ಬೆಳಗಾವಿ : ಕನ್ನಡದ ಬಾವುಟ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನಿಗೆ ಅಪಮಾನ ಮಾಡಿದ ಬೆನ್ನಿಗೇ ಇದೀಗ ಕಾಯಕ ಯೋಗಿ ಬಸವಣ್ಣನಿಗೂ ಅವಮಾನ ಮಾಡಲಾಗಿದೆ. ದುಷ್ಕರ್ಮಿಗಳು ಬಸವಣ್ಣನ ಭಾವಚಿತ್ರಕ್ಕೆ ಸೆಗಣಿ ಎಸೆಯುವ ಮೂಲಕ ಶಾಂತಿ ಕದಡುವ ಯತ್ನ ನಡೆಸಿದ್ದಾರೆ.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಸಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹಲಸಿ ಗ್ರಾಮದಲ್ಲಿರುವ ಬಸವೇಶ್ವರ ವೃತ್ತದ ಬಸವೇಶ್ವರ ಭಾವಚಿತ್ರಕ್ಕೆ ಸೆಗಣಿ ಎಸೆಯಲಾಗಿದ್ದು, ಇದೀಗ ಸಾರ್ವಜನಿಕರು ಹಾಗೂ ಕನ್ನಡ ಪರ ಹೋರಾಟಗಾರರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನ, ಹಾಗೂ ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿರುವ ವಿಷಯ ರಾಜ್ಯಾದ್ಯಂತ ಕಿಚ್ಚು ಹಚ್ಚಿಸಿದೆ. ಬೆಳಗಾವಿ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ. ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕೆಂದು ಸದನದ ಒಳಗೂ ಹೊರಗೂ ಪ್ರತಿಭಟನೆಗಳು ನಡೆಯುತ್ತಿರುವ ಮಧ್ಯೆಯೇ ಬಸವೇಶ್ವರ ಪ್ರತಿಮೆಗೆ ಮಸಿ ಬಳಿದಿರುವ ಘಟನೆ ನಡೆದಿರುವುದರಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ನಾಡದ್ರೋಹಿ ಎಂಇಎಸ್ ಪುಂಡರು ಬೆಳಗಾವಿಯ ಅನಗೊಳದ ಕನಕದಾಸ ಕಾಲನಿಯಲ್ಲಿರುವ ರಾಯಣ್ಣನ ಮೂರ್ತಿಯನ್ನು ಡಿ. 17ರಂದು ಭಗ್ನಗೊಳಿಸಿದ್ದರು. ಇದಕ್ಕೂ ಮುನ್ನ ಕನ್ನಡದ ಬಾವುಟವನ್ನು ಕೂಡ ಸುಡಲಾಗಿತ್ತು. ಒಟ್ಟಿನಲ್ಲಿ ಕನ್ನಡಿಗರ ಸಹನೆಯನ್ನು ಕೆದಕುವ ಪ್ರಯತ್ನ ಕೆಲವು ಕಿಡಿಗೇಡಿಗಳಿಂದ ಆಗುತ್ತಿದ್ದು, ಆತಂಕದ ವಾತಾವರಣ ಸೃಷ್ಟಿಗೂ ಕಾರಣವಾಗುತ್ತಿದೆ.
ಎಂಇಎಸ್ ಪುಂಡಾಟಿಕೆ ವಿರುದ್ಧ ಖಂಡನಾ ನಿರ್ಣಯ : ಎಂಇಎಸ್ ಪುಂಡಾಟಿಕೆ ವಿರುದ್ಧ ಸುವಣರ್ಣ ಸೌಧದ ವಿಧಾನಸಭೆ ಅಧಿವೇಶನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಿದ ನಿರ್ಣಯ ಸರ್ವಾನುಮತದಿಂದ ಅಂಗೀಕಾರಗೊಂಡಿತು. ಬೆಳಗಾವಿಯಲ್ಲಿ ರಾಯಣ್ಣ ಪ್ರತಿಮೆಗೆ ಹಾನಿ ಹಾಗೂ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕನ್ನಡ ಬಾವುಟಕ್ಕೆ ಬೆಂಕಿ ಇಟ್ಟ ವಿಚಾರವಾಗಿ ವಿಧಾನ ಸಭೆಯಲ್ಲಿ ಚರ್ಚೆ ನಡೆಯಿತು. ಮೂರು ಪಕ್ಷದ ಸದಸ್ಯರು ಎಂಇಎಸ್ ಪುಂಡಾಟಿಕೆಯನ್ನು ಖಂಡಿಸಿದರು.
ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಅವರು ಖಂಡನಾ ನಿರ್ಣಯ ಮಂಡಿಸಿದರು. ಈ ಖಂಡನಾ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.