ನೀತಿ ಆಯೋಗದ ಆರೋಗ್ಯ ಸೂಚ್ಯಂಕ: ಯುಪಿ ಲಾಸ್ಟ್ , ಕೇರಳಕ್ಕೆ ಅಗ್ರ ಸ್ಥಾನ

ದೆಹಲಿ: ನೀತಿ ಆಯೋಗದ ನೂತನ ಆರೋಗ್ಯ ಸೌಕರ್ಯ ನಿರ್ವಹಣಾ ಪಟ್ಟಿಯಲ್ಲಿ ಕೇರಳ ರಾಜ್ಯ ಅಗ್ರ ಸ್ಥಾನದಲ್ಲಿದ್ದು, ಉತ್ತರ ಪ್ರದೇಶಕ್ಕೆ ಕೊನೆಯ ಸ್ಥಾನ ದಕ್ಕಿದೆ.

ನೀತಿ ಆಯೋಗ ಬಿಡುಗಡೆ ಮಾಡಿದ ನಾಲ್ಕನೇ ಆರೋಗ್ಯ ಸೂಚ್ಯಂಕದ ಪ್ರಕಾರ, ದೊಡ್ಡ ರಾಜ್ಯಗಳಲ್ಲಿ ಒಟ್ಟಾರೆ ಆರೋಗ್ಯ ಕಾರ್ಯಕ್ಷಮತೆಯ ವಿಷಯದಲ್ಲಿ ಕೇರಳ ಮತ್ತೆ ಅಗ್ರ ಶ್ರೇಯಾಂಕದ ರಾಜ್ಯವಾಗಿ ಹೊರಹೊಮ್ಮಿದೆ, ಎರಡನೇ ಸ್ಥಾನದಲ್ಲಿ ತಮಿಳುನಾಡು ಹಾಗೂ ಅದರ ನಂತರದ ಸ್ಥಾನದಲ್ಲಿ ಕ್ರಮವಾಗಿ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಇದೆ. ಕರ್ನಾಟಕ 9ನೇ ಸ್ಥಾನಕ್ಕೆ ಇಳಿಕೆ ಕಂಡಿದೆ.

ಸಣ್ಣ ರಾಜ್ಯಗಳ ಪೈಕಿ, ಮಿಝೋರಾಂ ಒಟ್ಟಾರೆ ಕಾರ್ಯಕ್ಷಮತೆ ಮತ್ತು ಹೆಚ್ಚುತ್ತಿರುವ ಕಾರ್ಯಕ್ಷಮತೆಯಲ್ಲಿ ಅತ್ಯುತ್ತಮ ಪ್ರದರ್ಶನಕಾರರಾಗಿ ಹೊರಹೊಮ್ಮಿದೆ, ಆದರೆ ಕೇಂದ್ರಾಡಳಿತ ಪ್ರದೇಶಗಳಲ್ಲಿ, ದಿಲ್ಲಿ ಮತ್ತು ಜಮ್ಮು ಮತ್ತು ಕಾಶ್ಮೀರ ಒಟ್ಟಾರೆ ಕಾರ್ಯಕ್ಷಮತೆಯ ವಿಷಯದಲ್ಲಿ ಕೆಳಸ್ಥಾನ ಪಡೆದರೂ, ಹೆಚ್ಚುತ್ತಿರುವ ಕಾರ್ಯಕ್ಷಮತೆಯ ವಿಷಯದಲ್ಲಿ ಪ್ರಮುಖ ಪ್ರದರ್ಶನಕಾರರಾಗಿ ಹೊರಹೊಮ್ಮಿವೆ ಎಂದು ವರದಿ ತಿಳಿಸಿದೆ.

