ಬೆಂಗಳೂರು : ರಾಜ್ಯದಲ್ಲಿ ಹೊಸವರ್ಷಕ್ಕೆ ಹೊಸ ನಿಯಮ ಜಾರಿಯಾಗಲಿದೆ. ರಾಜ್ಯಾದ್ಯಂತ ಡಿ.28ರಿಂದ 10 ದಿನ ನೈಟ್ ಕರ್ಫ್ಯೂ ಇರಲಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೂ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ. ಸಾರ್ವಜನಿಕ ಸ್ಥಳಗಳಲ್ಲಿ ಬಹಿರಂಗ ಹೊಸ ವರ್ಷಾಚರಣೆ ನಿಷೇಧ ಮಾಡಲಾಗಿದೆ.
ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣಾದಲ್ಲಿ ಇಂದು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಕೋವಿಡ್ ಸಭೆ ನಡೆಯಿತು. ಆರೋಗ್ಯ ಸಚಿವ ಡಾ ಸುಧಾಕರ್, ಕಂದಾಯ ಸಚಿವ ಆರ್ ಅಶೋಕ್, ಗೃಹ ಕಾರ್ಯದರ್ಶಿ ರಜನೀಶ್ ಗೋಯಲ್, ಪೊಲೀಸ್ ಕಮಿಷನರ್ ಕಮಲ್ ಪಂಥ್, ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ರಾಜ್ಯ ಆರೋಗ್ಯ ರಾಷ್ಟ್ರೀಯ ಅಭಿಯಾನದ ನಿರ್ದೇಶಕಿ ಅರುಂಧತಿ ಚಂದ್ರಶೇಖರ್, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ಆರೋಗ್ಯ ಇಲಾಖೆಯ ಅಧಿಕಾರಿಗಳು ಸಭೆ ಯಲ್ಲಿ ಭಾಗಿಯಾಗಿದ್ದರು.
ಸಭೆ ಬಳಿಕ ಮಾತನಾಡಿದ ಆರೋಗ್ಯ ಸಚಿವ ಡಾ. ಕೆ ಸುಧಾಕರ್, ರಾಜ್ಯದಾದ್ಯಂತ 10 ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿಗೊಳಿಸಿ ಘೋಷಿಸಿದ್ದಾರೆ. ಡಿ.28ರಿಂದ 10 ದಿನಗಳ ಕಾಲ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5ರವರೆಗೆ ನೈಟ್ ಕರ್ಫ್ಯೂ ಜಾರಿ ಇರಲಿದೆ ಅಂತ ಸಚಿವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪಬ್, ಬಾರ್, ಲೈವ್ ಬ್ಯಾಂಡ್, ಡಿಸ್ಕೊತೆಕ್ಸೇರಿದಂತೆ ಎಲ್ಲ ಚಟುವಟಿಕೆಗಳನ್ನು ಬಂದ್ ಮಾಡಬೇಕು. ಯಾರೊಬ್ಬರೂ ಕೂಡ ನಿಯಮಗಳನ್ನು ಉಲ್ಲಂಘಿಸಬಾರದು. ಹಾಗೊಂದು ವೇಳೆ ಕಂಡುಬಂದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಇತ್ತೀಚಿನ ಕೆಲವು ಬೆಳವಣಿಗೆಗಳನ್ನು ತಜ್ಞರು ಅವಲೋಕಿಸಿ ಸರ್ಕಾರಕ್ಕೆ ಕೆಲವು ಶಿಫಾರಸ್ಸುಗಳನ್ನು ನೀಡಿದ್ದಾರೆ. ಅದರಂತೆ ಸರ್ಕಾರ ನಡೆದುಕೊಳ್ಳಬೇಕು. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಯಾವುದೇ ಚಟುವಟಿಕೆಗಳು ಇರುವುದಿಲ್ಲ. ಸಾರ್ವಜನಿಕರು ಇದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದರು.
