- ಜಾತಿ ಬಲಾಢ್ಯರಿಗೆ ಜೈ ಅಂದ ಕಾಂಗ್ರೆಸ್, ಬಿಜೆಪಿ
- ಬಿಜೆಪಿಯಲ್ಲಿ ನಿಷ್ಠರಿಗೆ ಸುಣ್ಣ, ಉಳ್ಳವರಿಗೆ ಬೆಣ್ಣೆ
- ಪಕ್ಷ ನಿಷ್ಠರನ್ನು ದೂರ ಮಾಡಿಕೊಳ್ಳುತ್ತಿದೆಯೇ ಬಿಜೆಪಿ..?
- ಅಳಿಯನ ಡಿಸಿಸಿ ಬ್ಯಾಂಕ್ ಚುನಾವಣೆ ಮುಖ್ಯವಾಯ್ತೆ ಉಸ್ತುವಾರಿ ಮಂತ್ರಿಗೆ?
ವರದಿ : ಬಸವರಾಜ ಬೊಮ್ಮನಾಳ
ಕುಕನೂರ: ಪಟ್ಟಣ ಪಂಚಾಯತಿಗೆ ಡಿಸೆಂಬರ್ 27 ರಂದು ಚುನಾವಣೆ ನಡೆಯಲಿದ್ದು, ನಾಮ ಪತ್ರ ಸಲ್ಲಿಕೆಗೆ ಕೊನೆಯ ದಿನ ಮುಗಿದಿದ್ದು ಒಟ್ಟು 19 ವಾರ್ಡ ಗಳಿಗೆ 69 ಅಭ್ಯರ್ಥಿಗಳ ನಾಮಪತ್ರಗಳು ಸಲ್ಲಿಕೆಯಾಗಿವೆ.
ಆಡಳಿತ ಪಕ್ಷ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ಪ್ರಸಕ್ತ ಚುನಾವಣೆಗೆ ಟಿಕೆಟ್ ನೀಡುವಲ್ಲಿ ಜಾತಿ ಹಾಗೂ ಕಾಂಚಾಣಕ್ಕೆ ಪ್ರಾಮುಖ್ಯತೆ ನೀಡುವ ಮೂಲಕ ಪ್ರಜಾತಂತ್ರ ವ್ಯವಸ್ಥೆಗೆ ಮಾರಕವಾದ ವಾತಾವರಣವನ್ನು ನಿರ್ಮಾಣ ಮಾಡಿ ಜಾತಿ ವ್ಯವಸ್ಥೆಯ ಬೇರನ್ನು ಜೀವಂತವಾಗಿ ಇಡುವಲ್ಲಿ ತಮ್ಮ ಇಬ್ಬಗೆ ನೀತಿಯನ್ನು ಅನುಸರಿಸುತ್ತಿವೆ. ಪ್ರಮುಖವಾಗಿ ಆಡಳಿತ ಪಕ್ಷ ಬಿಜೆಪಿಯಲ್ಲಿ ನಿಷ್ಠರಿಗೆ ಸುಣ್ಣ, ಉಳ್ಳವರಿಗೆ ಬೆಣ್ಣೆ ಎನ್ನುವ ಮಾನದಂಡ ಅನುಸರಿಸಿರುವುದು ಆಂತರಿಕ ಭಿನ್ನಮತಕ್ಕೆ ತುಪ್ಪ ಸುರಿದಂತೆ ಆಗಿದೆ.
ಬುಡಮೇಲಾಗಿಸಿದ ಲೆಕ್ಕಾಚಾರ : ನಾಮಪತ್ರ ಸಲ್ಲಿಕೆಯ ನಂತರ ತಾಲೂಕಿನ ವಿದ್ಯಮಾನ ಗಮನಸಿದರೆ ಸಿಗುವ ಲೆಕ್ಕವೇ ಬೇರೆ ಇದೆ. ನಾಮಪತ್ರ ಸಲ್ಲಿಕೆಯ ಹಿಂದಿನ ದಿನದ ಮಧ್ಯರಾತ್ರಿಯವರೆಗೆ ಇದ್ದ ಲೆಕ್ಕಾಚಾರ ಬಿ.ಫಾರ್ಮ್ ವಿತರಿಸುವ ವೇಳೆಗೆ ಬುಡುಮೇಲಾಗಿರುವುದು ಆಕಾಂಕ್ಷಿ ಅಭ್ಯರ್ಥಿಗಳನ್ನು, ಮುಖಂಡರನ್ನು ಜತೆಗೆ ಕಾರ್ಯಕರ್ತರನ್ನು ತಾಲೂಕಿನ ನಾಯಕರ ಹಿತಾಸಕ್ತಿ ವಿರುದ್ಧ ಆಕ್ರೋಶಗೊಳ್ಳುವಂತೆ ಮಾಡಿದೆ. ಪಕ್ಷದ ಟಿಕೇಟ್ ಸಿಕ್ಕೇ ಸಿಗುತ್ತದೆ ಎಂದು ನಂಬಿ ಪಕ್ಷದ ಬಿ. ಫಾರ್ಮ್ ಇಲ್ಲದೇ ನಾಮಪತ್ರ ಸಲ್ಲಿಸಿದ್ದ ಪಕ್ಷದ ನಿಷ್ಠಾವಂತ ಆಕಾಂಕ್ಷಿ ಅಭ್ಯರ್ಥಿಗಳಿಗೆ ನಿರಾಶೆಯ ಜೊತೆ ಆಕ್ರೋಶ ಬರುವಂತೆ ಮಾಡಿದೆ. ಅಖಾಡದ ಎದುರಾಳಿ ವಿರುದ್ಧ ಸಿಟ್ಟುಗೊಳ್ಳುವ ಬದಲು ಬೆನ್ನಿಗೆ ಚೂರಿ ಹಾಕಿರುವ ನಾಯಕರ ವಿರುದ್ಧ ಕಿಡಿ ಕಾರಿದ ಘಟನಾವಳಿಗಳು ಗುಪ್ತ ಸ್ಥಳದಲ್ಲಿ ನಡೆದು ಭಿನ್ನಮತ ಸ್ಪೋಟಗೊಳ್ಳುವ ಎಲ್ಲ ಲಕ್ಷಣಗಳು ಹೊರ ಹೊಮ್ಮಿದಂತಾಗಿದೆ.
