ಕೆ.ಆರ್.ಪೇಟೆ : ಹನುಮ ಜಯಂತಿ ಪ್ರಯುಕ್ತ ದೇವಾಲಯ ಪ್ರವೇಶಿಸಿದ ದಲಿತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಹರಿಹರಪುರದಲ್ಲಿ ನಡೆದಿದೆ.
ಡಿಸೆಂಬರ್ 16 ರಂದು ದಲಿತರು ಆಂಜನೇಯ ದೇವಸ್ಥಾನ ಪ್ರವೇಶಿಸಿದ್ದರು. ಇದನ್ನು ವಿರೋಧಿಸಿದ ಸವರ್ಣಿಯರ ತಂಡವೊಂದು ದಲಿತರ ಮೇಲೆ ಹಲ್ಲೆ ನಡೆಸಿತ್ತು. ” ನಿಮ್ಮಿಂದ ದೇವಸ್ಥಾನ ಮಲಿನಗೊಂಡಿದೆ. ನಿಮ್ಮಂಥ ಜನರನ್ನು ಭೂಮಿ ಮೇಲೆ ಇರದಂತೆ ಸುಟ್ಟು ಹಾಕುತ್ತೇವೆ ಎಂದು ಡಿ.16ರ ರಾತ್ರಿ 11.30ರ ವೇಳೆಗೆ ಸುಮಾರು 50-60 ಜನ ಸವರ್ಣೀಯರು ಮಾರಕಾಸ್ತ್ರಗಳಿಂದ ದಲಿತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ದೊಣ್ಣೆ, ಕೊಡಲಿ, ಪಂಚ್, ಕಲ್ಲು ಮತ್ತು ಇಟ್ಟಿಗೆ ಸೇರಿದಂತೆ ಇತರೆ ಮಾರಕಾಸ್ತ್ರಗಳೊಂದಿಗೆ ದಲಿತ ಕಾಲೋನಿಗೆ ನುಗ್ಗಿ ದಾಂದಲೆ ನಡೆಸಿದ್ದಾರೆ. ಅಂಗವಿಕಲ ವ್ಯಕ್ತಿ ನಂಜಯ್ಯ ಎಂಬುವವರ ಮೇಲೆಯೂ ದಾಳಿ ನಡೆದಿದೆ. ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯ ನಡೆಸಲಾಗಿದೆ’ ಎಂದು ಗಾಯಾಳುಗಳು ಪೊಲೀಸ್ ವರಿಷ್ಟಾಧಿಕಾರಿಗೆ ದೂರು ನೀಡಿದ್ದಾರೆ.
ಕೆ.ಆರ್.ಪೇಟೆ ಸರ್ಕಲ್ ಇನ್ಸ್ಪೆಕ್ಟರ್ ನಿರಂಜನ್ ದೂರು ಸ್ವೀಕರಿಸಲು ನಿರಾಕರಿಸಿದ ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಅವರಲ್ಲಿ ದಲಿತರು ನೋವು ತೋಡಿಕೊಂಡಿದ್ದು,
ಘಟನೆಯಲ್ಲಿ ಗಾಯಗೊಂಡ ಯುವಕರಾದ ದರ್ಶನ್, ಸುನಿಲ್, ಲೋಹಿತ್, ಅಭಿಷೇಕ್, ವಿನಯ್, ಸಂಜಯ್, ಚಲವರಾಜು, ಭಾಗ್ಯಮ್ಮ, ಕುಮಾರ, ರಂಜಮ್ಮ, ಶೋಭಾ, ನಂಜಯ್ಯ ಅವರು ನೀಡಿದ ದೂರಿನ ಅನ್ವಯ 27 ಜನರ ಮೇಲೆ ಪ್ರಕರಣ ದಾಖಲಾಗಿದೆ.
ಮಂಜುನಾಥ್, ಶ್ರೀಧರ, ಸಂತೋಷ್, ಶ್ರೀನಿವಾಸ ಎಚ್.ಟಿ., ರಂಜಿತ್, ಸತೀಶ, ಸ್ವಾಮಿ, ಮುತ್ತು, ರಜಿತ್ ಅಲಿಯಾಸ್ ಮಿಲ್ಟ್ರಿ, ಮಂಜುನಾಥ, ಮೋಹನ್, ಮಂಜ, ಹರೀಶ ಮಡಗಿನಕುಡಿ, ವೆಂಕಟೇಶ್ ಹರಿಹರಪುರ, ರಾಘು, ರವಿ ಅಲಿಯಾಸ್ ಚಡ್ಡಿ, ಮಂಜ, ಸುರೇಶ, ಗುಂಡೂ, ಬಾನುಪ್ರಕಾಶ್, ಶಿವಕುಮಾರ, ದರ್ಶನ್ ಕುರೇನಹಳ್ಳಿ, ದೀಪು, ಮೋಹನ, ಪ್ರದೀಪ್, ಜಯಂತ್, ಗೌತಮ್ಮ ಅಲಿಯಾಸ್ ಕುಳ್ಳಯ್ಯ ಇವರೇ ನಮ್ಮ ಮೇಲೆ ಹಲ್ಲೆ ನಡೆಸಿರುವವರು
ಎಂದು ಗಾಯಾಳುಗಳು ದೂರಿದ್ದಾರೆ.
ಸಿಪಿಐಎಂ ನಿಯೋಗ ಭೇಟಿ : ದಲಿತರ ಮೇಲೆ ದೌರ್ಜನ್ಯ ನಡೆದ ಕೆ.ಆರ್.ಪೇಟೆ ತಾಲ್ಲೂಕು ಹರಿಹರಪುರ ಗ್ರಾಮಕ್ಕೆ ಸಿಪಿಐಎಂ ನಿಯೋಗ ಭೇಟಿ ನೀಡಿದೆ.
ನಿಯೋಗದ ಜೊತೆ ದೌರ್ಜನ್ಯಕ್ಕೊಳಗಾದವರು ತಮಗಾದ ನೋವನ್ನು ತೊಡಿಕೊಂಡಿದ್ದಾರೆ, ದೌರ್ಜನ್ಯಕ್ಕೆ ಒಳಗಾದ ದಲಿತರಿಗೆ ಕನಿಷ್ಠ ಸಾಂತ್ವನ ಹೇಳದ ತಾಲ್ಲೂಕು ಹಾಗೂ ಜಿಲ್ಲಾಡಳಿತದ ಧೋರಣೆಯನ್ನು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಟಿ.ಎಲ್. ಕೃಷ್ಣೇಗೌಡ ಖಂಡಿಸಿದ್ದಾರೆ.ತಕ್ಷಣ ದೌರ್ಜನ್ಯಕ್ಕೆ ಒಳಗಾದ ದಲಿತರ ರಕ್ಷಣೆಗೆ ತಾಲ್ಲೂಕು ಹಾಗು ಜಿಲ್ಲಾಡಳಿತ ಮುಂದಾಗಬೇಕೆಂದು ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.
ನಿಯೋಗದಲ್ಲಿ ಪ್ರೊ. ಹುಲ್ಕೆರೆಮಹದೇವುರವರು, CITU ಮಂಡ್ಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ಪ್ರಗತಿಪರ ಸಂಘಟನೆಯ ಮುಖಂಡರಾದ ನಾಗರಾಜು ಲಕ್ಷ್ಮಣ್ ಚೀರನಹಳ್ಳಿ ಷಣ್ಮುಖೇಗೌಡ, ಗೀರೀಶ್, ಗೋಪಾಲ ಕಿಕ್ಕೇರಿ ಸೇರಿದಂತೆ ಅನೇಕರಿದ್ದರು.