ) ಪಕ್ಷವು ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಅವರು ʻʻರಾಜ್ಯದಲ್ಲಿ ಕೋವಿಡ್-19 ಮೂರನೇ ಅಲೆಯು ವ್ಯಾಪಿಸುತ್ತಿದ್ದು ಜನವರ 04ರ ಮಾಹಿತಿಯಂತೆ ಸಕ್ರಿಯ ಪ್ರಕರಣಗಳ ಸಂಖ್ಯೆಯು 17,414 ಇದ್ದದ್ದು ಜನವರಿ 06ರ ಹೊತ್ತಿಗೆ 22,173 ಆಗಿ, ಸುಮಾರು 4,759 ಪ್ರಕರಣಗಳು ಹೆಚ್ಚಳಗೊಂಡಿವೆ. ಕೋವಿಡ್-19ರ ಮೊದಲ ಹಾಗೂ ಎರಡನೇ ಅಲೆಗಳನ್ನು ಆ ಸಂದರ್ಭಗಳಲ್ಲಿ ಪರಿಣಾಮಕಾರಿಯಾಗಿ ತಡೆಯಲು ಅಗತ್ಯವಾದ ವೈಜ್ಞಾನಿಕ ಕ್ರಮಗಳನ್ನು ಸಮರ್ಪಕವಾಗಿ ಕೈಗೊಳ್ಳದೇ ಹೋದುದರಿಂದ, ಹೆಚ್ಚಿನ ಸಂಖ್ಯೆಯಲ್ಲಿ ಸಾವುಗಳು ಸಂಭವಿಸುವಂತಾಯಿತು. ಇಂದಿಗೆ ಒಟ್ಟು 38,358 ಸಾವುಗಳು ಸಂಭವಿಸಿವೆʼʼ ಎಂದಿದ್ದಾರೆ.

ಮುಖ್ಯವಾಗಿ, ರಾಜ್ಯದ ಯಾವ ಯಾವ ಪ್ರದೇಶಗಳಲ್ಲಿ ಇದು ಕಂಡುಬಂದಿದೆಯೋ ,ಆ ಪ್ರದೇಶಗಳಲ್ಲಿ ಕೋವಿಡ್ ಪರೀಕ್ಷೆಗಳನ್ನು ಮನೆ ಮನೆಗೆ ತೆರಳಿ ಮಾಡುವುದನ್ನು ವ್ಯಾಪಕಗೊಳಿಸಬೇಕು. ಯಾವ ವಾರ್ಡುಗಳಲ್ಲಿ, ಪ್ರದೇಶಗಳಲ್ಲಿ ಪ್ರಕರಣಗಳು ಕಂಡುಬರುವವೋ ಅಂತಹ ವಾರ್ಡು ಅಥವಾ ಪ್ರದೇಶಗಳನ್ನು ನಿರ್ಬಂಧಿಸಿ, ಕಂಟೈನ್ಮೆಂಟ್ ವಲಯಗಳನ್ನು ರಚಿಸಿ  ಆ ಪ್ರದೇಶದ ಎಲ್ಲರನ್ನು ಪರೀಕ್ಷಿಸಿ ಅಗತ್ಯ ಶುಶೃಷೆಗೆ ತುರ್ತು ಕ್ರಮವಹಿಸಬೇಕು ಎಂದು ಸಿಪಿಐ(ಎಂ) ಪಕ್ಷವು ಮನವಿಯಲ್ಲಿ ತಿಳಿಸಿದೆ.