ಪಕ್ಷ ನಿಷ್ಠರ ಬಂಡಾಯ ಸ್ಪರ್ದೆ : ಪಕ್ಷ ನಿಷ್ಠೆಯೇ ಮೊದಲು, ಉಳಿದೆಲ್ಲವೂ ನಂತರ’ ಎನ್ನುತ್ತಿದ್ದ ಭಾರತೀಯ ಜನತಾ ಪಾರ್ಟಿ ಪಕ್ಷ ನಿಷ್ಠರನ್ನು, ಪ್ರಾಮಾಣಿಕರನ್ನು ದೂರ ಮಾಡಿಕೊಳ್ಳುತ್ತಿದೆಯೇ? ಎಂಬ ಪ್ರಶ್ನೆ ಇತ್ತೀಚಿಗೆ ದಟ್ಟವಾಗಿ ಪಕ್ಷದ ಕಾರ್ಯಕರ್ತರಿಗೆ ಕಾಡಲಾರಂಭಿಸಿದೆ.
ತಾಲೂಕಿನಲ್ಲಿ ಬಿಜೆಪಿಗಾಗಿ ಸರ್ವಸ್ವವನ್ನೇ ತ್ಯಜಿಸಿ ದುಡಿಯುತ್ತಿರುವವರನ್ನು ಮೂಲೆಗುಂಪಾಗಿಸಿ, ನಿನ್ನೆ ಮೊನ್ನೆ ಬಂದವರಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಬಗ್ಗೆ ಪಕ್ಷದೊಳಗೆ ಅಸಮಾಧಾನ ಭುಗಿಲೆದ್ದಿದಿದೆ ಪ್ರಮುಖವಾದ ನಾಲ್ಕು ವಾರ್ಡ್ ಗಳಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ರಾಜಶೇಖರ ಸಿದ್ದಬಸಪ್ಪ, ಸಾವಿತ್ರಿ ಗುಡಿಮನಿ, ವಿನಾಯಕ ಯಾಳಗಿ ಪಕ್ಷೇತರಾಗಿ ಕಣದಲ್ಲಿದ್ದು ಪಕ್ಷಕ್ಕೆ ಸೆಡ್ಡು ಹೊಡೆದಿದ್ದಾರೆ. ಈ ಕುರಿತು ಜನಶಕ್ತಿ ಮೀಡಿಯಾ ಜೊತೆ ಮಾತನಾಡಿದ ಬಿಜೆಪಿ ಬಂಡಾಯ ಅಬ್ಯರ್ಥಿಗಳು ನಾವು ಪಕ್ಷಕ್ಕೆ ಹಗಲಿರುಳು ದುಡಿದು ಪಕ್ಷ ಸಂಘಟನೆಯಲ್ಲಿ ನಿರಂತರವಾಗಿ ಹೈ ಕಮಾಂಡ್ ಹೇಳಿದ ಕೆಲಸವನ್ನು ಚಾಚು ತಪ್ಪದೆ ಮಾಡುತ್ತಾ ಬಂದಿದ್ದು ಪಕ್ಷ ನಮಗೆ ಬಿ ಫಾರಂ ನೀಡದೇ ನಮ್ಮನ್ನು ನಿರ್ಲಕ್ಷಿಸಿ ಹಣ ಮತ್ತು ಹಿಂಬಾಲಕರಿಗೆ ಟಿಕೇಟ್ ನೀಡಿ ಅನ್ಯಾಯ ಮಾಡಿದ್ದಾರೆ ಎಂದು ಪರೋಕ್ಷವಾಗಿ ಸಚಿವರ ಹೆಸರೇಳದೆ ಬೇಸರ ವ್ಯಕ್ತಪಡಿಸಿದ್ದಾರೆ.