ಮೂರನೇ ಅಲೆ ಸಾಧ್ಯತೆ : ಕರ್ನಾಟಕದಲ್ಲಿ 38 ಓಮಿಕ್ರಾನ್ ಪ್ರಕರಣಗಳು ದಾಖಲಾಗಿವೆ. ಇದು ವೇಗವಾಗಿ ಒಬ್ಬರಿಂದ ಒಬ್ಬರಿಗೆ ಹಬ್ಬುತ್ತಿರುವುದರಿಂದ ದಯವಿಟ್ಟು ನಿರ್ಲಕ್ಷ್ಯ ಮಾಡದೆ ಲಸಿಕೆಯನ್ನು ಪಡೆಯಿರಿ ಎಂದು ಕಿವಿಮಾತು ಹೇಳಿದರು.ಲಸಿಕೆ ಪಡೆಯುವುದರಿಂದ ಎಲ್ಲರಲ್ಲೂ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಒಂದು ವೇಳೆ ನಿಮಗೆ ಇಂತಹ ಸೋಂಕು ಕಾಣಿಸಿಕೊಂಡರೆ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಸಾವುನೋವು ಪ್ರಮಾಣವು ಕಡಿಮೆಯಾಗುತ್ತದೆ ಎಂದು ತಿಳಿಸಿದರು.
ರಾಜ್ಯದಲ್ಲಿ 3ನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ತಜ್ಞರು ಸಲಹೆ ಮಾಡಿದ್ದಾರೆ. ಹೀಗಾಗಿ ಸರ್ಕಾರ ಯಾವೆಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕೋ ಅದೆಲ್ಲವನ್ನು ತೆಗೆದುಕೊಂಡಿದೆ. 4000 ಐಸಿಯು ಬೆಡ್ ಸೇರಿದಂತೆ ಒಟ್ಟು 7051 ಐಸಿಯು ಬೆಡ್ಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಇದೇ ರೀತಿ 3191 ಬೆಡ್ಗಳನ್ನು ಸಿದ್ದಪಡಿಸಿಕೊಂಡಿದೆ ಎಂದು ಸುಧಾಕರ್ ಅಂಕಿಸಂಖ್ಯೆಗಳ ವಿವರ ನೀಡಿದರು.
ಹೊಸ ವರ್ಷಕ್ಕೆ ಬ್ರೇಕ್ : ಡಿಸೆಂಬರ್ 31ರ ಹೊಸ ವರ್ಷಾಚರಣೆಯನ್ನು ಸಾರ್ವಜನಿಕ ಸ್ಥಳದಲ್ಲಿ ಆಚರಣೆ ಮಾಡದಂತೆ ನಿರ್ಬಂಧ ವಿಸಲಾಗಿದೆ. 10ರಿಂದ ಮುಂಜಾನೆ 5ರವರೆಗೆ ಕರ್ಫ್ಯೂ ಇರುವುದರಿಂದ ಯಾರೊಬ್ಬರು ಮನೆಯಿಂದ ಹೊರಬೇಕಾದ ಅಗತ್ಯವಿಲ್ಲ ಎಂದು ಹೇಳಿದರು. ಹೋಟೆಲ್ಗಳು ತಮ್ಮ ಒಟ್ಟು ಸಾಮಥ್ರ್ಯದ ಶೇ.50ರಷ್ಟು ಆಸನಗಳನ್ನು ಮಾತ್ರ ಗ್ರಾಹಕರಿಗೆ ನೀಡಬೇಕು. ಅದಕ್ಕಿಂತ ಹೆಚ್ಚಿನ ಆಸನಗಳ ವ್ಯವಸ್ಥೆ ಮಾಡುವಂತಿಲ್ಲ. ಸರ್ಕಾರದ ನಿಯಮಗಳನ್ನು ಪ್ರತಿಯೊಬ್ಬರು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದು ಸೂಚಿಸಿದರು.
