ರಾಜ್ಯದಲ್ಲಿ ವಾರಾಂತ್ಯದ ಕರ್ಫ್ಯೂ ಜಾರಿ – ಹೊಸ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು : ರಾಜ್ಯದಲ್ಲಿ ಒಮಿಕ್ರಾನ್ ಹಾಗೂ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು ರಾಜ್ಯದಲ್ಲಿ ಕೋವಿಡ್ ನಿಯಂತ್ರಣಗೊಳಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ತಜ್ಞರು, ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಉನ್ನತಮಟ್ಟದ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಬೆಂಗಳೂರಿನಲ್ಲಿ 10, 11 ಮತ್ತು 12ನೆ ತರಗತಿ ಹೊರತುಪಡಿಸಿ, ಪದವಿ ಕಾಲೇಜುಗಳು ಸೇರಿದಂತೆ ಎಲ್ಲ ಆಫ್‍ಲೈನ್ ತರಗತಿಗಳು ಮುಚ್ಚಲು ನಿರ್ಧರಿಸಲಾಗಿದೆ. ನಾಳೆ ರಾತ್ರಿ 10 ಗಂಟೆಗೆ ಈ ಹೊಸ ನಿಯಮ ಜಾರಿಗೆ ಬರುತ್ತದೆ. ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ವಾರಾಂತ್ಯದ ಕರ್ಫ್ಯೂಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಆಹಾರ, ಹಾಲು, ತರಕಾರಿ, ಔಷಧ, ಹೊಟೇಲ್‍ಗಳಲ್ಲಿ ಪಾರ್ಸೆಲ್ ಪಡೆಯಲು ಅವಕಾಶ ಇರುತ್ತದೆ. ರಾತ್ರಿ ಕರ್ಫ್ಯೂವನ್ನು ಎರಡು ವಾರಗಳ ನಡೆಸಲಾಗುವುದು ಎಂದು ಅಶೋಕ್ ತಿಳಿಸಿದರು.

ಹೊಸ ಮಾರ್ಗಸೂಚಿ ಬಿಡುಗಡೆ

  • ಎಲ್ಲ ಕಚೇರಿಗಳು 5 ದಿನಗಳ ಕಾಲ ಕಾರ್ಯನಿರ್ವಹಣೆ. ಸೋಮವಾರ – ಶುಕ್ರವಾರದವರೆಗೆ
  • ಸರ್ಕಾರಿ ಕಚೇರಿಗಳಲ್ಲಿ ಶೇ. 50 ಸಿಬ್ಬಂದಿ‌ಕೆಲಸಕ್ಕೆ ಅವಕಾಶ 
  • ವೀಕೆಂಡ್ ಕರ್ಫ್ಯೂ ಶುಕ್ರವಾರ ರಾತ್ರಿ 10 – ಸೋಮವಾರ ಬೆಳಗ್ಗೆ 5ರವರೆಗೆ
  • ಹೊಸ ಮಾರ್ಗಸೂಚಿ ಜನವರಿ 5 ರ ರಾತ್ರಿ 10ರಿಂದ ಜನವರಿ‌ 19 ರ ಬೆಳಗ್ಗೆ 5 ರವರೆಗೆ ಜಾರಿ
  • ವೀಕೆಂಡ್ ಕರ್ಫ್ಯೂ ವೇಳೆ ಅಗತ್ಯಕ್ಕೆ ಅನುಸಾರ ಸಮೂಹ ಸಾರಿಗೆಗಳು ಕಾರ್ಯ ನಿರ್ವಹಣೆ
  • ಬೆಂಗಳೂರಿನಲ್ಲಿ ನರ್ಸಿಂಗ್, ವೈದ್ಯಕೀಯ, ಪ್ಯಾರಾ‌ಮೆಡಿಕಲ್, 10, 11, 12 ನೇ ತರಗತಿಗಳು ಮಾತ್ರ ನಡೆಯಲು ಅನುಮತಿ
  • ಉಳಿದ ತರಗತಿಗಳು ಜನವರಿ 6 ರಿಂದಲೇ ಆನ್ಲೈನ್ ನಡೆಸಲು ಅನುಮತಿ
  • ಪಬ್, ಕ್ಲಬ್ ಹೊಟೇಲ್ ಗಳು, ಚಿತ್ರಮಂದಿರ, ರಂಗಮಂದಿರ, ಆಡಿಟೋರಿಯಂಗಳಿಗೆ ಶೇ.50 ಮಾತ್ರ ಅವಕಾಶ. ಡಬಲ್ ಡೋಸ್ ನವ್ರಿಗೆ ಮಾತ್ರ ಪ್ರವೇಶ
  • ಮದುವೆಗಳಿಗೆ ಹೊರಾಂಗಣ 200 ಜನ, ಒಳಾಂಗಣ 100 ಜನಕ್ಕೆ ಅನುಮತಿ
  • ಧಾರ್ಮಿಕ ಕೇಂದ್ರಗಳಲ್ಲಿ ದರ್ಶನಕ್ಕೆ ಮಾತ್ರ ಅವಕಾಶ. ವ್ಯಾಕ್ಸಿನ್ ಹಾಕಿಸಿಕೊಂಡ 50 ಭಕ್ತರಿಗೆ ಒಮ್ಮೆಲೆ ಮಾತ್ರ ಅವಕಾಶ. ಇತರೆ ದೇವರ ಸೇವೆಗಳಿಗೆ ಅವಕಾಶ ಇಲ್ಲ
  • ಸೋಮವಾರದಿಂದ ಶುಕ್ರವಾರದವರೆಗೆ ಮಾಲ್, ಷಾಪಿಂಗ್ ಕಾಂಪ್ಲೆಕ್ಸ್, ಅಂಗಡಿ ಮುಂಗಟ್ಟುಗಳಿಗೆ ಅವಕಾಶ
  • ಸ್ವಿಮ್ಮಿಂಗ್ ಪೂಲ್, ಜಿಮ್ ಗಳಲ್ಲಿ 50% ಗ್ರಾಹಕರಿಗೆ ಅನುಮತಿ. ಡಬಲ್ ಡೋಸ್ ಕಡ್ಡಾಯ
  • ರ‌್ಯಾಲಿ, ಧರಣಿಗಳಿಗೆ ಅವಕಾಶ ಇಲ್ಲ
  • ಸಭೆ, ಸಮಾರಂಭಗಳಿಗೆ 50 ಜನಕ್ಕೆ ಮಾತ್ರ ಅವಕಾಶ