ಜವಾಬ್ದಾರಿ ಮರೆತ ಸಚಿವರು, ಡಿಸಿಸಿ ಬ್ಯಾಂಕ್ ಚುನಾವಣೆಯೇ ಮುಖ್ಯ ಆಯ್ತು : ಪ್ರತಿಷ್ಠಿತ ರಾಯಚೂರ ಕೊಪ್ಪಳ ಸಹಕಾರಿ ಬ್ಯಾಂಕ್ ಚುನಾವಣೆಗೆ ಅಳಿಯ ಬಸವರಾಜ ರಾಜೂರ ನನ್ನು ಸ್ಪರ್ಧೆ ಮಾಡುವಂತೆ ಸೂಚಿಸಿ ಕ್ಷೇತ್ರದಲ್ಲಿ ಈಗ ಹಗಲು ರಾತ್ರಿ ಎನ್ನದೇ ಶತಾಯ ಗತಾಯ ಅವಿರೋಧ ಆಯ್ಕೆಗೆ ಟೊಂಕ ಕಟ್ಟಿ ನಿಂತಿದ್ದು ಕ್ಷೇತ್ರದ ಇತರೆ ಪಕ್ಷದ ನಿಷ್ಠಾವಂತ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಕ್ಷೇತ್ರದಲ್ಲಿ ಸಾಕಷ್ಟು ಕಾರ್ಯಕರ್ತರು ಪಕ್ಷಕ್ಕಾಗಿ ಹಗಲಿರುಳು ದುಡಿದು ಪಕ್ಷ ಕಟ್ಟಿದ್ದಾರೆ ಕ್ಷೇತ್ರದಲ್ಲಿ ಯಾರಾದರು ಒಬ್ಬ ಸಾಮಾನ್ಯ ಕಾರ್ಯಕರ್ತರನ್ನು ಆಯ್ಕೆ ಮಾಡಲು ಸಾಕಷ್ಟು ಅವಕಾಶಗಳು ಇದ್ದವು ಈಗ ಸಚಿವರ ಕುಟುಂಬದವರನ್ನೇ ಆಯ್ಕೆ ಮಾಡುತ್ತಿರುವದು ಎಷ್ಟು ಸರಿ ಎಂದು ಹೆಸರು ಹೇಳಲು ಇಚ್ಚಿಸದ ಮುಖಂಡರೊಬ್ಬರು ತಮ್ಮ ಅಳಲನ್ನು ತೋಡಿಕೊಂಡರು.
ಒಟ್ಟಾರೆಯಾಗಿ ಕುಕನೂರ ತಾಲೂಕಿನ ಪಟ್ಟಣ ಪಂಚಾಯತ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅಬ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಒಡೆದ ಮನೆಯಾಗಿದ್ದು ಫಲಿತಾಂಶ ಪಕ್ಷದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆಯೋ.. ಸಚಿವರು ಇದನ್ನು ಪ್ರತಿಷ್ಠೆಯಾಗಿ ಸ್ವೀಕರಿಸುವವರೋ..ಕಾದು ನೋಡಬೇಕಿದೆ.
ಪಕ್ಷಕ್ಕಾಗಿ ನಾವು ಸುಮಾರು ವರ್ಷಗಳಿಂದ ದುಡಿದಿದ್ದೇವೆ ಮೂಲತಃ ನಾನು ಸಂಘದ ಕಾರ್ಯಕರ್ತ ಟಿಕೇಟ್ ನೀಡುವ ಭರವಸೆ ಇತ್ತು ನಮ್ಮಂತಹ ಪ್ರಾಮಾಣಿಕ ಕಾರ್ಯಕರ್ತರನ್ನು ಕಡೆಗಣಿಸಿ ಬಹುತೇಕ ಬಕೇಟ್ ಹಿಡಿಯುವ ಕಾರ್ಯಕರ್ತರಿಗೆ ಮಣೆ ಹಾಕಿದ್ದು ಬಂಡಾಯ ಅಬ್ಯರ್ಥಿಯಾಗಿ 16 ನೇ ವಾರ್ಡನಲ್ಲಿ ಸಾಮಾನ್ಯ ಅಬ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೇನೆ ಪ್ರಜ್ಞಾವಂತ ಮತದಾರ ನನ್ನ ಸಾಮಾಜಿಕ ಸೇವೆ,ಕಳಕಳಿಗೆ ಮತ ಹಾಕುತ್ತಾರೆ ಎನ್ನುವ ವಿಶ್ವಾಸ ಇದೆ.
– ರಾಜಶೇಖರ ಸಿದ್ದಬಸಪ್ಪ
(ಬಂಡಾಯ ಬಿಜೆಪಿ ಅಭ್ಯರ್ಥಿ)