ಎರಡನೇ ಅಲೆಯಲ್ಲಿ ಆಸ್ಪತ್ರೆಯಲ್ಲಿ ಬೆಡ್‌ಗಳನ್ನು, ಆಮ್ಲಜನಕ, ಲಸಿಕೆ, ರೆಮ್ಡಿಸಿವರ್ ಔಷಧಿಗಳು ದೊರೆಯದಂತೆ, ಕೃತಕವಾಗಿ ಅಭಾವ ಉಂಟು ಮಾಡಿ ಕಾಳಸಂತೆಯಲ್ಲಿ ಮಾರಾಟ ಮಾಡಲಾಯಿತು. ಇದರಿಂದಾಗಿ, ಬೀದಿಯ ಮೇಲೆ ಅಂಬುಲೆನ್ಸ್ ಗಳಲ್ಲಿ ಜನತೆ ದೊಡ್ಡ ಸಂಖ್ಯೆಯಲ್ಲಿ ಸಾಯುವಂತಾಯಿತು. ಸಾವಿಗೀಡಾದವರ ಶವ ಸಂಸ್ಕಾರವು ಸರಕಾರಕ್ಕೆ ಸವಾಲಾಯಿತು. ಇಂತಹ ಅಕ್ರಮ ದಂಧೆಯಲ್ಲಿ ಆಡಳಿತ ಪಕ್ಷದ ಶಾಸಕರು, ಸಂಸದರು ಮತ್ತು ಹಿಂದೂ ಮತಾಂಧ ಶಕ್ತಿಗಳು ತಮ್ಮನ್ನು ತೊಡಗಿಸಿಕೊಂಡಿದ್ದು ಬಯಲಾಯಿತು. ತಮ್ಮ ಸರಕಾರ ಈ ಕುರಿತು ಇಂತಹ ಅಕ್ರಮ ದಂಧೆಯ ಮೇಲೆ ಯಾವುದೇ ರೀತಿಯ ಕ್ರಮಗಳನ್ನು ಇದುವರೆಗೆ ಕೈಗೊಳ್ಳದಿರುವುದು ತೀವ್ರ ಖಂಡನೀಯವಾಗಿದೆ. ಈ ಅವಧಿಯಲ್ಲಿ ಇಂತಹ ಅಕ್ರಮ ದಂದೆಗಳು ನಡೆಯದಂತೆ ಮತ್ತು ಆಸ್ಪತ್ರೆಯಲ್ಲಿ ಬೆಡ್ ಗಳು, ಔಷಧಿಗಳು, ಆಮ್ಲಜನಕದ ಕೊರತೆಯಾಗದಂತೆ ತೀವ್ರ ನಿಗಾ ವಹಿಸಬೇಕು ಮತ್ತು ವಾರ್ ರೂಂಗಳನ್ನು ಸ್ಥಾಪಿಸಿ ಪ್ರಕರಣಗಳಿಗನುಸಾರ ಶುಶೃಷೆ ದೊರೆಯುವಂತೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಬೇಕು. ಹಳೆಯ ಪ್ರಕರಣಗಳನ್ನು ಈಗಲಾದರೂ ತನಿಖೆಗೊಳಪಡಿಸಬೇಕು ಎಂದು ಸಿಪಿಐ(ಎಂ) ಪಕ್ಷವು ವಿವರಿಸಿದೆ.

ಅದೇ ರೀತಿ, ಜನತೆಯನ್ನು ತೀವ್ರ ಭಯ ಭೀತಿಗೊಳಪಡಿಸುವ ಮತ್ತು ಅದರಿಂದಾಗಿ, ಅವರ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುವಂತೆ ಮಾಡುವ ಕುತಂತ್ರಿ ಮಾಧ್ಯಮಗಳನ್ನು ನಿಯಂತ್ರಿಸಿ, ಜನತೆ ಧೈರ್ಯದಿಂದ ಅದನ್ನು ಎದುರಿಸುವಂತೆ ಅವರಿಗೆ ವೈಜ್ಞಾನಿಕ ಸಲಹೆ ನೀಡುವ ಪ್ರಚಾರವನ್ನು ನಡೆಸುವಂತೆ ಕ್ರಮವಹಿಸಬೇಕು.