ಟಾಪ್ 5 ರಾಜ್ಯಗಳು : ಕೇರಳ ಕಳೆದ ಬಾರಿ ಒಂದನೇ ಸ್ಥಾನದಲ್ಲಿದ್ದು, ಈ ಬಾರಿಯೂ ಆ ಸ್ಥಾನವನ್ನು ಕಾಪಾಡಿಕೊಂಡಿದೆ. ಆರೋಗ್ಯ ಸೂಚ್ಯಂಕ ಶೇಕಡ 82.20 ಆಗಿದೆ. ಇನ್ನು ತಮಿಳುನಾಡು ಕಳೆದ ಬಾರಿ ಎರಡನೇ ಸ್ಥಾನದಲ್ಲಿದ್ದು ಈ ಬಾರಿಯೂ ಕೂಡಾ ಸ್ಥಾನವನ್ನು ಕಾಪಾಡಿಕೊಂಡಿದೆ. ತಮಿಳುನಾಡಿನ ಆರೋಗ್ಯ ಸೂಚ್ಯಂಕ ಶೇಕಡ 72.42 ಆಗಿದೆ. ಕಳೆದ ಬಾರಿ ನಾಲ್ಕನೇ ಸ್ಥಾನದಲ್ಲಿ ಇದ್ದ ತೆಲಂಗಾಣ ಈ ಬಾರಿ ಮೂರನೇ ಸ್ಥಾನಕ್ಕೆ ಏರಿದೆ. ತೆಲಂಗಾಣದ ಆರೋಗ್ಯ ಸೂಚ್ಯಂಕ ಶೇಕಡ 69.96 ಆಗಿದೆ. ಆಂಧ್ರ ಪ್ರದೇಶದವು ಮೂರನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಇಳಿದಿದೆ. ಆಂಧ್ರ ಪ್ರದೇಶದ ಆರೋಗ್ಯ ಸೂಚ್ಯಂಕ 69.95 ಆಗಿದೆ. ಇನ್ನು ಮಹಾರಾಷ್ಟ್ರ ಮಾತ್ರ ಐದನೇ ಸ್ಥಾನದಲ್ಲಿಯೇ ಉಳಿದು ಕೊಂಡಿದೆ. ಮಹಾರಾಷ್ಟ್ರದ ಆರೋಗ್ಯ ಸೂಚ್ಯಂಕ ಶೇಕಡ 69.14 ಆಗಿದೆ.

ಗುಜರಾತ್‌ನ ಆರೋಗ್ಯ ಸೂಚ್ಯಂಕವು ಶೇಕಡ 63.59 ಆಗಿದೆ. ಆರನೇ ಸ್ಥಾನದಲ್ಲಿದೆ. ನೀತಿ ಆಯೋಗದ ಆರೋಗ್ಯ ಸೂಚ್ಯಂಕದ ಪ್ರಕಾರ ಕರ್ನಾಟಕ ಒಂಬತ್ತನೇ ಸ್ಥಾನದಲ್ಲಿ ಇದೆ. ಕರ್ನಾಟಕದ ಆರೋಗ್ಯ ಸೂಚ್ಯಂಕವು ಶೇಕಡ 57.93 ಆಗಿದೆ. ವಿಶ್ವಬ್ಯಾಂಕ್‌ನ ತಾಂತ್ರಿಕ ನೆರವಿನೊಂದಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಹಯೋಗದೊಂದಿಗೆ ವರದಿಯನ್ನು ಸಿದ್ಧಪಡಿಸಲಾಗುತ್ತದೆ.

ಉತ್ತರ ಪ್ರದೇಶ ಚುನಾವಣೆ ನಡುವೆ ಈ ಸೂಚ್ಯಂಕ ಬಿಡುಗಡೆಯಾಗಿದ್ದು, ವಿಪಕ್ಷಗಳಿಗೆ ಅಸ್ತ್ರ ಸಿಕ್ಕಂತಾಗಿದೆ. ಪ್ರತಿಯೊಂದಕ್ಕೂ ಯುಪಿ ಮಾದರಿ, ಗುಜರಾತ್ ಮಾದರಿ ಎಂದು ಹೇಳಿತ್ತಿದ್ದ ಬಿಜೆಪಿಯವರಿಗೆ ಭಾರೀ ಮುಖಭಂಗವಾಗಿದೆ.

Donate Janashakthi Media

Leave a Reply

Your email address will not be published. Required fields are marked *