ಜನರ ಆಕ್ರೋಶ : ಈಗ ತಾನೇ ಆರ್ಥಿಕ‌ಚಟುವಟಿಕೆಗಳು ಚೇತರಿಸಿಕೊಳ್ಳುತ್ತಿರುವುದರ ಬೆನ್ನಲ್ಲೆ ಸರಕಾರ ವಾರಾಂತ್ಯದ ಕರ್ಫ್ಯೂ ಜಾರಿ ಮಾಡಿರುವುದಕ್ಕೆ ಜನರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಕೋವಿಡ್ ತಪಾಸಣಾ ಸಂಖ್ಯೆಯನ್ನು ಹೆಚ್ಚಿಸಿದ ಕಾರಣ ಪ್ರಕರಣಗಳಲ್ಲಿ‌ ಹೆಚ್ಚಳ ಕಾಣುತ್ತಿದೆ. ಮಾಧ್ಯಮಗಳು ಮತ್ತು ಸರಕಾರ ಪ್ರಕರಣಗಳು ಹೆಚ್ಚಾಗಿವೆ ಎಂದು ತೋರಿಸುತ್ತಿವೆ. ಸರಕಾರ ತನ್ನ‌ ವ್ಯವಹಾರವನ್ನು ನಡೆಸಿಕೊಳ್ಳು‌ ವಾರಾಂತ್ಯದ ಕರ್ಫ್ಯೂವನ್ನು ಜನರ ಮೇಲೆ ಹೇರುತ್ತಿದೆ. ಅಟೋ – ಕಾರು ಚಾಲಕರು, ಬೀದಿಬದಿ ವ್ಯಾಪಾರಿಗಳು, ಕಟ್ಟಡ ಕಾರ್ಮಿಕರು, ಚಿಲ್ಲರೆ ಅಂಗಡಿ ವ್ಯಾಪಾರಿಗಳು ಸೇರಿದಂತೆ ಸಾರ್ವಜನಿಕರು ಸಂಕಷ್ಟಗಳನ್ನು ಎದುರಿಸಲಿದ್ದಾರೆ. ಕೋವಿಡ್ ನ‌ ಎರಡು ವರ್ಷದ ಅನುಭವದಿಂದ ಸರಕಾರ ಪಾಠ ಕಲಿತಿಲ್ಲ. ಸರಕಾರದ ರೋಗ ಎದುರಿಸಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡಿಲ್ಲ ಎಂಬುದು ಇದರಿಂದ ಗೊತ್ತಾಗುತ್ತದೆ. ಜನರ ಹೊಟ್ಟೆ ಹೊಡೆಯುವ ವಾರಾಂತ್ಯದ ಕರ್ಫ್ಯೂ ಅಗತ್ಯವಿತ್ತೆ ಎಂದು‌ ಸಾರ್ವಜನಿಕರು‌ ಪ್ರಶ್ನಿಸುತ್ತಿದ್ದಾರೆ.‌

Donate Janashakthi Media

Leave a Reply

Your email address will not be published. Required fields are marked *