ರಾಜ್ಯದ 1.50 ಕೋಟಿ ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಚೀಟಿದಾರರು, ಚೀಟಿ ದೊರೆಯದ ಎಲ್ಲ ಬಡವರ ರೋಗ ನಿರೋಧಕ ಶಕ್ತಿಯನ್ನು ವ್ಯಾಪಕಗೊಳಿಸಲು ರಾಜ್ಯ ಸರಕಾರ ತಲಾ ವ್ಯಕ್ತಿಗೆ ಮಾಸಿಕ 10 ಕೆಜಿಯಂತೆ ತಕ್ಷಣದಿಂದಲೇ 16 ಅಗತ್ಯ ಆಹಾರ ಸಾಮಾಗ್ರಿಗಳನ್ನು ಮತ್ತು ಅದರೊಂದಿಗೆ ಉಚಿತ ಮಾಸ್ಕ್, ಸ್ಯಾನಿಟರಿ ಪ್ಯಾಡ್ ಹಾಗೂ ಸಾಬೂನು, ಸ್ಯಾನಿಟೈಜರ್ ಗಳನ್ನು ವಿತರಿಸಬೇಕು. ಎಲ್ಲರಿಗೂ ರಾಜ್ಯ ಸರಕಾರ ತಲಾ ಕುಟುಂಬಕ್ಕೆ ಮಾಸಿಕ ಕನಿಷ್ಟ 2,000 ರೂಗಳ ಕೋವಿಡ್ ನೆರವು ನಿಧಿಯನ್ನು ಒದಗಿಸಬೇಕು. ಅದೇ ರೀತಿ, ಕೇಂದ್ರ ಸರಕಾರದ ನೆರವು ಪಡೆದು ಅದನ್ನು 10,000 ರೂ.ಗಳಿಗೆ ಹೆಚ್ಚಿಸಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮೊಬೈಲ್ ಸ್ಕ್ವಾಡ್ ಗಳನ್ನು ಸ್ಥಾಪಿಸಿ ಉಚಿತ ವೈದ್ಯಕೀಯ ಹಾಗೂ ಔಷಧಿ ಒದಗಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಕೋವಿಡ್ ವಾರಿಯರ್ಸ್‌ಗಳಾಗಿ ದುಡಿಯುವ ಮತ್ತು ಆಸ್ಪತ್ರೆ ಹಾಗೂ ಮುನ್ಸಿಪಲ್ ಹಾಗೂ ಪಂಚಾಯತ್ ಗಳ ಕಾರ್ಮಿಕರು ಸೇರಿದಂತೆ ಎಲ್ಲರಿಗೂ ಮತ್ತು ಮಸಣ ಕಾರ್ಮಿಕರಿಗೂ ವಿಮಾ ಯೋಜನೆಯನ್ನು ವಿಸ್ತರಿಸಿ ರಕ್ಷಣೆಗೆ ಕ್ರಮವಹಿಸಬೇಕು. ಈಗಾಗಲೇ ಕೋವಿಡ್ ಸಂಕಷ್ಠದಿಂದ ನಷ್ಟಕ್ಕೊಳಗಾದ ಎಲ್ಲಾ ಕುಟುಂಬಗಳ ಸಾಲವನ್ನು ಮನ್ನಾ ಮಾಡಬೇಕು. ಕೋವಿಡ್ ಸಾವುಗಳ ಪರಿಹಾರವನ್ಬು ಕನಿಷ್ಠ 10 ಲಕ್ಷ ರೂಗಳಿಗೆ ಹೆಚ್ಚಿಸಬೇಕು.

