ಪಾಂಡವಪುರ : ಕ್ರಿಸ್ಮಸ್ ಹಬ್ಬ ಆಚರಣೆ ಮಾಡಲಾಗುತ್ತಿದ್ದ ಶಾಲೆಗಳಿಗೆ ಹಿಂದೂಪರ ಸಂಘಟನೆಗಳು ಮುತ್ತಿಗೆ ಹಾಕಿದ ಆಘಾತಕಾರಿ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನಲ್ಲಿ ನಡೆದಿದೆ.
ಪಾಂಡವಪುರ ಪಟ್ಟಣದ ವಿಜಯ ವಿದ್ಯಾ ಸಂಸ್ಥೆ ಹಾಗೂ ನಿರ್ಮಲ ಅನುದಾನಿತ ಶಾಲೆಗೆ ಹಿಂದೂ ಜಾಗರಣ ವೇದಿಕೆ ಸದಸ್ಯರು ಮುತ್ತಿಗೆ ಹಾಕಿದ್ದಾರೆ. ಕ್ರಿಸ್ಮಸ್ ಆಚರಣೆಯನ್ನು ಆಯೋಜಿಸಿದ್ದಾಗ ಸಂಘಪರಿವಾರದ ಸದಸ್ಯರು ಬಲವಂತವಾಗಿ ಸಂಸ್ಥೆಯೊಳಗೆ ಪ್ರವೇಶಿಸಿ ದಾಂಧಲೆ ನಡೆಸಿದ್ದಾರೆ ಎಂದು ಶಾಲಾ ಆಡಳಿತ ಮಂಡಳಿ ಆರೋಪಿಸಿದೆ.
ರಾಜ್ಯದಲ್ಲಿ ಮತಾಂತರ ನಿಷೇಧಿಸುವ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ 2021’ ಕ್ಕೆ ವಿಧಾನಸಭೆಯಲ್ಲಿ ಒಪ್ಪಿಗೆ ದೊರೆತ ಮರುದಿನವೇ ಈ ಸಂಘಪರಿವಾರದವರು ಈ ರೀತಿ ದಾಂಧಲೆ ಎಬ್ಬಿಸಿರುವುದು ಆತಂಕವನ್ನು ಸೃಷ್ಟಿಸಿದೆ.
ಈ ಘಟನೆಗಳು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದ್ದು, ‘ಶಾಲೆಯಲ್ಲಿ ಕ್ರಿಶ್ಚಿಯನ್ ಧರ್ಮ ಕಲಿಸಲಾಗುತ್ತಿದೆ. ಕ್ರಿಸ್ಮಸ್ ಆಚರಿಸುವ ಶಾಲೆಯಲ್ಲಿ ಹಿಂದೂ ಧರ್ಮದ ಹಬ್ಬಗಳ ಆಚರಣೆ ಯಾಕಿಲ್ಲ.?’ ಎಂದು ವ್ಯಕ್ತಿಯೊಬ್ಬರು ಹೇಳಿರುವುದು ಸೆರೆಯಾಗಿದೆ.
ಅಲ್ಲದೇ ವ್ಯಕ್ತಿಯೊಬ್ಬರು ಆಡಳಿತ ಮಂಡಳಿಗೆ ಧಮಕಿ ಹಾಕುವುದು ಕೂಡ ವಿಡಿಯೋದಲ್ಲಿ ಸೆರೆಯಾಗಿದ್ದು, ಹಬ್ಬ ಆಚರಣೆ ಮಾಡುವುದು ಅಥವಾ ಬಿಡುವ ತೀರ್ಮಾನವನ್ನು ನಿಮಗೆ ಹಾಗೂ ಮಕ್ಕಳ ಪೋಷಕರಿಗೆ ಬಿಟ್ಟಿದ್ದೇವೆ. ನಾವು ಮಧ್ಯ ಪ್ರವೇಶ ಮಾಡಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಬೆದರಿಸಲಾಗಿದೆ.
ನಾವು ವಿದ್ಯಾರ್ಥಿಗಳು, ಪೋಷಕರ ಅಭಿಪ್ರಾಯ ಪಡೆದು ಕಾರ್ಯಕ್ರಮ ಆಯೋಜಿಸಿದ್ದವು. ಆದರೆ “ಬಲಪಂಥೀಯ ಕಾರ್ಯಕರ್ತರು ನಮ್ಮೊಂದಿಗೆ ತೀವ್ರವಾದ ವಾಗ್ವಾದ ಮಾಡಿದ್ದಾರೆ. ಹಲ್ಲೆ ನಡೆಸಲು ಮುಂದಾಗಿದ್ದರು. ಹಾಗಾಗಿ ದೂರು ನೀಡಲು ನಿರ್ಧರಿಸಿದ್ದೇವೆ ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.