ಜೀವ ಇದ್ದರೆ ಜೀವನ ನಡೆಸಬಹುದು. ಒಂದು ವರ್ಷ ವರ್ಷಾಚರಣೆಯನ್ನು ನಿಲ್ಲಿಸಿದರೆ ಪ್ರಪಂಚ ಮುಳುಗುವುದಿಲ್ಲ. ಸರ್ಕಾರ ಏನೇ ಕ್ರಮ ತೆಗೆದುಕೊಂಡರೂ ಅದು ಜನರ ಆರೋಗ್ಯದ ಹಿತದೃಷ್ಟಿಯಿಂದ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಹೋಟೆಲ್ಗಳಂತೆ ಸಿನಿಮಾ ಮಂದಿರಗಳಲ್ಲೂ ಶೇ.50ರಷ್ಟು ಮಾತ್ರ ಆಸನಗಳ ವ್ಯವಸ್ಥೆ ಮಾಡಬೇಕು. ಹೆಚ್ಚು ಜನರು ಸೇರುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.
ಹಗಲಿನಲ್ಲಿ ಬಾರ್, ಪಬ್, ಲೈವ್ ಬ್ಯಾಂಡ್, ಸಿನಿಮಾ ಥಿಯೇಟರ್, ಡಿಸ್ಕೊತೆಕ್ ಮತ್ತಿತರ ಕಡೆ ಶೇ.50ರಷ್ಟು ಜನರು ಕುಳಿತುಕೊಳ್ಳಬೇಕು. ಪ್ರತಿಯೊಬ್ಬರು ಮಾರ್ಗಸೂಚಿಗಳನ್ನು ಕಟ್ಟುನಿಟಾಗಿ ಪಾಲನೆ ಮಾಡಿ ಎಂದು ಹೇಳಿದರು.
ಲಸಿಕೆ ವೇಗಕ್ಕೆ ಹೆಚ್ಚಳ: ರಾಜ್ಯದಲ್ಲಿ ಮೊದಲ ಹಂತದ ಲಸಿಕೆಯನ್ನು ಶೇ.97ರಷ್ಟು ನೀಡಲಾಗಿದೆ. ಬಾಕಿ ಶೇ.3ರಷ್ಟು ಲಸಿಕೆಯನ್ನು ನೀಡಬೇಕಾಗಿದೆ. ಆದಷ್ಟು ಶೀಘ್ರ ಇದನ್ನು ಪೂರ್ಣಗೊಳಿಸಬೇಕೆಂದು ಸಿಎಂ ಸೂಚನೆ ಕೊಟ್ಟಿದ್ದಾರೆ. ನಾನು ಆರೋಗ್ಯ ಇಲಾಖೆ ಅಕಾರಿಗಳಿಗೆ ಸಮಾರೋಪಾದಿಯಲ್ಲಿ ಮೊದಲ ಹಂತದ ಬಾಕಿ ಇರುವ ಲಸಿಕೆಯನ್ನು ಪೂರ್ಣಗೊಳಿಸಲು ಸೂಚಿಸುತ್ತೇನೆ ಎಂದರು.
2ನೇ ಹಂತದ ಕೋವಿಡ್ ಲಸಿಕೆಯನ್ನು ಶೇ.75ರಷ್ಟು ಗುರಿ ಸಾಸಲಾಗಿದೆ. ಅಂದಾಜು 45 ಲಕ್ಷ ಮಂದಿಗೆ 2ನೇ ಹಂತದ ಲಸಿಕೆಯನ್ನು ನೀಡಬೇಕು. ದಯವಿಟ್ಟು ಯಾರು ಲಸಿಕೆಯನ್ನು ತೆಗೆದುಕೊಂಡಿಲ್ಲವೋ ಕೂಡಲೇ ನಿಮ್ಮ ನಿಮ್ಮ ಕೇಂದ್ರ ವ್ಯಾಪ್ತಿಯ ಆರೋಗ್ಯ ಕೇಂದ್ರಗಳಲ್ಲಿ ಪಡೆಯಿರಿ ಎಂದು ಮನವಿ ಮಾಡಿದರು.