ಕಳೆದೆರಡು ಅಲೆಗಳಲ್ಲಿ ಜನತೆ ಸಂಕಷ್ಠದಲ್ಲಿರುವಾಗಲೇ ರಾಜ್ಯದ ಬಹುತೇಕ ದುಡಿಯುವ ಜನತೆಯ ಕಸುಬುಗಳನ್ನು ದೋಚುವ ದುಷ್ಕೃತ್ಯವನ್ನು ರಾಜ್ಯ ಸರಕಾರ ಕೈಗೊಂಡಿದ್ದು ರಾಜ್ಯದಾದ್ಯಂತ ತೀವ್ರ ಪ್ರತಿಭಟನೆಗೆ ಕಾರಣವಾಗಿದೆ. ರಾಜ್ಯದ ವ್ಯವಸಾಯ ಹಾಗೂ ಕೃಷಿ ಭೂಮಿ ಮತ್ತು ಹೈನುಗಾರಿಕೆ ಮುಂತಾದ ಉಪಕಸುಬುಗಳನ್ನು ಕಾರ್ಪೋರೇಟ್ ಕಂಪನಿಗಳಿಗೆ ವಹಿಸುವ ರೈತ ವಿರೋಧಿ ಕಾಯ್ದೆಗಳಾದ ಭೂ ಸುಧಾರಣಾ ತಿದ್ದುಪಡಿ-2020, ಎಪಿಎಂಸಿ ತಿದ್ದುಪಡಿ ಕಾಯ್ದೆ-2020, ಜಾನುವಾರು ಹತ್ಯಾ ನಿಷೇಧ ತಿದ್ದುಪಡಿ ಕಾಯ್ದೆ-2020, ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಗಳನ್ನು ಜಾರಿಗೊಳಿಸುತ್ತಿರುವುದರಿಂದ ಆತಂಕಿತ ಜನತೆಯನ್ನು ಚಳುವಳಿಗಿಳಿಯದಂತೆ ತಡೆಯಲು ಕೋವಿಡ್-19 ರ ಮೂರನೇ ಅಲೆಯ ಸಂದರ್ಭದಲ್ಲಿ ಪ್ರತಿಭಟನೆಗಳನ್ನು ನಿಷೇಧಿಸಿದ್ದೀರಿ! ಇದು ಜನತೆಯ ಸಂಕಟವನ್ನು ಮತ್ತಷ್ಠು ದುಪ್ಪಟ್ಟುಗೊಳಿಸಿ ಅವರ ರೋಗ ನಿರೋಧಕ ಶಕ್ತಿಯನ್ನು ದುರ್ಬಲ ಗೊಳಿಸಲಿದೆ. ಕೋವಿಡ್ ಗಿಂತಲೂ ಭಯನಕ ಪರಿಸ್ಥಿತಿ ನಿಮ್ಮ ಸರಕಾರದ ಈ ವಂಚಕತನದಿಂದ ಉಂಟಾಗಿರುವುದರಿಂದ, ಜನತೆ ಕೋವಿಡ್ ಲೆಕ್ಕಿಸದೇ ಪ್ರತಿಭಟನೆ ನಡೆಸುವಂತಾಗಿದೆ. ಈ ಅಪಾಯದಿಂದ ಜನತೆಯನ್ನು ರಕ್ಷಿಸಲು, ಅಂತಹ ಎಲ್ಲಾ ಜನ ವಿರೋಧಿ ಕಾಯ್ದೆಗಳ ಜಾರಿಯನ್ನು ತಕ್ಷಣವೇ ನಿಲ್ಲಿಸಬೇಕು ಮತ್ತು ಒಕ್ಕೂಟ ಸರಕಾರ ಈಗಾಗಲೇ ಅಂತಹ ಕಾಯ್ದೆಗಳನ್ನು ವಾಪಾಸು ಪಡೆದಿರುವುದರಿಂದ ತಕ್ಷಣ ತಮ್ಮ ಸರಕಾರವೂ ವಾಪಾಸು ಪಡೆಯಬೇಕು ಎಂದು ರಾಜ್ಯ ಸರ್ಕಾರಕ್ಕೆ ಸಿಪಿಐ(ಎಂ) ಪಕ್ಷವು ಆಗ್ರಹಿಸಿದೆ.

ಜನ ಚಳುವಳಿಗಳ ಜೊತೆ ಮಾತುಕತೆ ನಡೆಸಿ ಅವರ ಹಕ್ಕೊತ್ತಾಯಗಳಿಗೆ ಕ್ರಮವಹಿಸಬೇಕು. ರಾಜ್ಯವನ್ನು ಸಂಕಷ್ಠದಿಂದ ಪಾರು ಮಾಡಲು ನೈಜ ಕಾಳಜಿಯನ್ನು ಮತ್ತು ಅಪಾರ ಪ್ರಮಾಣದ ನೆರವನ್ನು ಘೋಷಿಸುವ ಮೂಲಕ ಕ್ರಮವಹಿಸಲು ಸಿಪಿಐ(ಎಂ) ಪಕ್ಷವು ಒತ್ತಾಯಿಸಿದೆ.

Donate Janashakthi Media

Leave a Reply

Your email address will not be published. Required fields are marked *